ಸಂತಸದ ಗುಟ್ಟು
ಜಗತ್ತಿನ ಎಲ್ಲಕ್ಕಿಂತ ಬುದ್ದಿವಂತನ ಬಳಿಗೆ ಮಾರಾಟಗಾರನೊಬ್ಬ ತನ್ನ ಮಗನನ್ನು 'ಸಂತಸದಿಂದಿರುವ ಗುಟ್ಟು' ತಿಳಿದುಕೊಂಡು ಬರಲು ಕಳಿಸಿದನಂತೆ. ಆ ಹುಡುಗನು ಅವನನ್ನು ಹುಡುಕಿಕೊಂಡು ತಿಂಗಳಾನುಗಟ್ಟಲೆ ಅಲೆದ ಬಳಿಕ, ಒಂದು ದಿನ ಅವನ ಮನೆ ದೊರಕಿತಂತೆ. ಅಲ್ಲಿ ನೋಡಿದರೆ ಅದು ಎಲ್ಲ ಬಗೆಯ ಮೋಜುಗಳ ಮನೆಯಾಗಿತ್ತಂತೆ. ಅಲ್ಲಿ ಎಲ್ಲ ಬಗೆಯ ಮಾರಾಟಗಾರರೂ ಇದ್ದರು. ಅವರು ಆ ಬುದ್ದಿವಂತನೊಡನೆ ಮಾತಿಗೆ ತೊಡಗಿದ್ದರು. ಎಸೋ ತಾಸು ಕಾದ ಬಳಿಕ ಹುಡುಗನಿಗೆ ಅವಕಾಶ ದೊರಕಿತು. ಹುಡುಗ ಅವನನ್ನು ಸಂತಸದಿಂದಿರುವ ಗುಟ್ಟನ್ನು ಕೇಳಲು ಆತ, ತನಗೀಗ ಸಮಯವಿಲ್ಲವೆಂದೂ, ಕೆಲ ಗಂಟೆ ತನ್ನ ಅರಮನೆಯನ್ನು ಸುತ್ತಾಡಿಕೊಂಡು ಬರಲು ಹೇಳಿದನು. ಹಾಗೆ ಹುಡುಗ ಹೊರಟಾಗ ಬುದ್ದಿವಂತ ಅವನ ಕೈಯಲ್ಲಿ ಚಮಚೆ ಮತ್ತು ಅದರೊಳಗೆ ಎರಡು ಹನಿ ಎಣ್ಣೆ ಹಾಕಿ ಕೊಟ್ಟು, ಎಣ್ಣೆ ಚೆಲ್ಲದಂತೆ ನೋಡಿಕೊಳ್ಳಲು ಹೇಳಿದನು. ಹುಡುಗನು ಅರಮನೆಯನ್ನು ಸುತ್ತಿದನು, ಅಗಲ ಮತ್ತು ಎತ್ತರವಾದ ಕಟ್ಟೆಗಳನ್ನು ಏರುವಾಗಲೂ, ದೊಡ್ಡದಾದ ಕೈತೋಟ ಸುತ್ತಾಡುವಾಗಲೂ, ದೊಡ್ಡ ದೊಡ್ಡ ಬಂಗಾರದ ಹೂಜಿಗಳು, ಚಿನ್ನದ ಬಗೆ ಬಗೆಯ ವಡವೆಗಳಿರುವ ಕೋಣೆ ಸುತ್ತುವಾಗಲೂ, ಹುಡುಗನ ಮನಸ್ಸೆಲ್ಲಾ ಎಣ್ಣೆಯ ಮೇಲೇಯೇ ಇತ್ತು, ಕಣ್ಣು ಚಮಚೆಯ ಮೇಲೇ ನೆಟ್ಟಿತ್ತು. ಎರಡು ಮೂರು ತಾಸುಗಳ ಬಳಿಕ ಮರಳಿದ ಅವನನ್ನು ಬುದ್ದಿವಂತ, ತನ್ನ ಅರಮನೆಯಲ್ಲಿ ತೂಗು ಬಿಟ್ಟ ಬಂಗಾರದ ಜುಳುಜುಳಿ, ಹತ್ತು ವರುಶಗಟ್ಟಲೆ ಕಟ್ಟಿದ ತೂಗು ತೋಟದಲ್ಲಿರುವ ಬಗೆ ಬಗೆಯ ಗಿಡಗಳು, ಚಿನ್ನದ ಹೂಜಿಗಳ ಮೇಲೆ ಬಿಡಿಸಿದ ಚೆಂದದ ಚಿತ್ತಾರಗಳು, ಎಲ್ಲವನ್ನೂ ನೋಡಿದೆಯಾ? ಎಂದು ಕೇಳಲು, ಹುಡುಗ 'ನಾನು ಅಲ್ಲೆಲ್ಲಾ ಸುತ್ತಿದರೂ ಕೈಲಿದ್ದ ಎಣ್ಣೆಯ ದೆಸೆಯಿಂದ ಗಮನ ಕೊಡಲಾಗಲಿಲ್ಲ' ಎಂದನು. ಅದಕ್ಕೆ ನನ್ನ ಮನೆಯನ್ನು ಚೆನ್ನಾಗಿ ನೋಡದೆ ನಾ ಹೇಳಿದ್ದನ್ನು ಹೇಗೆ ನಂಬುವಿ ಎಂದು, ಇನ್ನೊಮ್ಮೆ ಚೆನ್ನಾಗಿ ನೋಡಿಕೊಂಡು ಬರಲು ಮರಳಿ ಕಳಿಸಿದನು. ಈ ಬಾರಿ ಎಲ್ಲವನ್ನು ಮನಗೊಟ್ಟು ನೋಡಿ ಹಿಂತಿರುಗಿದನು ಆ ಹುಡುಗ. 'ಹೂಂ, ಎಲ್ಲಾ ಚೆನ್ನಾಗಿ ನೋಡಿದೆ' ಎಂದು ಹುಮ್ಮಸ್ಸಿನಿಂದ ಬಂದು ಬುದ್ದಿವಂತನಿಗೆ ತಿಳಿಸಿದ. ಆದರೆ ಎಣ್ಣೆ ಎಲ್ಲಿ? ಎಂದು ಕೇಳಲು, ಚಮಚೆಯಲ್ಲಿದ್ದ ಎಣ್ಣೆ ಚೆಲ್ಲಿ ಹೋಗಿದ್ದನ್ನು ಹುಡುಗ ನೋಡಿಕೊಂಡನು. ಆಗ ಬುದ್ದಿವಂತನು 'ಜಗತ್ತನ್ನು ನೋಡಬೇಕು, ಆದರೆ ಕೈಲಿರುವ ಎಣ್ಣೆಯನ್ನು ಜತುನದಿಂದ ಕಾಯಿದುಕೊಳ್ಳಬೇಕು, ಇದೇ ಸಂತಸದಿಂದಿರುವ ಗುಟ್ಟು' ಎಂದು ಹೇಳಿದನು. ಈ ಕತೆಯ ಒಟ್ಟು ಸಾರವೇನು?