ನಿಮ್ಮದು ಅಕ್ಷರ (ಮಾದ್ಯಮ) ಹಾದರವಲ್ಲವೆ?

ನಿಮ್ಮದು ಅಕ್ಷರ (ಮಾದ್ಯಮ) ಹಾದರವಲ್ಲವೆ?

Comments

ಬರಹ

ನಿಮ್ಮದು ಅಕ್ಷರ ಹಾದರವಲ್ಲವೆ?


29 ಡಿಸೆಂಬರ್ 2009 ರ ವಿಜಯಕರ್ನಾಟಕದ ವಾಚಕರ ವಿಜಯದಲ್ಲಿ ಶ್ರೀಶ ಪುಣಚ ಎನ್ನುವವರು ಈ ಪ್ರಶ್ನೆಯನ್ನು ಎತ್ತಿದ್ದಾರೆ. ಆ ಪತ್ರವನ್ನು ಪ್ರಕಟಿಸಿದ್ದಕ್ಕೆ ಮೊದಲಿಗೇ ವಿಜಯಕರ್ನಾಟಕಕ್ಕೆ ಅಭಿನಂದನೆ ಸಲ್ಲಿಸೋಣ.


ಆದರೆ ಅದೇ ಪತ್ರಿಕೆ ನಡೆಸುತ್ತಿರುವ ಸುದ್ದಿ ಅಥವಾ ಮಾದ್ಯಮ ವ್ಯಭಿಚಾರ ಮಾತ್ರ ಘನಘೋರವಾದುದು.


ವಿಷ್ಣುವರ್ಧನ್ ಸತ್ತ ಮಾರನೇ ದಿನವೇ, ವಿ.ಕ. ತನ್ನ ಒಂಬತ್ತನೆಯ ಪುಟದಲ್ಲಿ "ಆರ್ಥಿಕ ಆಘಾತ ತಂದಿತೇ ಆಪತ್ತು?" ಎನ್ನುವ ತಲೆಬರಹದಿಡಿ ಕಾಲು ಪುಟಕ್ಕೂ ಹೆಚ್ಚಿನದಾದ ಲೇಖನವನ್ನು ಪ್ರಕಟಿಸಿತ್ತು. ಅಕಾಲಿಕ ಸಾವಿನಿಂದ ತತ್ತರಿಸಿರುವ ಕುಟುಂಬದ ಮೇಲೆ ಈ ರೀತಿಯ ಸತ್ಯದ ತಲೆ ಮೇಲೆ ಹೊಡೆದಂತೆ ಬರೆದಿರುವ ಲೇಖನ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಪರಿಜ್ಞಾನವೂ ಇಲ್ಲದೆ ಆರ್. ಮಂಜುನಾಥ್ ಎಂಬುವವರು ಲೇಖನ ಬರೆದಿದ್ದಾರೆ.


'ವಿಷ್ಣುವರ್ಧನ್ ಷೂ ಫ್ಯಾಕ್ಟರಿ ಮಾಡಲು ತಮ್ಮಲ್ಲಿದ್ದ ಹಣದ ಜೊತೆಗೆ ಸಾಕಷ್ಟು ಬಡ್ಡಿಸಾಲ ಮಾಡಿ ಸ್ನೇಹಿತನೊಬ್ಬನ ಮೂಲಕ ತೊಡಗಿಸಿದರು. ಸ್ನೇಹಿತ ಮೋಸ ಮಾಡಿದ್ದರಿಂದ ಬಡ್ಡಿ ಕಟ್ಟಲು ಆಗದೆ ಕಂಗೆಟ್ಟು ಹೋಗಿದ್ದರು. ಆ ಸಂದರ್ಭದಲ್ಲಿ ಕುಮಾರಸ್ವಾಮಿ, ಅಂಬರೀಶ್, ರಾಕ್ ಲೈನ್ ವೆಂಕಟೇಶ್ ಅಲ್ಪಸ್ವಲ್ಪ ಹಣ ಕೊಡುತ್ತಿದ್ದರು' ಎಂದೆಲ್ಲಾ ಬರೆದಿದ್ದಾರೆ.


