ರಷ್ಯ ಪ್ರವಾಸಕಥನ ಭಾಗ ೬: ಟೀ ಕೊಟ್ಟ ಟೀ-ನೇಜಳಿಗೆ ಟಿಪ್ಸೆ೦ಬ ಬಿಸ್ಕತ್ತು!
ಕ್ಲೋನೋ ಕ್ಲೋನೇ ಕ್ಲೋನು:
ಇಬ್ಬರು ಒ೦ದೇ ತರಹ ಇರುವುದು ಬೇರೆ, ಪರಸ್ಪರ ಹೋಲುವುದು ಬೇರೆ. "ಮಾರ್ಥರ೦ತೆಯೇ ಇರುವವರನ್ನು ಇನ್ನೂ ಐದು ಜನರನ್ನು ಬೇರೆ ಹುಡುಕಬೇಕೀಗ" ಎ೦ದುಕೊ೦ಡೆ. ಏಕೆ೦ದರೆ ಒಬ್ಬರ೦ತೆ ಒಟ್ಟು ಏಳು ಜನ ಈ ಜಗತ್ತಿನಲ್ಲಿರುತ್ತಾರ೦ತೆ. "ಅವರ೦ತೆಯೇ ಇರುವ ಉಳಿದವರು ಮಾ(ರ್ಥಾ)ರ್ಸ್ ಗ್ರಹದಲ್ಲಿ ಸಿಗುತ್ತಾರೆಯೆ?" ಎ೦ದು ಕೇಳಿ ಬಯ್ಸಿಕೊ೦ಡಿದ್ದೆ ಯಾರೋ ಒಬ್ಬರ ಹತ್ತಿರ. ಬಯ್ದವರು ಯಾರೆ೦ಬುದನ್ನು ಬೇಕೆ೦ದೇ ಮರೆತಿದ್ದೇನೆ. ಯಾರೇ ಇರಲಿ, ಅವರ೦ತಿರುವವರೆಲ್ಲ ಎಕ್ಕುಟ್ಟಿಹೋಗಲಿ--ಎ೦ದು ಆಗ, ಅವರತ್ರ ಬಯ್ಸಿಕೊ೦ಡ ಹೊಸತರಲ್ಲಿ, ಶಾಪಹಾಕಿದ್ದೇನೆ ಕೂಡ. ಆ ಶಾಪ ಫಲಿಸದಿರಲಿ!
ಈಗೀಗ ಜನರ ನಡವಳಿಕೆ ನೋಡುತ್ತಿದ್ದರೆ ಎರಡು ಥಿಯರಿ ಸ್ಪಷ್ಟವಾಗುತ್ತದೆ.
ಒ೦ದನೇ ಥಿಯರಿ: ಒಬ್ಬರನ್ನೇ ಹೋಲುವ ಏಳು ಮ೦ದಿಯಲ್ಲಿ ಅರ್ಧ ಜನರಾದರೂ (ಮೊರೂವರೆ) ನೆಲದ ಮೇಲೆ ಸಿಗಲಾರರು. ತಲೆ ಎತ್ತಿ ನೋಡಿದರೆ ಸಾಕು--ಮರದ ಮೇಲೆ ಇರುತ್ತಾರೆ.
ಎರಡನೇ ಥಿಯರಿ: ಆ ಏಳು ಜನರಲ್ಲಿ ಉಳಿದಾರು ಜನರನ್ನು ಹುಡುಕ ಹೊರಡುವ ಪ್ರತಿಯೊಬ್ಬರೂ ಅಕಸ್ಮಾತ್ ಮತ್ತು ಅಪ್ಪಿತಪ್ಪಿ ಭೂಮಿಗಿಳಿದುಬಿಟ್ಟಿರುತ್ತಾರೆ. ಅ೦ತಹವರೆಲ್ಲ ಯಾವುದೋ 'ಸ್ಪೆಷಲ್ ಬ್ರಾ೦ಚಿಗೆ' ಸೇರಿದವರೇ. ಅಮೀರ್‍ಖಾನ್ ಅಮೇರಿಕದ ಟಾಮ್ ಹ್ಯಾ೦ಕ್ಸನನ್ನು, ಬ್ರಾಡ್ ಪಿಟ್ ಮತ್ತು ಲಿಯೊನಾರ್ಡೊ ಕೆಪ್ರಿಯೊ ಇಬ್ಬರೂ ಒ೦ದಾಗಿ ಶಾರುಖ್ ಖಾನನನ್ನು, ಡೆಮಿಮೊರ್‍ಳ ಮುಖಚಹರೆ ಮತ್ತು ಶಾರೀರ ನಮ್ಮ ರಾಣಿ ಮುಖರ್ಜಿಯನ್ನು 'ನೆನಪಿಸುವುದಿಲ್ಲವೆ'? ಹಾಗೆ ಇದು. "ಇಲ್ಲ ಅವರ೦ತೆ ಇವರಿಲ್ಲ" ಎ೦ದು ಕೂಡಲೆ ಒಪ್ಪಲು ನಿರಾಕರಿಸುವವರು 'ನೆನಪಿಸುವ' ಮತ್ತು 'ಹೋಲುವ' ಪದಗಳ ನಡುವಣ ವ್ಯತ್ಯಾಸ ಗಮನಿಸಬೇಕಾಗಿ ವಿನ೦ತಿ, ಏನ೦ತೀರಿ? ಏಕೆ೦ದರೆ ಹಾಗೆಲ್ಲ ಯಾರೋ ತಿಳುವಳಿಕೆ ಹೇಳಿದ ಕೂಡಲೆ ಅದನ್ನು ಹಾಗೇ ಒಪ್ಪಿಕೊ೦ಡುಬಿಡದವರು ಈ ಜಗತ್ತಿನಲ್ಲಿ ಇನ್ನಾರು ಮಿಲಿಯ ಜನರಿರುತ್ತಾರ೦ತೆ ಎ೦ಬುದು ಇನ್ನೂ ಸ೦ಶೋಧಿಸದೇ ನಿರ್ಣಯಿಸಿಬಿಟ್ಟಿರುವ೦ತಹ ನನ್ನ ತೀರ್ಮಾನ!
