ಅಶ್ವಥ್ - ನನ್ನ ಮೆಚ್ಚಿನ ಕೆಲವು ಹಾಡುಗಳು

ಅಶ್ವಥ್ - ನನ್ನ ಮೆಚ್ಚಿನ ಕೆಲವು ಹಾಡುಗಳು

ಸುಮಾರು ೮೦ನೇ ಇಸವಿಯ ಸಮಯ ಇರಬೇಕು. ನಾನು ಬಹುಶ ಮಿಡಲ್ ಸ್ಕೂಲ್ ನಲ್ಲಿ ಇದ್ದಿರಬೇಕು. ನನ್ನ ಮಾವ ಒಂದು ಕಸೆಟ್ಟ್ ತಂದಿದ್ದರು. ಆ ’ದೀಪಿಕಾ’ ಅನ್ನುವ ಭಾವಗೀತೆಗಳ ಮೊದಲ ಕಸೆಟ್ಟಿನಲ್ಲೇ ನಾನು ಅಶ್ವಥ್ ಅವರ ಧ್ವನಿಯನ್ನು ಮೊದಲು ಕೇಳಿದ್ದು. ಅದರಲ್ಲಿ ಶಿವಮೊಗ್ಗ ಸುಬ್ಬಣ್ಣ, ಸುಲೋಚನಾ, ಮತ್ತೆ ಅಶ್ವಥ್ ಹಾಡಿದ್ದ ಲಕ್ಷ್ಮೀನಾರಾಯಣ ಭಟ್ಟರ ಭಾವಗೀತೆಗಳಿದ್ದವು. ಆ ಹಾಡುಗಳನ್ನು ನಂತರ ಕಡಿಮೆ ಎಂದರೆ ನೂರಾರು ಸಲವಾದರೂ ಕೇಳಿದ್ದಿರಬೇಕು ಅನ್ನಿಸುತ್ತೆ. ಅದರ ನಂತರ, ಅವರ ರಾಗ ಸಂಯೋಜನೆಯಲ್ಲಿದ್ದ ’ಬಾರೋ ವಸಂತ’, ’ಮೈಸೂರ ಮಲ್ಲಿಗೆ’ ಯ ಭಾವಗೀತೆಗಳು ಮತ್ತೆ ಶಿಶುನಾಳ ಷರೀಫರ ಹಲವಾರು ರಚನೆಗಳು ನನಗೆ ಮೆಚ್ಚಾದವು.

ಹೆಚ್ಚಿನ ಗಾಯಕರ ಕಂಠಕ್ಕಿಂತ ಬೇರೆಯದಾಗಿದ್ದ ಅಶ್ವಥ್ ಧ್ವನಿ ಮನಸೆಳೆದ್ದಿದ್ದಂತೂ ಸುಳ್ಳಲ್ಲ. ಎಲ್ಲ ಹಾಡುಗಳಿಗೂ ಅಂತಹ ಹೊಂದದ ಧ್ವನಿ ಅವರದು. ನಿಜ ಹೇಳಬೇಕೆಂದರೆ, ಅವರು ಹಾಡುವುದಕ್ಕಿಂತ, ಬೇರೆ ಕಲಾವಿದರ ಕಂಠವನ್ನು ಬಳಸಿ, ಅವರು ರಾಗ ಸಂಯೋಜಿಸಿರುವ ಹಾಡುಗಳೇ ನನಗೆ ಹೆಚ್ಚು ಹಿಡಿಸುತ್ತಿದ್ದವು.

ನನಗೆ ಬಹಳ ಹಿಡಿಸಿದ, ಈ ಕ್ಷಣದಲ್ಲಿ ಮನಸ್ಸಿಗೆ ಬಂದ, ಕೆಲವು ಹಾಡುಗಳನ್ನಷ್ಟೇ ಪಟ್ಟಿ ಮಾಡುತ್ತಿರುವೆ.

೧. ನೇಸರ ನೋಡು ನೇಸರ ನೋಡು (ಕಾಕನಕೋಟೆ ಚಿತ್ರದ್ದು)

೨. ಹಾವು ತುಳಿದೇನೆ ಮಾನಿನಿ ಹಾವು ತುಳಿದೇನೆ

೩. ಸ್ನೇಹ ಮಾಡಬೇಕಿಂಥವಳ

೪. ಎಂಥಾ ಮರುಳಯ್ಯ ಇದು ಎಂಥ ಮರುಳು (ಸ್ಪಂದನ ಚಿತ್ರದ್ದು)

೫. ಅಳಬೇಡ ತಂಗಿ ಅಳಬೇಡ

೬. ಮದುವೆಯಾಗಿ ತಿಂಗಳಿಲ್ಲ

೭. ಈ ಹಸಿರು ಸಿರಿಯಲಿ (ನಾಗಮಂಡಲ ಚಿತ್ರದ್ದು)

೮. ದೀಪವು ನಿನ್ನದೆ ಗಾಳಿಯು ನಿನ್ನದೆ

೯. ಬಾರೆ ನನ್ನ ದೀಪಿಕಾ

೧೦. ಮಲಗೋ ಮಲಗೆನ್ನ ಮರಿಯೆ

ಇನ್ನೂ ಹತ್ತು ಹಲವು ಹಾಡುಗಳು ನೆನಪಿಗೆ ಬದುತ್ತಿದ್ದರೂ, ಹತ್ತಕ್ಕೆ ನಿಲ್ಲಿಸುವೆ. ಸಾಕು.

ಕಳೆದ ವರ್ಷ ಅವರು ಇಲ್ಲಿಗೆ ಬಂದಾಗ, ಕಾರಣಾಂತರಗಳಿಂದ ಅವರ ಕಾರ್ಯಕ್ರಮವನ್ನು ಕೇಳಲಾಗಲಿಲ್ಲ. ಇನ್ನು ಎಂದಿಗೂ ಆಗುವುದೂ ಇಲ್ಲ ಅನ್ನುವುದನ್ನು ನೆನೆದರೆ, ಬೇಸರವಾಗುತ್ತೆ.

ಆದರೇನಂತೆ? ’ದೀಪಿಕಾ’, ’ಮೈಸೂರ ಮಲ್ಲಿಗೆ’ಯ ಹಾಡುಗಳು, ಸುಮಾರು ೨೫-೩೦ ವರ್ಷಗಳ ನಂತರವೂ, ಇಂದಿಗೂ ಅದೇ ರೀತಿಯಲ್ಲೇ ಕಿವಿಯಲ್ಲೇ ಗುನುಗುತ್ತಿವೆಯಲ್ಲ?

-ಹಂಸಾನಂದಿ

 

Rating
No votes yet

Comments