ಮತ್ತೆ ಇವತ್ತು 2.1.2010 ರ ಪತ್ರಿಕೆಯ ಹನ್ನೊಂದನೆಯ ಪುಟದಲ್ಲಿ "ವಿಷ್ಣುವರ್ಧನ್ ಅವರಿಗೆ ಆರ್ಥಿಕ ಸಂಕಷ್ಟ ಇರಲಿಲ್ಲ" ಎಂಬ ಪೂರಕ ಬರಹವೊಂದು ಪ್ರಕಟವಾಗಿದೆ. ಸ್ವತಃ ಕುಮಾರಸ್ವಾಮಿಯೇ ಹಣ ಕೊಟ್ಟಿದ್ದನ್ನು ಅಲ್ಲಗಳೆದಿದ್ದಾರೆ. ನಾಲ್ಕು ಸಾಲಿನ ವಿಷಾದ ಗೀತೆಯನ್ನೂ ಪತ್ರಿಕೆ ಪ್ರಕಟಿಸಿದೆ.


ಮೊನ್ನೆಯ ಲೇಖನದಿಂದ ಭಾರತಿ ವಿಷ್ಣುವರ್ಧನ್ ಆವರಿಗೆ ನೋವಾಗಿದೆ. ಅವರಿಗೆ ನೋವುಂಟುಮಾಡುವ ಯಾವುದೇ ಉದ್ದೇಶ ಪತರಿಕೆಗೆ ಇರಲಿಲ್ಲ. ಪತಿಯನ್ನು ಕಳೆದುಕೊಂಡ ಸಂದರ್ಭದಲ್ಲಿ ಬಂದ ವರದಿಯಿಂದ ಻ವರಿಗೆ ಆಗಿರುವ ನೋವಿಗೆ ಪತ್ರಿಕೆ ವಿಷಾದಿಸುತ್ತದೆ. ಇದೇ ಆ ವಿಷಾದ ಗೀತೆ!


ಈ ಪತ್ರಿಕೆಗೆ ಏನಾಗಿದೆ? ಇಂತಹ ಒಂದು ಆಘಾತಕಾರಿ ಲೇಖನವನ್ನು ಪ್ರಕಟಿಸುವ ಮೊದಲು ಸಂಬಂಧಪಟ್ಟವರಿಂದ ವಿವರಣೆ ಕೇಳಿಬೇಕೆನ್ನುವ ಪ್ರಾಥಮಿಕ ಪರಿಜ್ಞಾನವೂ ಇಲ್ಲವೆ? ಕೇವಲ ವಿಷಾದ ಗೀತೆ ಪ್ರಕಟಿಸುವುದರಿಂದ ಎಲ್ಲಾ ಪರಿಹಾರವಾಗಿಬಿಡುತ್ತದೆಯೇ? ಭಾರತೀ ಅವರಿಗೆ ಆಗಿರುವ ನೋವನ್ನು ಭರಿಸಲು ಈ ಪತ್ರಿಕೆಗೆ ಸಾಧ್ಯವಿದೆಯೇ?


ಮೂಲ ಲೇಖನವನ್ನು ರಾಜ್ಯಾದ್ಯಾಂತ ಹಂಚುವ ವಿಶೇಷ ಪುಟಗಳಲ್ಲಿ ಪ್ರಕಟಿಸುವುದು;  ವಿವರಣೆಯನ್ನೂ ವಿಷಾದವನ್ನೂ ಸೂಚಿಸಿ ಬರೆದ (ಲೆಕ್ಕವಾಗಿ ಮುಖಪುಟದಲ್ಲಿ ಪ್ರಕಟಿಸಬೇಕಾಗಿದ್ದ) ಲೇಖನವನ್ನು ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ಪುಟಗಳಲ್ಲಿ ಪ್ರಕಟಿಸವುದು!


ಇದು ಮಾದ್ಯಮ ವ್ಯಭಿಚಾರವಲ್ಲವೆ? ಮಾದ್ಯಮ ಸ್ವಾತಂತ್ರದ ಬಗ್ಗೆ ಪುಟಗಟ್ಟಲೆ ಬರೆದುಕೊಳ್ಳುವ ಪತ್ರಿಕೆ ನಡೆಸುತ್ತಿರುವ ಈ ವ್ಯಭಿಚಾರಕ್ಕೆ ಕೊನೆಯೇ ಇಲ್ಲವೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet