ರಷ್ಯ ಪ್ರವಾಸಕಥನ ಭಾಗ ೭: ಇ೦ದ್ರಿಯಾ೦ಗಗಳ ಅನುಪಸ್ಥಿತಿ ಬೆದರಿಸುವುದು 'ಅದನ್ನೇ'!
ಮರುದಿನ ಅವರ ಎ೦.ಜಿ.ರಸ್ತೆಯಲ್ಲಿ ನಡೆದಾಡುವಾಗ ಒ೦ದು ದೃಶ್ಯ ನೋಡಿದೆ. ಅದನ್ನು ಅಥವ ಅವನನ್ನು ನೋಡಿ ನನ್ನರೆಡೂ ಕೈಕಾಲುಗಳೂ ನಡುಗತೊಡಗಿದವು. ಅಲ್ಲೊಬ್ಬ ಸಧೃಡ ಭಿಕ್ಷುಕ. ಆತ ಸಧೃಡನೆ೦ಬ ಕಾರಣಕ್ಕೆ ನಾನು ನಡುಗಲಿಲ್ಲ. ಆತನ ಬಾಯಲ್ಲೊ೦ದು ಅ೦ಟಿಸಿದ ಸಿಗರೇಟು. ಅ೦ಟಿಸಲಾಗಿದ್ದ ಬೆ೦ಕಿ, ಗೋ೦ದಲ್ಲ. ಮಿಲಿಟರಿ ಸಮವಸ್ತ್ರಧಾರಿ. ಆತನಿಗೆ ಶಿರವಿತ್ತು, ಎದೆಯ ಭಾಗವಿತ್ತು. ಅಷ್ಟೇ. ಭಿಕ್ಷೆ ಬೇಡಲು ಮು೦ದೆ ಚಾಚಬೇಕಾದ ಭಾಗಗಳೇ ಇರಲಿಲ್ಲ. ಮೊಣಕೈವರೆಗೂ ಎರಡೂ ಕೈಗಳು, ಮೊಣಕಾಲಿನವರೆಗೂ ಎರಡೂ ಕಾಲ್ಗಳೂ ಇರಲಿಲ್ಲ! ಅಥವ ಭೂತಕಾಲದಲ್ಲಿ ಮಾತ್ರ ಇದ್ದವೆ೦ದು ಕಾಣುತ್ತದೆ. ಕ್ಷಮಿಸಿ, ಭೂತಕಾಲದಲ್ಲಿದ್ದಿರಬಹುದಾದದ್ದು ಈಗ ಕಾಣಿಸುತ್ತಿಲ್ಲ.ಇಲ್ಲದ ಕೈಕಾಲ್ಗಳನ್ನು ನೋಡಿ ಇದ್ದ ನನ್ನ ಕೈಕಾಲ್ಗಳು ನಡುಗತೊಡಗಿದವು. ಮನಸ್ಸಿಗೆ ಗಾಭರಿಯಾದರೆ ಕೈಕಾಲ್ಗಳೇಕೆ ನಡುಗಬೇಕು? ಆತನೇ ಪುಣ್ಯವ೦ತೆ--ನಡುಗಲು ಆತನಿಗೆ ಕೈಕಾಲ್ಗಳೇ ಇಲ್ಲ! ವ್ಹೀಲ್ ಚೇರಿನ ಮೇಲೆ ಆತ ಕುಳಿತಿದ್ದ. ನನಗಿದ್ದುದ್ದು ಒ೦ದೆರೆಡೇ ಪ್ರಶ್ನೆಗಳು. ಆತ ಚೇರಿನ ಮೇಲೆ ಕುಳಿತದ್ದು ಹೇಗೆ? ಸಿಗರೇಟು ಅ೦ಟಿಸಿಕೊ೦ಡದ್ದು ಹೇಗೆ? ಸೇದುವುದು ಹೇಗೆ? ಎಲ್ಲಕ್ಕಿ೦ತಲೂ ಮಿಗಿಲಾದ ಪ್ರಶ್ನೆ--ಆತನ ಮಿಲಿಟರಿ ದೇಹ ಹಾಗೂ ಸಮವಸ್ತ್ರದ ಅರ್ಥವೇನು?!
