2010:ಕೆಲಸದಲ್ಲಿ ತಲ್ಲೀನತೆಯೇ ಕಷ್ಟವಾಗಲಿದೆಯೇ?

2010:ಕೆಲಸದಲ್ಲಿ ತಲ್ಲೀನತೆಯೇ ಕಷ್ಟವಾಗಲಿದೆಯೇ?

ಬರಹ

2010:ಕೆಲಸದಲ್ಲಿ ತಲ್ಲೀನತೆಯೇ ಕಷ್ಟವಾಗಲಿದೆಯೇ?
ಸದಾ ಅಂತರ್ಜಾಲ ಸಂಪರ್ಕದಲ್ಲಿರುವುದರ ಜತೆಗೆ,ಮಿಂಚಂಚೆ,ದಿಡೀರ್ ಸಂದೇಶಗಳು,ಫೇಸ್‌ಬುಕ್,ಟ್ವಿಟರ್,ಅರ್ಕುಟ್ ಅಂತಹ ಸೇವೆಗಳ ಜನಪ್ರಿಯವಾಗಿರುವುದು,ಇವೆಲ್ಲಾ ಮಾಹಿತಿಯನ್ನು ನಮಗೆ ಸುಲಭವಾಗಿ ಒದಗಿಸುತ್ತವೆ.ಒಟ್ಟೊಟ್ಟಿಗೆ ಓದುವುದು,ಹಾಡು ಕೇಳುವುದು,ಸಂದೇಶಗಳಿಗೆ ಪ್ರತಿಕ್ರಿಯಿಸುವುದು ಇತ್ಯಾದಿಗಳನ್ನು ಮಾಡುತ್ತಾ,ಹಲವು ಕಾಯಕಗಳನ್ನು ಒಟ್ಟೊಟ್ಟಿಗೆ ನಿಭಾಯಿಸಲು ತಾವು ನಿಪುಣರು ಎನ್ನುವ ಭ್ರಮೆಯಲ್ಲಿ ಇಂದಿನ ಯುವಜನತೆ ಇರುವುದೇನೋ ನಿಜ.ಆದರೆ ಮನಸ್ಸು ಒಂದೇ ಕೆಲಸದಲ್ಲಿ ತೊಡಗಿದ್ದಾಗ,ನಮಗೆ ಸಿಗುವ ದಕ್ಷತೆ,ಹಲವು ಕೆಲಸಗಳಲ್ಲಿ ತೊಡಗಿ,ಮನಸ್ಸನ್ನು ಒಂದು ಕೆಲಸದಿಂದ ಇನ್ನೊಂದಕ್ಕೆ ತೊಡಗಿಸುವಾಗ ಸಿಗದು ಎನ್ನುವುದು ಸಂಶೋಧನೆಗಳು ತಿಳಿಸುವ ಸತ್ಯ.ಇದು ಮೊದಲಿನಿಂದಲೂ ತಿಳಿದ ವಿಚಾರವೇ ಹೌದು.ಆದರೆ ಹೊಸ ವರ್ಷದಲ್ಲಿ ಅಂತರ್ಜಾಲವು ಇನ್ನಷ್ಟು ಜನರಿಗೆ ಲಭ್ಯವಾದಾಗ,ಜತೆಗೆ ಅಂತರ್ಜಾಲದ ವೇಗವೂ ಹೆಚ್ಚಾದಾಗ,ಕೆಲಸದಲ್ಲಿ ಮನಸ್ಸು ತೊಡಗಿಸಿಕೊಳ್ಳುವುದಕ್ಕೆ ಇನ್ನಷ್ಟು ಹೆಚ್ಚು ಸಮಸ್ಯೆಯಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ.ಆದ್ದರಿಂದ ಇಂತಹ ಸೇವೆಗಳ ಬಳಕೆಯಲ್ಲಿ ವಿವೇಚನೆಯಿರಬೇಕಾದ್ದು ಮುಖ್ಯವಾಗುತ್ತದೆ.
