2009: ಸ್ಮಾರ್ಟ್‌ಪೋನ್ ವರ್ಷ

2009: ಸ್ಮಾರ್ಟ್‌ಪೋನ್ ವರ್ಷ

ಬರಹ

2009: ಸ್ಮಾರ್ಟ್‌ಪೋನ್ ವರ್ಷ
ಕೈಯಲ್ಲಿ ಮೊಬೈಲ್ ಸಾಧನ ಹಿಡಿದು,ಅದರಿಂದಲೇ ಬ್ಯಾಂಕ್ ವ್ಯವಹಾರಗಳನ್ನು ಮಾಡುತ್ತಾ,ಟಿವಿ ವೀಕ್ಷಣೆಯನ್ನೂ ಮಾಡುತ್ತಾ,ಟ್ವಿಟರ್-ಫೇಸ್‌ಬುಕ್‌ಗಳಿಗೆ ಸಂದೇಶ ಕಳುಹಿಸುತ್ತಾ,ಜ್ಞಾನಾರ್ಜನೆಯನ್ನೂ ಮಾಡುವ ಪ್ರವೃತ್ತಿ ಹೆಚ್ಚಿದ ವರ್ಷವಾಗಿಯೇ ಈ ವರ್ಷ ನಮ್ಮ ನೆನಪಿನಲ್ಲುಳಿಯುತ್ತದೆ.ಸ್ಪರ್ಶಸಂವೇದಿ ಮೊಬೈಲ್ ಸಾಧನಗಳ ಕಾರಣ,ತೆರೆಯ ಮೇಲೆಯೇ ಕೈಯಾಡಿಸಿ,ಮಾಯಕದಂತೆ ಸಾಧನವನ್ನು ನಿಯಂತ್ರಿಸುತ್ತಾ,ತೆರೆಯ ಮೇಲೆ ಮೂಡುವ ಕೀಲಿ ಮಣೆಯ ಚಿತ್ರದ ಮೂಲಕವೇ ಟೈಪಿಸುತ್ತಾ ಅಂಗೈಯಲ್ಲೇ ಜಗತ್ತನ್ನು ಕಾಣುವ ಜನರನ್ನು ಎಲ್ಲೆಲ್ಲೂ ಕಾಣಬಹುದು.
ವರ್ಷಾರಂಭದಲ್ಲೇ ಆಗಬೇಕಿದ್ದ ಮೂರು-ಜಿ ಮೊಬೈಲ್ ಸೇವೆಯ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ,ಕೊನೆಯವರೆಗೂ ನಡೆಯದೆ,ಮೂರು-ಜಿ ಸೇವೆಯು ಜನತೆಗೆ ತಲುಪುವುದಕ್ಕೆ ತಡೆಯಾಯಿತು.ಬಿಎಸ್‌ಎನ್‌ಎಲ್ ತನ್ನ ಮೂರು-ಜಿ ಸೇವೆಯನ್ನು ಆರಂಭಿಸಿದೆ.
ಟಾಟಾ ಇಂಡಿಕಾಮ್ ದೂರಸಂಪರ್ಕ ಕಂಪೆನಿಯು ಜಪಾನ್ ಕಂಪೆನಿ ಡೊಕೊಮೊ ಜತೆ ಸಹಭಾಗಿತ್ವದೊಂದಿಗೆ ಟಾಟಾ ಡೊಕೊಮೋ ದೂರಸಂಪರ್ಕ ಸೇವೆ ಆರಂಭಿಸಿ,ಪ್ರತಿ ಸೆಕೆಂಡಿನ ಬಳಕೆಗೆ ಒಂದು ಪೈಸೆ ದರದಲ್ಲಿ ಕರೆ ಮಾಡುವ ಅವಕಾಶ ನೀಡಿ,ಜನರ ಮನಗೆದ್ದಿತು.ವರ್ಷಾಂತ್ಯಕ್ಕೆ ಎಂ ಟಿ ಎಸ್,ಯುನಿನಾರ್ ಅಂತಹ ಕಂಪೆನಿಗಳು ಕರೆಯ ದರವನ್ನು ಸೆಕೆಂಡಿಗೆ ಅರ್ಧ ಪೈಸೆಯಷ್ಟಕ್ಕೆ ಇಳಿಸಿ,ಸ್ಪರ್ಧೆಯನ್ನು ಮತ್ತಷ್ಟು ಹೆಚ್ಚಿಸಿದುವು.
ಇನ್ನು ಟಿವಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಡಿಟಿಎಚ್ ಸೇವೆಯನ್ನು ನೀಡುವ ಕಂಪೆನಿಗಳ ಸಂಖ್ಯೆಯಲ್ಲಿ ಬಹಳ ಹೆಚ್ಚಿವೆ.ವಿಡಿಯೋಕಾನ್ ಕಂಪೆನಿಯ ಡಿ2ಎಚ್,ರಿಲಾಯನ್ಸ್ ಕಂಪೆನಿಯ ಬಿಗ್ ಟಿವಿ ಮುಂತಾದುವು,ಟಿವಿ ಚಾನೆಲ್ ಜತೆ ಬಯಸಿದ ಚಿತ್ರ ಪ್ರದರ್ಶನ,ಕಾರ್ಯಕ್ರಮಗಳ ಪ್ರಸಾರ,ಕಂಪ್ಯೂಟರ್ ಆಟ ಇತ್ಯಾದಿ ಸೇವೆಗಳನ್ನು ಒದಗಿಸಿ,ಕೇಬಲ್ ಟಿವಿಗೆ ಸ್ಪರ್ಧೆ ನೀಡಿವೆ.
ಭಾರತೀಯಮೂಲದ ವೆಂಕಿಗೆ ನೋಬೆಲ್ ಪ್ರಶಸ್ತಿಯನ್ನು ರಸಾಯನಶಾಸ್ತ್ರದಲ್ಲಿ ನೀಡಲಾಗಿದೆ.ಐವತ್ತೇಳು ವರ್ಷದ ವೆಂಕಟ್ರಾಮನ್ ರಾಮಕೃಷ್ಣನ್,ತಮಿಳ್ನಾಡಿನ ಚಿದಂಬರಮ್‌ನವರು.ಬರೋಡಾದ ಎಂಎಸ್ ವಿಶ್ವವಿದ್ಯಾಲಯದ ಪದವೀಧರರು.ಅಮೆರಿಕಾದಲ್ಲಿ ಪಿ ಎಚ್ ಡಿ ಮಾಡಿದ್ದರು.ಎಕ್ಸ್‌ರೇ ಕ್ರಿಸ್ಟಾಲಗ್ರಫಿಯ ಮೂಲಕ,ಆರ್ ಎನ್ ಎಯ ಸಾವಿರಾರು ಅಣುಗಳನ್ನು ಕಂಡು ಹಿಡಿದ ಸಂಶೋಧನೆಗೆ ಅವರಿಗೆ ರಸಾಯನಶಾಸ್ತ್ರದ ನೋಬೆಲ್ ಪ್ರಶಸ್ತಿ ನೀಡಲಾಗಿದೆ.