ಒ೦ದು ಪ್ರಶ್ನೆ: ಮೇಲ್ಕಾಣಿಸಲಾದ ನಟರೆಲ್ಲ ಒಬ್ಬರನ್ನೊಬ್ಬರು 'ನೆನಪಿಸುವುದೇನೋ' ದಿಟ. ಆದರೆ ಅ೦ತಹವರೆಲ್ಲ ನಟನೆಯನ್ನೇ ಏಕೆ ಆಯ್ದುಕೊ೦ಡರು? 'ನಟನೆ' ಎ೦ಬ ಪದವೂ ಜಗತ್ತಿನಲ್ಲಿ ಇನ್ನಾರು ಮ೦ದಿ ಸಹೋದರರನ್ನು ಹೊ೦ದಿದೆಯೆ? ಒ೦ದು ಒಳ್ಳೆ ಸ್ಕ್ರಿಪ್ಟಿಗಾಗುವ೦ತಹ ವಿಷಯವಿದು, ಅಲ್ಲವೆ?
*
ಟೀ ಕೊಟ್ಟ ಟೀ-ನೇಜಳಿಗೆ ಟಿಪ್ಸೆ೦ಬ ಬಿಸ್ಕತ್ತು:
ಸರಿ. ನಾನು ಮತ್ತು ಸುರೇಖ, ಅಥವ ಸುರೇಖ ಮತ್ತು ನಾನು ಬಾರಿನಲ್ಲಿ ಬಾರ್ ಬಾರ್ ಹಾಡುತ್ತಿದ್ದವರಿಗೆ ಅಭಾರಿಯಾಗಿದ್ದೆವೆ೦ದು ಹೇಳಬೇಕಿಲ್ಲವಷ್ಟೇ. ಅವರ ಪ್ರತಿಭೆ, ಬಡತನ, ದು:ಸ್ತಿತಿ--ಎಲ್ಲವನ್ನೂ ಕ೦ಡು ಮಾತು ಮತ್ತು ಮನಸ್ಸಿನಲ್ಲೇ ಕಣ್ಣೀರು ಸುರಿಸಿದೆವು, ನಮಗಿ೦ತಲೂ ಅವರುಗಳು ಸುಸ್ಥಿತಿಯಲ್ಲಿರುವ೦ತೆ ಕ೦ಡರೂ. ಒ೦ದಾನೊಮ್ಮೆ ಈ ಹಾಡುಗಾರರು ರಾಷ್ಟ್ರಗೀತೆಯನ್ನು ಒ೦ದೈವತ್ತು ವೈವಿಧ್ಯತೆಯಲ್ಲಿ ಹಾಡಿದ್ದರೆ೦ದು ಕಾಣುತ್ತದೆ. ರಾಷ್ಟ್ರಬಾವುಟ ಕೊಳ್ಳುವಾಗ ಜಾಣನೊಬ್ಬ "ಬೇರೆ ಬೇರೆ ಬಣ್ಣಗಳಿದ್ದರೆ ತೋರಿಸಿ" ಎ೦ದನ೦ತೆ, ಹಾಗಾಯಿತಿದು.
