ಕನ್ನಡ ಕಾವ್ಯಗಳ ಗೆಜ್ಜೆನಾದ( ಕನ್ನಡಮ್ಮನ ಕನಕ ವರ್ಷದ ಕಾಣಿಕೆ )

ಕನ್ನಡ ಕಾವ್ಯಗಳ ಗೆಜ್ಜೆನಾದ( ಕನ್ನಡಮ್ಮನ ಕನಕ ವರ್ಷದ ಕಾಣಿಕೆ )

ಬರಹ
ಕನ್ನಡಮ್ಮನ ಕನಕ ವರ್ಷದ ಕಾಣಿಕೆ

ಕನ್ನಡಮ್ಮನ ಕೂರ್ಮೆಯ ಕುವರ ಕುವರಿಯರಿಗೊಂದು ಕಳಕಳಿಯ ಕರೆ. ಕನ್ನಡ ಕಾವ್ಯಾಸಕ್ತ ಜ್ಞಾನಪಿಪಾಸುಗಳಿಗೊಂದು

ಮನಃಪೂರ್ವಕ ಮೊರೆ. ಕನ್ನಡಮ್ಮನ ಕನಕ ವರ್ಷದ ಈ ಕಲ್ಯಾಣಕಾರಿ ಕಾಲದಲ್ಲಿ ಕನ್ನಡದ ಆಧುನಿಕ ಅಶ್ವಿನಿ ದೇವತೆಗಳಂತಹ

ಕನ್ನಡ ಕಿಂಕರರೀರ್ವರ ಜ್ಞಾ ನ ಶಕ್ತಿ, ಇಚ್ಚಾ ಶಕ್ತಿ, ಕ್ರಿಯಾ ಶಕ್ತಿಗಳ ತ್ರಿವೇಣಿ ಸಂಗಮದ ಫಲಸ್ವರೂಪದ ಪ್ರತೀಕವಾಗಿ

ಪ್ರಕಾಶಿಸುತ್ತಿರುವುದೊಂದು ದಿವ್ಯಕೃತಿ. ಹಿಮಗಿರಿಯ ಗೌರಿಶಂಕರ ಶಿಖರವನ್ನೇರಿದ ತೇನ್ ಸಿಂಗ್ ಹಿಲರಿಯವರಂತಹ

ಆ ಪರ್ವತಾರೋಹಿಗಳ ಸಾಹಸಕ್ಕೆ ಸಮನಾದ ಕನ್ನಡ ಕಾವ್ಯ ಶಿಖರಾರೋಹಿಗಳಂತಿರುವ ಸಾಹಸಿಗರೀರ್ವರು ಸಂಗ್ರಹಿಸಿರುವ

ಈ ಮೇರು ಕೃತಿ ಯಾವುದು ಬಲ್ಲಿರಾ? ಇದೇ ಕನ್ನಡದ ಪ್ರಪ್ರಥಮ ಶಿಲಾಶಾಸನ ಹಲ್ಮಿಡಿ ಶಾಸನದಿಂದ ಆಧುನಿಕ "ಚುಟುಕು"

ಸಾಹಿತ್ಯದ ವರೆಗಿನ ಕನ್ನಡ ಕಾವ್ಯಪರಂಪರೆಯ ವಿವಿಧ ಪ್ರಕಾರಗಳ ಸಾಂಕೇತಿಕ ಸುಕೃತಿ ಇದೇ "ಕನ್ನಡ ಕಾವ್ಯಗಳ ಗೆಜ್ಜೆನಾದ".

ತುಂಬಿದ ಕೊಡಗಳಂತಿರುವ ಕನ್ನಡ ಕಿಂಕರರಾದ ಶ್ರೀ ಪ್ರೊ.ಎ.ವಿ.ಸೂರ್ಯನಾರಾಯಣಸ್ಡಾಮಿ ಅವರು ಮತ್ತು ಶ್ರೀ ಎಚ್.ಎಸ್. ಗೋವಿಂದಗೌಡ

ಅವರು ಶ್ರಮವಹಿಸಿ ಸಂಗ್ರಹಿಸಿರುವ ಈ ವಿಶಿಷ್ಟ ಕೃತಿಯು ದಿನಾಂಕ 16-08-2006 ರಂದು, ಶ್ರೀ ಕೃಷ್ಣಜನ್ಮಾಷ್ಟಮಿಯ ಶುಭದಿನದಂದು ಸುಂದರ

ಸಂಜೆಯ ಗೋಧೂಳಿ ಮಹೂರ್ತದಲ್ಲಿ ಬೆಂಗಳೂರು ಮಹಾನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಯೋವೃದ್ಧರು, ಜ್ಞಾನವೃದ್ಧರು, ಉದ್ಧಾಮ

ಪಂಡಿತರು ಆದ ಶ್ರೀ ಅಚ್ಚಪ್ಪನವರ ಅಮೃತ ಹಸ್ತದಿಂದ ಬಿಡುಗಡೆ ಹೊಂದಿ ಪ್ರಕಾಶಿಸುತ್ತಿರುವುದು ಸಂತಸದ ಸಂಗತಿ.ಇದು ಕನ್ನಡ ಕಾವ್ಯಲೋಕ

ಕಂಡ ಅಪರೂಪದ ಅತ್ಯಾವಶ್ಯಕ ಅಮೋಘ ಕೃತಿ.

ಕನ್ನಡನಾಡಿನ ಅನೇಕ ವಿದ್ವಾಂಸರು, ಕನ್ನಡ ಪ್ರಾಧ್ಯಾಪಕರು, ಕನ್ನಡ ಸಾಹಿತ್ಯಾಸಕ್ತರು ಮುಂತಾದವರ ಪ್ರೇರಣೆ,ಪ್ರೋತ್ಸಾಹ, ಸಹಕಾರ, ಸೂಕ್ತ

ಸಲಹೆಗಳನ್ನು ಪಡೆದು ಮೈದಳೆದಿರುವ ಈ ಮಹಾನ್ ಕೃತಿ ಕನ್ನಡ ಕಾವ್ಯಗಳ ವಿವಿಧ ಭಾವ-ತರಂಗಗಳನ್ನು ಒಳಗೊಂಡು ಕಂಗೊಳಿಸುತ್ತಿರುವ

"ಕಾವ್ಯ ಸುಧಾ ಶರಧಿ" ಎಂದರೆ ಅತಿಶಯೋಕ್ತಿ ಎನಿಸದು. ಕನ್ನಡ ಕಾವ್ಯಾಸಕ್ತರಿಗೆ, ಕಾವ್ಯಾಭ್ಯಾಸಿಗಳಿಗೆ ಅತ್ಯಾವಶ್ಯಕ ಆಕರ ಗ್ರಂಥದಂತಿರುವ

ಈ ಕೃತಿ ಮಹಾ ಕವಿಗಳಿಂದ ಸಾಮನ್ಯಕವಿಗಳವರೆಗಿನ ಕಾವ್ಯರಸಧಾರೆ. ಈ ಅಂಶವನ್ನು ಮನಗಾಣಲು ಈ ಗ್ರಂಥದ "ನಲ್ಲ್ ನುಡಿ"ಯಲ್ಲಿ ಮಹಾ

ವಿದ್ವಾಂಸರಾದ ಭದ್ರಾವತಿಯ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಶ್ರೀ. ಡಾ|| ಎ.ಎಸ್. ವೇಣುಗೋಪಾಲ ರಾವ್ ಅವರ ಅನುಭಾವಿಕ ಹಾಗು ವಿಮರ್ಶಕ

ನುಡಿಗಳು ಉಲ್ಲೇಕನಾರ್ಹ. ಸನ್ಮಾನ್ಯ ಸಹೃದಯ ಓದುಗರು ಇತ್ತ ಕಣ್ಣು ತಿರುಗಿಸುವುದು ಸೂಕ್ತ.

