ಜೆ.ಡಿ.ಎಸ್. ರಸ್ತೆ ಬಂತು! ಬಿ.ಜೆ.ಪಿ. ರಸ್ತೆ ಬಂತು!

ಜೆ.ಡಿ.ಎಸ್. ರಸ್ತೆ ಬಂತು! ಬಿ.ಜೆ.ಪಿ. ರಸ್ತೆ ಬಂತು!

Comments

ಬರಹ

ಶೀರ್ಷಿಕೆ ನೋಡಿ, ಇದೇನು ರಸ್ತೆಗಳಿಗೆ ರಾಜಕೀಯ ಪಕ್ಷಗಳ ಹೆಸರನ್ನಿಡುವುದು ಯಾವಾಗ ಶುರುವಾಯಿತು ಎಂದು ಕೊಳ್ಳಬೇಡಿ. ಇದು ಜನರೇ ನೀಡಿರುವ ಹೆಸರುಗಳು!


ಕಳೆದ ದೀಪಾವಳಿಯಲ್ಲಿ ಆ ಮಾರ್ಗದಲ್ಲಿ ಪ್ರಯಾಣ ಮಾಡುವಾಗ ಈ ಹೆಸರುಗಳು ನನ್ನ ಕಿವಿಗೆ ಬಿದ್ದವು. ಅದರ ಬಗ್ಗೆ ವಿವರಿಸಿದಾಗ ನನಗೆ ಸಿಕ್ಕ ಮಾಹಿತಿ ಇದು.


ಚೆನ್ನರಾಯಪಟ್ಟಣದಿಂದ ಅರಕಲಗೂಡಿನವರೆಗೆ ಸುಮಾರು ನಲವತ್ತೈದು ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿ ಕುಮಾರಸ್ವಾಮಿ ಮುಖ್ಯಂತ್ರಿಯಾಗಿದ್ದಾಗ ಆರಂಭವಾಗಿತ್ತು. ಅತ್ಯುತ್ತಮ ಗುಣಮಟ್ಟದ ದ್ವಿಪಥ ರಸ್ತೆ ನಿರ್ಮಾಣದ ಉದ್ದೇಶವಾಗಿತ್ತು. ಜೊತೆಗೆ ನೀರಾವರಿ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆಯನ್ನೂ, ಹೇಮಾವತೀ ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿ (ಸುಮಾರು ಎರಡು ಕಿ.ಮೀ) ಸಂಪೂರ್ಣ ಕಾಂಕ್ರೀಟಿನಿಂದ ಕೂಡಿದ ಚತುಷ್ಪಥ ರಸ್ತೆ ಹಾಗೂ ಫುಟ್ ಪಾತ್ ನಿರ್ಮಾಣದ ಗುರಿಯೂ ಇತ್ತು. ಕೆಲಸ ಭರದಿಂದ ಸಾಗುತ್ತಿದ್ದಾಗ ಮೊದಲು ರಾಷ್ಟ್ರಪತಿ ಆಡಳಿತ, ನಂತರ ಚುನಾವಣೆ ನಡೆದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ವಿರೋಧ ಪಕ್ಷಗಳ ಶಾಸಕರಿರುವ ಕ್ಷೇತ್ರಗಳಲ್ಲಿನ ಕಾಮಗಾರಿಗಳು ವೇಗ ಕಳೆದುಕೊಂಡವು. ಆ ರಸ್ತೆ ಇರುವ ಜಾಗ ಶ್ರವಣ ಬೆಳಗೊಳ - ಹೊಳೆನರಸೀಪುರ - ಅರಕಲಗೂಡು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಮೊದಲೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ರಸ್ತೆಯಿದ್ದರೆ, ಅರಕಲಗೂಡಿನಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.


ಈ ರಸ್ತೆಯ ಕಾಮಗಾರಿಯನ್ನು ಪೂರ್ಣ ನಿಲ್ಲಿಸಲು ಹಾಗೂ ಆಗಿರುವ ಕೆಲಸಕ್ಕಷ್ಟೇ ಬಿಲ್ ನೀಡಲು ಕಂಟ್ರಾಕ್ಟ್ ದಾರರಿಗೆ ಸೂಚನೆ ಹೋಯಿತು. ಅವರೂ ಅಷ್ಟನ್ನೇ ಮಾಡಿದರು.