-------------------------------------------------------------
ಜಿಎಸ್‌ಎಂ ಫೋನುಗಳ ಸಂಭಾಷಣೆ ಕದ್ದಾಲಿಸುವುದೀಗ ಸುಲಭ
ಜಿಎಸೆಂ ಸೆಲ್ ಫೋನ್‌ಗಳಲ್ಲಿ ಬಳಸಲಾಗುತ್ತಿರುವ ಗೂಢಲಿಪೀಕರಣ ವಿಧಾನವನ್ನು ತಾನು ಕಂಡುಕೊಂಡಿರುವುದಾಗಿ ಪ್ರಕಟಿಸಿರುವ ಜರ್ಮನ್ ತಂತ್ರಜ್ಞ,ನೋಲ್, ಜಿಎಸೆಂ ಪೋನ್ ಕರೆಗಳನ್ನು ಯಾರೂ ಕದ್ದಾಲಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾನೆ.ಆದರೆ,ಈ ವಿಧಾನವನ್ನು ಪ್ರಕಟಿಸುವುದು,ಕಾನೂನು ಬಾಹಿರವಾಗುತ್ತದೆ ಎಂದು ಜಿಎಸೆಂ ಸೇವೆ ಒದಗಿಸುವ ಕಂಪೆನಿಗಳ ಒಕ್ಕೂಟ ಪ್ರತಿಕ್ರಿಯಿಸಿದೆ.ವಕೀಲರ ಅಭಿಪ್ರಾಯವನ್ನು ತಾನೂ ಕೇಳಿದ್ದು,ತನ್ನ ಸಂಶೋಧನೆಯನ್ನು ಪ್ರಕಟಿಸಲು ತನಗೆ ಹಕ್ಕಿದೆ ಎಂದು ಸಂಶೋಧಕ ನೋಲ್ ವಾದ.ನಾಲ್ಕು ಬಿಲಿಯನ್ ಜಿಎಸೆಂ ಸೇವೆ ಬಳಸುವ ಮೊಬೈಲ್ ಬಳಕೆದಾರರ ಸಂಭಾಷಣೆಗಳ ಗೌಪ್ಯತೆಯೀಗ ಪ್ರಶ್ನಾರ್ಹವಾದರೂ,ಹೊಸ ತಂತ್ರಜ್ಞಾನವನ್ನು ಅಳವಡಿಸಲು ಅಗತ್ಯವಿರುವ ಹೊಸ ಯಂತ್ರಾಂಶಗಳು ಬಹಳ ಬಂಡವಾಳ ಅಪೇಕ್ಷಿಸುವುದರಿಂದ ತಂತ್ರಜ್ಞಾನದ ಬದಲಾವಣೆ ಸುಲಭವಲ್ಲ.
--------------------------------------------------------------
ಮುಂದಿನವಾರ ಗೂಗಲ್ ಫೋನ್ ಮಾರುಕಟ್ಟೆಗೆ?
ಮುಂದಿನವಾರ ಗೂಗಲ್ ತನ್ನದೇ ಹೆಸರಿನಲ್ಲಿ ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಲಭ್ಯವಾಗಿಸಬಹುದು ಎಂಬ ನಿರೀಕ್ಷೆಯಿದೆ.ನಕ್ಸಸ್1 ಪೋನನ್ನು ಗೂಗಲ್ ತನ್ನ ಅಂತರ್ಜಾಲತಾಣದ ಮೂಲಕವೇ ಮಾರಲಿದೆಯಂತೆ.ಜಿಎಸೆಂ ಸೇವೆಯನ್ನು ಈ ಹ್ಯಾಂಡ್‌ಸೆಟ್‌ನಲ್ಲಿ ಪಡೆಯಬಹುದು.ಸೆಟ್‌ನ ಬೆಲೆ ಐನೂರಮೂವತ್ತು ಡಾಲರುಗಳು.ಅಮೆರಿಕಾದಲ್ಲಾದರೆ ಟಿಮೊಬೈಲ್ ಸೆಲ್‌ಪೋನ್ ಸೇವೆ ಪಡೆದರೆ,ನೂರಎಂಭತ್ತು ಡಾಲರುಗಳಿಗೆ ಹ್ಯಾಂಡ್‌ಸೆಟ್ ಸಿಕ್ಕಿದರೂ,ಮಾಸಿಕ ಕನಿಷ್ಠ ದರ ಎಂಭತ್ತು ಡಾಲರು ನೀಡಬೇಕಾಗುತ್ತದೆ.ಇದುವರೆಗೆ ಆಂಡ್ರಾಯಿಡ್ ಆಧಾರಿತ ಗೂಗಲ್ ಫೋನ್‌ಗಳು ಇತರ ಯಂತ್ರಾಂಶ ತಯಾರಕರ ಮೂಲಕ ಲಭ್ಯವಾಗುತ್ತಿದ್ದುವು.ಎಚ್‌ಟಿಸಿ,ಮೊಟೊರೊಲಾದ ಸೆಟ್‌ಗಳು ಈ ರೀತಿ ಲಭ್ಯವಿವೆ.