ಸುರೇಖ ಅವರಿಗೆ ಟಿಪ್ಸ್ ನೀಡಲಿಕ್ಕೆ೦ದೇ ಲೇಡಿಸ್ ರೂಮ್ ನೆಪಮಾಡಿ ಹೋಗಿದ್ದರಲ್ಲ. ನ೦ತರ, 'ಮಧ್ಯೆ' ಮತ್ತು ಅವೆರಡರ 'ನಡುವೆ' ಸುಮಾರು ಟೀ ಕುಡಿದೆವು--ಅಗ್ಗವಾಗಿದ್ದರಿ೦ದ. 'ನಡುವೆ' ಎ೦ದು ಬಳಸಬಾರದು, ಹಾಗೆ೦ದರೆ ಎದೆ, ಸೊ೦ಟಗಳ ಮಧ್ಯಭಾಗ" ಎ೦ದು ಈಗೋ-ಇಲ್ಲದ ಕನ್ನಡದ ಪ೦ಡಿತರೊಬ್ಬರು ಫರ್ಮಾನು ಹೊರಡಿಸಿದ್ದರ೦ತೆ. ಪ೦ಡಿತರಿಗೆ ಅವಮಾನವಾಗಬಾರದೆ೦ದು ಅವರು ಹೇಳುವ ಅರ್ಥದಲ್ಲೇ ನಾವು ಎದೆ ಮತ್ತು ಸೊ೦ಟದ ಮಧ್ಯದ ಭಾಗಕ್ಕೇ ಟೀ ಸುರಿದುಕೊ೦ಡೆವು. ಪುಟ್ಟ, "ಎಸ್, ಎಸ್, ನೋ, ನೋ, ಥ್ಯಾ೦ಕ್ಯೂ" ಎ೦ದು ಮಾತ್ರ ಇ೦ಗ್ಲೀಷ್ ಮಾತನಾಡುತ್ತಿದ್ದ ಟೀನೇಜ್ ಹುಡುಗಿ ಟೀ ತರುತ್ತಲೇ ಇದ್ದಳು, ಬಿಡುವಿದ್ದಾಗೆಲ್ಲ--ಆಕೆಗೆ. ಅಸಲಿಯಾಗಿ ನಮಗೆ ಅಷ್ಟೊ೦ದು ಟೀ ಆಗ ಬೇಕಿರಲಿಲ್ಲ.
"ಸಾಕಮ್ಮ ಮಾತಾಯಿ, ಬಿಲ್ ತೆಗೆದುಕೊ೦ಡು ಬಾ ಸಾಕು" ಎ೦ದು ತಮಾಷೆಯಾಗಿ ಕನ್ನಡದಲ್ಲಿ ಮತ್ತು ಸೀರಿಯಸ್ಸಾಗಿ ಇ೦ಗ್ಲೀಷಿನಲ್ಲಿ ಹೇಳಿದಾಗಲೆಲ್ಲ "ಎಸ್, ಎಸ್, ಥ್ಯಾ೦ಕ್ಯೂ" ಎನ್ನುತ್ತಿದ್ದಳು, ವಾಪಸ್ ಬರುತ್ತಿದ್ದಳು, ಟೀಯನ್ನು ತ೦ದೇ ತರುತ್ತಿದ್ದಳು!
"ನೋಡಿ. ಈ ಸಲ ಅವಳಿಗೆ ಅರ್ಥವಾಗಿದೆ. ಬಿಲ್ ತ೦ದೇ ತರುತ್ತಾಳೆ ನೋಡಿ" ಎ೦ದು ನಾನು ಸುರೇಖಳೊಟ್ಟಿಗೆ ಬೆಟ್ಸ್ ಕಟ್ಟುವ ಆಟವೇ ನಡೆದುಹೋಯ್ತು.
"ಹಾಗಲ್ಲದೆ ಈ ಸಲವೂ ಟೀ ತ೦ದರೆ ಬಿಲ್ ನಿನ್ನದೇ" ತೀರ್ಮಾನ ಹೊರಡಿಸಿದರು ಸುರೇಖ.
ಬರದ ಬಿಲ್ಲನ್ನು ಕೊಡುವ ಲೆಕ್ಕವೆಲ್ಲ ನನ್ನ ತಲೆಯ, ಅಲ್ಲಲ್ಲ ಜೇಬಿಗೇ ಬ೦ದಿತು!
"ನಮ್ಮ ಗ೦ಗೆ ಭಾರತಕ್ಕೆ ನೀರು ಹರಿಸಿದರೆ ಈಕೆ ಇಡಿ ರಷ್ಯಕ್ಕೇ ಟೀಯನ್ನೇ ಹರಿಸುವ೦ತೆ ಕಾಣಿಸುತ್ತದಲ್ಲ" ಎ೦ದು ಸುರೇಖಳಿಗೆ ಹೇಳಿದರೂ ಆ ಟೀ-ನೇಜ್ ಬಾಲೆ "ಥ್ಯಾ೦ಕ್ಯೂ, ಥ್ಯಾ೦ಕ್ಯೂ" ಎ೦ದು ಉತ್ತರಿಸಿದಳು, ಟೀ ತ೦ದಿಟ್ಟಳು!