45 ಕಿ.ಮೀ. ರಸ್ತೆಯಲ್ಲಿ ಸುಮಾರು ಶೇಕಡಾ 60ರಷ್ಟು ಕೆಲಸವಷ್ಟೇ ಆಗಿದೆ. ಒಟ್ಟು ಹತ್ತು ಕಡೆ ಹಳೆಯ ರಸ್ತೆ, ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಅಗೆದು ಹಾಕಿದ್ದರಿಂದ ಇನ್ನೂ ಹದಗೆಟ್ಟಿರುವ ರಸ್ತೆ ಹಾಗೇ ಉಳಿದಿದೆ! ಅರಕಲಗೂಡಿನಿಂದ ಹೊಳೆನರಸೀಪುರದ ನಡುವೆ ಆರು ಬಾರಿ, ಹೊಳೆನರಸೀಪುರದಿಂದ ಚೆನ್ನರಾಯಪಟ್ಟಣದ ವರೆಗೆ ನಾಲ್ಕು ಬಾರಿ ತೀರಾ ಹದಗೆಟ್ಟಿರುವ ರಸ್ತೆಗಳಲ್ಲಿ ಕೆಲ ಕಿ.ಮೀ. ಪ್ರಯಾಣಿಸಬೇಕಾಗಿದೆ. ಹೊಸ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ನಿದ್ದೆಗೆ ಜಾರುವ ಸನ್ನಾಹದಲ್ಲಿದ್ದ ಪ್ರಯಾಣಿಕರು ಒಮ್ಮೆಲೆ ನೆಗೆದು ಬೀಳುವ ಬಸ್ಸಿನಲ್ಲಿ ನಗೆಪಾಟಲಿಗೀಡಾಗುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ! ಅಯ್ಯೋ ಈ ರಸ್ತೆಯಲ್ಲಿ ಯಾಕಾದರೂ ಬಂದೆವೋ ಎಂದುಕೊಳ್ಳುತ್ತಾ ಒಂದೆರಡು ಕಿಲೋಮೀಟರ್ ಸಂಚರಿಸುವುದಲ್ಲಿ ಮತ್ತೆ ಗುಣಮಟ್ಟದ ಹೊಸ ರಸ್ತೆ ಬಂದು ಖುಷಿಪಡುವುದನ್ನೂ ನೋಡಿದ್ದೇನೆ.


ಉತ್ತಮ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಜನ ಅದನ್ನು ಜೆಡಿಎಸ್ ರಸ್ತೆ ಎಂದೂ, ಕೆಟ್ಟ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಅದನ್ನು ಬಿಜೆಪಿ ರಸ್ತೆಯೆಂದೂ ತಮಾಷೆಯಾಗಿ ಕರೆಯುತ್ತಾರೆ.


ಈ ಬಾರಿ ಅಲ್ಲಿ ಪ್ರಯಾಣ ಮಾಡುವಾಗ ಹಲವಾರು ಫೋಟೋಗಳನ್ನು ತೆಗೆದೆ.  ದುರಂತವೆಂದರೆ ಆ ಮಾರ್ಗದಲ್ಲಿ ಸಂಚರಸಸುತ್ತಿದ್ದ ಬಸ್ಸುಗಳ ಸಂಖ್ಯೆಯನ್ನು (ವಿಶೇಷವಾಗಿ ದೂರ ಪ್ರಯಾಣದ ಬಸ್ಸುಗಳನ್ನು) ಕೆಟ್ಟ ರಸ್ತೆಯ ಕಾರಣದಿಂದ ಇಳಿಸಲಾಗಿದೆ. ಕೊನೆಗೆ ಜನರೇ ಈ ರಾಜಕೀಯದ ಬಿಸಿಯನ್ನು ಅನುಭವಿಸಬೇಕಾಗಿದೆ.


ಅದರ ನಡುವೆಯೂ ಜನ ತಮಾಷೆಯಾಗಿ ಜೆಡಿಎಸ್ ರಸ್ತೆ! ಬಿಜೆಪಿ ರಸ್ತೆ! ಎಂದು ಎಂಜಾಯ್ ವಮಾಡುವುದನ್ನು ನೋಡಿ ನಗುವುದೋ ಅಳುವುದೋ ತಿಳಿಯದಾಗಿದೆ.


ವಿಪಕ್ಷಗಳ ಶಾಸಕರಿರುವ ಕ್ಷೇತ್ರಗಳನ್ನು ಇಷ್ಟರಮಟ್ಟಿಗೆ ಕಡೆಗಣಿಸುವುದು ಸರಿಯೇ? ಈ ಸರ್ಕಾರ ಬಿ.ಜೆ.ಪಿ. ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಸರ್ಕಾರವೇ? ಅಥವಾ ಇಡೀ ಕರ್ನಾಟಕದ ಸರ್ಕಾರವೇ? ಎಂಬುದು ನನ್ನ ಪ್ರಶ್ನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet