ಪದಜಿಜ್ಞಾಸು ಮಿತ್ರರಿಗಿದೋ ಉತ್ತರ

ಪದಜಿಜ್ಞಾಸು ಮಿತ್ರರಿಗಿದೋ ಉತ್ತರ

ಬರಹ

  ’ಸಂಪದ’ದಲ್ಲಿ ಈಚೆಗೆ ನಾನು ಪ್ರಕಟಿಸಿರುವ ’ಗ್ರಹಚಾರ್ಯ’ ಮತ್ತು ’ತರಕಲಾಂಡಿ ಇತ್ಯಾದಿ’ ಬರಹಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಕೆಲ ಮಿತ್ರರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ, ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆ ಪ್ರಶ್ನೆಗಳಿಗೆ ಮತ್ತು ಬೇಡಿಕೆಗಳಿಗೆ ಉತ್ತರವಾಗಿ ಈ ಬರಹ.

  ’ಭಾವಜೀವಿ’ ಹರಿಹರಪುರ ಶ್ರೀಧರ ಅವರು ’ಭಾಷಾಜೀವಿ’ಯಾದಾಗ ಅವರಿಗೆ ’ಹೆದರುಪುಕ್ಕಲ’; ’ಬಿಕನಾಸಿ’ ಈ ಪದಗಳು ವಿಚಿತ್ರವಾಗಿ ಕಂಡಿವೆ. ’ಹೆದರುಪುಕ್ಕಲ’ ಎಂದು ಬಳಸಲಾಗುತ್ತಿರುವ ಪದವು ದ್ವಿರುಕ್ತಿಯಲ್ಲವೆ ಎಂಬ ಅನುಮಾನ (ಸಹಜವಾಗಿಯೇ) ಅವರನ್ನು ಕಾಡಿದೆ.
  ’ಹೆದರುಪುಕ್ಕಲ’ ಎಂಬ ಬಳಕೆ ದ್ವಿರುಕ್ತಿ ಹೌದು. ’ಪುಕ್ಕಲು’ ಎಂದರೆ ’ಹೇಡಿತನ; ಅಂಜಿಕೆ; ಹೆದರಿಕೆ’ ಎಂದರ್ಥ. ಆದ್ದರಿಂದ ’ಹೆದರುಪುಕ್ಕಲ’ ಎಂಬುದು ಸಹಜವಾಗಿಯೇ ದ್ವಿರುಕ್ತಿಯಾಗುತ್ತದೆ.
  ’ಪುಕ್ಕ’ ಅರ್ಥಾತ್ ’ಅಂಜುಬುರುಕ’ ಎಂಬರ್ಥದಲ್ಲಿ ’ಹೆದರುಪುಕ್ಕ’ ಎಂಬ ಬಳಕೆಯೂ ದ್ವಿರುಕ್ತಿಯೇ. ವಾಸ್ತವವಾಗಿ ಅದು ’ಹೆದರುಪುರುಕ’ (’ಹೆದರುಬುರುಕ’) ಎಂದಾಗಬೇಕು. ಇದರರ್ಥ ’ಅಂಜುಪುರುಕ’ (’ಅಂಜುಬುರುಕ’) ಯಾನೆ ’ಅಂಜುಕುಳಿ’ ಎಂದು.
  ’ಹೆದರುಪುರುಕ’ (’ಹೆದರುಬುರುಕ’) ಎಂಬೀ ಸರಿಯಾದ ಪದವೂ ಬಳಕೆಯಲ್ಲಿದೆಯಷ್ಟೆ.

  ’ಬಿಕನಾಸಿ’ ಎಂಬ ಪದಕ್ಕೆ ’ಭಿಕ್ಷುಕ; ಸಣ್ಣಬುದ್ಧಿಯವ; ಸಣ್ಣತನದಿಂದ ಕೂಡಿದವ’ ಎಂಬ ಅರ್ಥಗಳಿವೆ.
  ’ಭಿಕ್ಷಾ’ ಎಂಬ ಸಂಸ್ಕೃತ ಶಬ್ದವು ಕನ್ನಡದಲ್ಲಿ ’ಭಿಕ್ಷೆ’ ಮತ್ತು ’ಬಿಕ್ಕೆ’ ಎಂಬ ರೂಪಗಳಲ್ಲಿ ಬಳಕೆಯಲ್ಲಿದೆಯಷ್ಟೆ. ಇದರನುಸಾರ, ’ಬಿಕ್ಕೆ ಬೇಡುವ ಬುದ್ಧಿಯವ’ ’ಬಿಕನಾಸಿ’ ಎಂದು ರೂಢಿಪದ (ರೂಢಪದ) ಮಾನ್ಯವಾಗಿದೆ.