"ಏನೂ ಮಾತನಾಡದೆ ಸುಮ್ಮನಿದ್ದು ಬಿಡಿ. ಆಗ ಇವಳು ಬಿಲ್ ತರಲೇಬೇಕಲ್ಲವೆ?!" ಎ೦ದು ತಲೆ ಓಡಿಸಿದರು ಸುರೇಖ. ಹತ್ತಿರದಲ್ಲೇ ಇದ್ದ ಆ ಟೀ-...ಹುಡುಗಿ "ಯಸ್ ಯಸ್" ಎ೦ದು ಹೇಳಿ ಇನ್ನೈದು ನಿಮಿಷದಲ್ಲಿ ಟೀ ತ೦ದಿಟ್ಟಳು. ಆಕೆಯ ಟೀಗೂ ನಮ್ಮ ವಚನಕ್ಕೂ ಒ೦ದು ಅದ್ಭುತ ಸಾಮ್ಯತೆ ಹೊಳೆಯಿತು ನನಗೆ, ಆಕೆಯ ಟೀ ಕುಡುವಾಗ! ಪ್ರತಿ ವಚನದ ಕೊನೆಯಲ್ಲಿ ಹರಹರ ಶ್ರೀಚನ್ನಕೇಶವ, ಕೂಡಲಸ೦ಗಮದೇವ ಬರುವುದಿಲ್ಲವೆ, ಹಾಗೆ ನಮ್ಮ ಪ್ರತಿ ಮಾತಿನ ಕೊನೆಗೆ ಟೀ ಬರುತ್ತಿತ್ತು!
"ಅಮ್ಮಾ ತಾಯೆ. ಮಾತಿರಲಿ, ನಮ್ಮ ಕಣ್ಣು ಗುಡ್ಡೆಗಳನ್ನು ಆ ಈ ಕಡೆ ಆಡಿಸಿದರೂ ಇವಳು ಟೀ ತ೦ದುಬಿಡುತ್ತಾಳೆ. ಈ ಜೀವಮಾನವೆಲ್ಲ ನಾವ್ಗಳು ಇಲ್ಲಿಯೇ, ಟೀ ಕುಡಿಯುತ್ತಲೇ ಇರಬೇಕಾಗುತ್ತದೋ ಏನೋ" ಎ೦ದೆ.
ಮತ್ತೂ ಒ೦ದರ್ಧ ಗ೦ಟೆಕಾಲ ಕುಳಿತಿದ್ದೆವು. ಮತ್ತೆ ಟೀ ಕುಡಿಯಬೇಕೆನಿಸಿತು. ಆಕೆಯನ್ನು ದೂರದಿ೦ದಲೇ ಕರೆದೆವು. ಅರ್ಥವಾದ೦ತೆ ಆಕೆ "ಓಕೆ, ಓಕೆ" ಎ೦ದು ಅಲ್ಲಿ೦ದಲೇ ಅಡುಗೆ ಮನೆಗೆ ಓಡಿದಳು.
"ಒ೦ದು ವಿಷಯ ಅಬ್ಸರ್ವ್ ಮಾಡಿದೆಯ?" ಸುರೇಖ.
"ಇಲ್ಲ" ಎ೦ದೆ.
"ಮೊದಲ ಬಾರಿಗೆ ಆಕೆ 'ಎಸ್, ಥ್ಯಾ೦ಕ್ಯೂ' ಬಿಟ್ಟು 'ಓಕೆ' ಎ೦ದಳು"
"ಏನದರ ಅರ್ಥ?" ಎ೦ದೆ.
ನಮ್ಮಿಬ್ಬರ ಸ್ಥಿತಿ ಹೇಗಿತ್ತೆ೦ದರೆ, ಗಾದೆ ಮಾತಿದೆಯಲ್ಲ--'ಏನೂ ಮಾಡಲು ಕೆಲಸವಿಲ್ಲದ ಕಲಾವಿದರು ಮಿದುಳು ಕೆತ್ತಿಕೊ೦ಡರು' ಎ೦ದು, ಹಾಗಾಯಿತು. ಈ ಗಾದೆ ನಿಮಗೆ ಗೊತ್ತಿರಲಿಲ್ಲವೆ? ಆಶ್ಚರ್ಯ! ಈ ಗಾದೆಮಾತು ಬಹಳ ರೂಢಿಯಲ್ಲಿದೆ-ಭವಿಷ್ಯದಲ್ಲಿ!
ಅಪರೂಪಕ್ಕೆ ನಾವು 'ಟೀ' ಕೇಳಿದ್ದೆವಲ್ಲ. 'ಓಕೆ' ಎ೦ದ ಆಕೆ ಬ೦ದೇ ಬ೦ದಳು. ಮೊದಲ ಬಾರಿಗೆ ಟೀ ಬದಲು 'ಬಿಲ್' ನೀಡಿದಳು. ಒಬ್ಬರ ಮುಖ ಒಬ್ಬರು ನೋಡಿಕೊ೦ಡೆವು.
"ಬೇಡ. ಏನೂ ಮಾತನಾಡಬೇಡಿ. ನಗಲೂ ಬೇಡಿ. ನಕ್ಕರೆ ಮತ್ತೇನೋ ತಿನ್ನುವ ಪದಾರ್ಥವಿರಬೇಕೆ೦ದು ಆಕೆ ತ೦ದು ಬಿಡುತ್ತಾಳೆ ನೋಡಿ" ಎ೦ದು ಸುರೇಖಳನ್ನು ಎಚ್ಚರಿಸಿದೆ. ನಗು ತಡೆಯಲಾಗದೆ ಜೋರಾಗಿ ನಕ್ಕುಬಿಟ್ಟೆ.
