ನಿಗೂಢ ನಿಯಾಂಡರ್ತಲ್ ಮಾನವ

ನಿಗೂಢ ನಿಯಾಂಡರ್ತಲ್ ಮಾನವ

ಬರಹ

2009ರ ಡಿಸೆಂಬರ್ 31ರ 'ಸುಧಾ' ವಾರಪತ್ರಿಕೆಯಲ್ಲಿ ನನ್ನ ಲೇಖನ 'ನಿಗೂಢ ನಿಯಾಂಡರ್ತಲ್ ಮಾನವ' ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ.

ಇಂದು ಭೂಮಿಯ ಮೇಲಿನ ಜೀವಿಗಳಲ್ಲಿ ಅತ್ಯಂತ ಪ್ರಬಲ ಜೀವಿಯೆಂದರೆ ಮಾನವ ಮಾತ್ರ. ಇಲ್ಲಿ 'ಪ್ರಬಲ' ಎನ್ನುವುದು ಆತನ ದೈಹಿಕ ಶಕ್ತಿಯ ಸೂಚಕವಲ್ಲ, ಬದಲಿಗೆ ಆತನ ಮಾನಸಿಕ ಶಕ್ತಿಯ ಸೂಚಕ. ಇರುವ ಜೀವಿಗಳಲ್ಲೆಲ್ಲಾ ಆಲೋಚಿಸುವ ಶಕ್ತಿ ಹೊಂದಿರುವ, ಭೂತ, ವರ್ತಮಾನ ಮತ್ತು ಭವಿಷ್ಯಗಳ ಬಗೆಗಿನ ಕಲ್ಪನೆ ಹೊಂದಿರುವ ಜೀವಿ ಎಂದರೆ ಮಾನವನೊಬ್ಬನೇ ಇರಬಹುದು. ತನ್ನ ಇರುವಿಕೆಯಿಂದಾಗಿ ಹಾಗೂ ತನ್ನ ಕೃತ್ಯಗಳಿಂದಾಗಿ ಇಡೀ ಭೂಮಿಯ ಮೇಲಿನ ಭೌತಿಕ ಹಾಗೂ ಜೈವಿಕ ನಿಯಮಗಳನ್ನು ಬದಲಿಸಲು ಸಾಧ್ಯವಾಗದೇ ಇದ್ದರೂ ಆತ ಅವುಗಳ ಮೇಲೆ ಪ್ರಜ್ಞಾಪೂರ್ವಕವಾಗಿ ಮಹತ್ತರ ಪರಿಣಾಮ ಬೀರಬಲ್ಲ. ಈ ರೀತಿಯ ಕಾರ್ಯ ಬಹುಶಃ ಮತ್ತಾವ ಜೀವಿಯಿಂದಲೂ ಸಾಧ್ಯವಿಲ್ಲ. ತನ್ನ ಬುದ್ಧಿಮತ್ತೆ ಮತ್ತು ಸಂಸ್ಕೃತಿಯಿಂದ ಹಾಗೂ ತನ್ಮೂಲಕ ನಾಗರಿಕತೆಯಿಂದ ಮಾನವ ಇಂದು ಭೂಮಿಯ ಮೇಲಿನ ಏಕೈಕ 'ಅದ್ವಿತೀಯ' ಜೀವಿಯಾಗಿದ್ದಾನೆ. ಮಾನವಕೇಂದ್ರಿತ ಪರಿಕಲ್ಪನೆಯಿಂದ ಇಂದು ಮಾನವನೇ ಅತ್ಯಂತ ಶ್ರೇಷ್ಠ ಎನ್ನುವುದಾದಲ್ಲಿ ಜೈವಿಕವಾಗಿ ಮತ್ತು ಆನುವಂಶಿಕವಾಗಿ ಮಾನವನಿಗೆ ಸರಿದೂಗಬಲ್ಲ ಜೀವಿ ಮತ್ತೊಂದಿಲ್ಲ. ಆದರೆ ಇಂದು ಬದುಕಿರುವ ಜೀವಿಗಳಲ್ಲಿ ಮಾನವನಿಗೆ ಅತ್ಯಂತ ಹತ್ತಿರ ಬರಬಲ್ಲ ಜೀವಿ ಎಂದರೆ ವಾನರ ಚಿಂಪಾಂಜಿ. ಆನುವಂಶಿಕವಾಗಿ ಚಿಂಪಾಂಜಿ ಶೇ.