ಕಾಣೆಯಾಗಿದ್ದ ತೂಕದ ಮಹಿಳೆಯರು ಪತ್ತೆ!

ಕಾಣೆಯಾಗಿದ್ದ ತೂಕದ ಮಹಿಳೆಯರು ಪತ್ತೆ!

ಬೊಗಳೂರು, ಅ.12- ದೇಶ ವಿದೇಶಗಳಲ್ಲಿ ಮಹಿಳೆಯರು ಅದರಲ್ಲೂ ಹೆಚ್ಚು ತೂಕದ ಮಹಿಳೆಯರೇ ನಾಪತ್ತೆಯಾಗುತ್ತಿರುವ ಪ್ರಕರಣ ಬೆಚ್ಚಿ ಬೀಳಿಸುತ್ತಿದ್ದು, ಇದರ ಕುರಿತು ತನಿಖೆ ನಡೆಸುವಂತೆ ಮಾನ್ಯ ರಾಷ್ಟ್ರಪತ್ನಿಗಳ ಆದೇಶ ಪಡೆದ ಬೊಗಳೆ ರಗಳೆ ಬ್ಯುರೋ ಬಂದು ಬಿದ್ದದ್ದು ನ್ಯೂರೀ ಎಂಬ ಪುಟ್ಟ ಪಟ್ಟಣಕ್ಕೆ.

ಅದು ಹೇಗೋ ರೀ... ರೀ... ಎಂಬ ಧ್ವನಿ ನ್ಯೂರೀ ಎಂದು ಕೇಳಿಸಿಕೊಂಡ ಪರಿಣಾಮವಾಗಿ ತಕ್ಷಣ ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಹುಡುಕಿದಾಗ ಈ ಪಟ್ಟಣ ಪತ್ತೆಯಾಗಿತ್ತು. ಅಲ್ಲಿಗೆ ಹೋದಾಗ ಮನೆ ಮನೆಗಳಲ್ಲಿ ಹೆಂಗಸರ ಕಿಲ ಕಿಲವೋ... ಗೊರ ಗೊರ ಸದ್ದೋ ಎಲ್ಲವೂ ಕೇಳಿಬರುತ್ತಿತ್ತು.

ಮಹಿಳೆಯರ ನಾಪತ್ತೆ ಪ್ರಕರಣದ ಬೆನ್ನ ಹಿಂದೆ ಬಿದ್ದ ಬ್ಯುರೋದ ಸಿಬ್ಬಂದಿ ಗಡಣಕ್ಕೆ ಅಲ್ಲಿ ಕೆಲವರು ತಮ್ಮ ತಲೆ ಮೇಲೆ ತೂಕದ ಮಹಿಳೆಯರನ್ನು ಹೊತ್ತು ಕೊಂಡು Practice ಮಾಡುತ್ತಿರುವ ಅಂಶ ಕಣ್ಣಿಗೆ ಬಿದ್ದದ್ದೇ, ಕಣ್ಣಿಗೆ ಬಿದ್ದ ಆ ಕಸವನ್ನೇ ಹೆಕ್ಕಿಕೊಂಡು ಅದರ ಎಳೆ ಹಿಡಿದು ಹೊರಟಾಗ ಸತ್ಯ ಬಯಲಾಗಿತ್ತು.