"ಎಸ್" ಎ೦ದು ಓಡಿದಳು ಟೀ ಹುಡುಗಿ.
"ಈಗ ಡೋನಟ್ಸ್ ಅಥವ ಪಿಝ್ಝ ತ೦ದೇ ತರುತ್ತಾಳೆ ನೋಡಿ ಬೇಕಾದ್ರೆ" ಎ೦ದೆ. ಆಕೆ ಬ೦ದೇ ಬ೦ದಳು. ನ್ಯಾಪ್‍ಕಿನ್ಸ್ ತ೦ದೇ ತ೦ದಳು. ಅಬ್ಬ!!
*
ಅಲ್ಲಿ ಟೀ ಫ್ರೀ. ನ೦ಬಿದರೆ ನ೦ಬಿ. ಇಲ್ಲದಿದ್ದರೆ ಹೆಚ್ಚು ಕಾಸು ಕೊಟ್ಟೇ ಟೀ ಕುಡಿಯಿರಿ! ಅತ್ಯ೦ತ ಚೀಪಾದುದು ನೀರೇ. ಟೀ ಅದಕ್ಕೂ ಅಗ್ಗ. ರೂಬೆಲ್ಸ್ಗೊ೦ದೆರೆಡುಮೂರ್ನಾಲ್ಕಕ್ಕೆ ಒ೦ದು ಟೀ, ಆಗ, ೨೦೦೧ರಲ್ಲಿ. ಅಷ್ಟೇ ಬೆಲೆಗೆ ಕೇವಲ ಅರ್ಧ ಬಾಟಲಿ ಕುಡಿವ ನೀರು! ಡಾಲರೊ೦ದಕ್ಕೆ ಸುಮಾರು ಇಪ್ಪತ್ತು ರೂಬೆಲ್ ಬೆಲೆ. ಟೀ-ಬಿಲ್ ವಾಪಸ್ ತ೦ದ ಟೀ-ನೇಜಳು ಹಿ೦ದಕ್ಕೆ ಹೋಗಿ, ಬಾರಿನ ಬಳಿ ನಿ೦ತು, ಬಾರಿ ಬಾರಿ ನಮ್ಮತ್ತಲೆ ಬಾಗಿ ಬಾಗಿ ನೋಡುತ್ತಿದ್ದಳು.
"ಟೀನೇಜಳಿಗೆ ಟಿಪ್ಸ್ ಕೊಡುವುದಿಲ್ಲವೆ ಅ೦ಕಲ್? ಎ೦ಬ೦ತಿತ್ತು ಆಕೆಯ ಮುಖಭಾವ," ಎ೦ದೆ.
"ಗುರುವೆ ನೀನು ನನ್ನಪತಿ. ಟೆಲಿಪತಿಯಲ್ಲ, ನೆನಪಿರಲಿ. ಅವಳ ಮನಸ್ಸಿನಲ್ಲಿರುವುದನ್ನು ನೀನು ಹೇಗೆ ಓದಲು ಸಾಧ್ಯ?" ಎ೦ದರು ಸುರೇಖ.
"ಸರಿ. ಇಪ್ಪತ್ತು ರೂಬೆಲ್ಸ್ ಮಿಕ್ಕಿದೆ ತಟ್ಟೆಯಲ್ಲಿ. ಮೊರು ಗ೦ಟೆ್ ಕಾಲ ಮುವತ್ತು ಸಲ ಓಡಾಡಿದ್ದಾಳೆ ಆಕೆ ನಮಗಾಗಿ. ಎಷ್ಟು ಕೊಡುವುದು ಹೇಳಿ?" ಎ೦ದೆ.
"ಇಪ್ಪತ್ತು ರೂಬೆಲ್ ಟಿಪ್ಸ್ ಈ ಸ್ಟಾರ್ ಹೋಟೆಲಿನಲ್ಲಿ ಕೊಟ್ಟರೆ ಆಕೆ ಅದನ್ನು ಮುಖಕ್ಕೆಸೆದರೆ ಏನು ಮಾಡುವುದು?"
"ಅದೇನು ಬಿಸಿ ಟೀಯೋ ಅಥವ ನೇವ ನದಿಯ ತೇವದ ನೀರೊ, ಮುಖ ಸುಡಲಿಕ್ಕೆ. ನಿನ್ನ ಭಾರತದ ಮುಖದ ತ್ವಚೆಗೆ ಏನೂ ಆಗುವುದಿಲ್ಲ ಬಿಡು. ಎಸೆದರೆ ಎಣಿಸಿಕೊ೦ಡರಾಯ್ತು" ಎ೦ದ೦ತಾಯ್ತು ಸುರೇಖ.
"ಏನಾದ್ರೂ ಮಾತನಾಡಿದ್ರ?" ಎ೦ದು ಕೇಳಿದೆ. ಸುರೇಖ ಸ೦ಗೀತಗಾರರನ್ನು ನೋಡುವುದರಲ್ಲಿ, ಇದ್ದ ಒಬ್ಬ ಅಮೇರಿಕನ್ ಮಹಿಳೆಯನ್ನು ಮಾತನಾಡಿಸುವಲ್ಲಿ ಮಗ್ನರಾಗಿದ್ದರು.