೯೮ರಷ್ಟು ಮಾನವನನ್ನು ಹೋಲುತ್ತದೆ. ಇತರ ವಾನರಗಳಾದ ಗೊರಿಲ್ಲಾ, ಒರಂಗುಟಾನ್ ಮುಂತಾದುವು ಮನುಷ್ಯನಿಂದ ಬಹಳಷ್ಟು ದೂರದಲ್ಲಿವೆ.
 ಆದರೆ ಮಾನವನಿಗೆ ಬಹುಪಾಲು ಸರಿಸಮನಾಗಿದ್ದ, ಮಾನವನ ಜೀವವಿಕಾಸದ ಹಾದಿಯಲ್ಲಿ ಜೊತೆಜೊತೆಯಲ್ಲೇ ನಡೆದುಬಂದ ಮತ್ತೊಬ್ಬ ಮಾನವನಿದ್ದ. ಸುಮಾರು ಎರಡು ಲಕ್ಷ ವರ್ಷಗಳ ಹಿಂದಿನಿಂದ ಇಪ್ಪತ್ತೆಂಟು ಸಾವಿರ ವರ್ಷಗಳವರೆಗೂ ಇಡೀ ಯೂರೋಪ್ ಅವನ 'ಸಾಮ್ರಾಜ್ಯ'ವಾಗಿತ್ತು. ಇಲ್ಲಿ ಸಾಮ್ರಾಜ್ಯ ಎಂದಾಕ್ಷಣ ಆತನನ್ನು ಒಬ್ಬ ರಾಜನಂತೆ ಅಥವಾ ಸಾಮ್ರಾಟನಂತೆ ಕಲ್ಪಿಸಿಕೊಳ್ಳುವುದು ಬೇಡ. ಅವನೂ ಸಹ ನಮ್ಮಂತಹ ಆಧುನಿಕ ಮಾನವರ ಪೂರ್ವಜರಂತೆ ಕಲ್ಲಿನ ಆಯುಧಗಳಿಂದ ಭೇಟೆಯಾಡಿ, ಗೆಡ್ಡೆ ಗೆಣಸು ಆಯ್ದುಕೊಂಡು ಬದುಕುತ್ತಿದ್ದ. ಅತ್ಯಂತ ಕಠಿಣ ಪರಿಸರದ ಪರಿಸ್ಥಿತಿಗಳಾದಂತಹ ಹಿಮಯುಗಗಳಲ್ಲೂ ಆತ ಯಶಸ್ವಿಯಾಗಿ ಬದುಕಿದ್ದ. ಆತನನ್ನು ನಿಯಾಂಡರ್ತಲ್ ಮಾನವನೆಂದು ವಿಜ್ಞಾನಿಗಳು ಕರೆಯುತ್ತಾರೆ. ಸುಮಾರು ೧,೨೦,೦೦೦ದಿಂದ ೧,೫೦,೦೦೦ ವರ್ಷಗಳ ಹಿಂದೆ ಆಪ್ರಿಕಾದಲ್ಲಿ ವಿಕಾಸ ಹೊಂದಿದ ಆಧುನಿಕ ಮಾನವ ಸುಮಾರು ಮುವ್ವತ್ತೈದು ಸಾವಿರ ವರ್ಷಗಳ ಹಿಂದೆ ಯೂರೋಪ್ ಪ್ರವೇಶಿಸಿದ. ಅಲ್ಲಿ ಆತ ಈ ನಿಯಾಂಡರ್ತಲ್ ಮಾನವನನ್ನು ಭೇಟಿಯಾಗಿಯೇ ಇರುತ್ತಾನೆ. 