----------------------------------------------------------
ಅಂತರ್ಜಾಲ ಲಗ್ಗೆಗೆ ನೆಟ್‌ಬುಕ್‌ಗಳು
ಅಂತರ್ಜಾಲಕ್ಕೆ ಸದಾ ಸಂಪರ್ಕದಲ್ಲಿರುತ್ತಾ,ಎಲ್ಲ ತೆರನ ಸೇವೆ ಮತ್ತು ತಂತ್ರಾಂಶಗಳನ್ನೂ ಅಂತರ್ಜಾಲದಲ್ಲಿ ಪಡೆದು,ಕಡತಗಳನ್ನೇನಾದರೂ ಉಳಿಸಬೇಕಾದರೆ,ಅದಕ್ಕೂ ಅಂತರ್ಜಾಲದಲ್ಲಿ ಲಭ್ಯವಿರುವ ಸೇವೆಯನ್ನು ಪಡೆಯುವುದು ಈಗಿನ ವೈಖರಿ.ಅಂತರ್ಜಾಲ ಆಧರಿತ ಈ ರೀತಿಯ ಕಂಪ್ಯೂಟರ್ ಬಳಕೆಗೆ ಸಾಮಾನ್ಯ ಡೆಸ್ಕ್‌ಟಾಪ್ ಕಂಪ್ಯೂಟರುಗಳು ಅಗತ್ಯವಿಲ್ಲ.ಇನ್ನು ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್‌ಗಳೂ ದುಬಾರಿ ಮತ್ತು ಅತ್ತಿಂದಿತ್ತ ಒಯ್ಯಲು ಸಾಕಷ್ಟು ಅನುಕೂಲಕರವಿಲ್ಲ.ಅತ್ಯಂತ ಹಗುರ,ವಿದ್ಯುಚ್ಛಕ್ತಿಯ ಅತಿ ಕಡಿಮೆ ಬಳಕೆ ಮತ್ತು ಮಿತ ಬೆಲೆಯಲ್ಲಿ ಲಭ್ಯವಿರುವ ಸಾಧನವೇ ನೆಟ್‌ಬುಕ್.ಹಲವು ತಯಾರಕರು ಇಂತಹ ನೆಟ್‍ಬುಕ್‌ಗಳನ್ನು ಒದಗಿಸಲು ಶುರು ಮಾಡಿದ್ದು ಈ ವರ್ಷದ ವಿಶೇಷ,ಇಂತಹ ಸಾಧನಗಳು ಸರಳ ಕಾರ್ಯನಿರ್ವಹಣಾ ತಂತ್ರಾಂಶವನ್ನಷ್ಟೇ ಬಯಸುತ್ತವೆ.ಇನ್ನು ಸಂಸ್ಕಾರಕ,ಸ್ಮರಣಕೋಶ,ಹಾರ್ಡ್‌ಡಿಸ್ಕ್ ಸಾಮರ್ಥ್ಯ ಇವೆಲ್ಲಾ ಸೀಮಿತ ಸಾಮರ್ಥ್ಯದ್ದವಾಗಿರುತ್ತವೆ.ಆದರೆ ಸಾಮಾನ್ಯರಿಗೆ ಅಂತರ್ಜಾಲ ಜಾಲಾಡಲು ಇವೆಲ್ಲವೂ ಸಾಕಷ್ಟಾಯಿತು.ಇಂತಹ ಸಾಧನಗಳು ಕಡಿಮೆ ಬೆಲೆಯವಾದ ಕಾರಣ,ಇವುಗಳಿಂದ ಮಾರಾಟಗಾರರಿಗೆ ಸಿಗುವ ಲಾಭಾಂಶ ಬಹಳ ಕಡಿಮೆ.
------------------------------------------------
ತ್ರೀಡಿ ಚಲನಚಿತ್ರಗಳು
ಡಿಜಿಟಲ್ ತಂತ್ರಜ್ಞಾನದಲ್ಲಿ ತಯಾರಾದ ಮೂರು ಆಯಾಮದ ಚಿತ್ರಗಳನ್ನು ಮಾಡುವ ತಂತ್ರಜ್ಞಾನ ಸಿದ್ಧಿಸಿದ್ದರೂ,ಅದನ್ನು ಪ್ರದರ್ಶಿಸಲು ಚಲನಚಿತ್ರ ಮಂದಿರಗಳ ಕೊರತೆ ಇತ್ತು.ಅಂತಹ ಚಿತ್ರಗಳನ್ನು ಪ್ರದರ್ಶಿಸಲು ವಿಶೇಷ ಪರದೆ ಹೊಂದಿದ ಚಿತ್ರಮಂದಿರಗಳನ್ನು ಮಾಡಲು ಯಾರೂ ಮುಂದೆ ಬರುತ್ತಿರಲಿಲ್ಲ.ಈಗ ಜಗತ್ತಿನಾದ್ಯಂತ ಸುಮಾರು ಒಂದು ಸಾವಿರ ಚಿತ್ರಮಂದಿರಗಳು ಅಂತಹ ಪರದೆಯನ್ನು ಹೊಂದಿದ್ದಾವೆ.ವರ್ಷಾಂತ್ಯಕ್ಕೆ ಬಿಡುಗಡೆಯಾದ "ಅವತಾರ್" ನಂತರವೀಗ ಸರಾಗವಾಗಿ ಚಿತ್ರಗಳು ಬಿಡುಗಡೆಗೆ ಕಾದಿವೆ.ಅಪ್ ಅಂಡ್ ಕೊರಾಲೈನ್,ಮೈ ಬ್ಲಡಿ ವ್ಯಾಲಂಟೈನ್,ಮಾನ್ಸ್ಟರ್ ವರ್ಸಸ್ ಅಲೀನ್ಸ್ ಮುಂತಾದ ತ್ರೀಡಿ ಚಿತ್ರಗಳು ಸಾಲುಗಟ್ಟಿ ನಿಂತಿವೆ.
-----------------------------------------------------
ಮೊಬೈಲ್ ಮೂಲಕ ಪಥದರ್ಶನ
ಮೊಬೈಲ್ ಸಾಧನಗಳಲ್ಲಿ ನಕಾಶೆ ತೋರಿಸುವ ಪರಿಪಾಠವು ಐಫೋನಿನಲ್ಲಿ ಈ ವರ್ಷ ಆರಂಭವಾಯಿತು.ನೂರು ಡಾಲರು ಬೆಲೆಯ ತಂತ್ರಾಂಶವನ್ನು ಐಫೋನಿನಲ್ಲಿ ಹಾಕಿಕೊಳ್ಳಬೇಕಿತ್ತು.ಆದರೆ ನಂತರ ಗೂಗಲ್ ತನ್ನ ಮೊಬೈಲ್ ಕಾರ್ಯನಿರ್ವಹಣಾ ತಂತ್ರಾಂಶ ಆಂಡ್ರ‍ಾಯಿಡ್‌ನಲ್ಲಿ ನಕಾಶೆ ತೋರಿಸುವ ತಂತ್ರಾಂಶವನ್ನು ಉಚಿತವಾಗಿ ಅಳವಡಿಸಿ,ಜಿಪಿಎಸ್ ಸಾಧನಗಳ ಕಂಪೆನಿಗಳಿಗೆ ಸಿಂಹಸ್ವಪ್ನವಾಯಿತು.ಅಂತರ್ಜಾಲ ಮೂಲಕ ಗೂಗಲ್ ನಕಾಶೆ ಲಭ್ಯವಿದ್ದು,ಅದನ್ನು ಮೊಬೈಲ್ ಸಾಧನದಲ್ಲಿ ಬಳಸಿಕೊಂಡು,ಆಂಡ್ರಾಯಿಡ್ ಅಂತಹ ನಿರ್ವಹಣಾ ತಂತ್ರಾಂಶ ಬಳಸಿ,ನಕಾಶೆಯ ಮೂಲಕ ದಾರಿ ಕಂಡುಕೊಳ್ಳುವುದು ಈಗ ಸಾಧ್ಯವಾಗಿದೆ.