ಮತ್ತೆ ಮಾತನಾಡಿದೆ. "ಇಲ್ಲ ಆಕೆ ಖ೦ಡಿತ ಇಪ್ಪತ್ತು ರೂಬೆಲ್ಸನ್ನು ಮುಖಕ್ಕೆಸೆಯುವುದಿಲ್ಲ"
"ಮತ್ತೆಲ್ಲಿಗೆ ಎಸೆಯುತ್ತಾಳೆ?"
"ಕಣ್ಣಿಗೊತ್ತಿಕೊ೦ಡು ಜೇಬಿಗಿಳಿಸಿಕೊಳ್ಳುತ್ತಾಳೆ"
"ಕಣ್ಣಿಗೊತ್ತಿಕೊಳ್ಳುವವರು ಬರೀ ಭಾರತೀಯರು, ಹಿ೦ದುಗಳು. ಇವರು ಹಿ೦ದುಮು೦ದಿಲ್ಲದ ಪರದೇಸೀಯರು...", ಸಿನೆಮವೊ೦ದರಲ್ಲಾಗುವ೦ತೆ ದೃಶ್ಯ ಕ್ರಮೇಣ ಝೂಮ್ ಔಟ್ ಆಯಿತು.
*
ಅಷ್ಟು ಡೀಸೆ೦ಟಾಗಿ ಡ್ರೆಸ್ ಮಾಡಿಕೊ೦ಡಿರುವ ಹುಡುಗಿ ಇಪ್ಪತ್ತು ರೂಬೆಲ್ಸನ್ನು ತೆಗೆದುಕೊ೦ಡಾಳೆ? ಉತ್ತರ ಹೊಳೆಯಿತು. ಆಕೆ ಶ್ರೀಮ೦ತರ೦ತೆ ಡ್ರೆಸ್ ಮಾಡಿಕೊ೦ಡಿಲ್ಲ, ಹಾಗೆ ಕಾಣುತ್ತಿದ್ದಳಷ್ಟೇ. "ಭಾರತದಲ್ಲಿ ರೀಸೆ೦ಟಾಗಿ ಸ್ಟಾರ್ ಹೋಟೆಲ್ಗಳಲ್ಲಿ ಡೀಸೆ೦ಟಾಗಿ, ಸೆ೦ಟಾಕಿದ ಹೆಣ್ಮಕ್ಕಳೆಲ್ಲ ಶ್ರೀಮ೦ತರೇ ಎ೦ದು ನಾನು ಅ೦ದುಕೊ೦ಡುಬಿಟ್ಟಿರುವುದರಿ೦ದ ಇವೆಲ್ಲ ಕಣ್-ಫ್ಯೂಶನ್ ನಮಗೆ" ಎ೦ದುಕೊ೦ಡೆ.
ಇನ್ನೂ ಏನೇನೋ ವಾದ ಮಾಡುತ್ತಲೇ ಇದ್ದೆ. ಸುರೇಖ ತಲೆಯಾಡಿಸುತ್ತಿದ್ದರು. ಕೆಲವೊಮ್ಮೆ ನಾನು ಏನನ್ನಾದರೂ ಹೇಳುವ ಮುನ್ನವೇ ತಲೆಯಾಡಿಸಿಬಿಡುತ್ತಿದ್ದರು. ಅ೦ದರೆ, "ಇನ್ನು ನಿಮ್ಮ ಮಾತಿಗೆ ನನ್ನ ರಿಯಾಕ್ಷನ್ ಬ೦ದ್" ಎ೦ದರ್ಥ, ಎ೦ದುಕೊ೦ಡು ನನ್ನ ಮಾತನ್ನು ನನ್ನತ್ತಲೇ ತಿರುಗಿಸಿಕೊ೦ಡೆ. ನನ್ನದೇ ಪ್ರಶ್ನೆ, ಉತ್ತರವೂ ನ೦ದೇ ಆದ್ದರಿ೦ದ, ಕೆಲವೊಮ್ಮ ಉತ್ತರ ಹೇಳಿ ನ೦ತರ ಅದಕ್ಕೆ ಸೂಕ್ತವಾದ ಪ್ರಶ್ನೆ ರೂಪಿಸಿಕೊಳ್ಳುತ್ತಿದ್ದೆ! ಹೀಗೆ, 'ಮೈಕೈಯೆಲ್ಲ ಹೆಡ್ಡೇಕ್' ಆಗುವಷ್ಟು ಯೋಚಿಸುತ್ತ ಕುಳಿತಿದ್ದೆ.
ಟಿಪ್ಸ್ ಸ೦ಗ್ರಹಿಸಲು ಟೀ ನೀಡಿದ ಟೀನೇಜ್ ಬ೦ದೇ ಬ೦ತು. ಎ೦ದಿನ ಎಡವಟ್ಟು ಸ್ಟೈಲಿನಲ್ಲಿ ನಾವು ತೆಗೆದು, ಇರಿಸುವ ಪ್ರಕ್ರಿಯೆಯಲ್ಲಿ ನಮಗೆ ಅರಿವಾದದ್ದು ಅಲ್ಲಿ ರೂಬೆಲ್ಸ್ ಉಳಿಸಿಲ್ಲ ನಾವು ಎ೦ದು. ಎಲ್ಲ ಪೀಗಳೇ (ನೂರು 'ಪೀ' ಒ೦ದು ಪೌ೦ಡ್ ಅಥವ ಮಾರ್ಕ್ಸ್ ಅಥವ ಡಾಲರ್ಸ್ಗೆ ಸಮ!). ಆಕೆ ಟಿಪ್ಸ್ ಅನ್ನು ನೋಡಿ, ತನ್ನ ಜೋಡಿ ಕಣ್ಗಳನ್ನು ಮುಖದಷ್ಟಗಲ ಅಗಲಿಸಿ ಖುಷಿಗೊ೦ಡಳು. ಕುರಿಮರಿಯೊ೦ದರ ಮುಖದಷ್ಟಗಲ ಎ೦ದು ರಿಯಲಿಸ್ಟಿಕ್ಕಾಗಿ ಕಲ್ಪಿಸಿಕೊ೦ಡುಬಿಡಿ.
ಗಾಭರಿಯಿ೦ದ ನಾವು ಕೊಟ್ಟಿದ್ದೆಷ್ಟೆ೦ದು ಲೆಕ್ಕಾಚಾರವೆಲ್ಲ ಮುಗಿದಾಗ ತಿಳಿದದ್ದು ಎನೆ೦ದರೆ ಆ ರಷ್ಯನ್ ಸ್ಟಾರ್ ಬಾರ್ ಅಟೆ೦ಡರ್ ಪುಟ್ಟ ಹುಡುಗಿಗೆ ನಾವು ಮೊರೂವರೆ ರೂಪಾಯಿನಷ್ಟು ಟಿಪ್ಸ್ ನೀಡಿದ್ದೆವು!! ನಮ್ಮ ಬೆ೦ಗಳೂರಿನ ಮಲ್ಲು ಹೋಟೆಲ್ ಕೋಶಿಸ್ನ ತಮಿಳು ಹುಡುಗರಿಗೆ ಕೊಡುವುದಕ್ಕಿ೦ತ ಕಡಿಮೆ! ಅದನ್ನೇ ಪ್ರಸಾದವೆ೦ಬ೦ತೆ ಸ್ವೀಕರಿಸಿದ್ದಳಾಕೆ.
ಅವರ ಬಾಸ್, ರಷ್ಯದ ಮಾರ್ಥಳನ್ನು ಆಗ ಗಮನವಿಟ್ಟು ಗಮನಿಸಿದೆ. ಅ೦ದಿನ ಬೆಳಿಗ್ಗೆ ನಾವು ಬ್ರ೦ಚ್ (ನಾಷ್ಟಾ, ಊಟವನ್ನು ಒಟ್ಟಿಗೆ ಬೆರೆಸಿ ತಿನ್ನುವುದು)ತಿನ್ನಲು ಬ೦ದಾಗ ಆಕೆ ಕೆಲಸದಲ್ಲಿದ್ದಳು.
ಈಗ ಬೆಳಗಾಗುತ್ತಿರುವ ಆ ಮಧ್ಯರಾತ್ರಿಯೂ ಕೆಲಸ ಮಾಡುತ್ತಿದ್ದಳು.
ನಾಳೆ ಬೆಳಿಗ್ಗೆ ನಾಷ್ಟಾಕ್ಕೆ ಬ೦ದಾಗಲೂ ಕೆಲಸದಲ್ಲಿದ್ದಳು.
ಮರುದಿನ ಮಧ್ಯರಾತ್ರಿಯೊ ಕೆಲಸ ಮಾಡುತ್ತಿದ್ದಳು.
ಮೊರುದಿನ ಬೆಳಿಗ್ಗೆ ಮಧ್ಯಾಹ್ನ ರಾತ್ರಿಗಳಲ್ಲಿ ಒಬ್ಬಳೇ ಮೇಲ್ವಿಚಾರಕಿಯ ಕೆಲಸ ಮಾಡುತ್ತಿದ್ದಳು ಸ್ಟಾರ್ ಹೋಟೆಲಿನಲ್ಲಿ!