-----------------------------------------------------------
ಜನರನ್ನು ಸೆಳೆಯುತ್ತಿರುವ ಮೊಬೈಲ್ ಬ್ಯಾಂಕಿಂಗ್
ಕಾರ್ಡುಗಳನ್ನು ಬಳಸಿ ಬ್ಯಾಂಕ್ ಸೇವೆ ಪಡೆಯುವುದು ಸಾಧ್ಯ.ಆದರೆ ಕಾರ್ಡ್ ಅನ್ನು ಕಳೆದುಕೊಂಡರೆ,ಅದು ದುರುಪಯೋಗವಾಗುವ ಸಾಧ್ಯತೆ ಇದೆ.ಕಾರ್ಡ್ ರಹಿತವಾಗಿ ಬ್ಯಾಂಕ್ ಸೇವೆ ಒದಗಿಸುವ ಮೊಬೈಲ್ ಬ್ಯಾಂಕ್ ಸೇವೆ ಈಗ ಭಾರತದಲ್ಲೂ ಜನಪ್ರಿಯವಾಗುತ್ತಿದೆ.ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯುವುದರಿಂದ ಹಿಡಿದು,ಹಣವನ್ನು ಒಂದು ಖಾತೆಯಿಂದ ಇನ್ನೊಂದಕ್ಕೆ ವರ್ಗಾಯಿಸುವುದು,ಬಿಲ್‌ಗಳ ಪಾವತಿ ಮುಂತಾದುವುಗಳೀಗ ಮೊಬೈಲ್ ಬ್ಯಾಂಕಿಂಗ್ ಪರಿಧಿಯಲ್ಲೇ ಬರುತ್ತದೆ.ಮೊದಲಿಗೆ ಹಣ ವರ್ಗಾವಣೆಗೆ ಇದ್ದ ಐದು ಸಾವಿರ ರೂಪಾಯಿ ಮಿತಿಯನ್ನೀಗ ಐವತ್ತು ಸಾವಿರದಷ್ಟಕ್ಕೆ ಏರಿಸುವ ಆರ್‌ಬಿ‌ಐ(ರಿಸರ್ವ್ ಬ್ಯಾಂಕ್) ನಿರ್ಧಾರ,ಮೂವತ್ತೆರಡು ಬ್ಯಾಂಕುಗಳಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲು ಅನುಮತಿ ಮುಂತಾದುವುಗಳು, ಈ ಸೇವೆಯ ಜನಪ್ರಿಯತೆಗೆ ಕಾರಣವಾಗಿವೆ.ಐಸಿಐಸಿಐ ಬ್ಯಾಂಕ್ ಸದ್ಯ ಎಂಟು ದಶಲಕ್ಷ ಗ್ರಾಹಕರಿಗೆ ಈ ರೀತಿಯ ಸೇವೆಯನ್ನು ನೀಡುತ್ತಿದೆ.ಸಾರ್ವಜನಿಕ ರಂಗದ ಬ್ಯಾಂಕುಗಳೂ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನೀಡಲಾರಂಭಿಸಿದ್ದು,ಸ್ಟೇಟ್‌ಬ್ಯಾಂಕ್  ಆಫ್ ಇಂಡಿಯಾವು ಸದ್ಯ ಐವತ್ತೊಂದು ಸಾವಿರ ಗ್ರಾಹಕರು ಈ ತೆರನ ಸೇವೆಗೆ ನೋಂದಾಯಿಸಿಕೊಂಡಿದ್ದಾರೆ.ಕಳೆದ ವರ್ಷ ಈ ಸಂಖ್ಯೆ ಬರೇ ಆರು ಸಾವಿರವಾಗಿತ್ತು.ಮಾಲ್‌ಗಳಲ್ಲಿ ಮೊಬೈಲ್ ಮೂಲಕ ಹಣವನ್ನೂ ಪಡೆಯಲು ಅನುಮತಿ ಸಿಕ್ಕಿದರೆ,ಖಾತೆಯಲ್ಲಿರುವ ಹಣವನ್ನು ತೆಗೆಯಲು ಏಟಿಎಂ‌ಗೆ ಹೋಗುವ ಅಗತ್ಯವಿಲ್ಲದಾಗಿಸುತ್ತದೆ.ನಂತರ ಮೊಬೈಲ್ ಬ್ಯಾಂಕಿಂಗ್ ಮತ್ತಷ್ಟು ಜನಪ್ರಿಯವಾಗುವುದು ಖಂಡಿತ.