"ಕ್ರಿ.ಶ. ಐದನೆಯ ಶತಮಾನದಿಂದ ಇಪ್ಪತ್ತನೆಯ ಶತಮಾನದ ಆಚೆಗೂ ಮೊರೆಯುತ್ತಾ ಹರಿಯುತ್ತಿರುವ ಕನ್ನಡ ಕಾವ್ಯ

ವಾಹಿನಿಯ ಜೀವಂತಿಕೆಯನ್ನೂ, ಬೆಡಗು ಬಿನ್ನಾಣಗಳನ್ನೂ, ರಸಸ್ಯಂದಿಯಾದ ಆಪ್ತತೆ, ಆರ್ದ್ರತೆ, ವೈಶಾಲ್ಯ,

ಮುಂಗಾಣ್ಕೆಗಳನ್ನು ಹೃದಯ ಸ್ಪರ್ಶಿಯಾಗಿಸುವ ಬೃಹತ್ ಸಂಪುಟ ಇದು. ಜೀವನ ಮೌಲ್ಯಗಳಿಗೆ ನಿಷ್ಠವಾದ ಆದರೆ ನಿಷ್ಠುರ

ಕಠೋರವಲ್ಲದ ಅದರ ಲಾಸ್ಯ ವಾಚಕನ ಹೃದಯವನ್ನು ಪ್ರಫುಲ್ಲಗೊಳಿಸುವಂತಹುದು. ತೆಂಕಣಗಾಳಿಯ ಶೀತಲ ಕೋಮಲತೆ,

ಹುಲಿಯ ಹಾಲನ್ನು ಮೆದ್ದ ಧೀರರ ಅಬ್ಬರದುಬ್ಬರ, ವಿಶಾಲ ವಾರಿಧಿಯ ಉಕ್ಕೇರುವ ಅಲೆಗಳ ಘರ್ಜನೆ, ಒಂದು ಕೈಯಲ್ಲಿ

ಅಕ್ಕರೆಯ ನೊರೆವಾಲು, ಮತ್ತೊಂದರಲ್ಲಿ ತಿವಿಯುವ ಚಾವಟಿ ಹಿಡಿದ ನಾಡೋಜರ ಶುಭ ದೃಷ್ಟಿ, ತಿಂಗಳ ಮೃದು ಮಧುರ

ಮಂಧಹಾಸ, ಪ್ರಖರ ಕಿರಣ ಸಹಸ್ರನ ತೇಜಸ್ಸು, ಕ್ಷಣಾರ್ಧದಲ್ಲಿ ಹೃದಯವನ್ನು ಅಲುಗಾಡಿಸುವ ವಾತ್ಸಲ್ಯಧಾರೆ, ಏನುಂಟು

ಏನಿಲ್ಲ ಈ ಕನ್ನಡ ಶಾರದೆಯ ಗೆಜ್ಜೆಯ ನಾದದ ಝಂಕೃತಿಯಲ್ಲಿ ? ಹೀಗಾಗಿ ಈ ಕೃತಿ ನಿಜಕ್ಕೂ ಸುಕೃತಿ. ತನ್ನ ಬೃಹತ್ತು

ಮಹತ್ತು ಹಾಗೂ ದರ್ಶನದ ವೈಭವದಲ್ಲಿ ಉತ್ತಮ ಆಕರಗ್ರಂಥ, ಮಾಹಿತಿ ಗ್ರಂಥ, ಸಧ್ಯಃ ಫಲಕ್ಕೆ ಮಾತ್ರವಲ್ಲ ಮುಂದಿನ

ಶೋಧನೆ, ಸಂಶೋಧನೆ, ಪರಿಶೀಲನೆ, ಸೂಕ್ಷ್ಮಾತಿ ಸೂಕ್ಷ್ಮ ಅಧ್ಯಯನ ,ವಿಮರ್ಶೆ, ನಿಬಂಧ, ಮಹಾ ಪ್ರಭಂಧಗಳಿಗಾಗಿ

ಸಂಮೃದ್ಧ ಆಹಾರ ಈ ಸಂಕಲನದಲ್ಲಿ ದೊರೆಯುತ್ತದೆ. ಕನ್ನಡ ಕಾವ್ಯದ ಶ್ರೀಮಂತಿಕೆಯ ತೋರುಗಂಬವೂ ದೇಗುಲದ

ಶಿಖರದ ಹಾರುಬಾವುಟವೂ ಆಗಿ ಬಿಡುತ್ತದೆ."


ಈ ಕಮನೀಯ ಕಾವ್ಯದ ದಶಗೆಜ್ಜೆಗಳು ಕೆಳಕಂಡಂತಿದೆ.

  1. ಕನ್ನಡ ಶಾಸನ ಮತ್ತು ಕನ್ನಡ ನಾಡು ನುಡಿಗಳ ತೋರಣ.

  2. ಕನ್ನಡ ಕಾವ್ಯ ಕಥಾ ಸಂಗತಿಗಳ ಕವಿ ಶೈಲಿಯ ಸಿಹಿ ಹೂರಣ.

  3. ಕನ್ನಡ ಶರಣ ಶರಣೆಯರ ವಚನ, ದಾಸರ ಕೀರ್ತನೆ, ಉಗಾಭೋಗ, ಸುಳಾದಿ, ದಂಡಕ, ಗುಂಡಕ್ರಿಯ, ತತ್ವ ಪದ

ಅನುಭಾವ ನುಡಿ ಮತ್ತು ನೀತಿ ಪದ್ಯಗಳ ಬೋಧನ.

  1. ಕನ್ನಡ ಕಥನ ಕವನಗಳ ರಸಾಯನ

  2. ಕನ್ನಡ ಚಿತ್ರಕವಿತ್ವ , ಸಮಸ್ಯೆ, ಬೆಡಗಿನ ವಚನಗಳು, ಕೀರ್ತನೆಗಳು, ಪದ್ಯಗಳು ಮತ್ತು ಒಗಟುಗಳು

  3. ಕನ್ನಡ ಜನಪದ ಗೀತೆಗಳ ಉಲ್ಲಾಸನ.

  4. ಕನ್ನಡ ಯಕ್ಷಗಾನ, ರಂಗಗೀತೆ ಮತ್ತು ಚಿತ್ರಗೀತೆಗಳ ಆಲಾಪನ.

  5. ಕನ್ನಡ ಭಾವಗೀತೆಗಳ ಸುಗಂಧ ಸಿಂಚನ.

  6. ಕನ್ನಡ ಗಂಭೀರ ಹಾಸ್ಯ ಗೀತಾಂಜಲಿಯ ನಗುನಂದನ.

  7. ಕನ್ನಡ ಕವಿಸೂಕ್ತಿ ಮತ್ತು ಗಾದೆಗಳ ಸಮಾವಲೋಕನ.


ಕನ್ನಡ ಸಾಹಿತ್ಯಾಭಿಮಾನಿಗಳು, ಕಾವ್ಯಾಸಕ್ತರು, ಕವಿಗಳು, ಸಹೃದಯರು, ಈ ಮಹಾನ್ ಕೃತಿಯನ್ನು ಕೊಂಡು ಓದಿ ಕಾವ್ಯಗಳ

ರಸಾಸ್ವಾದನೆ ಮಾಡಲೆಂಬುದೇ ಈ ಲೇಖನದ ಮುಖ್ಯಗುರಿ ಹಾಗು ಲೇಖಕನ ಹೃತ್ಪೂರ್ವಕ ಆಶಯ.

                • ನಾರಸಂದ್ರ ರಾಮಚಂದ್ರಯ್ಯ

ಮಲ್ಲಸಂದ್ರ, ಬೆಂಗಳೂರು-57

ಕೃತಿ "ಕನ್ನಡ ಕಾವ್ಯಗಳ ಗೆಜ್ಜೆನಾದ"

ಸಂಗ್ರಾಹಕರು: ಶ್ರೀ. ಎ.ವಿ. ಸೂರ್ಯನಾರಾಯಣಸ್ವಾಮಿ

ಶ್ರೀ ಎಚ್.ಎಸ್. ಗೋವಿಂದಗೌಡ

ಪ್ರಕಾಶಕರು: ಹವ್ಯಾಳು ಪ್ರಕಾಶನ

# 1, ನ್ಯೂ ಕಾಂತರಾಜ ಅರಸ್ ರಸ್ತೆ

ಕುವೆಂಪು ನಗರ, ಮೈಸೂರು-570023

ಬೆಲೆ: ಸಾಮಾನ್ಯ ಪ್ರತಿ 200/ರೂ ಕ್ಯಾಅಕೋ ಪ್ರತಿ 400/ರೂ