  ’ಕಚೇರಿ’; ’ಕಛೇರಿ’ ಇವೆರಡರಲ್ಲಿ ಯಾವುದು ಸರಿ ಎಂದು ಎಚ್.ಎಸ್.ಪ್ರಭಾಕರ ಅವರು ಕೇಳಿದ್ದಾರೆ.
  ’ಕಚಹ್ರಿ’ ಎಂಬ ಹಿಂದಿ ಶಬ್ದದ ರೂಪಾಂತರವೇ ’ಕಚೇರಿ’ ಎಂಬ ಪದ. ’ಕಚಹ್ರಿ’ ಅಂದರೆ ’ನ್ಯಾಯಾಲಯ; ಕಂದಾಯ ಸಂಬಂಧಿ ಆಲಯ; ಸಾಮಾನ್ಯ ಆಡಳಿತ ಸಂಬಂಧಿ ಆಲಯ’ ಎಂದರ್ಥ. ಹಿಂದಿ ಪದದ ರೂಪಾಂತರವಾದ್ದರಿಂದ ’ಕಚೇರಿ’, ’ಕಛೇರಿ’ ಎರಡೂ ಸರಿಯೆನ್ನಬಹುದಾದರೂ ’ಕಚೇರಿ’ ಎಂಬ ಪದವು ಹೆಚ್ಚು ಚಾಲ್ತಿಯಲ್ಲಿದೆ. (’ಅಲ್ಪಪ್ರಾಣಿಗಳಿಗದು ಕಚೇರಿ; ಮಹಾಪ್ರಾಣಿಗಳಿಗೆ ಕಛೇರಿ’ ಎಂದಾದರೆ ಎಲ್ಲರೂ ’ಕಛೇರಿ’ಗೇ ಮೊರೆಹೊಕ್ಕಾರು!)

  ’ತರಕಲಾಂಡಿ’ ಇತ್ಯಾದಿ ಪದಗಳನ್ನು ಸೇರಿಸಿ ಕವನ ಬರೆಯುವಂತೆ ಚೈತನ್ಯ ಭಟ್ ಕೇಳಿಕೊಂಡಿದ್ದಾರೆ. ರೆಡ್ಡಿ ಬ್ರದರ್ಸ್ ಬಗ್ಗೆ ಕವನ ಬರೆಯಬೇಕೆಂದೂ ಅವರು ಕೋರಿದ್ದಾರೆ. ಇಗೋ, ಟೂ ಇನ್ ಒನ್.

  ಸೋಗಲಾಡಿ ಮಾತನಾಡೋ ಮಿಟಕಲಾಡಿ ಸುಷ್ಮಮ್ಮ
  ತರಕಲಾಂಡಿ ರೆಡ್ಡಿ ಬ್ರದರ್‍ಸ್ ರಕ್ಷಣೆಗಿರುವಾಗ
  ಹೇತ್ಲಾಂಡಿ ಮುಖ್ಯಮಂತ್ರಿ ಏನು ಮಾಡಿಯಾರು ಪಾಪ
  ತರ್ಕಟ್ಲಾಂಡಿ ಸರ್ಕಾರ ನಮ್ಮದಾಯ್ತೀಗ!

  (ಈ ಪರಿಯ ಸೊಬಗಾವ ರಾಜ್ಯದಲು ನಾ ಕಾಣೆ
  ಪಾಪಿ ಧನವಂತಗೇ ಮನ್ನಣೆಯು ಇಲ್ಲಿದೆ!)

  ಪ್ರಿಯ ಮಿತ್ರರೇ,
  ಇದೀಗಷ್ಟೇ ಇದೇ ’ಸಂಪದ’ದಲ್ಲಿ ’ಅದು ಪಾದದೆಚ್ಚರ, ಇದು ಪದದೆಚ್ಚರ’ ಎಂಬ ಲೇಖನವೊಂದನ್ನು ಪ್ರಕಟಿಸಿದ್ದೇನೆ. ಅದನ್ನೂ ಓದಿರಿ. ಇಲ್ಲಿಗೆ ನಾನು ಪದಜಿಜ್ಞಾಸೆಯಿಂದ ವಿರಮಿಸುತ್ತೇನೆ.