ಹೋದೆಯಾ ಹಳೆಯ ವರುಷವೆ ?

ಹೋದೆಯಾ ಹಳೆಯ ವರುಷವೆ ?

ಬರಹ

ಹೊಸ ವರುಷದ ಮೊದಲನೆಯ ದಿನ, ಶುಭಾಶಯಗಳನ್ನು ಹೊತ್ತು ಬಂದ ಅಸಂಖ್ಯಾತ ಎಸ್ಸೆಮ್ಮೆಸ್ಸುಗಳಿಗೆ ಉತ್ತರಿಸಿ ಕೈ ಬೆರಳುಗಳು ನೋಯುತ್ತಿದ್ದವು, ಆದರೆ ಅವು ತಂದ ವಿಶಿಷ್ಟ ಹಾರೈಕೆಗಳಿಂದ ಮನಸ್ಸು ಪ್ರಫುಲ್ಲವಾಗಿತ್ತು.  ಹೊರಗೆ ಬಂದು ಬಾಲ್ಕನಿಯಲ್ಲಿ ನಿಂತು ಒಂದು ಸಿಗರೇಟು ಹತ್ತಿಸಿ ಮೇಲೆ ಆಕಾಶವನ್ನು ದಿಟ್ಟಿಸಿದೆ.  ಬೆಳಗಿನಿಂದ ದುಬೈನಲ್ಲಿ ಸೂರ್ಯನ ದರ್ಶನವಾಗಿರಲಿಲ್ಲ, ದಟ್ಟವಾದ ಕಪ್ಪು ಮೋಡಗಳು ಒಟ್ಟುಗೂಡುತ್ತಿದ್ದವು, ಮಳೆ ಸುರಿಯುವ ಮುನ್ಸೂಚನೆ ನೀಡುತ್ತಿದ್ದವು.  ಒಳಗೆ ಬಂದು ಟಿವಿ ಆನ್ ಮಾಡಿ ಉದಯ ಟಿವಿಗೆ ತಿರುಗಿಸಿದರೆ ನೆಚ್ಚಿನ ನಟನ "ಯಜಮಾನ" ಚಿತ್ರ ಪ್ರಸಾರವಾಗುತ್ತಿತ್ತು.  ಹಾಗೆಯೇ ಚಿತ್ರದಲ್ಲಿ ತಲ್ಲೀನನಾಗಿ ಹೋದೆ.  ಇದ್ದಕ್ಕಿದ್ದಂತೆ ಛಟಾರೆಂದ ಸದ್ದು ಕೇಳಿ ಹೊರ ಬಂದರೆ, ಭರ್ಜರಿ ಗುಡುಗು ಸಿಡಿಲುಗಳೊಂದಿಗೆ ಮಳೆ ಸುರಿಯತೊಡಗಿತ್ತು.  ಅದೇನು ಕಳೆದು ಹೋದ ವರ್ಷ ಉಣಿಸಿ ಹೋದ ನೋವಿಗಾಗಿ ಅಶ್ರುತರ್ಪಣವೋ, ಬಂದು ಮುಂದೆ ನಿಂತಿರುವ ಹೊಸ ವರ್ಷದ ಸ್ವಾಗತಕ್ಕಾಗಿ ಆನಂದಭಾಷ್ಪವೋ ಅರ್ಥವಾಗಲಿಲ್ಲ!  ಕೆಲವು ಘಂಟೆಗಳ ಕಾಲ ಧೋ ಎಂದು ಸುರಿದ ಮಳೆ ದುಬೈನ ಬೀದಿಗಳನ್ನು ಅಕ್ಷರಶ: ನಿರ್ಜನವಾಗಿಸಿತ್ತು.

ಮತ್ತೆ ಒಳಗೆ ಬಂದು ಕುಳಿತವನಿಗೆ ಅನ್ನಿಸಿದ್ದು ಹೀಗೆ!!  ಹೋದೆಯಾ ಹಳೆಯ ವರುಷವೆ ?  ಎಂತೆಂಥಾ ಕಹಿ ನೆನಪುಗಳನ್ನು ಬಿಟ್ಟು ಹೋದೆ ?  ಹೋಗುವ ಮುನ್ನ ಅದೆಷ್ಟು ಜನರಿಗೆ ನೋವ ಕೊಟ್ಟು ಹೋದೆ ?  ಗುಮ್ಮನಂತೆ ಕಾದು ಕುಳಿತಿದ್ದ ಜವರಾಯ ಎರಡು ಮುತ್ತುಗಳನ್ನು ತನ್ನೊಂದಿಗೆ ಕೊಂಡು ಹೋಗುವುದಕ್ಕೆ ನೀ ಸಾಕ್ಷಿಯಾದೆಯಲ್ಲಾ, ನಾ ಬರೆದ ’ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ’ ಲೇಖನ ಪ್ರಕಟವಾಗಿ ತಿಂಗಳಿಗೆ ಸರಿಯಾಗಿ ಸಾವಿನ ವಿಶ್ವರೂಪ ದರ್ಶನ ಮಾಡಿಸಿದೆಯಲ್ಲಾ ! ಇನ್ನೆಂದೂ ಸಾವಿನ ಬಗ್ಗೆ ಬರೆಯಬಾರದೆಂಬ ಕಟು ಸತ್ಯವನ್ನು ತೋರಿಸಿ ಹೋದೆಯಲ್ಲಾ, ನೀನೆಂಥ ಕಟುಕ, ೨೦೦೯, ನಿನ್ನ ಕೊನೆಯ ಅಂಕಿ ಒಂಭತ್ತನ್ನು ಒಂಭತ್  "ಥೂ"  ಎಂದು ನಿನ್ನನ್ನು ಉಗುಳುವಂತೆ ಮಾಡಿ ಬಿಟ್ಟೆಯಲ್ಲಾ, ನೀನೆಂಥ ನಿರ್ದಯಿ!  

ಹೀಗೆ ಕಳೆದು ಹೋದ ವರ್ಷದ ಕೊನೆಯ ಘಳಿಗೆಗಳ ನೋವಿನ ಕ್ಷಣಗಳನ್ನು ಮೆಲುಕು ಹಾಕುತ್ತಾ ನನ್ನ ಹೊಸ ವರ್ಷದ ಮೊದಲ ದಿನ ಕಳೆಯಿತು. ಬರಲಿರುವ ದಿನಗಳಲ್ಲಿ ಸಾಕಷ್ಟು ಕಠಿಣ ಪರಿಶ್ರಮದಿಂದ ನೂರೆಂಟು ಅಡೆ ತಡೆಗಳನ್ನು ದಾಟಿ, ವೃತ್ತಿ ಕ್ಷೇತ್ರದ ಹಲವಾರು ಜಟಿಲ ಸಮಸ್ಯೆಗಳನ್ನು ಬಿಡಿಸಬೇಕಿದೆ, ಯಶಸ್ಸು ಕಾಣಬೇಕಿದೆ.  ಮನಸ್ಸು ಆ ನಿಟ್ಟಿನಲ್ಲಿ ಯೋಚಿಸಲು ತೊಡಗಿತು.  ಇದರ ನಡುವೆ ಕೈಗಳು ನನಗರಿವಿಲ್ಲದೆ ನನ್ನ ಲ್ಯಾಪ್ ಟಾಪಿನ ಕೀಲಿ ಮಣೆಯ ಮೇಲೋಡಿ ಈ ಪುಟ್ಟ ಲೇಖನವನ್ನು ಸಿದ್ಧ ಪಡಿಸಿ ಬಿಟ್ಟವು.

ಎಲ್ಲರಿಗೂ ಶುಭವಾಗಲಿ, ಕಳೆದು ಹೋದ ವರುಷದಲ್ಲಿ, ನಾವು ಮಾಡಿದ್ದೇನು, ಸೋತಿದ್ದೆಲ್ಲಿ, ಗೆದ್ದಿದ್ದೆಲ್ಲಿ ಎಂದು ಅರ್ಥೈಸಿ ನಮ್ಮ ನಮ್ಮ ಕ್ಶೇತ್ರಗಳಲ್ಲಿ ಯಶಸ್ಸು ಸಾಧಿಸುವತ್ತ ಮುನ್ನಡೆಯೋಣ.  ನಮ್ಮ ತಪ್ಪುಗಳಿಂದ ಪಾಠ ಕಲಿಯೋಣ, ಇತರರಿಗೆ ಮಾದರಿಯಾಗಿ ನಿಲ್ಲೋಣ.  ಈ ವರ್ಷದಲ್ಲಿ ಹೊಸ ಮೈಲಿಗಲ್ಲೊಂದನ್ನು ನೆಡೋಣ. ವರ್ಷದ ಕೊನೆಗೆ ಮತ್ತೊಮ್ಮೆ ಕುಳಿತು ನಮ್ಮ ಯಶಸ್ಸಿನ ಮಾನದಂಡಗಳನ್ನು ಅಳೆಯೋಣ, ಇತರರಿಗೆ ತಿಳಿಸೋಣ. ನಮ್ಮ ಸೀಮಿತ ಪರಿಧಿಯಲ್ಲಿ ಸಾಧ್ಯವಿದ್ದಷ್ಟೂ ಅಸಹಾಯಕರಿಗೆ ಆಸರೆಯಾಗಿ ನಿಲ್ಲೋಣ.  ಒಂದು ಸುಖಿ, ಸಮೃದ್ಧಿ ಸಮಾಜದ ಕನಸನ್ನು ನನಸಾಗಿಸೋಣ, ನಗುವ ಹಂಚೋಣ. ನೋವ ಮರೆಸೋಣ.   "ಸರ್ವೆ ಜನಾ: ಸುಖಿನೋ ಭವಂತು" ಎಂಬ ನಿತ್ಯ ಸತ್ಯವ ಎಲ್ಲೆಡೆ ಸಾರೋಣ.  ಏನಂತೀರಿ ??