ಹ್ಯಾಂಡ್‌ಸೆಟ್‍ಗಳನ್ನು ತಂತಿಗಳ ಜಂಜಾಟವಿಲ್ಲದೆ ಚಾರ್ಜ್ ಮಾಡುವ ಇಂಡಕ್ಟಿವ್ ಪವರ್ ತಂತ್ರಜ್ಞಾನ ಈ ವರ್ಷ ಲಭ್ಯವಾಗಿದೆ.ಪಾಮ್‌ಪ್ರಿ ಮತ್ತು ಪವರ್‌ಮೇಟ್ ಸಾಧನಗಳನ್ನು ಈಗ ಅಂತಹ ಸೌಲಭ್ಯ ನೀಡುತ್ತಿವೆ.ದಿನಗಳಲ್ಲಿ ಹ್ಯಾಂಡ್‌ಸೆಟ್ ತಯಾರಕರು ಹ್ಯಾಂಡ್‌ಸೆಟ್‌ಗಳನ್ನು ಚಾರ್ಜ್ ಮಾಡುವ ತಂಗುದಾಣಗಳನ್ನು ಮಾರುಕಟ್ಟೆಗೆ ಬಿಡುವುದು ಖಚಿತ.
--------------------------------------------------------
ವಿನ್ ಆಗುವತ್ತ ವಿಂಡೋಸ್ 7
ಮೈಕ್ರೋಸಾಫ್ಟ್ ಕಂಪೆನಿಯು ಮೂರು ವರ್ಷಗಳ ನಂತರ ಬಿಡುಗಡೆ ಮಾಡಿದ 7 ಕಂಪ್ಯೂಟರ್ ಕಾರ್ಯನಿರ್ವಹಣಾತಂತ್ರಾಂಶ ಆರಂಭಿಕ ಯಶಸ್ಸು ಕಂಡಿದೆ.ಮೈಕ್ರೋಸಾಫ್ಟ್ ಕಂಪೆನಿಗೆ ಇತ್ತೀಚಿನ ವರ್ಷಗಳಲ್ಲಿ ಸಿಕ್ಕಿರುವ ಅಪರೂಪದ ಯಶಸ್ಸು ಇದು.ಕಡಿಮೆ ಯಂತ್ರಾಂಶವನ್ನು ಬಯಸುವ ಈ ತಂತ್ರಾಂಶ,ಕಂಪ್ಯೂಟರನ್ನು ಬೇಗನೇ ಚಾಲೂ ಮಾಡುತ್ತದೆ.ಅಲ್ಲದೆ ಕಂಪ್ಯೂಟರನ್ನು ಬಳಸುವುದನ್ನೂ ಬಹಳ ಸುಲಭವಾಗಿಸುತ್ತದೆ.ಲೆಪರ್ಡ್ ಎನ್ನುವ ಮ್ಯಾಕ್ ಕಂಪ್ಯೂಟರಿನ ಕಾರ್ಯನಿರ್ವಹಣಾ ತಂತ್ರಾಂಶದ ಹೊಸ ಆವೃತ್ತಿಯನ್ನು ಆಪಲ್ ಕಂಪೆನಿಯು ಬಿಡುಗಡೆ ಮಾಡಿತು.ಇಲ್ಲೂ ಕಂಪ್ಯೂಟರನ್ನು ಚುರುಕಾಗಿ ಚಾಲೂ ಮಾಡುವ,ಕಡಿಮೆ ಯಂತ್ರಾಂಶ ಬಯಸುವ ಪ್ರವೃತ್ತಿ ಎದ್ದು ಕಾಣುತ್ತದೆ.

 ಈ ಸಲ ಮೈಕ್ರೋಸಾಫ್ಟ್ ಕಂಪೆನಿಯು ಯಂತ್ರಾಂಶ ತಯಾರಕರ ಜತೆ ಕೆಲಸ ಮಾಡಿ,ಅವರ ಯಂತ್ರಾಂಶವು ಹೊಸ ವ್ಯವಸ್ಥೆಯಲ್ಲಿ ಸರಾಗವಾಗಿ ಕೆಲಸ ಮಾಡುವಂತೆ,ವಿನ್ಯಾಸಗೊಳಿಸಲು ಶ್ರಮ ತೆಗೆದುಕೊಂಡಿದೆ.ಹಳೆಯ ಆವೃತ್ತಿಗಳಲ್ಲಿ ಕೆಲಸ ಮಾಡುತ್ತಿದ್ದ ಯಂತ್ರಾಂಶಗಳು ಇದರಲ್ಲಿ ಕೆಲಸ ಮಾಡುವಂತೆ ಮಾಡುವ ಆಯ್ಕೆಯನ್ನು ನೀಡಲಾಗಿದೆ.ಅಲ್ಲದೆ ವಿಂಡೋಸ್ 7ನ ಯಂತ್ರಾಂಶ ಅಗತ್ಯ ಮಾಡಲು ಪ್ರಯತ್ನಿಸಲಾಗಿದೆ.ಸಂಸ್ಕಾರಕ 1ಗಿಗಾಹರ್ಟ್ಸ್,ಕನಿಷ್ಠ512ಎಂಬಿ ರಾಮ್(ಒಂದು ಜಿಬಿ ಉತ್ತಮ),16ಜಿಬಿ ಹಾರ‍್ಡ್‌ಡಿಸ್ಕ್ ಅವಕಾಶ ಮತ್ತು ಡೈರೆಕ್ಟ್9 ಗ್ರಾಫಿಕ್ಸ್ ಬೇಕು.ಹೊಸ ಕಾರ್ಯನಿರ್ವಹಣಾ ತಂತ್ರಾಂಶದ ಬೆಲೆ ಸುಮಾರು ಆರು ಸಾವಿರ.ಮೂವತ್ತೆರಡು ಬಿಟ್ ಮತ್ತು ಅರುವತ್ತನಾಲ್ಕು ಬಿಟ್ ಕಂಪ್ಯೂಟರುಗಳಿಗೆ ವಿನ್7 ಸಿಗುತ್ತದೆ.
ಉಳ್ಳವರು ದುಡ್ಡು ತೆತ್ತು ವಿಂಡೋಸ್7 ಖರೀದಿಸ ಬಹುದು,ನಾವೇನು ಮಾಡುವುದು-ಬಡವರಯ್ಯಾ ಎನ್ನುವವರು ಯೋಚಿಸಿಬೇಕಾಗಿಲ್ಲ. ವಿನ್ 7ಗೆ ಎಲ್ಲಾ ವಿಧದಲ್ಲೂ ಸ್ಪರ್ಧೆ ನೀಡಬಲ್ಲ ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶ ಉಬುಂಟು9.10 ಹೊಸ ಆವೃತ್ತಿ ರಾಜ್ಯೋತ್ಸವದ ವೇಳೆ ಬಳಕೆಗೆ ಲಭ್ಯವಾಯಿತು.ಇದನ್ನು ಉಚಿತವಾಗಿ ಬಳಸಬಹುದು.ಕನ್ನಡದ ಬಳಕೆಯನ್ನೂ ಸರಾಗವಾಗಿಸುವ ಉಬುಂಟು,ಬಳಕೆದಾರಸ್ನೇಹೀ ಗುಣ  ಹೊಂದಿದೆ.ಅಂತರ್ಜಾಲ,ವಿಡಿಯೋ,ಆಡಿಯೋ,ಪದಸಂಸ್ಕರಣೆ ಇವೆಲ್ಲವನ್ನೂ ಸುಗಮವಾಗಿಸುವ ಉಬುಂಟುವನ್ನು ಕಂಪ್ಯೂಟರಿನಲ್ಲಿ ಸ್ಥಾಪಿಸಿಕೊಂಡರೆ ವಿಂಡೋಸ್ ಹಂಗೇ ಬೇಡ.
ನೆಟ್‌ಬುಕ್ ಅಂತಹ ಅಂತರ್ಜಾಲ ಜಾಲಾಡುವ ಸಾಧನಗಳಿಗಾಗಿಯೇ ಹೊಸ ಕಾರ್ಯನಿರ್ವಹಣಾ ತಂತ್ರಾಂಶ(operating system ಗೂಗಲ್ ಕ್ರೋಂ ಓ ಎಸ್ ಅನ್ನು ತಾನು ಅಭಿವೃದ್ಧಿ ಪಡಿಸಲಿರುವುದಾಗಿ ಗೂಗಲ್ ಕಂಪೆನಿ ಹೇಳಿಕೊಂಡಿತ್ತು.ವರ್ಷಾಂತ್ಯದ ವೇಳೆಗೆ,ಈ ಹೊಸ ಓಎಸ್‌ನ ಆರಂಭಿಕ ಕ್ರಮವಿಧಿಯನ್ನು ಬಿಡುಗಡೆ ಮಾಡಿ,ಹೊಸ ಸಂಚಲನೆ ಮೂಡಿಸಿದ್ದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು.

---------------------------------------------------------

ಆಂಡ್ರಾಯಿಡ್ ಈಗ ಜನಪ್ರಿಯ
ಗೂಗಲ್ ಮೊಬೈಲ್ ಸಾಧನಗಳಿಗೆ ಒದಗಿಸಿರುವ ಕಾರ್ಯನಿರ್ವಹಣಾ ತಂತ್ರಾಂಶ ಆಂಡ್ರಾಯಿಡ್ ಈಗ ಬಹು ಜನಪ್ರಿಯ.ಈಗದನ್ನು ಅಳವಡಿಸಿ,ಮೊಬೈಲ್ ಸಾಧನಗಳನ್ನು ಮಾರುಕಟ್ಟೆಗೆ ಒದಗಿಸಲು ಎಲ್ಜಿ,ಸ್ಯಾಮ್‌ಸಂಗ್,ಮೊಟೊರೊಲಾದಂತಹ ಹಲವು ಹ್ಯಾಂಡ್‌ಸೆಟ್ ತಯಾರಕರು ಮುಂದೆ ಬಂದಿರುವುದು ಈ ವರ್ಷದ ಮುಖ್ಯ ಬೆಳವಣಿಗೆ.ಇ-ರೀಡರ್ ನುಕ್ ಕೂಡಾ ಆಂಡ್ರಾಯಿಡನ್ನು ಬಳಸಿದ್ದು ಇನ್ನೊಂದು ವಿಶೇಷ.
ಐಫೋನ್ ಸೇರಿದಂತೆ ವಿವಿಧ ಸ್ಮಾರ್ಟ್‌ಪೋನ್ ಸಾಧನಗಳಲ್ಲಿ ಬಳಸಬಹುದಾದ ವಿವಿಧ ತಂತ್ರಾಂಶಗಳನ್ನು ಮಾರುವ ಐಸ್ಟೋರ್‌ಗಳು ಈಗ ಅಂತರ್ಜಾಲದಲ್ಲಿ ಬಹು ಜನಪ್ರಿಯವಾಗಿವೆ.ಸ್ಮಾರ್ಟ್‌ಪೋನಿನಲ್ಲಿ ವಿವಿಧ ಸೌಕರ್ಯಗಳನ್ನು ನೀಡಲು ಹೊಸ ಹೊಸ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವುದು ಈಗ ಹಲವರ ಹವ್ಯಾಸ.ಅಂತ ತಂತ್ರಾಂಶಗಳನ್ನು ಕೆಲವರು ಉಚಿತವಾಗಿ ಒದಗಿಸಿದರೆ,ಇನ್ನು ಕೆಲವರು ಹಣ ಪಡೆದು ನೀಡುತ್ತಾರೆ.ಕೆಲವೇ ಸೆಂಟುಗಳಿಂದ ಹಿಡಿದು ಹಲವು ಡಾಲರುಗಳವರೆಗೆ ಬೆಲೆ ಬಾಳುತ್ತವೆ.ಈ ವರ್ಷದ ಹೊಸ ಬೆಳವಣಿಗೆ ಇದು ಎನ್ನಲಡ್ಡಿಯಿಲ್ಲ.
-----------------------------------------------------
ಗೂಗಲ್ ಕ್ರೋಮ್ ಬ್ರೌಸರ್
ತನ್ನದೇ ಆದ ಬ್ರೌಸರ್ ತಂತ್ರಾಂಶವನ್ನು ಒದಗಿಸಿ,ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ತಂತ್ರಾಂಶಕ್ಕೆ ಪೈಪೋಟಿ ಒಡ್ಡಿದ್ದು ವರ್ಷದ ಅತಿ ಮುಖ್ಯ ಬೆಳವಣಿಗೆಗಳಲ್ಲೊಂದು ಎನ್ನಲಡ್ಡಿಯಿಲ್ಲ,ಗೂಗಲ್ ಕ್ರೋಮ್ ಹೇಳಿಕೊಳ್ಳುವಷ್ಟು ಜನಪ್ರಿಯವಾಗದಿದ್ದರೂ,ಮುಖ್ಯ ಬ್ರೌಸರ್ ತಂತ್ರಾಂಶಗಳ ಪೈಕಿ ಅದಕ್ಕೂ ಸ್ಥಾನ ಲಭಿಸಿದೆ.ಫೈರ್‌ಪಾಕ್ಸ್ ಈಗ ಅತ್ಯುತ್ತಮ ಬ್ರೌಸರ್ ಎಂದು ತನ್ನ ಗುರುತನ್ನು ಮೂಡಿಸಿದ್ದು,ಅತ್ಯಂತ ಹೆಚ್ಚು ಮಂದಿ ಬಳಸುವ ಬ್ರೌಸರ್ ಇದಾಗಿದೆ.
------------------------------------
ಟ್ವಿಟರ್,ಫೇಸ್‌ಬುಕ್ ಜನಪ್ರಿಯತೆಯ ತುತ್ತತುದಿಗೆ
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್,ಅರ್ಕುಟ್,ಟ್ವಿಟರ್ ಇವು ವರ್ಷಪೂರ್ತಿ ಸುದ್ದಿಯಲ್ಲಿದ್ದುವು.ಹಲವು ವರ್ಷಗಳಿಂದ ಇವು ಅಂತರ್ಜಾಲದಲ್ಲಿ ಲಭ್ಯವಿದ್ದರೂ,ಈ ವರ್ಷ ಜನರು ಅವುಗಳ ಪ್ರಯೋಜನ ಪಡೆಯುವಲ್ಲಿ ಉತ್ಸಾಹ ತೋರಿಸಿದರು.ಅದರಲ್ಲೂ ಟ್ವಿಟರ್ ಖಾತೆಯ ಮೂಲಕ ಸುದ್ದಿಗಳು,ವಿಚಾರಗಳು,ಚಿಂತನೆಗಳು ಅತ್ಯಂತ ತ್ವರಿತವಾಗಿ,ಘಟನೆಗಳು ನಡೆದಂತೆಲ್ಲಾ ಚರ್ಚಿಸಲ್ಪಟ್ಟವು.ಮೊಬೈಲ್ ಮೂಲಕವೂ ಟ್ವಿಟ,ಫೇಸ್‌ಬುಕ್ ಸೇವೆಯನ್ನು ಪಡೆಯಲು ಸಾಧ್ಯವಾಗುವುದು,ಅವುಗಳ ಜನಪ್ರಿಯತೆಗೆ ಕಾರಣವಾಯಿತು.
-------------------------------------------------
ಗೂಗಲ್ ಸುದ್ದಿಯಲ್ಲಿ
ವರ್ಷದುದ್ದಕ್ಕೂ ಸುದ್ದಿಯಲ್ಲಿದ್ದ ಗೂಗಲ್ ತನ್ನ ಕ್ರೋಮ್ ಬ್ರೌಸರ್,ಕ್ರೋಮ್ ಓಎಸ್‌ನ ಕ್ರಮವಿಧಿ ಒದಗಿಸಿದ್ದು ಮುಖ್ಯ ಘಟನೆಗಳು.ಜತೆಗೆ ಭಾರತೀಯ ಭಾಷೆಗಳಲ್ಲಿ ಟೈಪಿಂಗ್ ಸೌಲಭ್ಯ ಒದಗಿಸಲು ಐಎಂಇ ತಂತ್ರಾಂಶ,ಭಾರತೀಯ ಭಾಷೆಗಳಲ್ಲಿ ಆನ್‌ಲೈನ್ ನಿಘಂಟು ಒದಗಿಸಿದುದು,ಅನುವಾದ ಸೇವೆ,ಗೂಗಲ್ ನಕಾಶೆಗಳನ್ನು ಇನ್ನಷ್ಟು ಬಳಕೆಗೆ ಸುಲಭವಾಗಿಸಿ,ಹೊಸ ಸೌಕರ್ಯಗಳನ್ನು ಒದಗಿಸಿದ್ದು ವರ್ಷದ ಹೈಲೈಟ್.ಗೂಗಲ್ ವೇವ್ ಎನ್ನುವ ಹೊಸ ಸೇವೆಯನ್ನೂ ಈ ವರ್ಷ ಗೂಗಲ್ ಒದಗಿಸಿತು.ಇದು ಜನರ ನದುವೆ ಸಹಭಾಗಿತ್ವ ಏರ್ಪಡಲು ಮತ್ತು ವಿಚಾರಗಳು ಮತ್ತು ವಿವಿಧ ನಮೂನೆಯ ಕಡತಗಳ ವಿನಿಮಯ ಸುಲಭವಾಗಿಸಲು ಒದಗಿಸಿದ ಹೊಸ ಸೇವೆಯಾದರೂ,ಜನರಿನ್ನೂ ಅವನ್ನು ಸಮರ್ಥವಾಗಿ ಬಳಸಲು ವಿಫಲರಾದರು.ಗೂಗಲ್ ವಾಯಿಸ್ ಸೇವೆ ಅಮೆರಿಕಾದಂತಗ ದೇಶಗಳಲ್ಲಿ ಆರ‍ಂಭವಾಗಿ,ಧ್ವನಿ ಕರೆಗಳನ್ನು ಕಂಪ್ಯೂಟರ್ ಮೂಲಕ ಮಾಡಲು,ತಮ್ಮೆಲ್ಲಾ ದೂರಸಂಪರ್ಕ ಸಾಧನಗಳು ಮತ್ತು ಸೇವೆಗಳನ್ನೂ ಒಂದೇ ಸಂಖ್ಯೆಯ ಮೂಲಕ ಪಡೆಯುವ ವಿನೂತನ ಸೇವೆಯಿದಾಗಿತ್ತು.ದೂರಸಂಪರ್ಕ ಸೇವೆಯಲ್ಲಿ ತೊಡಗಿರುವ ಕಂಪೆನಿಗಳಿಗೆ ಗೂಗಲ್‌ನ ಉಚಿತ ಸೇವೆ ಚಳಿ ಹಿಡಿಸಿತು.
---------------------------------------------------------------------------

