ಈ ಅಲೆವ ಮನಕೆ ನಿನ್ನ ನೆನಪು ಅತಿಯಾಗಿದೆ......!!!
ಯಾಕೆ ಹೀಗಾಗ್ತಿದೆ ಅಂತ ನಿಜಕ್ಕೂ ಗೊತ್ತಾಗ್ತಿಲ್ಲ. ನನಗೇ ಗೊತ್ತಿಲ್ಲದೆ, ಇವತ್ತು ತುಂಬಾ ನೆನಪಾಗ್ತಾಯಿದ್ದೀಯ ನೀನು. ನಿನ್ನ ನೆನಪಿನ ಜೊತೆಗೇ, ನಾವಿಬ್ಬರೂ ಭೇಟಿಯಾಗ್ತಾ ಇದ್ದ ಆ ಸ್ಕೂಲಿನ ಹಿಂದಿನ ಬೀದಿ, ನಿನಗೋಸ್ಕರ ನಾನು ಕಾಯ್ತಿರ್ತಿದ್ದ ಆ ಬಸ್ ಸ್ಟಾಪ್, ಇಬ್ಬರು ಇಷ್ಟಪಡುತ್ತಿದ್ದ ಆ ಪಾನಿಪುರಿ ಅಂಗಡಿ, ಮಳೇಲಿ ಒಂದೇ ಕೊಡೆಯಡಿ ಇಬ್ಬರೂ ನಡೆದುಹೋದಂತ ಘಳಿಗೆ, ಹೀಗೆ ಇವೆಲ್ಲ ಒಂದರ ಹಿಂದೆ ಒಂದು ಬಿಡದೆ ನನ್ನ ತುಂಬಾ ಗಾಢವಾಗಿ ನನ್ನನ್ನು ಕಾಡುತ್ತಿವೆ ಕಣೇ. ಕಾರಣವೇನು ಅಂತ ಖಂಡಿತ ನಾನು ಹುಡುಕೋ ಪ್ರಯತ್ನ ಕೂಡ ಮಾಡೊಲ್ಲ. ಯಾಕೆಂದರೆ, ಅದು ನೀನು ನನಗೆ ಹೇಳಿಕೊಟ್ಟಿರುವ ಪಾಠ.ಜೀವನದಲ್ಲಿ ನಡೆಯೊ ಘಟನೆಗಳಿಗೆ ಕಾರಣ ಹುಡುಕಬಾರದು. ಎಲ್ಲ, ಪರಿಸ್ಥಿತಿಗಳಿಗೆ ತಕ್ಕಂತೆ ನಡೆಯುತ್ತೆ. ಅದಕ್ಕೆ ಹೊಂದಿಕೊಂಡು ಹೋಗಬೇಕಾಗಿರುವುದೇ ಈ ಜೀವನ." ಅಂಥ ನನಗೆ ಹೇಳಿಕೊಟ್ಟವಳೇ ನೀನು. ಅದನ್ನು ಅರ್ಥಮಾಡಿಸೋಕೆ ಅಂಥಲೇ ಏನೋ, ಹೇಳದೆ, ಕೇಳದೆ, ಯಾವುದೇ ಕಾರಣವಿಲ್ಲದೆ ನನ್ನ ಜೀವನದಿಂದ ಹೊರಟುಹೋದವಳು ನೀನು......!!!!