ಆಧುನಿಕ ಮಾನವ ಮತ್ತು ನಿಯಾಂಡರ್ತಲ್ ಮಾನವ ಇಬ್ಬರೂ ಯೂರೋಪ್‌ನಲ್ಲಿ ಬದುಕಿದ್ದರು. ಆಧುನಿಕ ಮಾನವ ಯೂರೋಪ್ ಪ್ರವೇಶಿಸಿದ ಹತ್ತು ಹದಿನೈದು ಸಾವಿರ ವರ್ಷಗಳ ನಂತರ ನಿಯಾಂಡರ್ತಲ್ ಮಾನವ ನಿಗೂಢವಾಗಿ ನಿರ್ನಾಮವಾಗಿ ಹೋದ. ಪರಿಸರಕ್ಕೆ ಯಶಸ್ವಿಯಾಗಿ ಹೊಂದಿಕೊಂಡಿದ್ದ ಅವನ ನಿರ್ನಾಮಕ್ಕೆ ಕಾರಣಗಳೇನು? ಆಧುನಿಕ ಮಾನವನೊಂದಿಗಿನ ಸಂಪನ್ಮೂಲಗಳನ್ನು ಪಡೆಯುವ ಸ್ಪರ್ಧೆಯಲ್ಲಿ ಆತ ನಿರ್ನಾಮವಾದನೆ? ಅಥವಾ ಆಧುನಿಕ ಮಾನವನೊಂದಿಗಿನ ಸಂಘರ್ಷದಿಂದಾಗಿ ಆತ ನಿರ್ನಾಮ ಹೊಂದಿದನೆ? ಆತನಲ್ಲಿ 'ಸಂಸ್ಕೃತಿ' ಎಂಬುದಿತ್ತೆ? ಆತನಿಗೆ ಕುಟುಂಬ ಮತ್ತು ಸಮಾಜ ಎಂಬುದರ ಪರಿಕಲ್ಪನೆಗಳಿತ್ತೆ? ಆತನ ಹಾಗೂ ಆಧುನಿಕ ಮಾನವನ ನಡುವೆ 'ಸಾಂಸ್ಕೃತಿಕ' ವಿನಿಮಯ ನಡೆದಿತ್ತೆ? ಅಥವಾ ಲೈಂಗಿಕ ಕ್ರಿಯೆಯ ಮೂಲಕ ಆನುವಂಶಿಕ ವಿನಿಮಯವಾದರೂ ನಡೆದಿತ್ತೆ? ಆತ ಒಂದು ಪ್ರತ್ಯೇಕ ಪ್ರಭೇದವಾಗಿ ಇಂದಿಗೂ ಉಳಿದುಕೊಂಡುಬಂದಿದ್ದಲ್ಲಿ ಇಂದಿನ ಸಮಾಜ ಹೇಗಿರುತ್ತಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇದುವರೆಗೂ ದೊರಕಿರುವ ನಿಯಾಂಡರ್ತಲ್ ಮಾನವನ ಅಸ್ಥಿಯ ಪಳೆಯುಳಿಕೆಗಳಿಂದ ಇಂದು ವಿಜ್ಞಾನಿಗಳು ಆತನ ಬಹುಪಾಲು ಡಿ.ಎನ್.ಎ. ಅನ್ನು ಸಂಶ್ಲೇಷಿಸಿ ಪ್ರತ್ಯೇಕಿಸಿದ್ದಾರೆ. ನಮ್ಮಲ್ಲಿನ ಇಂದಿನ ತಂತ್ರಜ್ಞಾನದಿಂದ ಆ ಡಿ.ಎನ್.ಎ. ಬಳಸಿ ನಿಯಾಂಡರ್ತಲ್ ಮಾನವನನ್ನು ಇಂದು ಮರುಸೃಷ್ಟಿಸಬಹುದು. ಅಕಸ್ಮಾತ್ ವಿಜ್ಞಾನಿಗಳು ಆ ರೀತಿ ಸೃಷ್ಟಿಸಿದಲ್ಲಿ ಇಂದಿನ ಸಮಾಜದಲ್ಲಿ ಆತನ ಸ್ಥಾನಮಾನಗಳೇನು? ಆತ ಬರೇ ಪ್ರಯೋಗ ಪಶುವಾಗಷ್ಟೇ ಇರಬೇಕೆ? ಈ ರೀತಿಯ ಹತ್ತು ಹಲವಾರು ಜಿಜ್ಞಾಸೆಗಳು ವಿಜ್ಞಾನಿಗಳನ್ನು ಕಾಡುತ್ತಿವೆ. ನಿಯಾಂಡರ್ತಲ್ ಮಾನವನ ಮೂಲದ ಶೋಧನೆ ನಮ್ಮ ಜೈವಿಕ ಮತ್ತು ಸಾಂಸ್ಕೃತಿಕ ಮೂಲದ ಶೋಧನೆಯೇ ಆಗಿದೆ.

ಸಂಪೂರ್ಣ ಲೇಖನಕ್ಕೆ ನನ್ನ ಬ್ಲಾಗ್ 'ಅಂತರಗಂಗೆ'ಗೆ ಭೇಟಿ ನೀಡಿ.