ನಿಮಗಿದೋ ಹನಿ ಹನಿ ತಪನಾ...!
(ದಿನಾಂಕ 29 ಡಿಸೆಂಬರ್ 2009 ಮಂಗಳವಾರದಂದು ನಮ್ಮನ್ನಗಲಿದ ಸುಗಮ ಸಂಗೀತ ದಿಗ್ಗಜ ಸಿ. ಅಶ್ವತ್ಥ್ ಅವರ ಅಗಲಿಕೆಗೆ ಸಂತಾಪ ಸೂಚಿಸುತ್ತಾ ಅವರ ಸ್ಮರಣಾರ್ಥ ನನ್ನ ಈ ಕಾವ್ಯ ತರ್ಪಣ ನೀಡಿದ್ದೇನೆ. ಈ ಕವನವನ್ನು ಸಿ. ಅಶ್ವತ್ಥ್ ಅವರೇ ಹಾಡಿರುವ `ಮೈಸೂರು ಮಲ್ಲಿಗೆ'ಯ `ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹೆನು' ಗೀತೆಯ ಧಾಟಿಯಲ್ಲಿ ಹಾಡಿಕೊಳ್ಳಬೇಕು)
-----------------------------------------------------------------------
ನಿಮಗಿದೋ ಹನಿ ಹನಿ ತಪನಾ...!
ಸ್ವರಗಾರ ಜೋಗಯ್ಯ ಬಾಗಿಲನು ದಾಟಿಹನು;
ಯಾರದೀ ಅಪ್ಪಣೆಯೊ ಕಾಣೆ!
ನಮ್ಮೂರ ಬಿಟ್ಟಿಹನು `ನುಡಿ ನೆಟ್ಟು' ಹೊರಟಿಹನು
ನಟ್ಟನಡುವಲಿ ಹೇಳು ತರವೇ || ಸ್ವರಗಾರ ||
ಮುಡಿದ ಕವಿಗಳ ಕಾವ್ಯ ಎಂದೆಂದು ಬಾಡದು
ಸೂಸುತಿದೆ ಘಮ ಘಮನೆ ಕಂಪು
ನಾಡಿನೆಲ್ಲೆಡೆಯಲ್ಲು ಸಂಗೀತ ರಥಯಾತ್ರೆ
ಸಾಗಿದೇ ಸುಗಮದೀ ಜಾತ್ರೆ
ಅಂದು ಮಂಗಳವಾರ(!) ನೀವಿಲ್ಲದೂರಿನಲಿ
ಶೋಕ ಗೀತೆಯ ರಾಗ ಜಿನುಗಿತ್ತು!
ಅಶ್ರು ತರ್ಪಣವೀಯೆ ನಿಮಗಾಗಿ ಮಿಡಿಯುತಲಿ
ಅಂಗಳದ ತುಂಬಾ ಜನವಿತ್ತು || ಸ್ವರಗಾರ ||
ಸಿರಿ ಷರೀಫರ ತಂದು ಕೂಡಿಸಿದೆ ಹಸೆ ಮಣೆಗೆ
`ಮೈಸೂರು ಮಲ್ಲಿಗೆ'ಯ ದಂಡೆ!
ನಿಮ್ಮ ನೆನೆಯುತಲಿಹರು ಸಿರಿ ಕಂಠ ಪಡೆದವರು
ಹೊಸಬರೋ ನಿಡುಸುಯ್ಯುತಿಹರು!
ಬೇಕಾದ್ದು ಬೇಡಾದ್ದು ಇಲ್ಲಿಹುದು ನಿಮಗಂತು
ಹೊಸದೇನೊ ಕೊಡುವಂಥ ತವಕಾ....
ನಾವು ಕೊರಗಿಹೆವಿಲ್ಲಿ ನೀವೆಲ್ಲಿ ಹೋದಿರೀ...
ನಿಮಗಿದೋ ಹನಿ ಹನಿ ತಪನಾ! || ಸ್ವರಗಾರ ||
ದಿನ ಕಳೆದು ಸೋರುತಿದೆ ಮನೆಯ ಮಾಳಿಗೆಯೆಲ್ಲ
ಬಾ ಇಲ್ಲಿ ಸಂಭವಿಸು ದೊರೆಯೇ
ಹಿಂಡಬೇಕಿದೆ ಇಲ್ಲಿ ಭಾವನೆಯ ಕಲ್ಲುಂಡೆ
ಕರಗಿಸಲು ಮನದ ವಿಷದುಂಡೆ
ಮುನಿಸು ಅಸ್ವಸ್ಥತೆಗೆ ಏಕೋ ಕಾಣೆವು ನಾವು
ನಿಮಗಲ್ಲ ಆ ವಿಧಿಗೆ ಸಾವು!
ಮತ್ತೊಮ್ಮೆ ಹಾಡು ಬಾ ಕೈಮುಗಿದು ಬೇಡುವೆವು
ಕಡಿದ ಸ್ವರ ತಂತಿಯಾ ಬಿಗಿದು.... || ಸ್ವರಗಾರ ||
-ಎಚ್.ಎಸ್. ಪ್ರಭಾಕರ, ಹಾಸನ.