-------------------------------------------------------------------
ಯಂತ್ರಾಂಶ ಖರ್ಚು ಕಡಿಮೆ ಮಾಡುವ ಡಾಸ್
ತಂತ್ರಾಂಶವನ್ನು ಖರೀದಿಸುವ ಬದಲಿಗೆ,ಅದನ್ನು ಅಂತರ್ಜಾಲ ಮೂಲಕ ಬಳಸಿ,ಬಳಕೆಯ ಅವಧಿಯ ಆಧಾರದಲ್ಲಿ ಬಾಡಿಗೆ ತೆರುವ ಸಾಸ್(SAAS-Softawre as a service)ಮಾದರಿಯಲ್ಲೇ ಡೆಸ್ಕ್‌ಟಾಪನ್ನೂ ಬಾಡಿಗೆ ನೀಡುವ ಸೇವೆಯDAAS-Desktop as a service)ಯ ಮಾದರಿಯನ್ನು ಜೈಲಾಗ್ ಎಂಬ ಕಂಪೆನಿಯು ತನ್ನದಾಗಿಸಿಕೊಂಡಿದೆ.ಐಬಿಎಂ ಕಂಪೆನಿ ಮತ್ತು ಕ್ಯಾನೋನಿಕಲ್ ಉಬುಂಟು ಜತೆಗೆ ಜೈಲಾಗ್ ಕಂಪೆನಿಯು ಒಡಂಬಡಿಕೆ ಮಾಡಿಕೊಂಡ ಕಾರಣ,ಐಬಿಎಂ ಯಂತ್ರಾಂಶ ಮತ್ತು ಉಬುಂಟುವಿನ ಮುಕ್ತ ತಂತ್ರಾಂಶಗಳನ್ನು ಬಳಸಿಕೊಂಡು ಜೈಲಾಗ್ ಕಂಪೆನಿಯು ಬಳಕೆದಾರರಿಗೆ ಅಗತ್ಯ ಸೇವೆಗಳನ್ನು ನೀಡುತ್ತದೆ. ಈ ಸೇವೆಗೆ ಪವರ್‌ಕ್ಯೂಬ್ ಎನ್ನುವ ಹೆಸರು ನೀಡಲಾಗಿದೆ.ಸದ್ಯ ಅಮೆರಿಕಾದಲ್ಲಿ ಮಾತ್ರಾ ಈ ಸೇವೆ ಲಭ್ಯವಿದ್ದರೂ ಮುಂದಿನ ವರ್ಷಾರ್ಧದಲ್ಲಿ ಭಾರತ ಮತ್ತು ಆಫ್ರಿಕಾದಲ್ಲೂ ಈ ಸೇವೆಯನ್ನು ನೀಡುವುದು ಕಂಪೆನಿಯ ಉದ್ದೇಶವಾಗಿದೆ.ಯಂತ್ರಾಂಶವನ್ನು ಖರೀದಿಸುವ ಬದಲು ಈ ರೀತಿಯ ಸೇವೆ ಪಡೆದರೆ,ಖರ್ಚಿನಲ್ಲಿ ಶೇಕಡಾ ಅರುವತ್ತರಷ್ಟನ್ನು ಉಳಿಸಬಹುದು ಎಂದು ಅಂದಾಜಿಸಲಾಗಿದೆ.