ದಶಮಾನೋತ್ಸವ ಸಂಭ್ರಮದಲ್ಲಿ ಬ್ಲಾಗರ್

ಬ್ಲಾಗಿಂಗ್‌ಗೆ ಹೊಸ ಭಾಷ್ಯ ಬರೆದ ಬ್ಲಾಗರ್ ಸೇವೆ ಈ ವರ್ಷ ತನ್ನ ದಶಮಾನೋತ್ಸವ ಮಾಡಿತು.ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರಿನ ದಾಳಿಯ ಸಂದರ್ಭದಲ್ಲಿ ಜನರ ಭಾವನೆಗಳಿಗೆ ಅಭಿವ್ಯಕ್ತಿಯಾಗಿ ಬ್ಲಾಗಿಂಗ್ ಜನಜೀವನದ ಭಾಗವಾಗಿ ಹೋಯಿತು.ಸದ್ಯ ಮೂವತ್ತು ಕೋಟಿ ಕ್ರಿಯಾಶೀಲ ಬ್ಲಾಗಿಗರನ್ನು ಹೊಂದಿರುವ ಬ್ಲಾಗರ್,ಗೂಗಲ್ ಬಗಲಿಗೇರಿದೆ.ಪ್ರತಿ ನಿಮಿಷಕ್ಕೆ ಮೂರು ಲಕ್ಷ ಪದಗಳಷ್ಟು ಬ್ಲಾಗ್ ಬರವಣಿಗೆ ಬ್ಲಾಗರ್ ಸೇವೆಯ ಮೂಲಕ ಆಗುತ್ತದೆ.ವರ್ಡ್‌ಪ್ರೆಸ್,ಲೈವ್‌ಜರ್ನಲ್ ಮುಂತಾದ ಬ್ಲಾಗಿಂಗ್ ಸೇವೆಗಳನ್ನು ಹಿಮ್ಮೆಟ್ಟಿಸಿ,ಬ್ಲಾಗರ್ ನಂಬರ್ ಒಂದು ಸ್ಥಾನದಲ್ಲಿರಲು ಗೂಗಲ್ ಹೆಸರು ನೆರವಾಗಿದೆ.ನೂರನಲುವತ್ತು ಪದಗಳಿಗೆ ಸೀಮಿತವಾದ ಮೈಕ್ರೋಬ್ಲಾಗಿಂಗ್ ಸೇವೆ ಟ್ವಿಟರ್,ನಂಬಲಾಗದ ಬೆಳವಣಿಗೆ ಕಂಡಿರುವ ಈ ದಿನಗಳಲ್ಲೂ ಬ್ಲಾಗರ್ ಜನಪ್ರಿಯತೆ ಇಳಿಮುಖವಾಗಿಲ್ಲ. ಕ್ರಿಕೆಟಿನ 20-20ಗೆ ಟ್ವಿಟರ್ ಸಮವಾದರೆ,ಬ್ಲಾಗರನ್ನು ಟೆಸ್ಟ್ ಕ್ರಿಕೆಟಿಗೆ ಹೋಲಿಸಬಹುದೇನೋ!
---------------------------------------------------------------------
ಚಂದ್ರಮಾಮನಿಗೆ ಗುದ್ದು
ಚಂದ್ರಮಾಮನಿಗೆ ನಾಸಾದ ರಾಕೆಟ್ ಅಪ್ಪಳಿಸಿ ನಡೆಸಿದ ಪರೀಕ್ಷೆಗಳ ಫಲಿತಾಂಶವಿನ್ನೂ ಬರಬೇಕಾಗಿದೆ.ಭಾರತದ ಚಂದ್ರಯಾನ ನಿರೀಕ್ಷೆಗಿಂತ ಮೊದಲೇ ಕೊನೆಗೊಂಡರೂ,ಅದು ಸೆರೆ ಹಿಡಿದ ಚಿತ್ರಗಳ ಮೂಲಕ,ಚಂದ್ರನಲ್ಲಿ ನೀರು ಇರಬಹುದು ಎನ್ನುವ ಸುಳಿವು ಸಿಕ್ಕಿದ್ದು ವರ್ಷದಲ್ಲಿ ಎದ್ದು ಕಾಣಿಸಿದ ಸುದ್ದಿಯಾಗಿತ್ತು.
----------------------------------------------
ಆನ್‌ಲೈನಿನಲ್ಲಿ CAT ಪರೀಕ್ಷೆಯೇ ಫೇಲು
ಕಂಪ್ಯೂಟರಿನಲ್ಲಿ ಕ್ಯಾಟ್ ಪರೀಕ್ಷೆ ಬರೆದು,ಪ್ರತಿಷ್ಠಿತ ಐಐಎಂಗಳಿಗೆ ಪ್ರವೇಶ ಗಿಟ್ಟಿಸಿಕೊಳ್ಳುವ ಪ್ರಯೋಗ ಈ ವರ್ಷ ನಡೆದರೂ,ಅದಕ್ಕೆ ಹಲವು ತೊಡಕುಗಳು ಎದುರಾದುವುದು.ವೈರಸ್ ಕಾಟದಿಂದ ಹೀಗಾಯಿತು ಎನ್ನುವ ವಿವರಣೆ ಯಾರಿಗೂ ಸಮಾಧಾನ ತರಲಿಲ್ಲ.ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದ ಈ ಆನ್‌ಲೈನ್ ಪರೀಕ್ಷೆ ರದ್ದಾಗಿ,ಅವರುಗಳು ಹೊಸದಾಗಿ ಪರೀಕ್ಷೆ ಬರೆಯಬೇಕಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
------------------------------------------------------------


ಕನ್ನಡ ವಿಶ್ವಕೋಶ "ಕಣಜ"
ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ "ಕಣಜ" ಎಂದು ಹೆಸರಿಡಲಾಗಿದೆ.ಈ ಜ್ಞಾನಕೋಶದ ಅಂತರ್ಜಾಲ ತಾಣವನ್ನು ಈಗ ಲೋಕಾರ್ಪಣೆ ಮಾಡಲಾಗಿದ್ದು http://kanaja.in/ ವಿಳಾಸದಲ್ಲಿ ಲಭ್ಯವಿದೆ."ಕರ್ನಾಟಕ ಜ್ಞಾನ ಆಯೋಗದ ಪ್ರಯತ್ನದ ಈ ಯೋಜನೆಗೆ ಕರ್ನಾಟಕ ಸರ್ಕಾವು ಎರಡು ಕೋಟಿ ಅನುದಾನವನ್ನು ನೀಡಿದೆ.
-----------------------------------------------
ಗೂಗಲ್ ಅರ್ಥ್ ಹೋಲುವ ಇಸ್ರೋದ ಭುವನ್
ಈಗ ಇಸ್ರೋವೂ ಗೂಗಲ್ ಅರ್ಥ್ ಅಂತಹ ಅಂತಹ ಸೇವೆಯನ್ನು ನೀಡಲು ಆರಂಭಿಸಿದೆ. ಅದಕ್ಕಾಗಿ ಅದು ಭುವನ್ ಎನ್ನುವ ಬಹು ಉಪಗ್ರಹ ವ್ಯವಸ್ಥೆಯನ್ನು ಸ್ಥಾಪಿಸಿತು. ಅದರ ಮೂಲಕ ಹೆಚ್ಚಿನ ಸ್ಪಷ್ಟತೆಯಿರುವ ಭೂಮಿಯ ಚಿತ್ರಗಳನ್ನು ಸೆರೆ ಹಿಡಿದು,ಅದರ ಮೂಲಕ ಗೂಗಲ್ ಅರ್ಥ್‌ಗೆ ಹೋಲುವ ಸೇವೆಯನ್ನು ನೀಡುವುದು ಇಸ್ರೋದ ಕನಸು ಈ ವರ್ಷ ನನಸಾದರೂ,ಗೂಗಲನ್ನು ಮೀರಿಸಲು ಅದಿನ್ನೂ ಸಮಯ ತೆಗೆದುಕೊಂಡೀತು.
---------------------------------
ಕನ್ನಡ ಅಂತರ್ಜಾಲ ತಾಣಗಳು
ಕನ್ನಡ ಬ್ಲಾಗ್ಸ್ http://kannadablogs.ning.com/ ಕನ್ನಡದ ಹೊಸ ಅಂತರ್ಜಾಲ ತಾಣವಾಗಿ ಮೂಡಿಬಂತು.ಕನ್ನಡ ಬ್ಲಾಗಿಗರನ್ನು ಒಂದುಗೂಡಿಸುವುದು ಮತ್ತು ಪುಸ್ತಕ ಬಿಡುಗಡೆ, ಚರ್ಚೆಗಳಂತಹ ಚಟುವಟಿಕೆಗಳನ್ನು ಅವರ ಗಮನಕ್ಕೆ ತರುವ ಕಾರ್ಯದಲ್ಲಿ ಕನ್ನಡಬ್ಲಾಗ್ಸ್ ತಾಣ ಅಪೂರ್ವ ಯಶಸ್ಸು ಕಂಡಿದೆ. ವರ್ಷಾಂತ್ಯಕ್ಕೆ ಎರಡೂಕಾಲು  ಸಾವಿರ ಸದಸ್ಯರನ್ನು ನೋಂದಾಯಿಸಿ,ಇನ್ನೂ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ತಾಣವಿದು.ಮೇ ಫ್ಲವರ್ ಮೀಡಿಯಾ ಹೌಸ್ ಈ ತಾಣವನ್ನು ನಿರ್ವಹಿಸುತ್ತಿದೆ. "ಕೆಂಡಸಂಪಿಗೆ" ಹಿನ್ನೆಲೆಗೆ ಸರಿದುದು ಅನಿರೀಕ್ಷಿತ ಬೆಳವಣಿಗೆ.ಅನಿವಾಸಿ ಭಾರತೀಯರನ್ನು ಬಹುವಾಗಿ ಆಕರ್ಷಿಸುವಲ್ಲಿ ಸಫಲವಾಗಿರುವ ದಟ್ಸ್‌ಕನ್ನಡ.ಕಾಮ್ thatskannada.com ಕನ್ನಡದ ಜನಪ್ರಿಯ ತಾಣ. ಸುದ್ದಿಯನ್ನೂ ಪ್ರಕಟಿಸುವ ಈ ತಾಣ, ಎಲ್ಲಾ ತರದ ಮಸಾಲೆಯನ್ನೂ ಹೊಂದಿರುವುದೇ ಇದರ ಜನಪ್ರಿಯತೆಯ ಗುಟ್ಟು. ಬರಹಗಾರರಿಗೆ ತಮ್ಮ ಬರಹವನ್ನು ಯಾವುದೇ ಸಂಪಾದಕರ ಕತ್ತರಿಗೊಳಗಾಗದೆ ದಿಡೀರ‍್ ಆಗಿ ಪ್ರಕಟಿಸಿ, ಓದುಗರಿಂದ ಮತ್ತು ಸದಸ್ಯರಿಂದ ಪ್ರತಿಕ್ರಿಯೆ ಪಡೆಯಲು ಅನುವು ಮಾಡುವ ಸಂಪದ.ನೆಟ್(sampada.net ) ನಂಬರ್ 2 ಸ್ಥಾನದಲ್ಲಿರುವ ಕನ್ನಡ ತಾಣ.ಜಾಹೀರಾತಿನ ಕಾಟವಿಲ್ಲದೆ,ಅತ್ಯುತ್ತಮ ಬಳಕೆದಾರ ಸ್ನೇಹಿ ಪುಟ ವಿನ್ಯಾಸ ಹೊಂದಿದ ಸಂಪದಕ್ಕೆ ಹರಿಪ್ರಸಾದ್ ನಾಡಿಗ್ ಸಾರಥ್ಯವಿದೆ. ಸದಸ್ಯರ ಸಂಖ್ಯೆ ಆರೂವರೆ ಸಾವಿರಕ್ಕೂ ಹೆಚ್ಚು.ನೀರ ನಿಶ್ಚಿಂತೆ ಸಾಧಿಸುವ ಗುರಿ ಹೊತ್ತ  ಕನ್ನಡ ವಾಟರ್ ಪೋರ್ಟಲ್, ಆರೋಗ್ಯ ಸಂಪದ, ಕೃಷಿ ಸಂಪದಗಳೂ ಸಂಪದದ ಛತ್ರದಡಿ ಬರುತ್ತವೆ.ಈ ವರ್ಷ ಈ ತಾಣವೂ ನಿರ್ವಹಣೆಗಾಗಿ ಎರಡು ತಿಂಗಳ ಕಾಲ ನಿಲುಗಡೆಯಾಯಿತು.ಸಂಪನ್ಮೂಲಗಳಿಗಾಗಿ ಕನ್ನಡಿಗರತ್ತ ನೋಡುತ್ತಿರುವ ಸಂಪದವನ್ನು ಕನ್ನಡಿಗರು ಪ್ರೋತ್ಸಾಹಿಸಲು ಮನ ಮಾಡಬೇಕಿದೆ.ಕನ್ನಡದಲ್ಲೂ ಟ್ವಿಟರನ್ನು ಹೋಲುವ ಇಂಚರ ಎನ್ನುವ ತಾಣ ಆರಂಭವಾಯಿತು.ವಸಂತ್ ಕಜೆ ಎನ್ನುವ ತಂತ್ರಜ್ಞ ಇದನ್ನು ನಿರ್ವಹಿಸುತ್ತಿದ್ದಾರೆ.ನೀರಿನ ಬಗ್ಗೆ ಮಾಹಿತಿಯನ್ನೊಳಗೊಂಡ http://kannada.indiawaterportal.org/ ಕೂಡಾ ಸಾಕಷ್ಟು ಜನಪ್ರಿಯವಾಯಿತು.
----------------------------------------
ಕೃಷಿ ಪತ್ರಿಕೆಗಳು ಅಂತರ್ಜಾಲದಲ್ಲಿ
ಕೃಷಿಸಂಪದ ಇ-ಪತ್ರಿಕೆಯ ಮೊದಲ ಆವೃತ್ತಿಯನ್ನು ಸೆಪ್ಟೆಂಬರ್ 21ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬಿಡುಗಡೆಯಾಗಲಿದೆ.ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರು ಇ-ಪತ್ರಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.ಅಡ್ಡೂರು ಕೃಷ್ಣರಾವ್ ಅವರು ಕೃಷಿರಂಗದ ಪಲ್ಲಟಗಳು ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ."ಕೃಷಿ,ಮಾಹಿತಿ ತಂತ್ರಜ್ಞಾನ ಮತ್ತು ನಾವು" ಎಂಬ ಬಗ್ಗೆ ಸಂವಾದವೂ ನಡೆಯಲಿದೆ.ಈಗಾಗಲೇ ಮೂರು ಸಂಚಿಕೆಗಳ ಬಿಡುಗಡೆಯಾಗಿವೆ.

ಅಡಿಕೆ ಪತ್ರಿಕೆಯೂ ರಾಜ್ಯೋತ್ಸವದ ದಿನದಿಂದ ಅಂತರ್ಜಾಲ ತಾಣದಲ್ಲಿ  www.adikepatrike.com  ಎಂಬ ವಿಳಾಸದಲ್ಲಿ ಲಭ್ಯವಿದೆ.ಪತ್ರಿಕೆಯ ಹಳೆ ಸಂಚಿಕೆಗಳ ಪಿಡಿಎಫ್ ಪ್ರತಿಗಳು ಡೌನ್‌ಲೋಡಿಗೆ ಲಭ್ಯವಿರುವುದು ತಾಣದ ವಿಶೇಷತೆ.ಮುಂದೆ ಪತ್ರಿಕೆಗೆ ಆನ್‌ಲೈನ್ ಚಂದಾದಾರರಾಗುವ ಅವಕಾಶವೂ ಸಿಗಲಿದೆ.ಕೃಷಿಕರ ಅನುಭವವನ್ನು ಪರಸ್ಪರ ಹಂಚಿಕೊಳ್ಳಲು ಅನುಕೂಲ ಕಲ್ಪಿಸಿದ್ದ ಅಡಿಕೆ ಪತ್ರಿಕೆ ಮುದ್ರಿತ ಪತ್ರಿಕೆಯ ವ್ಯಾಪ್ತಿಯಿಂದ ಹೊರಬಂದು ತನ್ನ ಕ್ಷೇತ್ರವನ್ನು ವಿಸ್ತಾರಗೊಳಿಸಿಕೊಂಡಿರುವುದು,ಉತ್ತಮ ಬೆಳವಣಿಗೆ.
---------------------------------------------------------


ಮೈಕ್ರೋಸಾಫ್ಟ್ ಬಿಂಗ್
ಮೈಕ್ರೋಸಾಫ್ಟಿನ ಹೊಸ ಶೋಧ ಸೇವೆ ಜೂನ್‌ನಲ್ಲಿ  ಅನಾವರಣಗೊಂಡಿತು. ಟ್ವಿಟರ್ ಮಾಹಿತಿಯನ್ನು ಸೇರಿಸಿಕೊಂಡು ಶೋಧ ಫಲಿತಾಂಶವನ್ನು ಬಹು ತಾಜಾ ಆಗಿಸುವತ್ತ ಬಿಂಗ್ ಹೆಜ್ಜೆಯಿಕ್ಕಿದೆ.ಅದರ ಜತೆ ಯಾಹೂ ಜತೆ ಒಪ್ಪಂದ ಮಾಡಿಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳುವತ್ತಲೂ ದೃಷ್ಟಿ ಹಾಯಿಸಿತು.
ಹೊಸ ಸ್ಪರ್ಶಸಂವೇದಿ ಮೌಸ್
ಆಪಲ್ ಕಂಪೆನಿಯು ಗುಂಡಿಗಳಿಲ್ಲದ ಹೊಸ ಸ್ಪರ್ಶಸಂವೇದಿ ಮೌಸನ್ನು ಹೊರ ತಂದಿದೆ. ಈ ಮೌಸ್ ಐಫೋನ್ ಸಾಧನದ ಸ್ಪರ್ಶ ಸಂವೇದಿ ತೆರೆಯ ಸೌಲಭ್ಯಗಳನ್ನು ಕಂಪ್ಯೂಟರಿನಲ್ಲಿ ಪಡೆಯಲು ನೆರವಾಗುತ್ತದೆ. ಸ್ಪರ್ಶಿಸಿದ ಬಗೆಯಿಂದಲೇ ನೋಡುತ್ತಿರುವ ಪುಟದ ಮೇಲ್ಭಾಗ ಅಥವ ಕೆಳಭಾಗದತ್ತ ಸಾಗುವ ಸೌಕರ್ಯ ಇಲ್ಲಿ ಸಿಗುತ್ತದೆ. ಕ್ಲಿಕ್ಕಿಸಿದರೆ,ಬಲ-ಎಡ ಗುಂಡಿಗಳ ಕ್ಲಿಕ್ಕಿಸುವಿಕೆ ಇವೆಲ್ಲವನ್ನೂ ಅದು ಸ್ಪರ್ಶಿಸಿದ ರೀತಿಯಿಂದಲೇ ತಿಳಿದುಕೊಳ್ಳುತ್ತದೆ. ಕ್ಯಾಪಾಸಿಟಿವ್ ಸಂವೇದಕಗಳಿಂದ ಇದನ್ನು ತಯಾರಿಸಲಾಗಿದೆ.ಬ್ಲೂಟೂತ್ ಮೂಲಕ ಇದನ್ನು ಕಂಪ್ಯೂಟರಿಗೆ ನಿಸ್ತಂತು ಮಾಧ್ಯಮದ ಮೂಲಕ ಸಂಪರ್ಕಿಸಲಾಗುತ್ತದೆ. ಆದ್ದರಿಂದ ಕೇಬಲ್ ಮುಕ್ತವಾಗಿರುತ್ತದೆ.ಇದು ಕೆಲಸ ಮಾಡಲು ಆಪಲ್ ಕಂಪ್ಯೂಟರ್ ಮತ್ತು ಲೆಪರ್ಡ್ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ಬೇಕು. ಹೊಸ ಕಂಪ್ಯೂಟರ್ ಮತ್ತು ಮ್ಯಾಕ್‌ಬುಕ್ ನೋಟ್‌ಬುಕ್‌ಗಳ ಜತೆ ಈ ಮೌಸ್ ಬಳಕೆಗೆ ಸಿಗಲಿದೆ.ಬೆಲೆ ಸುಮಾರು ಎಪ್ಪತ್ತು ಡಾಲರುಗಳು.
-----------------------------------------------------


ನುಕ್ ಇ-ಬುಕ್ ರೀಡರ್
ನುಕ್ ಎನ್ನುವುದು ಹೊಸ ಇ-ಬುಕ್ ರೀಡರ್ ಸಾಧನ ಈ ವರ್ಷ ಬಿಡುಗಡೆಯಾಯಿತು.ಕಿಂಡ್ಲ್ ಎನ್ನುವ ಸಾಧನದಂತೆಯೇ ಇದು ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಿದ ಅನುಭವ ನೀಡುವ ಸಾಧನ.ಬ್ಯಾಟರಿಯಿಂದ ಕೆಲಸ ಮಾಡುವ ಕಾರಣ ಇದನ್ನು ಬೇಕೆಂದಲ್ಲಿಗೆ ಒಯ್ಯಬಹುದು.ಬಾರ್ನೆಸ್ ಅಂಡ್ ನೋಬ್ಲ್ ಕಂಪೆನಿಯು ಈ ಸಾಧನವನ್ನು ಮಾರುಕಟ್ಟೆಗೆ ಒದಗಿಸಿದೆ.ಕಂಪೆನಿಯು ಪುಸ್ತಕ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದು,ತಾನೇ ಸ್ವತ: ಇ-ಪುಸ್ತಕಗಳನ್ನು ಒದಗಿಸುತ್ತದೆ. ನುಕ್‌ಗೆ ಪುಸ್ತಕಗಳನ್ನು ಅಂಗಡಿಯ ನಿಸ್ತಂತು ಸಂಪರ್ಕದ ಮೂಲಕ ಇಳಿಸಿಕೊಳ್ಳಬಹುದು. ಇಳಿಸಿಕೊಂಡ ಪುಸ್ತಕಗಳನ್ನು ಹದಿನಾಲ್ಕು ದಿನಗಳ ಮಟ್ಟಿಗೆ ಇತರರಿಗೆ ಎರವಲು ನೀಡಬಹುದು. ಒಂದು ಪುಸ್ತಕವನ್ನು ಒಂದು ಸಲ ಮಾತ್ರಾ ಎರವಲು ನೀಡಬಹುದು.ಬೆಲೆ ಸುಮಾರು ಇನ್ನೂರೆಪ್ಪತ್ತೈದು ಡಾಲರು. ಕಿಂಡಲ್ ಸಾಧನವೂ ಇದೇ ಬೆಲೆಯಲ್ಲಿ ಲಭ್ಯ.
----------------------------------------


ಹಿಂದಿಯಲ್ಲೂ ಅಂತರ್ಜಾಲ ತಾಣದ ಹೆಸರು ಸಾಧ್ಯ
ಇಂಗ್ಲೀಷ್(ಲ್ಯಾಟಿನ್) ಅಕ್ಷರಗಳ ಹೊರತಾದ ಇತರ ಭಾಷೆಗಳಲ್ಲೂ ಅಂತರ್ಜಾಲ ತಾಣದ ವಿಳಾಸವನ್ನು ನೀಡಲು ಸಾಧ್ಯವಾಗಬೇಕೆಂಬುದು ಹಳೆಯ ಕನಸು.ಅಂತರ್ಜಾಲದ ನೂರಹದಿನಾರು ಕೋಟಿ ಬಳಕೆದಾರರು ಇಂಗ್ಲೀಷಿನಂತಹ ಲ್ಯಾಟಿನ್ ಲಿಪಿಯೇತರ ಬಳಸುವ ಭಾಷೆಗಳ ಬಳಕೆ ಮಾಡುತ್ತಿದ್ದರೂ, ಆ ಭಾಷೆಗಳಿಗೆ ಅಂತರ್ಜಾಲದ ವಿಳಾಸದಲ್ಲಿ ಪ್ರಾತಿನಿಧ್ಯ ಸಿಗದಿರುವುದು ನ್ಯಾಯವಲ್ಲ ಎನ್ನುವ ಭಾವನೆಗೆ ಈಗ ಬೆಲೆ ಸಿಕ್ಕಿದೆ.ಇದೀಗ ಹಿಂದಿ,ಚೀನೀ,ಅರೇಬಿಕ್ ಅಂತಹ ಭಾಷೆಗಳನ್ನು ಹಲವು ನಿಯಮಗೊಳಿಗೆ ಒಳಪಟ್ಟು,ಯು ಆರ್ ಎಲ್ ಎಂದು ಕರೆಯಲ್ಪಡುವ ಅಂತರ್ಜಾಲದ ವಿಳಾಸದಲ್ಲಿ ಬಳಸಲು ಅನುಮತಿಸಲಾಗಿದೆ.ICANN ಎನ್ನುವ ಅಂತರ್ಜಾಲದ ಹೆಸರು ಮತ್ತು ಸಂಖ್ಯೆಗಳ ನಿಗಮವು ಈ ನಿರ್ಣಯ ಕೈಗೊಂಡಿದೆ. ಪ್ರತಿ ಭಾಷೆಗೂ ಅದರದ್ದೇ ಆದ ಅಂತ್ಯ ಪದವನ್ನು ಬಳಸಬೇಕು ಎನ್ನುವ ನಿಯಮವನ್ನು ವಿಧಿಸಲಾಗಿದೆ.ಕಾಂ, ನೆಟ್ ಮುಂತಾದ ಪದಗಳನ್ನು ಹೆಸರಿನ ಅಂತ್ಯದಲ್ಲಿ ಬಳಸಲು ಅನುಮತಿ ಇಲ್ಲ. ಈ ಬಳಕೆ ಮುಂದಿನ ವರ್ಷ ಸಾಧ್ಯವಾಗಬಹುದು.ನಿಧಾನವಾಗಿ ಎಲ್ಲ ಭಾಷೆಗಳಲ್ಲಿಯೂ ಅಂತರ್ಜಾಲ ವಿಳಾಸಕ್ಕೆ ಅನುಮತಿ ಸಿಗಬಹುದು.ಹೊಸ ಭಾಷೆಗಳ ಸೇರ್ಪಡೆ ಸಾಧ್ಯವಾಗಲು  ಅಂತರ್ಜಾಲದ ಯುಆರೆಲ್‌ಗೆ ಸಮನಾದ ಸಂಖ್ಯಾವಿಳಾಸ ಒದಗಿಸುವ ಡಿಎನ್‌ಎಸ್ ಎನ್ನುವ ಸರ್ವರ್ ಕಾರ್ಯವಿಧಾನದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.
*ಅಶೋಕ್‌ಕುಮಾರ್ ಎ

udayavani