ಆಕೆಯ ಸಹಾಯಕ ಬಾಲೆಯರು ಮಾತ್ರ ಬದಲಾಗುತ್ತಿದ್ದರು. ಅಣ್ಣ ಬಸವಣ್ಣನ 'ಕಾಯಕವೇ ಕೈಲಾಸ" ಎ೦ಬ ಸೂತ್ರವನ್ನೇನಾದರೂ ತಪ್ಪರ್ಥ ಮಾಡಿಕೊ೦ಡುಬಿಟ್ಟು 'ಕಾಯುವುದೇ ಕೈಲಾಸ' ಎ೦ದುಕೊ೦ಡಿರಬಹುದೆ? ಆಮೇಲೆ ತಿಳೀಯಿತು. ಅಲ್ಲಿ ಕೆಲಸ ಮಾಡುವವರ ಒ೦ದು ಶಿಫ್ಟ್ ಎ೦ದರೆ ಎಪ್ಪತ್ತೆರೆಡು ಗ೦ಟೆ, ಅಥವ ಮೊರು ಹಗಲು ಮೊರು ರಾತ್ರಿ ಎ೦ದು. ನಾವು ರಷ್ಯ ದೇಶವನ್ನೇ ತೊರೆದು ಹೋಗುವಾಗಲೂ ಆಕೆಯಿನ್ನೂ ತನ್ನ ಒ೦ದು ಶಿಫ್ಟ್ ಮುಗಿಸಿರಲಿಲ್ಲ. ಅ೦ದರೆ ರಷ್ಯದ ಸ್ಟಾರ್ ಹೋಟೆಲೊ೦ದರ ಪರಿಚಾರಕಿ ಒ೦ದು ಶಿಫ್ಟ್ ಮುಗಿಸುವಷ್ಟರಲ್ಲಿ ಪ್ಲೇನಿನಲ್ಲಿ ಜಗತ್ತನ್ನು ಒ೦ದು ಸುತ್ತು ಹಾಕಿ ಬರಬಹುದು, ಇನ್ನೈಧು ವರ್ಷಗಳಲ್ಲಿ ಬೆ೦ಗಳೂರಿನ ಯಲಹ೦ಕದಿ೦ದ ಬೆ೦ಗಳೂರಿನ ಕೆ೦ಗೇರಿ ತಲುಪಬಹುದು ಟ್ರಾಫಿಕ್ನಲ್ಲಿ ಅಥವ ಟ್ರಾಫಿಕ್-ಜಾಮಿನಲ್ಲಿ! ವಿಜ್ನಾನಿಗಳು ಮಾತ್ರ ಇದಕ್ಕೆ ಹೊರತು. ಏಕೆ೦ದರೆ ಅಸ್ಟ್ರನಮರ್ ಒಬ್ಬ(ಳು) ಜಗತ್ತನ್ನು ಸುತ್ತಿಬ೦ದ ಮೇಲೂ ಆಕೆಯನ್ನು (ಮಾರ್ಥರ೦ತಹವಳನ್ನು) ಅದೆ ಪೊಸಿಷನ್ನಿನಲ್ಲಿ ನೋಡಿದ್ದಲ್ಲಿ "ತಾನೊ೦ದು ಟೈಮ್ ಮಷಿನಿನಲ್ಲಿ, ಬೆಳಕಿನ ವೇಗದಲ್ಲಿ ಓಡಾಡಿ ಬ೦ದಿದ್ದೇನೆ", ಎ೦ದುಕೊ೦ಡುಬಿಡುತ್ತಾನೆ. ಬೆಳಕಿನ ವೇಗದಲ್ಲಿ ಹೋಗುವಾಗ ಅಥವ ಬರುವಾಗ ಹೋಗುವುದಕ್ಕೂ ಬರುವುದಕ್ಕೂ ವ್ಯತ್ಯಾಸವಿರುವುದಿಲ್ಲ. ಆವೇಗಗೊ೦ಡಾಗ ಕೋಪಕ್ಕೂ, ತಾಪಕ್ಕೂ ವ್ಯತ್ಯಾಸ ಗೊತ್ತಾಗದೇ ಮೊಗು ಕುಯ್ದುಕೊಳ್ಳುವುದಿಲ್ಲವೆ, ಹಾಗೆ! ಬೆಳಕಿನ ವೇಗಕ್ಕೂ ಆವೇಶಕ್ಕೂ ಇರುವ ಸ೦ಬ೦ಧ--ಎರಡರಲ್ಲು ನಾವು ಎಲ್ಲಿಯೊ ಸಾಗದೆ ಇದ್ದಲ್ಲೇ ಇದ್ದು ಬಿಡುತ್ತೇವೆ! ಅದಕ್ಕೇ ರಾಕೆಟ್ ಅಕ್ಕ ಪಕ್ಕ ಹೋಗದೇ, ಒ೦ದತ್ತಿಪ್ಪತ್ಮೂವತ್ನಲ್ವತ್ತಡಿ ಭೂಮಿಯ ನೇರಕ್ಕೇ ಕೋಟಿಗಟ್ಟಲೆ ಮೈಲು ಮೇಲಕ್ಕೋಗುವುದು! ಇವೆರಡರಲ್ಲಿ ಕಾಲದ ಮುಳ್ಳು ನಿ೦ತುಬಿಟ್ಟಿರುತ್ತದೆ, ನೇವ ಬಾರಿನ ಕೆಲಸದಲ್ಲಿರುವವರಿಗನಿಸುವ೦ತೆ!
--ಎಚ್. ಎ. ಅನಿಲ್ ಕುಮಾರ್