ಕಾಡುತಿದೆ ಬದುಕು!
ನನಗೇನು ಬೇಕು? ಏನೂ ಗೊತ್ತಾಗ್ತಿಲ್ಲ. ವಯಸ್ಸಾಗಿಬಿಡ್ತಾ? ಛೇ! ಈಗಿನ್ನೂ ನನ್ನ ವಯಸ್ಸಿನವರು ಮದುವೆಯಾಗುತ್ತಿರುವಾಗ, ನನಗ್ಯಾಕೆ ಹೀಗೆ ಅನ್ನಿಸುತ್ತೆ? ನೋಡುವವರಿಗೆ ಸುಖೀ ಕುಟುಂಬ, ಪ್ರೀತಿಸಿ ಮದುವೆಯಾದ ಗಂಡ, ಮುದ್ದಾದ ೨ ಮಕ್ಕಳು, ಕೈತುಂಬಾ ಹಣ ತರುವ ಕೆಲಸ, ಚೆಂದದ ಸ್ವಂತ ಮನೆ, ಎರಡೆರಡು ಕಾರು ಇನ್ನೇನು ಬೇಕು? ಎನ್ನುವವರಿಗೆ ನಾನೊಂದು ಪ್ರಶ್ನಾರ್ಥಕ, ಅರ್ಥವಾಗದವಳಂತೆ ಕಾಣುತ್ತೇನೆ. ಇಷ್ಟೇನೇ ಬದುಕು? ಮದುವೆಯಾಗಿ ನಾನೇನು ಸಾಧಿಸಿದೆ? ನನಗೀಗಲೇ ಪ್ರೀತಿ, ಮದುವೆ ಬೇಡ ಎಂದವಳ ಬೆನ್ನ ಹಿಂದೆ ೩-೪ ವರ್ಷ ಕಾಡಿ, ಬೇಡಿ, ಪ್ರೀತಿಸಿ ಮದುವೆಯಾದವ ನನ್ನನ್ನು ಮರೆತೇಹೋದನೇ? ಅವನಿಗೆ ತನ್ನ ಯಶಸ್ವೀ ಬದುಕೆಂದರೆ ಬರೇ ಹಣ ಸಂಪಾದನೆ ಅಥವಾ ಕೀರ್ತಿ ಸಂಪಾದನೆಯೇ ಮುಖ್ಯವಾಗಿ ಕಾಣುತ್ತಿದೆಯೇ? ನನ್ನ ಬದುಕು ನಿಂತ ನೀರಾಗಿ ಹೋಯಿತೇ? ಇದು ನನಗೆ ಮಾತ್ರ ಪೆಡಂಭೂತವಾಗಿ ಕಾಡುತ್ತದೆಯೋ? ನನ್ನ ಈ ವಯಸ್ಸಿನವರೆಲ್ಲರಿಗೂ ಇದರ ಅನುಭವವಾಗುತ್ತದೆಯೋ?
ಬಹುಶಃ ನನ್ನ ವಯಸ್ಸಿನ ಎಲ್ಲಾ ಮಹಿಳೆಯರಿಗೂ ಈ ಒಂಟಿತನ ಕಾಡುತ್ತೋ ಏನೋ? ಮದುವೆಯಾದ ಹೊಸದರಲ್ಲಿ ಗಂಡನ ಮನೆ, ತನ್ನ ಮನೆಯೆಂದು ಅರಿವಾಗಿ, ಅವರೊಡನೆ ಹೊಂದಿಕೊಳ್ಳುವಷ್ಟರಲ್ಲಿಯೇ ಸುಮಾರು ಸಮಯ ಕಳೆದಿರುತ್ತದೆ. ಮಕ್ಕಳ ಲಾಲನೆ ಪಾಲನೆಯಲ್ಲಿ ಕಾಲ ಕಳೆದುಹೋದದ್ದೇ ಗೊತ್ತಾಗಿರುವುದಿಲ್ಲ. ಈಕೆ, ಅತ್ತೆ, ಮಾವ, ಮಕ್ಕಳು, ಬಂಧುಮಿತ್ರರು, ಅಡುಗೆ, ಸಂಸಾರವೆಂದು ಗಂಡನೊಟ್ಟಿಗಿಂತ ಇವರೊಂದಿಗೆ ಹೆಚ್ಚು ಕಾಲ ಕಳೆದಿರುತ್ತಾಳೆ. ಇತ್ತ ಗಂಡ ಬೆಳೆದ ಸಂಸಾರದ ಜವಾಬ್ದಾರಿಯನ್ನು ಹೊರಲು ಹೆಚ್ಚು, ಹೆಚ್ಚು ಹೊರಗಿರಲು ಶುರು ಮಾಡುತ್ತಾನೆ. ಮಕ್ಕಳು ಶಾಲೆಗೆ ಹೋಗಲು ಶುರು ಮಾಡುತ್ತಿದ್ದಂತೆ ಧುತ್ತನೆ ಒಂಟಿತನ ಕಾಡಲು ಶುರು ಮಾಡುತ್ತದೆ.
೩೦ರ ಆಸುಪಾಸಿನಲ್ಲಿರುವ ನನಗೆ ಈ ಮಧ್ಯವಯಸ್ಕ ಹೆಂಗಸರಂತೆ ಅವರಿವರ ಅಡುಗೆ ಮನೆ ವಿಷಯ, ನಮ್ಮೆಜಮಾನರು, ನಮ್ಮತ್ತೆ, ನಾದಿನಿ ಹಾಗೇ, ಹೀಗೇ ಮುಂತಾದ ಗಾಸಿಪ್ ಗಳಲ್ಲಿ ಆಸಕ್ತಿಯಿಲ್ಲ. ಸೀರಿಯಲ್ ಗಳನ್ನು ನೋಡುವ, ನೋಡಿ ಅಳುವ ಹವ್ಯಾಸವಿಲ್ಲ! ಕಾಲೇಜಿಗೆ ಹೋಗುವ ಹುಡುಗಿಯರ ಹಾಗೇ ಬಿಂದಾಸ್ ಆಗಿ ಇರಲು ವಯಸ್ಸು ಬಿಡುವುದಿಲ್ಲ, ಇಲ್ಲಿಯೂ ಸಲ್ಲದೇ, ಅಲ್ಲಿಗೂ ಒಗ್ಗದೇ ಎಡಬಿಡಂಗಿಯಾಗಿಬಿಟ್ಟಿದ್ದೀನಿ. ನಾನು ಹೇಗೆ, ಯಾರೊಂದಿಗೆ ಇರಬೇಕು ಅನ್ನುವುದೇ ತಿಳಿಯುತ್ತಿಲ್ಲ. ಬಹಳ ಚಿಕ್ಕವಯಸ್ಸಿನಲ್ಲಿ ಮದುವೆಯಾಗಬಾರದಿತ್ತೇ? ನನ್ನ ಕಾಲೇಜಿನ ಸಹಪಾಠಿಗಳನ್ನು ಹುಡುಕಿಕೊಂಡು ಹೋದರೆ ಎಲ್ಲರೂ ಅವರವರ ಸಂಸಾರ ಸಾಗರದಲ್ಲಿ ಮುಳುಗಿಬಿಟ್ಟಿದ್ದಾರೆ. ಯಾರಿಗೂ ಪುರುಸೊತ್ತಿಲ್ಲ! ದೈನಂದಿನ ಜೀವನ ಎಲ್ಲರದೂ ತೀರಾ ಯಾಂತ್ರಿಕವಾಗಿದೆ. ಆದ್ರೆ ಯಾರಿಗೂ ಇದರ ಅನುಭವವಾಗುತ್ತಿಲ್ಲವೋ? ಅಥವಾ ಯಾರು ನನ್ನ ಹಾಗೆ ತಲೆಕೆಡಿಸಿಕೊಳ್ಳುತ್ತಿಲ್ಲವೋ? ಉತ್ತರ ತಿಳಿಯದು.
ಅಮ್ಮ ತನ್ನ ಜೀವನದ ಈ ಘಟ್ಟವನ್ನು ಹೇಗೆ ಕಳೆದಳು? ಅವಳನ್ನು ಕೇಳಿದರೆ ‘ನಮಗೆ ಇಷ್ಟು ಯೋಚಿಸಲು ಪುರುಸೊತ್ತೆಲ್ಲಿರುತ್ತಿತ್ತು? ಐದೈದು ಮಕ್ಕಳನ್ನು ಸಾಕುವಷ್ಟರಲ್ಲಿ, ಅವರ ಅಡುಗೆ, ಬಟ್ಟೆ, ಮನೆ ವಾರ್ತೆ ನೋಡಿಕೊಳ್ಳುವಷ್ಟರಲ್ಲಿ ಮಲಗಿದರೆ ಸಾಕು ಅನ್ನಿಸುತ್ತಿತ್ತು, ನಿಮ್ಮ ತರಹ ಮನೆ ಕೆಲಸಕ್ಕೆಲ್ಲಾ ಕೆಲಸದವಳನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಹಾಗಾಗಿ ಸಮಯ ಹೋದದ್ದೇ ತಿಳಿಯುತ್ತಿರಲಿಲ್ಲ. ನಿಮಗೆ ಸೌಕರ್ಯಗಳು ಜಾಸ್ತಿಯಾದವು. ಬೇಡದನ್ನೆಲ್ಲಾ ಚಿಂತಿಸಿ ಮನಸ್ಸು ಹಾಳು ಮಾಡಿಕೊಳ್ಳುತ್ತೀರಿ ಅನ್ನುತ್ತಾಳೆ. ಹಾಗಲ್ಲಮ್ಮಾ! ನನ್ನ ಪ್ರಾಬ್ಲಮ್ ಅದಲ್ಲ ಅಂದರೆ ಅವಳಿಗೆ ಅರ್ಥವಾಗುವುದೇ ಇಲ್ಲ. ನಾನೇ ಸರಿಯಿಲ್ಲವೇನೋ?
Comments
ಉ: ಕಾಡುತಿದೆ ಬದುಕು!
In reply to ಉ: ಕಾಡುತಿದೆ ಬದುಕು! by sandhya venkatesh
ಉ: ಕಾಡುತಿದೆ ಬದುಕು!
In reply to ಉ: ಕಾಡುತಿದೆ ಬದುಕು! by rooparajiv
ಉ: ಕಾಡುತಿದೆ ಬದುಕು!
ಉ: ಕಾಡುತಿದೆ ಬದುಕು!
In reply to ಉ: ಕಾಡುತಿದೆ ಬದುಕು! by thesalimath
ಉ: ಕಾಡುತಿದೆ ಬದುಕು!
ಉ: ಕಾಡುತಿದೆ ಬದುಕು!
In reply to ಉ: ಕಾಡುತಿದೆ ಬದುಕು! by hsprabhakara
ಉ: ಕಾಡುತಿದೆ ಬದುಕು!
ಉ: ಕಾಡುತಿದೆ ಬದುಕು!
In reply to ಉ: ಕಾಡುತಿದೆ ಬದುಕು! by manjunath s reddy
ಉ: ಕಾಡುತಿದೆ ಬದುಕು!