ಅಂತ್ಯಗೊಂಡ ಕೋಪವೇ-ಗನ್ ಸಮಾವೇಶ
ಒಮ್ಮತಕ್ಕೆ ಬಾರದ ಉಭಯ ಒಕ್ಕೂಟಗಳ ನಾಯಕರು
* ನಾರದ
ನಗಾರಿ ಸುದ್ದಿ, ಕೋಪವೇ-ಗನ್, ಜ.೫
ಜಾಗತಿಕ ಭೂತಾಪಮಾನ ಏರಿಕೆಯಿಂದ ತಮ್ಮ ವಿಸ್ಕಿ ಗಾಜಿನಲ್ಲಿನ ಐಸ್ ಕ್ಯೂಬುಗಳು ಬಲುಬೇಗನೆ ಕರಗುತ್ತಿರುವ ವಿದ್ಯಮಾನವನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಶ್ರೀಮಂತ ರಾಷ್ಟ್ರಗಳ ಒಕ್ಕೂಟದ ಪ್ರತಿನಿಧಿ ಸದಾ‘ಗುಂಡು’ರವರು ಆಗ್ರಹಿಸಿದ್ದಾರೆ. ಡೆನ್ಮಾರ್ಕಿನ ಕೋಪವೇ-ಗನ್ನಲ್ಲಿ ಅಂತ್ಯಗೊಂಡ ಜಾಗತಿಕ ಸಮಾವೇಶದಲ್ಲಿ ಮಾತನಾಡುತ್ತ ಅವರು ಈ ಆಗ್ರಹವನ್ನು ಮಾಡಿದರು.
“ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಸಂಯಮ , ಸಹಿಷ್ಣುತೆ ಹಾಗೂ ಸಹಾನುಭೂತಿಯನ್ನು ರೂಢಿಸಿಕೊಳ್ಳಬೇಕು. ಇರುವವರನ್ನು ಕಂಡು ಕರುಬುವ ಕೆಲಸ ಮಾಡಬಾರದು. ತಮ್ಮ ದೇಶಗಳಲ್ಲಿ ಜನರಿಗೆ ಕುಡಿಯುವ ನೀರು ಇಲ್ಲ, ಸವಿಯಲು ವಿಸ್ಕಿಯಿಲ್ಲ, ವಿಸ್ಕಿಯಲ್ಲಿ ಮುಳುಗಿಸಲು ಐಸ್ ಕ್ಯೂಬುಗಳಿಲ್ಲ, ಐಸ್ ಮಾಡಲು ಫ್ರಿಜ್ಜಿಲ್ಲ, ಫ್ರಿಜ್ ನಡೆಸಲು ವಿದ್ಯುತ್ ಇಲ್ಲ, ವಿದ್ಯುತ್ ಉತ್ಪಾದನೆಗೆ ಮಳೆಯಿಲ್ಲ, ಸರಿಯಾದ ಸಮಯಕ್ಕೆ ಮಳೆ ಬರಲಿಕ್ಕೆ ಕಾಡುಗಳು ಉಳಿದಿಲ್ಲ, ತಮ್ಮ ಕಾಡುಗಳು ಉಳಿದುಕೊಳ್ಳುವುದಕ್ಕೆ ನಾವು ಬಿಟ್ಟಿಲ್ಲ ಎಂಬ ಕಾರಣಕ್ಕೆ ದ್ವೇಷ ಸಾಧಿಸುವುದು ಯಾರಿಗೂ ಹಿತಕರವಲ್ಲ. ತಮ್ಮ ದೇಶದ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ, ತಮ್ಮ ದೇಶಗಳ ಜನರ ಜೀವನ ಸ್ಥಿತಿಯನ್ನು ಸುಧಾರಿಸುವ ಭರದಲ್ಲಿ ಈ ದೇಶಗಳು ತಾಪಮಾನ ಏರಿಕೆ ತಡೆಗಟ್ಟುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದ ಶ್ರೀಮಂತ ರಾಷ್ಟ್ರಗಳಲ್ಲಿ ವಿಸ್ಕಿಯಲ್ಲಿನ ಐಸ್ ಕ್ಯೂಬು ಕರಗಿಹೋಗುವಂತಹ ಅಮಾನವೀಯ ಪರಿಣಾಮವಾಗುತ್ತಿದೆ. ಇಲ್ಲಿನ ಜನರು ಚಿಲ್ಡ್ ಬಿಯರ್ ಎಂದರೇನೆಂಬುದನ್ನೇ ಮರೆತುಹೋಗುವ ಅಪಾಯವಿದೆ.” ಸದಾ‘ಗುಂಡು’ ಮಾತನಾಡುತ್ತ ವಿಪರೀತ ಭಾವುಕರಾಗಿದ್ದರು ಎಂದು ವರದಿಯಾಗಿದೆ.
ಸದಾ‘ಗುಂಡು’ರವರ ಆರೋಪಗಳನ್ನು ಖಡಾಖಂಡಿತವಾಗಿ ತಿರಸ್ಕರಿಸಿದ ಅಭಿವೃದ್ಧಿ ಶೀಲ ರಾಷ್ಟ್ರಗಳ ಒಕ್ಕೂಟದ ಪ್ರತಿನಿಧಿ ದರಿದ್ರಯ್ಯರ್, “ಭಾರತವೂ ಸೇರಿದಂತೆ ಇತರೆ ಅಭಿವೃದ್ಧಿ ಶೀಲ ರಾಷ್ಟ್ರಗಳು ಜಾಗತಿಕ ಭೂತಾಪಮಾನ ಏರಿಕೆಗೆ ಕಾರಣರಲ್ಲ. ಇದಕ್ಕೆ ಪ್ರತಿ ವರ್ಷವೂ ನಮ್ಮ ದೇಶದಲ್ಲಿ ಚಳಿಯಿಂದಾಗಿ ಸಾವಿರಾರು ಜನರು ಸಾಯುವುದೇ ಸಾಕ್ಷಿ. ಶ್ರೀಮಂತ ರಾಷ್ಟ್ರಗಳಲ್ಲಿ ವಿಸ್ಕಿ ಗ್ಲಾಸಿನಲ್ಲಿ ಐಸ್ ಕ್ಯೂಬ್ ಕರಗಿದರೆ ನಾವು ಹೇಗೆ ಅದಕ್ಕೆ ಹೊಣೆಯಾಗುವೆವು? ಅತಿಯಾಸೆಗೆ ತಕ್ಕ ಪ್ರತಿಫಲ ಅವರಿಗೆ ಸಿಕ್ಕಿದೆ.”
ಕೋಪವೇ-ಗನ್ನಲ್ಲಿ ನಡೆದ ಸಮಾವೇಶದ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಮಾಹಿತಿ ಇಲ್ಲದಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಉಟ್ಟು ಓರಾಟಗಾರ ಉಗ್ರಣ್ಣನವರು, “ನಮ್ಮ ಸರಕಾರಗಳು ಜನಸಾಮಾನ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಶ್ರೀಮಂತ ರಾಷ್ಟ್ರಗಳಿಗೆ ತಮ್ಮನ್ನು ತಾವು ಮಾರಿಕೊಳ್ಳುತ್ತಿವೆ. ತಮ್ಮ ಸುಖಕ್ಕಾಗಿ ಯಾರ ನೆಮ್ಮದಿಯನ್ನೂ ಕೆಡಿಸಲು ಯೋಚಿದ ಅಮೇರಿಕಾ ಒಪ್ಪಂದದಲ್ಲಿ ದೇಶಕ್ಕೆ ಮಾರಕವಾದ ಅಂಶಗಳನ್ನು ಸೇರಿಸಿದೆ. ತಮ್ಮ ದೇಶದ ಜನರಿಗಾಗಿ ಬೇಕಾಗುವ ಐಸ್ ಕ್ಯೂಬ್ಗಳ ಉತ್ಪಾದನೆಯನ್ನು ಔಟ್ ಸೋರ್ಸ್ ಮಾಡಿಬಿಡುವ ಭೀಕರ ಹುನ್ನಾರ ನಡೆದಿದೆ. ನಮ್ಮ ದೇಶವನ್ನು ಅದರ ತಣ್ಣನೆಯ ಮಂಜುಗಡ್ಡೆಗಳಿಂದ ವಂಚಿತವಾಗಿಸುವ ಸಂಚು ನಡೆದಿದೆ. ನಾವು ಈಗಲೇ ಎಚ್ಚರವಾಗದಿದ್ದರೆ, ಉಗ್ರ ಹೋರಾಟಕ್ಕೆ ಮುಂದಾಗದಿದ್ದರೆ ಇಡೀ ದೇಶಕ್ಕೆ ದೇಶವೇ ಅಮೇರಿಕಾಗೆ ಮಂಜುಗಡ್ಡೆ ಸಪ್ಲೈ ಮಾಡುವ ಫ್ರಿಜ್ ಆಗಿಹೋಗುತ್ತದೆ.” ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಲು ಕರ್ನಾಟಕ ಸರ್ಕಾರದ ಕೈಗಾರಿಕಾ ಮಂತ್ರಿಗಳು ನಿರಾಕರಿಸಿದ್ದಾರೆ.
Comments
ಉ: ಅಂತ್ಯಗೊಂಡ ಕೋಪವೇ-ಗನ್ ಸಮಾವೇಶ
In reply to ಉ: ಅಂತ್ಯಗೊಂಡ ಕೋಪವೇ-ಗನ್ ಸಮಾವೇಶ by chaitu
ಉ: ಅಂತ್ಯಗೊಂಡ ಕೋಪವೇ-ಗನ್ ಸಮಾವೇಶ
ಜಾಗತಿಕ ಭೂತಕ್ಕೆ ಅಪಮಾನ ???
In reply to ಜಾಗತಿಕ ಭೂತಕ್ಕೆ ಅಪಮಾನ ??? by ಉಉನಾಶೆ
ಉ: ಜಾಗತಿಕ ಭೂತಕ್ಕೆ ಅಪಮಾನ ???