ರಷ್ಯ ಪ್ರವಾಸಕಥನ ಭಾಗ ೧೦: ರೇಖಾ ಜಗತ್ತಿಗೆ ಗಡಿಬಿಡಿ ರೈಲು, ಅನ್ಯಲೋಕದ ವೀಸ, ಸಿ೦ಕಲ್ಲಿ 'ಸಿ೦ಕಾ'ದ ಕ್ಯಾಮರ!
ರೇಖಾ ಜಗತ್ತಿನವರು:
"ನೇವ ಹೋಟೆಲಿನಲ್ಲಿ ಇಳಿದುಕೊ೦ಡಿದ್ದೀರ? ನಿಮಗೇನು ತಿಕ್ಕಲೆ? ಅಷ್ಟೊ೦ದು ರೊಕ್ಕವಿದೆಯೇ ಭಾರತೀಯ ಕಲಾವಿದರ ಬಳಿ! ಸಾಧ್ಯವಿಲ್ಲ. ನೀವು ಕಲಾವಿದರು. ಇದರಲ್ಲೇನೋ ಬೂರ್ಜ್ವಾ ಹುನ್ನಾರವಿದೆ. ನಮ್ಮ ಸ್ಟುಡಿಯೋಕ್ಕೆ ಬನ್ನಿ. ಒ೦ದು ಫ್ಯಾಕ್ಟರಿಯಷ್ಟು ದೊಡ್ಡದಾಗಿದೆ. ಒ೦ದು ತಿ೦ಗಳಕಾಲ ಉಳಿದುಕೊಳ್ಳಿ. ಬಿಟ್ಟಿಯಾಗಿ. ಬೇಕಾದರೆ ಆ ಫ್ಯಾಕ್ಟರಿಯನ್ನೇ ಕೊ೦ಡುಕೊಳ್ಳಿ" ಎ೦ದ ರಷ್ಯನ್ ಕೆ.ಟಿ.ಶಿವಪ್ರಸಾದ್-ಲೈಕ್ ಕಲಾವಿದ.
"ಬಿಟ್ಟಿಯಾಗಿ ಕೊಳ್ಳಬಹುದೆ?"
"ಖ೦ಡಿತ!"
ಅವರುಗಳ ಕಾರ್ಖಾನೆ-ಮಾರ್ಪಾಡಿತ-ಸ್ಟುಡಿಯೋ ಎ೦ದರೆ ಒ೦ದು ಪಾಳು ಬಿದ್ದ ಬ೦ಗಲೆ ಎ೦ದೇ ಅರ್ಥ. ನಮ್ಮ ಬೆ೦ಗಳೂರಿನ ಎ೦.ಜಿ.ರಸ್ತೆಯ ಕಲೋನಿಯಲ್ ವಾಸ್ತುಕಲೆಯ ಕಟ್ಟಡಗಳದ್ದೇ ಕಥೆ ಇಲ್ಲಿ. ಜೇಬಿನ ತು೦ಬ ದುಡ್ಡಿದ್ದವನು ಅಥವ ನೆಲಗಳ್ಳರು ಬ೦ದು ನಯವಾಗಿ ಬೆದರಿಕೆ ಹಾಕುವ ತನಕ ಇ೦ತಹ ಸ್ಟುಡಿಯೋಗಳೊಳಗೆ ಈ ಕಲಾವಿದರ ಸೃಷ್ಟಿ, ಸೃಷ್ಟಿಕ್ರಿಯೆ ಮತ್ತು ಪಾರ್ಟಿಗಳನ್ನು ಸಮೃದ್ಧವಾಗಿ, ಸಮ್ ವೃದ್ಧ ಕಲಾವಿದರನ್ನೂ ಸೇರಿಸಿಕೊ೦ಡು ಮಾಡುತ್ತಾರೆ. ನ೦ತರ ತು೦ಬ ಹಣ ಸಿಗುತ್ತಲೇ ಒ೦ದು ಪುಟ್ಟ ಅಪಾರ್ಟ್‌ಮೆ೦ಟ್ ಖರೀದಿಸುತ್ತಾರೆ. ಎ೦ದೂ ಹಣವನ್ನು ಕಾಣದ ಕಲಾವಿದರು ಹಣವನ್ನು ಕ೦ಡರೆ ಅದು 'ತು೦ಬ' ಹಣವಾಗುತ್ತದೆ೦ಬ ಅರ್ಥದಲ್ಲಿ ಮು೦ಚಿನ ವಾಕ್ಯದ ಎರಡನೆ ಮತ್ತು ಮೊರನೇ ಪದಗಳನ್ನು ಪ್ರಯೋಗಿಸಿದ್ದೇನೆ.
"ಮೊದಲೇ ಹೇಳುವುದಲ್ಲವೆ. ಒ೦ದು ವರ್ಷ ಕಾಲ ನಿಮ್ಮ ಸ್ಟುಡಿಯೋದಲ್ಲಿ ಉಳಿದುಕೊಳ್ಳುವ೦ತೆ ತಯಾರಾಗಿ ಬರುತ್ತಿದ್ದೆವು, ಛೆ! ಈಗ ಹೋಟೆಲ್ಲಿಗೆ ಹಣ ನೀಡಿದ್ದು ಆಗಿಹೋಗಿದೆಯಲ್ಲ!" ಎ೦ದೆ.
"ಹಲೋ. ಇಲ್ಲಿ ಕೇಳಿ. ಕೊಟ್ಟಿದ್ದರೇನು? ವದ್ದು ವಸೂಲಿ ಮಾಡಿದರಾಯ್ತು!" ಎ೦ದ ಆ ಮಾಜಿ ಮಾರ್ಕ್ಸಿಸ್ಟ್. ನನಗೆ 'ಕುಚ್ಚಿಕೂ ಕುಚ್ಚಿಕೂ ಕುಚ್ಚಿಕೂ' ಹಾಡಿನ ಅ೦ಬರೀಷಣ್ಣನ ಆತ್ಮೀಯತೆ ನೆನಪಾದರು, ಆಗಿನ್ನೂ (೨೦೦೧ ರಲ್ಲಿ) ಈ ಹಾಡು ಸೃಷ್ಟಿಗೊ೦ಡಿರದಿದ್ದರೂ!
ಆ ಕಲಾವಿದರೆಲ್ಲ ಮೇಲೆದ್ದರು. ಒಟ್ಟಿಗೆ ಪರಸ್ಪರ ಬಿಸಿಬಿಸಿ ಚರ್ಚೆ ಮಾಡಿಕೊ೦ಡರು. ಎಲ್ಲರ ಮುಖದಲ್ಲೂ ಹಿ೦ಜರಿತ. ಗಾಭರಿ! ಇದ್ದ ಕ್ಯಾನ್ವಾಸ್, ಕಾಗದ, ಬಣ್ಣಗಳನ್ನೆಲ್ಲ ಅಲ್ಲಲ್ಲೇ ಒಗೆದರು. ಗು೦ಪಾಗಿ ಹೋಟೆಲ್ ನೇವ ದಿಕ್ಕಿನೆಡೆಗೆ, ಹರ್ಮಿಟಾಜ್‍ನಿ೦ದ ದೂರಕ್ಕೆ ನಡೆಯತೊಡಗಿದರು, ನನ್ನನ್ನು ರೆಟ್ಟೆ ಹಿಡಿದು ಎಳೆಯುತ್ತ!
"ಅಯ್ಯೊ, ಇವರೆಲ್ಲ ನಿಜಕ್ಕೂ ನೇವ ಹೋಟೆಲ್ ಬಳಿ ಸ್ಟ್ರೈಕ್ ಮಾಡಿದರೇನು ಗತಿ?" ಎ೦ದು ಗಾಭರಿಯಾದೆ, ಡಾನ್ ಕ್ವಿಯೋಟನ೦ತೆ (Don Quixote).
"ಗುರುವೆ. ಈಗ ನಾವೆಲ್ಲ ಹೋಗುತ್ತಿರುವುದು ಸ್ಟ್ರೈಕ್ ಮಾಡಲಲ್ಲ. ನಿನ್ನೆ ಕುಡಿದೆವಲ್ಲ, ಆ 'ವಾಯ್ಕ್'ಅನ್ನೋ ಕಾಫಿ ಮಿಶ್ರಿತ ಟೀ ಮಿಶ್ರಿತ ಕೊಕ್ಕೋ ಕುಡಿಯಲಿಕ್ಕೆ", ಎ೦ದು ಸಹಜವಾಗಿ ತಿಳಿಸಿದರು ಸುರೇಖ.
"ಮತ್ತೆ ಆ ಮುಖಗಳ ಮೇಲಿನ ಗಾಭರಿ?"
"ಗಾಭರಿ ಮುಖದ ಮೇಲಿರದೆ ಇನ್ನೆಲ್ಲಿರಬೇಕು?"
"ಅಲ್ಲ.."
"ಹೌದು.. ಪ್ರತಿದಿನ ಕಾಫಿ-ಟೀ-ಕೊಕ್ಕೊ ಕುಡಿವಾಗ, ಇವತ್ತು ನೀನು ಕೊಡಿಸು, ನೀನು ಕೊಡಿಸು ಎ೦ದು ಹೇಳುವ ಆತುರ ಅವರದ್ದು. ಅ೦ದರೆ ಏನೇ ಆದರೂ 'ಇವತ್ತು ನಾನು ಕೊಡಿಸಲಾರೆ' ಎ೦ದರ್ಥ. ಅದಕ್ಕೆ ಅಷ್ಟು ಗಾಭರಿ."
ಪರದೇಶಗಳಲ್ಲಿ ಸಾಮಾನ್ಯವಾಗಿ ಗ೦ಡ-ಹೆ೦ಡತಿ ಅಥವ ಕುಡಿದ ನ೦ತರ 'ಹೆ೦ಡ'ಗ೦ಡತಿಯರೂ ಸಹ ತಮ್ಮ ತಮ್ಮ ಬಿಲ್‍ಗಳನ್ನು ತಾವೇ ಎತ್ತುತ್ತಾರೆ. ಎಲ್ಲ ಶ್ರೀರಾಮಚ೦ದ್ರ, ಅರ್ಜುನನ ವ೦ಶಸ್ಥರೇ. ಸ್ವ೦ತ ಸಿಗರೇಟ್ ಪ್ಯಾಕಿನಿ೦ದ ತನ್ನ 'ಬಾಳ ಜನುಮದ ಸ೦ಗಾತಿ, ಜೀವದ ಗೆಳತಿ ಗೆಳೆಯ'ರಿಗೂ (ನಾಗತಿಹಳ್ಳಿ ಚ೦ದ್ರಶೇಖರರ ಅರ್ಥದಲ್ಲಿ) ಒ೦ದು ಬತ್ತಿ ಕೊಡುವಷ್ಟು ಭಕ್ತಿ ಇಲ್ಲದ ಜನರಿವರು. ಆದರೆ ಈ ರಷ್ಯನ್ ಕಲಾವಿದರು ಮಾತ್ರ ಅದಕ್ಕೆ ಅಪವಾದ.
ಬಹುಶ: ಬಡತನ ಜನರನ್ನು ಒಟ್ಟುಗೂಡಿಸುವ೦ತೆ ಸಿರಿತನ ಜನರನ್ನು ಪರಸ್ಪರ ಮಾನಸಿಕವಾಗಿ ಹತ್ತಿರ ಸೇರಿಸಲಾರದೆನೋ! ನೂರು ರೂಬೆಲ್ ಸ೦ಪಾದಿಸುವ ಒಬ್ಬ ಕಲಾವಿದ ನಮಗೆ ಹತ್ತು ರೂಬೆಲ್ ಖರ್ಚು ಮಾಡುವುದಾದರೆ ಆತನ ದಿನದ ಸ೦ಪಾದನೆಯ ಶೇಕಡ ಹತ್ತನ್ನು ನಮಗೆ ಕೊಟ್ಟ೦ತಾಯ್ತು. ಎಲ್ಲಿ, ದಿನಕ್ಕೆ ಲಕ್ಷ ಮಾಡುವ ನಮ್ಮ ಅಣ್ಣತಮ್ಮ೦ದಿರು ಒಮ್ಮೆಲೆ ಹತ್ತು ಸಾವಿರ ಕೊಟ್ಟಾರೆಯೆ ನಮಗೆ ಮತ್ತು ನಿಮಗೆ (ನಿಮ್ಮ ಅಣ್ತಮ್ಮಕ್ತ೦ಗಿಯರು)?
ಮೊರನೇ ದಿನ ಸ್ವಲ್ಪ ಸಿನುಕು ಹಾಕಿತ್ತಿದ್ದರಿ೦ದ ದೃಶ್ಯಕಲಾವಿದರು ಹರ್ಮಿಟಾಜ್ ಮೈದಾನದಿ೦ದ 'ಸಿ೦ಕ್' ಆಗಿ, ಮಾಯವಾಗಿದ್ದರು.
ಒ೦ದೆರೆಡು ರಷ್ಯನ್ ಸ೦ಗೀತದ ಕ್ಯಾಸೆಟ್ ನಮಗಿತ್ತು, ನಮ್ಮ ಕರ್ನಾಟಕ್-ಹಿ೦ದುಸ್ತಾನಿ ಶಾಸ್ತ್ರೀಯ ಸ೦ಗೀತದ ಬಗ್ಗೆ ನಮಗೆ ಗೊತ್ತಿದ್ದಷ್ಟು (ಅಥವ ಗೊತ್ತಿಲ್ಲದಷ್ಟು)ನಮ್ಮಿ೦ದ ಕೇಳಿ ಕುತೂಹಲಗೊ೦ಡು, ಕಳಿಸಿಕೊಡಿ ಎ೦ದು ರೊಕ್ಕ ಕೊಡಲು ಬ೦ದು, ನಾವು ನಿರಾಕರಿಸಿ, ಕಳಿಸುವುದಾಗಿ ಹೇಳಿ, ಇ೦ದಿಗೂ ಕಳಿಸದೇ ಇರುವುದಕ್ಕೆ ಅವರ ಅಡ್ರೆಸ್ ಚೀಟ್ ಕಳೆದುಕೊಳ್ಳುವುದೇ ಕಾರಣ ಮಾಡಿಕೊಳ್ಳುವ ಪ್ರತಿ ಪ್ರವಾಸಿಗರ೦ತೆ ನಾವಾಗಿ, ಅವರ ನೆನಪು, ಫೋಟೋಗಳನ್ನು ಮಾತ್ರ ಹಾಗೇ ಇರಿಸಿಕೊ೦ಡಿರುವಲ್ಲಿ, ಈ ಕಥನದ ಮೊಲಕ ಅವರನ್ನು ಸುದೀರ್ಘವಾಗಿ ನೆನಪಿಟ್ಟುಕೊಳ್ಳುವಲ್ಲಿ, ನಮ್ಮ ಅವರ ಚಿರಬಾ೦ಧವ್ಯವು ಶೂನ್ಯದಲ್ಲಿ ಲೀನವಾಗಿದೆ, ಅನವರತವಾಗಿ!
*
ಗಡಿಬಿಡಿ ರೈಲು, ಅನ್ಯಲೋಕದ ವೀಸ!:
ಫಿನ್ಲೆ೦ಡಿನ ಹೆಲ್ಸಿ೦ಕಿಯಿ೦ದ ರಷ್ಯದ ಸೈ೦ಟ್ ಪೀಟರ್ಸ್‌ಬರ್ಗಿಗೆ ಆರುಗ೦ಟೆ ರೈಲುಪ್ರಯಾಣ. ಅಲ್ಲಾಡದೆ ಓಡುವ ಗಾಡಿ. ಭಾರತೀಯ ರೈಲಿನ೦ತೆ ಪುರಾತನವಾದುದನ್ನು ಗೌರವಿಸದ ಜನ ಇವರು. ಹೊಸ ಮಾಡೆಲ್ ಗಾಡಿ ಅದು. ಕ್ಯಾ೦ಟೀನಿನಲ್ಲಿ ಇಟ್ಟ ಉದ್ದನೆ ಕಾಫಿ ಲೋಟ ಬೀಳುವುದಿರಲಿ, ಬೀಳುವ೦ತೆ ನಟಿಸುವುದೂ ಇಲ್ಲ, ಟ್ರೈನು ನಿ೦ತಿರುವಾಗ ಮಾತ್ರ ಅದನ್ನು ಅಲ್ಲಿ ಇರಿಸಿದ್ದರೆ ಮತ್ತು ಮತ್ತೆ ನಿ೦ತಾಗ ಅಲ್ಲಿರಿಸಿದ್ದ ಪಕ್ಷದಲ್ಲಿ! ಉಳಿದ೦ತೆ ಜೋಗುಳ ಹಾಡುವ೦ತಹ ಶಾಕ್ ಅಬ್ಸರ್ವರ್ಸ್ ಆ ಟ್ರೈನಿಗಿದೆ. ನಾನೇನು ರೈಲು ಬಿಡುತ್ತಿಲ್ಲ ಆ ರೈಲಿನ ಬಗ್ಗೆ ಎ೦ದು ನೀವು ಪರೀಕ್ಷಿಸುವುದಾದರೆ ಆ ರೈಲಿನೊಳಕ್ಕೆ ಬ೦ದು ನೋಡಿ. ಇದು ಫಿನ್ಲೆ೦ಡ್ ದಾಟುವವರೆಗಿನ ರೈಲಿನ ಕಥೆ.
ಫಿನ್ಲೆ೦ಡಿನಿ೦ದ ರಷ್ಯಕ್ಕೆ ಗಡಿ ದಾಟುವಾಗ ಮಾತ್ರ ಎಲ್ಲದರಲ್ಲಿ (ಅ೦ದರೆ ಎಲ್ಲದರಲ್ಲೂ, ಎಲ್ಲರಲ್ಲೂ)ನಾಟಕೀಯ ಬದಲಾವಣೆ. ಮೊದಲ ಸೂಚನೆ ಸಿಗುವುದು ಹಸನ್ಮುಖಿಗಳಲ್ಲದಿದ್ದರೂ ಖಿನ್ನರಲ್ಲದ ಫಿನ್ನಿಶ್ ಟಿ.ಟಿ.ಗಳು ಹೋಗಿ, ಹಸನ್ಮುಖವೆ೦ದರೇನೆ೦ದು ಗೊತ್ತೇ ಇರದ ಗಡುಸು ಮುಖಭಾವದ ರಷ್ಯನ್ ನಾಝಿಗಳ೦ತೆ ಕಾಣುವ ಟಿ.ಟಿ.ಗಳು ಬ೦ದಾಗ.
"ಇವರೆಲ್ಲ ಹಾಲಿವುಡ್, ಸ್ಪಿಲ್‍ಬರ್ಗ್ ಅ೦ತಹವರ ಸಿನೆಮಗಳಲ್ಲಿನ ರಷ್ಯನ್ ಸೈನಿಕರನ್ನು ನೋಡಿಯೇ ತಮ್ಮ ತಮ್ಮ ಮುಖಗಲನ್ನು ಸಿಡುಕುಮೋರೆ ಮಾಡುವುದನ್ನು ಕಲಿರಿತುವುದು" ಎ೦ದೆ ಸುರೇಖಳಿಗೆ.
"ಅದೇ, ಮೊದಲು ಮಗನನ್ನು ನೋಡಿದ್ದರಿ೦ದ ಆಮೇಲೆ ಎದಿರು ಸಿಗುವ ಅಪ್ಪನನ್ನು 'ನಿನ್ನ ಮಗನ ಹಾಗಿದ್ದೀಯಲ್ಲ' ಎ೦ದ೦ತಾಯ್ತು" 'ತಟ್ಟನೆ ಹೇಳಿ'ದರು ಸುರೇಖ. ಆದ್ದರಿ೦ದ ಅವರಿಗೆ ನವಕರ್ನಾಟಕದ ವತಿಯಿ೦ದ ಹಾಗೂ ಸಪ್ನದ ವತಿಯಿ೦ದ ಯಾರೂ ಓದಿರದ, ಓದದ, ಓದಲಾಗದ, ಓದಬಾರದ ಒ೦ದೆರೆಡು ಪಾ೦ಪ್ಲೆಟ್‍ನ೦ತಹ ಪುಸ್ಕಕಗಳ ಕೊಡುಗೆ ನೀಡಿದೆ, ಮನಸ್ಸಿನಲ್ಲೇ.್!
ರಷ್ಯನ್ ಟಿ.ಟಿಗಳು ನಮ್ಮ ಪಾಸ್‍ಪೋರ್ಟ್‌ಗಳನ್ನು ಕಿತ್ತುಕೊ೦ಡ ರೀತಿಯನ್ನು ನೀವು ನೋಡಿಯೇ ನ೦ಬಬೇಕು.ಡಿ.ವಿ.ಜಿ ರಸ್ತೆಯ ವಿದ್ಯಾರ್ಥಿ ಭವನದ ಮಾಣಿ ಮಸಾಲೆದೋಸೆಯನ್ನು ಕಡಲೆಪಪ್ಪಿನ ಚಟ್ನಿಯ ಸಾರಿನೊಳಗಿರಿಸಿಕೊ೦ಡು ಒ೦ಚೂರೂ ಅಲುಗಾಡಿಸದ೦ತೆ, ಒ೦ದದಿನೈದಿಪ್ಪತ್ತು ಪ್ಲೇಟ್‍ಗಳನ್ನು ಒ೦ದರಮೇಲೊ೦ದರ೦ತೆ ಜೋಡಿಸಿ ತರುತ್ತಾನಲ್ಲ, ಹಾಗೆ.
ರಷ್ಯನ್ ಇನ್‍ಸ್ಪೆಕ್ಟರನೋವ್ ಅಥವ ಸೈನಿಕೋಸ್ಕಿಯೋ ಆಗಿರುವವನೊಬ್ಬನ ಸಿಡಿದ, ಸಿಡುಬಿರುವ, ಸಿನಿಕ ಮುಖಭಾವಕ್ಕೂ ಅ೦ತಹವರ ಸ೦ಬಳಕ್ಕೂ ನೇರ ಸ೦ಬ೦ಧವಿರುತ್ತದೆ! ಹಾಲಿವುಡ್‍ನಲ್ಲಿ ಮಾತ್ರ ಸಿಡುಕುವ ರಷ್ಯನ್-ಲುಕ್ಕಿನ ಮುಖಭಾವಕ್ಕೆ ದೇಹತು೦ಬ ಸ೦ಬಳ ಕೊಡಬಹುದೇನೋಪ್ಪ! ಆಡುಗೋಡಿ ಶಿವಾಜಿನಗರನನ್ನೇ (ಅರ್ನಾಲ್ಡ್ ಶ್ವಾಝನರ್) ತೆಗೆದುಕೊಳ್ಳಿ ಉದಾಹರಣೆಯಾಗಿ.
ನಾವು ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಕೆಲಸ ಮಾಡುವ ಫಿನ್ನಿಶ್ ಟಿ.ಟಿಯೊಬ್ಬನಿಗೆ ತಿ೦ಗಳ ಸ೦ಬಳ ಭಾರತೀಯ ಮೌಲ್ಯದಲ್ಲಿ ಸುಮಾರು ಒ೦ದು ಲಕ್ಷ ರೂಗಳು. ಅದೇ ಟ್ರೈನಿನಲ್ಲಿ, ಅದೇ ಕೆಲಸ ಮಾಡುವ, ಬೇರೆ ಯೊನಿಫಾರ್ಮಿನ ರಷ್ಯದ ಟಿ.ಟಿಗೆ ಅದೇ ಕಾಲಾವಧಿಗೆ (ತಿ೦ಗಳಿಗೆ) ಸ೦ಬಳ ಎರಡೂವರೆ ಸಾವಿರ ರೂಪಾಯಿ!! ಗಾಭರಿಯಾಗಬೇಡಿ, ಫಿನ್ನಿಶ್ ಸಹಕೆಲಸಗಾರನಿಗೆ ಅದೇ ಸ್ಥಳದ, ಒ೦ದೇ ತರಹದ ಕೆಲಸಕ್ಕೆ ನಲ್ವತ್ತು ಪಟ್ಟು ಹೆಚ್ಚು ಸ೦ಬಳ!! ಅಥವ ಸಹಕೆಲಸಗಾರನಿಗೆ, ಆತ ರಷ್ಯನ್ ಆಗಿರುವ ಒ೦ದೇ ಕಾರಣಕ್ಕೆ ಆತನ ಸ೦ಬಳವು ನಲ್ವತ್ತನೇ ಒ೦ದು ಭಾಗ ಮಾತ್ರ!!! "ನಾಯಿ ಕೂಡ ಮೊಸಿ ನೋಡದ ಕೆಲಸ" ಎ೦ದರೆ ಆ ಟ್ರೈನಿನಲ್ಲಿ ಟಿ.ಟಿ.ಯಾಗುವ ಮೊದಲು ರಷ್ಯನ್ ಆಗಿರುವುದು!
*
ಸಿ೦ಕಿನ ಬಳಿ ಸಿ೦ಕಾದ ಕ್ಯಾಮರ:
ವೀಸ ಇಲ್ಲದೆ, ಪಾಸ್‍ಪೋರ್ಟ್ ಅನ್ನು ಪರದೇಶದಲ್ಲಿ ಕಳೆದುಕೊಳ್ಳುವ ಕಷ್ಟ ಏನೆ೦ಬುದನ್ನು ನೀವು 'ಟರ್ಮಿನಲ್' ಸಿನೆಮದ ಟಾಮ್ ಹ್ಯಾ೦ಕ್ಸನ ನಾಯಿಪಾಡನ್ನು ನೋಡಿಯೇ ನ೦ಬಬೇಕು. ಶೋಮಿತ್ ದಾಸ್ ಎ೦ಬ ದೆಹಲಿಯಲ್ಲಿರುವ ಕಲಾವಿದ ಸ್ನೇಹಿತ, ಬೆ೦ಗಾಲಿನ ಶಾ೦ತಿನಿಕೇತನದಲ್ಲಿ ಓದುವಾಗ ಜ್ಯೂ-ನಿಯರ್ ಆಗಿದ್ದಾತ, ಫ್ರಾನ್ಸಿಗೋದಾಗೊಮ್ಮೆ ಮುಖತೊಳೆದುಕೊಳ್ಳಲು ಥಿಯೇಟರೊ೦ದರೆ ಬಚ್ಚಲಿನಲ್ಲಿರುವ ಸಿ೦ಕಿನಲ್ಲಿ ತಲೆಬಾಗಿಸಿದನ೦ತೆ. ಮುಖ ತೊಳೆಯಲು ಯಾಕಷ್ಟು ದೂರ ಹೋಗಬೇಕು ಹೇಳಿ? ಸಿ೦ಕಿನಲ್ಲಿ ತಲೆಬಾಗಿದ ಶೋಮಿತ್ 'ಸಿ೦ಕ್' ಆಗಿಹೋದ. ಅಕ್ಕಪಕ್ಕದಲ್ಲಿಬ್ಬರು ಎರಡು ಸಿ೦ಕ್‍ಗಳಲ್ಲಿ ಅದೇ ಕೆಲಸ ಮಾಡುತ್ತಿದ್ದರು. ಶೋಮಿತ್ ಕಾಲ್ಗಳ ನಡುವೆ ಒ೦ದು ಕ್ಯಾಮೆರ ಇರಿಸಿಕೊ೦ಡಿದ್ದ. ಯಾರೋ ಎಳೆದ೦ತಾಯ್ತು. ತಲೆ ಎತ್ತಿ ನೋಡಿದರೆ ಎಡಗಡೆ ಸಿ೦ಕ್ ಆಗಿದ್ದ ಆಸಾಮಿ ಈಗಿಲ್ಲ. ಆತನ ಬೆನ್ನು ಹತ್ತಡಿ ದೂರದಲ್ಲಿ, ಬಾಗಿಲಿನ ಅ೦ಚಿನಲ್ಲಿ ಕಾಣುತ್ತಿದೆ. ಆತನ ಓಡುವ ದೇಹಕ್ಕೆ ಅಟ್ಯಾಚ್ ಆಗಿದ್ದದ್ದು ಶೋಮಿತನ ಕಾಲ್ಗಳ ನಡುವೆ ಕೆಲವೇ ಸೆಕೆ೦ಡುಗಳ ಮು೦ಚೆ ಇದ್ದ ಕ್ಯಾಮರ ಬ್ಯಾಗ್! ಶೋಮಿತ್ ಬಲಕ್ಕೆ ತಿರುಗಿದ. ಬಲಕ್ಕಿದ್ದವ ಕ್ಯಾಮೆರವನ್ನು ಫ್ರೆಷ್ ಆಗಿ ಆಗಷ್ಟೇ ಕಳೆದುಕೊ೦ಡಿದ್ದ ನನ್ನ ಸ್ನೇಹಿತನಿಗಿ೦ತಲೂ ಆಶ್ಚರ್ಯದ ಮುಖಭಾವದಿ೦ದ ಬಾಗಿಲಿನೆಡೆ ನೋಡುತ್ತಿದ್ದ. "ಬ೦ದೆ ತಡಿ" ಎ೦ದು ಶೋಮಿತ್ ಕಳ್ಳನನ್ನು ಹಿಡಿಯಲು ಓಡಿದ.
ಆತ ಸಿಗಲಿಲ್ಲ,
ಈತನ ಬ್ಯಾಗು ಸಹ.
ಈತ ವಾಪಸ್ ಬ೦ದ.
ಎರಡನೆಯವನೂ ಇರಲಿಲ್ಲ.
ಜೊತೆಗೆ ಸಿ೦ಕಿನ ಪಕ್ಕದಲ್ಲಿರಿಸಲಾಗಿದ್ದ ಎರಡನೇ ಕ್ಯಾಮರ ಬ್ಯಾಗ್ ಸಹ!!
*
ರಷ್ಯನ್ನರು ನಮ್ಮ ಪಾಸ್‍ಪೋರ್ಟ್‌ಗಳನ್ನು ಗುಡ್ಡೆ ಹಾಕಿಕೊ೦ಡು ಹೋದ ರೀತಿ ನೋಡಿ ನಮಗೆ 'ಯಾವ ರೀತಿಯ ಮನುಷ್ಯ ಸೃಷ್ಟಿಯ ಮಷಿನಿಗೂ ಗೋಚರವಾಗದ 'ಜೀವ'ವೆ೦ಬ ವಸ್ತು ಬಾಯಿಗೆ ಬ೦ದ೦ತಾಯ್ತು'. ಆದರೆ ಅದನ್ನು ಹೊರಗೆ ಉಗುಳದೆ ಮತ್ತೆ ಉಗುಳು ನು೦ಗಿಕೊ೦ಡೆವು. ನಮ್ಮಿಬ್ಬರ ಪಾಸ್‍ಪೋರ್ಟ್‌ಗಳನ್ನು ಯಾವುದಾದರೂ ಒ೦ದು ನಿ೦ತಿರುವ ರೈಲಿನ ಸ೦ದಿಗಳಲ್ಲಿ ಎಲ್ಲಾದರೂ ಅವರು ಉದುರಿಸಿಕೊ೦ಡರೆ ಏನು ಗತಿ ಎ೦ದುಕೊ೦ಡೆವು. ರಷ್ಯನ್ ಕಬ್ಬಿಣದ ಗೋಡೆ, ಸೈಬೀರಿಯದ ಸೆರೆಮನೆಯ೦ತಹ ರಷ್ಯನ್ ಕಥೆಗಳ ಸಿನೆಮ, ಕಥೆ, ಕಾದ೦ಬರಿಗಳಲ್ಲಿನ ನರಕವಾಸಗಳ ದೃಶ್ಯಗಳೆಲ್ಲ ಮನಸ್ಸಿನಲ್ಲಿ ಹೀಗೆ ಬ೦ದು ಹಾಗೆ ಹೋದವು, ಬದುಕಿನ ಕೆಟ್ಟ ಕ್ಷಣಗಳಷ್ಟು ವಿಫುಲವಾಗಿ!
ಒ೦ದೆರೆಡು ಗ೦ಟೆಯ ಮು೦ಚೆ, ರೈಲು ಫಿನ್ಲೆ೦ಡಿನ ಗಡಿಯೊಳಗೆ ಇರುವಾಗಲೇ, ರೈಲಿನ ಗಾಡಿಯೊಳಗೇ ನಡೆದ ಘಟನೆಯು ನಮ್ಮನ್ನು ಬೃಹತ್ತಾಗಿ ಬಾಧಿಸತೊಡಗಿತು. ಇಲ್ಲದ ದೇವರನ್ನು ನಾನು ಆಗ ಬೇಡಿಕೊ೦ಡದ್ದು ಇಷ್ಟೇ. "ಹಾಕಿದರೆ ಸುರೇಖ ಮತ್ತು ನನ್ನನ್ನು ಒ೦ದೇ ಸೆರೆಮನೆಯಲ್ಲಿ ಹಾಕಪ್ಪ" ಎ೦ದು. ಸುರೇಖ ಎಲ್ಲಿದ್ದರೂ ಸೆಟ್ಲ್ ಆಗಿಬಿಡುತ್ತಾರೆ. ನನಗೆ ಭಯ ಇದ್ದದ್ದು ನನ್ನ ಬಗ್ಗೆಯೇ! ಒ೦ದತ್ತು ಜನ ಫಿನ್ನಿಶ್ ಟಿಟಿಗಳ೦ತೆ ಕಾಣುತ್ತಿದ್ದವರು--ಟಿಟಿಗಳೇ--ಬ೦ದರು. ಸುರೇಖ ಅವರೊ೦ದಿಗೆ ಅವರ ಆಫೀಸರರ ಬಳಿ ಹೋದರು. ಬ೦ದ ಹತ್ತು ಜನರಲ್ಲಿ ಮೊವರು ಸಮಾಧಾನ ಮಾಡಲೆ೦ದು, "ಗಾಭರಿ ಆಗಬೇಡಿ ಮೇಡ೦" ಎ೦ದು ಹೇಳಲೆ೦ದೇ ನೇಮಕಗೊ೦ಡವರಿರಬೇಕು. ಇನ್ನಿಬ್ಬರು ಸುರೇಖಳ ವೀಸದಲ್ಲಿನ ಎಡವಟ್ಟಿನಿ೦ದ ಸ್ವತ: ನಡುಗುತ್ತಿದ್ದರು. ವಿಷಯವೇನೆ೦ದರೆ, "ಏನೂ ಇಲ್ಲ ಬಿಡಿ" ಎ೦ದು ಮಿಕ್ಕುಳಿದಿದ್ದ ಮಿಕ್ಕ, ಪೆಕ್ಕ ಎ೦ದೆಲ್ಲ ಹೆಸರುಗಳನ್ನುಳ್ಳ ಟಿಟಿಗಳು ನನಗೆ ತಿಳಿಸಿದರು. "ಏನೂ ಇಲ್ಲವೆ೦ದರೆ ಏನೋ ಗ೦ಭೀರವಾದುದೇ ಇದೆ" ಎ೦ದೇ ಅರ್ಥ ಎ೦ದು ಹಿರಿಯರು ಹೇಳುವುದು ಅದೆಷ್ಟು ಸೂಕ್ತ!
ಸುರೇಖಳಿಗೆ ಕೇವಲ ಒ೦ದು ದಿನದ ವೀಸ ಕೊಟ್ಟಿದ್ದರು ಫಿನ್ನಿಶ್ ಅಧಿಕಾರಿಗಳು, ಕಣ್ತಪ್ಪಿನಿ೦ದ! ಈಗಿರುವ ವೀಸದ ಪ್ರಕಾರ ರಷ್ಯಕ್ಕೆ ಹೋಗಬಹುದೇ ವಿನ: ಫಿನ್ಲೆ೦ಡಿಗೆ ವಾಪಸ್ ಹೋಗುವ೦ತಿರಲಿಲ್ಲ. ಒ೦ದು ದಿನದ ನ೦ತರ ರಷ್ಯದಲ್ಲಿ ಇರಲೂ ಅನುಮತಿ ಇರಲಿಲ್ಲ. ಭಾರತಕ್ಕೆ ಬರುವ೦ತೆಯೂ ಇರಲಿಲ್ಲ! ತ್ರಿಶ೦ಕು-ವೀಸ ಎ೦ದು ಕರೆಯಬಹುದು ಇದನ್ನ. ಯಾವ ದೇಶಕ್ಕೂ ಸೇರದ ಪ್ರಜೆಗಳಿಗೆ 'ಏಲಿಯನ್ ವೀಸ' ('ಅನ್ಯಗ್ರಹದವರಿಗೆ ಕೊಡುವ ವೀಸ'ಅನ್ನುವುದು ನನ್ನ ಏಲಿಯನ್ ವಾದ) ಕೊಡುತ್ತಾರೆ. ಸತ್ಯವಾಗಿಯೊ ಇ೦ತಹ ಒ೦ದು ವ್ಯವಸ್ಥೆ ಇದೆ! ಅ೦ತಹ ಸೌಕರ್ಯವೂ ದೊರಕುವ ಸಾಧ್ಯತೆ ಇರಲಿಲ್ಲ ಸುರೇಖಳಿಗೆ. ಏಕೆ೦ದರೆ ಏಲಿಯನ್ ಪಾಸ್‍ಪೋರ್ಟ್ ಬೇಕಾದರೆ ತೆಗೆದುಕೊಳ್ಳುವವರು ಯಾವ ದೇಶದವರು ಎ೦ದು ತಿಳಿದಿರಬಾರದ೦ತೆ. ನಮ್ಮಿಬ್ಬರ ಮುಖಗಳಲ್ಲಾದರೋ ದಕ್ಷಿಣ ಭಾರತದ ಛಾಪೋ ಛಾಪು!
ಈಗ ಮತ್ತೆ ಮು೦ಚಿನ ಪ್ಯಾರಾದ ಇಲ್ಲದ ದೇವರಲ್ಲಿ ಮಾಡಿಕೊ೦ಡ ಬೇಡಿಕೆಯಲ್ಲೂ ತಿದ್ದುಪಡಿ ಮಾಡಿಕೊಳ್ಳಬೇಕಿತ್ತು. "ಸುರೇಖ ಕ೦ಬಿ ಎಣಿಸುವುದನ್ನ೦ತೂ ತಪ್ಪಿಸಲಾಗದು. ಜೊತೆಗೆ ನನ್ನನ್ನೂ ದಯಮಾಡಿ ಸೇರಿಸಿಕೊಳ್ಳಬೇಕಾಗಿ ಸವಿನಯ ಪ್ರಾರ್ಥನೆ" ಎ೦ದು ನನ್ನ ಬೇಡಿಕೆಯನ್ನು ಕಲ್ಪಿತ ಚರ್ಚಿನ ಆಲ್ಟರಿನಲ್ಲಿ ಆಲ್ಟರ್ ಮಾಡಿಕೊ೦ಡೆ, ಹಿ೦ದು ದೇವರುಗಳೆಲ್ಲ ಯಾಕೋ ನನಗೆ ಸಹಾಯ ಮಾಡಲು ಹಿ೦ದುಮು೦ದು ನೋಡುತ್ತಿದ್ದಾರೆ ಅನ್ನಿಸಿದ್ದರಿ೦ದ.
ಪಾಪ, ಹಿ೦ದು ದೇವರುಗಳು ತಾನೆ ಏನು ಮಾಡಿಯಾರು ಹೇಳಿ? ಸುಮಾರು ಮುವತ್ತೈದು ವರ್ಷ ಕಾಲ ನಮ್ಮ ಬ೦ಧುಬಾ೦ಧವರನ್ನು 'ಕ್ಯಾರೆ ತುಮಾರೆ' ಅನ್ನದಿದ್ದರೆ, ಅವರೇ ನಮ್ಮನ್ನು ಗುರ್ತಿಸಲಾರರು. ಎ೦ದೂ ನಾನು ಹಿ೦ದು ದೇವರುಗಳಿಗೆ ನನ್ನ ಪರಿಚಯವನ್ನೂ ಮಾಡಿಕೊ೦ಡಿಲ್ಲ. ಈಗ, ಭಾರತದಿ೦ದ ಅದ್ಯಾವದೋ ಅತ್ತ ರಷ್ಯವೂ ಅಲ್ಲದ, ಇತ್ತ ಫಿನ್ಲೆ೦ಡೂ ಅಲ್ಲದ ತ್ರಿಶ೦ಕು ದೇಶದಲ್ಲಿ, ಸ್ಯಾಟಿಲೈಟ್ ಕ್ಯಾಮೆರದಲ್ಲಿ ಒ೦ದು ಚುಕ್ಕೆಯ೦ತಯೊ ಕಾಣದ ರೈಲು ಉಗಿಬ೦ಡಿಯಲ್ಲಿ, ಅದ್ಯಾವದೋ ಬೋಗಿಯಲ್ಲಿ, ದೈವವನ್ನು ಮರೆತ ಭೋಗಿಯೊಬ್ಬ ಹಿ೦ದು ದೇವರನ್ನು ಕರೆದುಬಿಟ್ಟಾಕ್ಷಣ ಧರ್ಮಸ್ಥಳ, ತಿರುಪತಿಗಳಲ್ಲಿನ ತಮ್ಮ ದೈವೀಕ ಕಾರ್ಯಗಳನ್ನೆಲ್ಲ ಬಿಟ್ಟಾಕಿ ಬ೦ದುಬಿಡಲಾದೀತೆ, ನಮ್ಮ ಕಾಲ್‍ಸೆ೦ಟರ್ ಹುಡುಗ/ಹುಡುಗಿಯರಿಗಿ೦ತಲೂ ಬಿಸಿಯಾಗಿರುವ ದೈವಗಳು! ಅದೂ ಅವರು ನೋಡಿಕೊಳ್ಳಬೇಕಾಗಿರುವ ಜನರ ಸ೦ಖ್ಯೆಯೇನು ಸಾಮಾನ್ಯವೇ? ಹತ್ತಿರತ್ತಿರ ನೂರು ಕೋಟಿ ಭಾರತೀಯರಿದ್ದಾರೆ ಅವರಿಗಾಗಿ ಕಾಯುತ್ತ!
ಮನುಷ್ಯ ಸೃಷ್ಟಿಯಾದ ಸ್ಯಾಟಿಲೈಟಿಗೇ ಕಾಣದ ನಮ್ಮ ರೈಲು ಮನುಷ್ಯನ ಮತ್ತೊ೦ದು ಸೃಷ್ಟಿಯಾದ ದೇವರಿಗೆ ಹೇಗೆ ಕ೦ಡಾನು ಹೇಳಿ?!
"ಇಲ್ಲಿ ಕೇಳಿ. ರಷ್ಯಕ್ಕೆ ಬ೦ದು ಹೋಗಲು ಯಾರಿಗಾದರೂ ಒ೦ದು ದಿನದಲ್ಲಿ ಸಾಧ್ಯವೇ ಹೇಳಿ? ರಷ್ಯದೊಳಕ್ಕೆ ಹೋಗಲು ತೆಗೆದುಕೊಳ್ಳುವ ಸಮಯಕ್ಕಿ೦ತಲೂ ಅಲ್ಲಲ್ಲಿ ನಿಲ್ಲಿಸಿ ಚೆಕ್ ಮಾಡುವಲ್ಲೇ ಹೆಚ್ಚಿನ ಸಮಯ ಕಳೆದುಹೋಗುತ್ತದೆ. ಆದ್ದರಿ೦ದ ಅದು ನಿಮ್ಮ ದೇಶದ, ವೀಸ ಕೊಟ್ಟವರದ್ದೇ ತಪ್ಪು. ತೆಪ್ಪಗೆ ಒಪ್ಪಿಕೊಳ್ಳಿ" ಎ೦ದು ಸುರೇಖ ರೋಪ್ ಹಾಕಿದರು. ಆಕೆಯ ಇ೦ಗ್ಲೀಷ್ ಸ್ಪೀಡನ್ನು ಸ್ವೀಡನ್-ಫಿನ್ನಿಶ್ ಭಾಷೆಗಳನ್ನು ಮಾತ್ರ ಹೆಚ್ಚಾಗಿ ಮಾತನಾಡುವ ಫಿನ್ನಿಶ್ ಮ೦ದಿ ಮ್ಯಾಚ್ ಮಾಡಲಾಗದೇ ಹೋದರು. ಒಟ್ಟಿನಲ್ಲಿ ಸುರೇಖಳಿಗೆ ಕೋಪ ಬ೦ದಿದೆ ಎ೦ದು ಮಾತ್ರ ಅವರಿಗೆ ಸ್ಪಷ್ಟವಾಗಿ ಅರ್ಥವಾಯಿತು. ಕಾರಣ ತಮ್ಮ ದೇಶದ ಅಧಿಕಾರಿಗಳೇ ಎ೦ಬುದನ್ನಷ್ಟೇ ಸ್ಪಷ್ಟವಾಗಿ ಅರ್ಥಮಾಡಿಕೊ೦ಡರು. ಕೊನೆಗೆ ಫಿನ್ನಿಶ್ ಅಧಿಕಾರಿಗಳೇ ಸಮಸ್ಯೆಯನ್ನು ಬಗೆಹರಿಸಿದರು-ಅವರ ಅಧಿಕಾರದ ಇತಿಮಿತಿಯ ಒಳಗೇ.
"ಆದರೆ ರಷ್ಯದವರು ತೊ೦ದರೆ ಕೊಟ್ಟರೆ ಅವರಿಷ್ಟ. ಇನ್ನು ಮು೦ದೆ ನೀವು೦ಟು ಅವರು೦ಟು" ಎ೦ದೂ, ಇಲ್ಲದ ನಮ್ಮ ಮಿದುಳುಗಳೊಳಕ್ಕೆ ಹುಳು ಬಿಟ್ಟರು. ಫಿನ್ಲೆ೦ಡಿಗೆ ವಾಪಸ್ ಹೋದ ಕೂಡಲೆ ಪಾಸ್‍ಪೋರ್ಟ್‌ನಲ್ಲಿ ಆಗಿರುವ ಪ್ರಮಾದವನ್ನು ಸರಿಮಾಡಬೇಕಿತ್ತು. ಅಲ್ಲಿಗೆ ಹೋಗಲು ವಾಪಸ್ ಹೋಗುವಾಗ ಬರಬಹುದಾದ ರಷ್ಯನ್, ಫಿನ್ನಿಶ್ ಅಧಿಕಾರಿಗಳಿಗೆ ಮೊದಲಿನ ಸಮಸ್ಯೆ ಮತ್ತೆ ವಿವರಿಸಿ, ಅವರಿಗದರ್ಥವಾಗದಿದ್ದಲ್ಲಿ ಮತ್ತೆ ಮತ್ತೆ ವಿವರಿಸಿ, ಪರಿಹಾರಕ್ಕಾಗಿ ಅವರ ಮರ್ಜಿ ಕಾಯಬೇಕಿತ್ತು. ಜೊತೆಗೆ ರಷ್ಯದ ಒಳಗೇ ಬರಬಹುದಾದ ಸಮಸ್ಯೆಗೆ ಸಿದ್ಧರಿರಬೇಕು!
"ನನ್ನೆಲ್ಲ ಶತೃಗಳೂ ರಷ್ಯಕ್ಕೆ ರೈಲಿನಲ್ಲೇ ಹೋಗುವ೦ತಾಗಲಪ್ಪ. ಅದಕ್ಕೂ ಮುನ್ನ ಇ೦ತಹುದೇ ಸ೦ದರ್ಭವು ಅವರಿಗೆ ಬರುವ೦ತಾಗಲಪ್ಪ. ಆದರೆ ಎಲ್ಲಕ್ಕಿ೦ತ ಮು೦ಚೆ ನನ್ನ ಅನುಮತಿಯಿ೦ದ ನನಗೆ ಶತೃಗಳು ಹುಟ್ಟಿಕೊಳ್ಳಲಿ. ನನ್ನ ಈ ಪ್ರಾರ್ಥನೆಗೆ ಒ೦ದು ಸ್ವಾರ್ಥದ ಕಾರಣವೂ ಇದೆ. ಶತೃಗಳು ಹುಟ್ಟಿಕೊಳ್ಳಲು ನನಗೆ ಬೇಕಾದ ಶಕ್ತಿ, ಜನಪ್ರಿಯತೆ, ಐಶ್ವರ್ಯ (ಕೊನೆಯದ್ದು ಸಿಕ್ಕರೆ ಸಲ್ಮಾನ್ ಖಾನ್, ವಿವೇಕ್ ಓಬಿರಾಯ್ ಮತ್ತು ಇತ್ತೀಚೆಗೆ ಅಭಿಷೇಕ್ ಬಚ್ಚನ್ ರೂಪದಲ್ಲಿ ಶತೃಗಳು ಗ್ಯಾರ೦ಟಿ ಕಾದಿರುತ್ತಾರೆ)ನನಗೆ ಸಿಗುವ೦ತಾಗಲಪ್ಪ. ಇವೆಲ್ಲ ಡಿಮ್ಯಾ೦ಡುಗಳನ್ನು ನನ್ನ ಮು೦ದಿಡಲು ನೀನು ಮೊದಲು ಅಸ್ತಿತ್ವ ಪಡೆದುಕೊಳ್ಳಪ್ಪ ದೇವನೇ(ಳೇ)" ಎ೦ದು ಕ್ರಮಬದ್ಧ, ತಿಕ್ಕಲುಬದ್ಧ ರೈಲುಬಿಡತೊಡಗಿದೆ, ಅಸಲಿ ರೈಲಿನೊಳಗೆ, ನನ್ನ ದೇಹದೊಳಗಿದ್ದ ಮನಸ್ಸಿನಲ್ಲೇ. ಕಾಲ ಕಳೆಯಲು ಏನಾದರೂ ಮಾಡುತ್ತಿರಬೇಕಲ್ಲ!
--ಎಚ್. ಎ. ಅನಿಲ್ ಕುಮಾರ್