ಇಲ್ಲಿ ನಡೆಯುತ್ತಿದ್ದದ್ದು 7ನೇ ವರ್ಷದ ಪತ್ನಿ ಹೊತ್ತೊಯ್ಯುವ ಚಾಂಪಿಯನ್‌ಶಿಪ್ ಕೂಟ. ಇಲ್ಲಿ ಹೆಚ್ಚು ತೂಕದ ಪತ್ನಿಯರನ್ನು ಹೊತ್ತೊಯ್ದರೆ ಹೆಚ್ಚು ಹೆಚ್ಚು ಬಹುಮಾನ ದೊರೆಯುತ್ತಿತ್ತು. ಅಂದರೆ ನೀವು 100 ಕಿಲೋ ತೂಕದ ಪತ್ನಿಯನ್ನು ಹೊತ್ತೊಯ್ದರೆ ಅಷ್ಟೇ ತೂಕದ ಬಿಯರ್ ಹಾಗೂ ಅದರ ಐದು ಪಟ್ಟು ಮೊತ್ತದ ನಗದು ಹಣ ದೊರೆಯುತ್ತಿತ್ತು. ಇದಲ್ಲದೆ ಮುಂದಿನ ವರ್ಷ ಫಿನ್ಲೆಂಡಿನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದರೆ ನಿಮಗೆ 1000 ಡಾಲರ್ ವಾಪಸ್ ಸಿಗುತ್ತದೆ.

ಈ ಕಾರಣಕ್ಕೆ ಮನೆ ಮನೆಗಳಿಂದ ಮಹಿಳೆಯರು ಮಲಗಿದ್ದಾಗಲೇ ಹೊತ್ತೊಯ್ಯಲಾಗುತ್ತಿದ್ದು, ಇದರಿಂದಾಗಿ ಅವರು ಬೆಳಗ್ಗೆ ಎದ್ದಾಗ ನಾಪತ್ತೆಯಾಗುತ್ತಿದ್ದರು ಎಂಬುದು ಮನದಟ್ಟಾಗಿದೆ. ಮತ್ತೂ ಒಂದು ವಿಶೇಷವೆಂದರೆ, ಈ ಪಂದ್ಯಾವಳಿಯ ನಿಯಮಾವಳಿಯಲ್ಲಿ ಸ್ವಂತ ಪತ್ನಿಯರನ್ನೇ ಹೊತ್ತೊಯ್ಯಬೇಕು ಎಂದು ಎಲ್ಲಿಯೂ ಉಲ್ಲೇಖಿಸದಿರುವುದು. ಕೆಲವರು ತೂಕದ ಮಹಿಳೆಯರನ್ನು ಎತ್ತಿ ಎತ್ತಿ ಹೊತ್ತು ಒಯ್ಯುತ್ತಾ Practice ಮಾಡುತ್ತಿದ್ದರೆ, ಮತ್ತೆ ಕೆಲವರು ತೂಕದ ಸ್ತ್ರೀಯರೇ ಇದ್ದರೆ ಹೆಚ್ಚು ಬಹುಮಾನ ಸಿಗುತ್ತದೆ ಎಂಬ ಕಾರಣಕ್ಕೆ ಬೇರೆ ಬೇರೆ ಮನೆಗಳಿಂದ ದೊಡ್ಡ ದೊಡ್ಡ ಮಹಿಳೆಯರನ್ನು ಎತ್ತಿಕೊಂಡು ವಿಮಾನವೇರಿದ್ದರು.

ಹಾಗಾಗಿ ಮುಂದಿನ ವರ್ಷ ಪತ್ನಿಯರು ಅಥವಾ ಮಹಿಳೆಯರು, ವಿಶೇಷವಾಗಿ ಹೆಚ್ಚು ತೂಕವುಳ್ಳವರು ನಾಪತ್ತೆಯಾದರೆ ಪೊಲೀಸರಿಗೆ ದೂರು ನೀಡಬೇಕಿಲ್ಲ. ನೇರವಾಗಿ ಪತ್ನಿಯರ ಹೊತ್ತೊಯ್ಯುವ ವಿಶ್ವ ಚಾಂಪಿಯನ್‌ಶಿಪ್ ನಡೆಯುವ ಫಿನ್ಲೆಂಡ್‌ಗೆ ಧಾವಿಸಿದರಾಯಿತು ಎಂದು ಬೊಗಳೆ ರಗಳೆ ಬ್ಯುರೋ 'ಭವಿಷ್ಯ ವಾಣಿ' ನುಡಿಯುತ್ತದೆ.
http://bogaleragale.blogspot.com

Rating
No votes yet