ಐ.ಟಿ. ದರ್ಬಾರಿನಲಿ ಬೆಣ್ಣೆ ಖಾಲಿ!
ಐ.ಟಿ. ದರ್ಬಾರಿನಲಿ ಬೆಣ್ಣೆ ಖಾಲಿ!
ಸಿಲಿಕಾನ್ ರಾಜಧಾನಿಯಲಿ `ಐ.ಟಿ.' ದರ್ಬಾರು
ಕನ್ನಡದ ವಿದೂಷಕ; ಹಾಸ್ಯ-ಅಪಹಾಸ್ಯಕ್ಕೆ ಸೀಮಿತ
ಪಾಶ್ಚಾತ್ಯರಿಗಾಗಿ ರಾತ್ರಿಯೆಲ್ಲ ದುಡಿಯುವ ಜೀತದಾಳು
`ಓದಿ ಓದಿ ಮರುಳಾದ ಕೂಚುಭಟ್ಟ'ರ ಪಾಡು
ಹೆಸರು ನಮ್ಮದು ಬಸಿರು ಮಾತ್ರ ಅವರದು
`ದೇಸೀಯತೆ' ವೀರ್ಯವೇ ಇಲ್ಲದವರ ಕಟ್ಟಿಕೊಂಡು
ಕನ್ನಡ ನಾಡು ಫಲವತ್ತಾಗುವುದಾದರೂ ಎಂತು?
ಹಲವು ತಂತ್ರ-ಕುತಂತ್ರ-ಅತಂತ್ರಗಳ ನಡುವೆ
ಕನ್ನಡದ ಹತ್ತೂ ಬೆರಳಿಗೆ `ಕೀ'ಲುಗಳೇ ಇಲ್ಲದ ಸ್ಥಿತಿ
ಉಳಿವಿಗಾಗಿ ಕನ್ನಡ ತಂತ್ರಾಂಶಗಳ ನಿರಂತರ ಹೋರಾಟ
ಇಲ್ಲೂ ಸಲ್ಲುವುದೋ ಚಾರ್ಲಸ್ ಡಾರ್ವಿನ್ನನ ವಿಕಾಸವಾದ?
ಜಗತ್ತಿನಾದ್ಯಂತ ಎಲ್ಲೆಲ್ಲಿಯೂ ಸಲ್ಲಬೇಕೆಂಬ ಮಾತು
ಮೊದಲು ಇಲ್ಲಿ ಸಲ್ಲಬೇಕೆಂಬ ಮಾತಿನ ಸೊಲ್ಲೇ ಇಲ್ಲ!
ಜಾಗತೀಕರಣ ಕಾದ ಕಾವಲಿಯಾದರೂ
ಕೆಳಗೆ ಬಿದ್ದ ಎಲ್ಲರ ಮನೆ ದೋಸೆಯೂ ತೂತೇ!
ಜಾಗತೀ.... ಖಾಸಗೀ.... ಉದಾರೀ....`ತ್ರಿಕರಣ'ಗಳ
ಭರಾಟೆ ನಡುವೆ ಖಾಲಿಯಾಗುತ್ತಿದೆಯೇ ಕನ್ನಡ?
ಕಾವಲಿ ಮುಂದೆ ನಿಂತ `ಹೆಡ್ ಕುಕ್' ಜಾಗದಲಿ
ತ್ರಿಕರಣ ಶುದ್ಧಿಯಾಗಿ `ಅಡುಗೆ ಭಟ್ಟ'ರು ನಿಂತರೆ
ಕನ್ನಡಿಗರಿಗೆ ಸಿಗಲಾರದೇ ಬಿಸಿಬಿಸಿ `ಬೆಣ್ಣೆಖಾಲಿ'!?