-----------------------------------------------------------------
ಸಂಕ್ರಾತಿಯ ವೇಳೆಗೆ ಘಮಘಮಿಸಲಿರುವ ಕೆಂಡಸಂಪಿಗೆ
www.kendasampige.com ಕನ್ನಡ ಅಂತರ್ಜಾಲ ತಾಣ ಮೂರು ತಿಂಗಳಿನಿಂದು ಸ್ಥಗಿತಗೊಂಡಿತ್ತು.ಅದನ್ನು ಸಂಕ್ರಾತಿಯ ಹೊತ್ತಿಗೆ ಪುನರಾರಂಭಿಸುವ ಯೋಜನೆಯನ್ನೀಗ ಬಹಿರಂಗ ಪಡಿಸಲಾಗಿದೆ.ಲೆಮನ್ ಟ್ರೀ ಮೀಡಿಯಾದ ಈ ತಾಣ, ಹಲವು ಖ್ಯಾತನಾಮ ಸಾಹಿತಿಗಳ ಅಂಕಣಗಳನ್ನು ನೀಡಿ ಅಂತರ್ಜಾಲದಲ್ಲಿ ಬಹಳಷ್ಟು ಹೆಸರು ಮಾಡಿತ್ತು.ಅಂತರ್ಜಾಲ ತಾಣಗಳ ಸೇವೆ ಬಳಕೆದಾರರಿಗೆ ಉಚಿತವಾಗಿ ಸಿಗುತ್ತವೆ.ಜಾಹೀರಾತು ಬಲವಿಲ್ಲದೆ,ಆರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಗಿ ಬರುವುದು ನಿರ್ವಹಣೆಗೆ ಸಮಸ್ಯೆ ಒಡ್ಡುತ್ತದೆ ಎನ್ನುವುದು ಬಹಿರಂಗ ಸತ್ಯ.
-------------------------------------------------------
ಪುಸ್ತಕ ಪ್ರೀತಿಯವರಿಗಿಲ್ಲಿದೆ ಆಹಾರ


logಪುಸ್ತಕ ಪ್ರೇಮಿಗಳು ಇಷ್ಟ ಪಡಬಹುದಾದ ಎರಡು ಬ್ಲಾಗುಗಳಿವು.ಮೊದಲನೆಯದು ಪುಸ್ತಕ ವಿಮರ್ಶೆಯ ನರೇಂದ್ರ ಪೈ ಅವರ ಬ್ಲಾಗ್.ತಾವು ಒದಿದ ಪುಸ್ತಕಗಳ ಬಗೆಗಿನ ವಿವರಣೆ ಜತೆಗೆ ವಿಮರ್ಶೆಯನ್ನು ನೀಡಿ,ಪುಸ್ತಕ ಓದಲು ಪ್ರೇರೇಪಿಸುವ ಬ್ಲಾಗ್ ವಿಳಾಸ  http://narendrapai.blogspot.com/. ಮಂಗಳೂರಿನ ಅತ್ರಿ ಪುಸ್ತಕದದೊಡೆಯ ಅಶೋಕವರ್ಧನ್ ಅವರ ಆರೋಹಣ,ತಮ್ಮಿಂದ ವಿತರಣೆಯಾಗುವ ಪುಸ್ತಕಗಳ ಪಟ್ಟಿಯನ್ನು ಓದುಗರಿಗೆ ತಿಳಿಸುವ ಜತೆಗೆ,ವೈವಿಧ್ಯಮಯ ಬರಹಗಳನ್ನಿಲ್ಲಿ ಬರೆಯುತ್ತಾರೆ. ಇತ್ತೀಚೆಗೆ ದೀವಟಿಗೆಯ ಬೆಳಕಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನದ ಬಗ್ಗೆಯೂ ವಿವರಗಳಿವೆ.ಅದರ ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುವಲ್ಲಿ ಎದುರಿಸಬೇಕಾದ ಸಮಸ್ಯೆಗಳ ಸ್ವಾರಸ್ಯಕರ ವಿವರಣೆ ಇಲ್ಲಿದೆ.ವಿಳಾಸ http://athree.wordpress.com


udayavani

*ಅಶೋಕ್‌ಕುಮಾರ್ ಎ

 

udayavani