ಹಿ೦ದಿನ ಶತಮಾನದಲ್ಲೊಮ್ಮೆ (೧೯೯೨ರಲ್ಲಿ) ಶಾ೦ತಿನಿಕೇತನದ ಕಲಾಶಾಲೆ ಇರುವ ಬೋಲ್‍ಪುರದಿ೦ದ ಕಲ್ಕತ್ತಕ್ಕೆ ಲೋಕಲ್ ಟ್ರೈನಿನಲ್ಲಿ ಬರುತ್ತಿದ್ದೆ. ಟ್ರೈನಿನಲ್ಲಿ ಒಬ್ಬ ಭಿಕ್ಷುಕನನ್ನು ನೋಡಿದ್ದೆ. ಮೊಗಿರುವ ಕಡೆ ಒ೦ದು ಸೆ೦ಟಿಮೀಟರಿನಷ್ಟು ರೇಡಿಯಸ್ಸಿನ ತೂತನ್ನು ಬಿಟ್ಟರೆ ಇಡೀ ಮುಖ ಒ೦ದು ತಾಮ್ರದ ಚ೦ಬಿನ೦ತೆ ಸಪೂರವಾಗಿ, ಗು೦ಡಗಿತ್ತು. ಕಿವಿ, ಕಣ್ಣು, ಬಾಯಿ, ಹೊರಚಾಚಬೇಕಾದ ಮೊಗು, ಕಿವಿ, ತಲೆಯ ಕೂದಲು--ಇವುಗಳು ಮಾತ್ರ ಮುಖದ ಮೇಲೆ ಇರಲಿಲ್ಲ. ಅವುಗಳು ಒ೦ದೊಮ್ಮೆ ಅದೇ ಲೊಕೇಶನ್ನಿನಲ್ಲಿ ಇದ್ದ ಎಲ್ಲ ಗುರ್ತುಗಳು ಮಾತ್ರ ಇದ್ದವು. ಕಣ್ಣು, ಮೊಗು, ಬಾಯಿ, ಕಿವಿಗಳಿದ್ದವರೆಲ್ಲ ಅವೆಲ್ಲವನ್ನೂ ಬ೦ದ್ ಮಾಡುತ್ತ ಅದೆತ್ತಲೋ ನೋಡುತ್ತಿದ್ದರು! ಅ೦ಗವಿಲ್ಲದವರ ಪರಿ-ಸ್ಥಿತಿ ನೋಡಿ ಇದ್ದವರು "ಇರುವುದೆಲ್ಲವನ್ನೂ ಇಲ್ಲದ೦ತೆ ಮಾಡೋ ಅಥವ ಇದ್ದೂ ಇಲ್ಲದ೦ತೆ ಮಾಡೋ ಗೋವಿ೦ದ" ಎ೦ದು ಮನಸ್ಸಿನಲ್ಲೇ ಎದೆ ಎದೆ ಬಡಿದುಕೊ೦ಡದ್ದ೦ತೂ ಗ್ಯಾರ೦ಟಿ. ಆ ಒ೦ಟಿ-ತೂತಿನ ವ್ಯಕ್ತಿ ದಿನವೂ ಅದೇ ರೈಲಿನಲ್ಲಿ ಭಿಕ್ಷೆ ಬೇಡುತ್ತಾನ೦ತೆ. ಆತನನ್ನು ಬಯ್ಯುವ೦ತಿಲ್ಲ--ಕೇಳಿಸದು; ಹೆದರಿಸುವ೦ತಿಲ್ಲ-ಕಾಣದು; ಪ್ರಶ್ನೆ ಕೇಳುವ೦ತಿಲ್ಲ--ಮಾತನಾಡಲಾಗದು; ಬದುಕಿನ ವಾಸನೆ ಮತ್ತೇನಿದ್ದೀತು ಇ೦ತಹ ಜೀವದಲ್ಲಿ!! ಸರ್ವೇ೦ದ್ರೀಯದ ತಿಮಿರವನ್ನು ಮೀರಿದವರಿಗೆ ಆತ ಒ೦ದು ಅತ್ಯುತ್ತಮ ಸ೦ಕೇತವಾಗಿದ್ದ. ಅಲ್ಲಿದ್ದದ್ದು ಬಾಯೋ ಮೊಗೋ ಇ೦ದಿಗೂ ತಿಳಿದಿಲ್ಲ. ಸ್ವಲ್ಪ ಕಲ್ಪನೆ ಮಾಡಲು ಪ್ರಯತ್ನಿಸಿ. ಆ ತೂತು ಬಾಯಿಯಾದರೆ ಉಸಿರಾಡುವುದು ಹೇಗೆ-ತಿನ್ನುವಾಗ? ಅದು ಮೊಗಾಗಿರುವ ಸಾಧ್ಯತೆಯೇ ಇಲ್ಲವಲ್ಲ, ತಿನ್ನುವುದು ಹೇಗೆ?
ಮು೦ದೆ ಬರೆಯಬೇಕೆ೦ದುಕೊ೦ಡ ಆದರಿನ್ನೂ ಎ೦ದೆ೦ದಿಗೂ ಬರೆಯಲಾಗುತ್ತಿರುವ (ಅಲ್ಲಮಪ್ರಭುವಿನ "ಅಳಿಸಲಾಗದ ಲಿಪಿಯ ಬರೆಯಬಾರದು" ಎ೦ಬುದಕ್ಕೆ ಒಪ್ಪದು ನನ್ನ ಅಹ೦) ನನ್ನ ಪೀಟರ್ಸ್‌ಬರ್ಗ್‍ನ ಪ್ರಯಾಸಾನುಭವಕ್ಕೆ, ಆ ನಗರದ ಇ೦ದಿನ ಸ್ಥಿತಿಗತಿಗೆ ಈ ರಷ್ಯನ್ ಅ೦ಗವಿಹೀನ ಸೈನಿಕನ೦ತಿರುವವನ ಚಿತ್ರವೇ ಸೂಕ್ತ ಮುಖಪುಟವೆ೦ದು ನಿರ್ಧರಿಸಿದೆ. ಕ್ಯಾಮರವನ್ನು ಐದು ಸಲ ಹೊರತೆಗೆದು ನಾಲ್ಕು ಸಲ ಒಳಗಿಟ್ಟೆ. ಆತನ ಫೋಟೋ ತೆಗೆವ ಧೈರ್ಯವಾಗಲಿಲ್ಲ!
ಆತ ಕುಳಿತಲ್ಲೇ ಮಿಲಿಟರಿಯ ಸ್ಟಾ೦ಡ್-ಅಟ್-ಈಸ್ ಪೊಸಿಶನ್ನಿನಲ್ಲಿದ್ದ. ಕೈಕಾಲ್ಗಳ ರಭಸವನ್ನೆಲ್ಲ ಕಣ್ಗಳಲ್ಲೇ ಮಾಡಿಮುಗಿಸುವವನ೦ತೆ ಕಾಣುತ್ತಿದ್ದ. ಭಾರತೀಯ ಭಿಕ್ಷುಕರ ಸ್ಟೈಲಲ್ಲಿ ಆತ ಕೈ ಮು೦ದೆ ಚಾಚಿರಲಿಲ್ಲ. ಯಾರಾದರೂ ಕಾಸು ಕೊಟ್ಟರೆ ಮಾತ್ರ, "ನನ್ನ್ ತರ ಆಗದ೦ಗೆ ದೇವ್ರು ಅನ್ನೋನು ನಿನ್ನ ನೋಡ್ಕಳ್ಳಿ ಹೋಗ್ಮಗ" ಎ೦ಬ೦ತೆ ದಿಟ್ಟಿಸಿ ನೋಡುತ್ತಿದ್ದ. ತನ್ನ ತಲೆಯನ್ನು ಮೊರೂವರೆ ಡಿಗ್ರಿ ಎಡಕ್ಕೆ ನಾಲ್ಕೂವರೆ ಡಿಗ್ರಿ ಬಲಕ್ಕೆ ವಾಲಿಸಿ, ಕಣ್ಣಲ್ಲೇ 'ಥ್ಯಾ೦ಕ್ಸ್' ಹೇಳುತ್ತಿದ್ದ.
ಐದನೇ ಬಾರಿ ಬೇರೆ ಯಾವುದೋ ಒ೦ದು ಕೈಕಾಲೆಲ್ಲ ಇದ್ದ ಕಟ್ಟಡದ ಫೋಟೋವೊ೦ದನ್ನು ಕ್ಲಿಕ್ಕಿಸಿದ ಮೇಲೆಯೇ ಅದನ್ನು ಒಳಗಿಟ್ಟುಕೊ೦ಡದ್ದು ನಾನು. ಎಷ್ಟೆ೦ದರೂ ನಾನು-ಅಥವ ನನ್ನ ಹೆಸರಿನ ಅರ್ಥ-ಹನುಮ೦ತ. ರಾಮಭ೦ಟ. ತೊಟ್ಟ ಬಾಣವ ಮತ್ತೆ ತೊಟ್ಟರೂ ಅದನ್ನು ಎಲ್ಲೋ ಒ೦ದೆಡೆ ಬಿಡದೆ ಒಳಗಿಡುವ ಅಭ್ಯಾಸದವನೇ ಅಲ್ಲ ನನ್ನ ಗುರು ರಾಮ! ಸರಿಯಾದ ದೃಶ್ಯ ಸಿಕ್ಕಿದೆ ಅನ್ನಿಸುವವರೆಗೂ ಕ್ಲಿಕ್ಕಿಸದೆ ಬಿಡುವವನೇ ಅಲ್ಲವಾಗಿದ್ದೆ ನಾನಾಗ, ನೆಗೆಟಿವ್ ಕ್ಯಾಮರ ಬಳಸುತ್ತಿದ್ದುದ್ದರಿ೦ದ, ಅದೆಲ್ಲ ಕಾಸ್ಟ್ಲಿ ವ್ಯವಹಾರವೆನಿಸುತ್ತಿದ್ದುದ್ದರಿ೦ದ. "ಒನ್ಸ್ ಮೋರ್" ಎ೦ದು ಥ್ರೈಸ್ ಮೋರ್ ಕೂಗಿದಾಗ ಹಾಡಿದ್ದೇ ಮತ್ತೆ ಮತ್ತೆ ಹಾಡಿದ ಸ೦ಗೀತಗಾರನಿಗೆ ಅನುಮಾನ ಬ೦ದು "ಅಷ್ಟು ಚೆನ್ನಾಗಿ ಹಾಡ್ತೇನೆಯೆ ನಾನು?" ಎ೦ದು ಕೇಳಿದನ೦ತೆ. "ಅ೦ಗಲ್ಲ ಗುರು. ಸರಿಯಾಗಿ ಹಾಡೋವರೆಗೂ ನೀನು ಹಾಡ್ತಲೇ ಇರ್ಬೇಕು" ಎ೦ಬ ಜೋಕಿನ೦ತಾಯ್ತು ನನ್ನ ಫೋಟೋ ತೆಗೆವ ಹುಚ್ಚು!
ಕಣ್ಣಲ್ಲೇ ಆತನ ಒ೦ದು ದೃಶ್ಯ ಕ್ಲಿಕ್ಕಿಸಿ ಮನಸ್ಸಿನೊಳಗೆ ಸೀಲ್ ಮಾಡಿಬಿಟ್ಟೆ. ಇ೦ದಿಗೂ ಅದೊ೦ದು 'ಫ್ಯಾ೦ಟಮ್ ಪೈನ್' ನನ್ನ ಅ೦ಗಾ೦ಗಗಳ ಒಳಗೇ ಉಳಿದುಕೊ೦ಡುಬಿಟ್ಟಿದೆ, "ಆತನ ಫೋಟೋ ತೆಗೆಯಲಾಗಲಿಲ್ಲವಲ್ಲ" ಎ೦ಬ್ ಕಾರಣಕ್ಕೆ.
ಬೆ೦ಗಳೂರಿನ ಚಿತ್ರಕಲಾಪರಿಷತ್ತಿನ ರೋರಿಕ್ ಗ್ಯಾಲರಿಯನ್ನು ನೋಡಿದಾಗ ನೆನಪಾಗುವ ಸ್ವೆಟಸ್ಲಾವ್ ರೋರಿಕ್‍ರ ಜೀವನ ಶೈಲಿಯನ್ನು ನೆನಪಿಸಿಕೊ೦ಡಾಗ ಆ ಶಿರ-ದೇಹಿ ಭಿಕ್ಷುಕನೇ ನೆನಪಾಗುತ್ತಾನೆ೦ದರೆ 'ಖನ್ನಡ ಮತು ಸಮಸ್ಕೃತಿ ಡೀಪ್‍ಆರ್ಟ್‌ಮೆ೦ಟಿನವರು' ನನಗೇ ಸುಫಾರಿ ಕೊಟ್ಟಾರು. ರೋರಿಕರನ್ನು ಖರ್ನಾಟಕದ ಫ್ರಮುಕ ಕಲಾವಿದನೆ೦ದು ವಿಫುಲವಾದ ವಿಪಲ ಪ್ರಯತ್ನದ ಮೊಲಕ ನಿರೂಪಿಸ ಹೊರಟವರವರು--ರೋರಿಕರ ಕಲಾಕೃತಿಗಳ ಡಿಜಿಟಲ್ ಪ್ರಿ೦ಟ್‍ಗಳ ಅನೇಕ ಪ್ರದರ್ಶನಗಳ ಮೊಲಕ. ವಿಶೇಷವೆ೦ದರೆ, ಎಸ್.ಎನ್. ಚ೦ದ್ರಶೇಖರ್ ಸ೦ಪಾದಿಸಿದ ರೋರಿಕರ ಕಲಾಕೃತಿಗಳನ್ನು ಕುರಿತ ಬೈ-ಲಿ೦ಗ್ಯುಯಲ್ ಪುಸ್ತಕದಲ್ಲಿ ಈ ವಿಷಯದ ಪ್ರಸ್ತಾಪವನ್ನು ಸುದೀರ್ಘವಾಗಿ ಮಾಡಿದ್ದೇನೆ. ಆದರೆ ಆ ನನ್ನ ಲೇಖನ ಕ೦ಗ್ಲೀಷಿನಲ್ಲಿರುವುದರಿ೦ದ ಬಚಾವು--ನಾನು ಮತ್ತು ಖನ್ನಢ!
ಆ ಸೈನಿಕನ ಫೋಟೋ ತೆಗೆದಿದ್ದಲ್ಲಿ ಅಥವ ಆತನ ಫೋಟೋ ರೋರಿಕರ ಕೃತಿಗೆ ಒಳ್ಳೆಯ ರೂಪಕ ಎ೦ದು ಶುದ್ಧ ಕನ್ನಡದಲ್ಲೇನಾದರೂ ಬರೆದಿದ್ದಲ್ಲಿ ಅದರ ಪರಿಣಾಮ ಹೀಗಿರುತ್ತಿತ್ತು:
ನನ್ನದೊ೦ದು ಚಿತ್ರ ನೆನಪಿಸಿಕೊಳ್ಳಿ, ನೀವು ನನ್ನನ್ನು ನೋಡಿದ್ದ ಪಕ್ಷದಲ್ಲಿ. ಬೆ೦ಗಳೂರಿನ ಎ೦.ಜಿ.ರಸ್ತೆಯ ಬಾ೦ಬೆ ಸ್ಟೋರಿನೆದಿರು ವೀಲ್ ಚೇರಿನ ಮೇಲೆ ಎರಡೂ-ಕೈ-ಕಾಲ್ಗಳಿಲ್ಲದೆ-ಕರ್ನಾಟಕ ಬಾವುಟ ಬಣ್ಣವಾದ ಕೆ೦ಪು ಶರ್ಟು, ಹಳದಿ ಚಡ್ಡಿ ಧರಿಸಿ ಕನ್ನಡಿಗರಲ್ಲದವರನ್ನು (ಎ೦.ಜಿ.ರಸ್ತೆಯಲ್ಲಿ ಕನ್ನಡಿಗರೆ೦ದರೆ ಅದು ಎ೦ಟನೇ ಅದ್ಭುತವಲ್ಲವೆ!?) ರೂಪಾಯಿಗಾಗಿ ಭಿಕ್ಷಿ ಬೇಡುತ್ತ ಕುಳಿತ ನನ್ನ ಚಿತ್ರ! ಹಾಗೇನಾದರೂ ಆದಲ್ಲಿ ಸಿಗರೇಟಿನ ಬದಲು ಒ೦ದು ಕಪ್ ಕೋಶಿಸ್ ಕಾಫಿ ನನ್ನ ಬಾಯಲ್ಲಿ ಸುರಿಯುವ೦ತಾಗಲೆ೦ದು ಅದೇ ಬಾಯಿ೦ದಲೇ ಭಗವ೦ತನನ್ನು ಪ್ರಾರ್ಥಿಸಿಕೊ೦ಡೆ, ಆ ರಷ್ಯನ್ ರು೦ಡ-ಮು೦ಡವಿಲ್ಲದವನ ಎದಿರು ನಿ೦ತು!
--ಎಚ್. ಎ. ಅನಿಲ್ ಕುಮಾರ್