ಹೀಗೆ ದಿಢೀರನೆ, ನೀನು ನನ್ನ ಬಾಳಿನಿಂದ ಎದ್ದು ಹೊರಟು ಹೋಗಿ ಇವತ್ತಿಗೆ ಹತ್ತಿರ ಹತ್ತಿರ ನಾಲ್ಕು ವರುಷಗಳೇ ಕಳಿದಿವೆ. ಕಾಲ ಎಂಥ ಕಣ್ಣೀರನ್ನು ಬತ್ತಿಸುತ್ತದೆ. ಮನಸ್ಸನ್ನು ಕಲ್ಲು ಮಾಡಿಸುತ್ತದೆ. ಬದುಕನ್ನು ಸಹನೀಯಗೊಳಿಸುತ್ತದೆ. ಆದರೆ, ನೆನಪುಗಳು....?! ಇಲ್ಲ, ಅವುಗಳಿಗೆ ಸಾವಿಲ್ಲ. ... ನನಗೀಗಲೂ ನೆನಪಿದೆ, ಅವತ್ತು ನಿನಗೋಸ್ಕರ ಅದೇ ಬಸ್ ಸ್ಟಾಪ್ ನಲ್ಲಿ ನಾನು ಕಾಯ್ತಾ ಇದ್ದೆ. ಏನೊ ಗಡಿಬಿಡಿಯಲ್ಲಿ ಬಂದ ನೀನು, "ಟೈಮ್ ಆಯ್ತು ಕಣೋ, ಅಮ್ಮ ಕಾಯ್ತಿರ್ತಾರೆ. ನಾನು ಬರ್ತೀನಿ.." ಎಂದು ಹೇಳಿ, ನನಗೆ ಗೊತ್ತಿಲ್ಲದ ಹುಡುಗನ ಜೊತೆ ಬೈಕಿನಲ್ಲಿ ಹೊರಟುಹೋದೆ.....ಒಮ್ಮೆಯೂ ಹಿಂದುರಿಗಿ ನೋಡದೆ.
ಅದೇ ನಮ್ಮ ಕೊನೆ ಭೇಟಿಯಂತ ನನಗೆ ಗೊತ್ತಿದ್ದರೆ, ಖಂಡಿತ ನಾನು ನಿನ್ನನ್ನು ಕಳುಹಿಸಿಕೊಡುತ್ತಿರಲಿಲ್ಲ. ಆದರೆ, ನೀನು ನಿರ್ಧಾರ ಮಾಡಿಯಾಗಿತ್ತ..?! ಅದೇ ನಮ್ಮ ಕೊನೆ ಭೇಟಿಯಂತ ನಿನಗೆ ಗೊತ್ತಿತ್ತ..?! ಕೇಳೋಣವೆಂದರೆ, ಇದುವರೆಗೂ ನೀನು ನನಗೆ ಸಿಕ್ಕಿಲ್ಲ.....
ಇವತ್ತಿಗೂ ನಿನ್ನ ಹುಡುಕಾಟ ನಿರಂತರವಾಗಿದೆ. ನಾನು ಹೋದಲ್ಲಿ, ಪ್ರತಿ ಜಾಗದಲ್ಲಿಯೂ ನಿನ್ನನ್ನು ಹುಡುಕುತ್ತಾ ಇದ್ದೀನಿ. ಒಂದು ಸುಳಿವೂ ಸಹ ಬಿಡದೆ ಹೋಗಿರುವ ನಿನ್ನ ಬಗ್ಗೆ ಸಹಜವಾದ ಕೋಪ ಹಾಗು ವಿಚಿತ್ರವಾದ ಮೆಚ್ಚುಗೆ ಎರಡೂ ಸಹ ಇದೆ.
ಮುಂದೊಂದು ದಿನ ನೂರಾರು ಜನರ ನಡುವೆ, ನಿನ್ನ ಹುಡುಕಾಟದಲ್ಲಿರುವ ನನ್ನೇನಾದರು ನೀನು ನೋಡಿದರೆ ಖಂಡಿತ ಮಾತಾಡಿಸ್ತೀಯ ಅಲ್ವ...?! ಹೇಗಿದ್ದೀಯೊ ? ಈಗೇನು ಮಾಡಿಕೊಂಡಿದ್ದೀಯ ?! " ಅಂತ ಕೇಳ್ತೀಯ ತಾನೆ...
ನೀನು ಹೋದ ದಿನದಿಂದ, ನಡುಬೀದಿಯಲ್ಲಿ ದಿಕ್ಕುತಪ್ಪಿದ ಮಗುವಿನಂತಾಗಿದೆ ನನ್ನ ಬದುಕು..ಪೂರ್ತಿಯಾಗದ ಕನಸುಗಳು, ಅರ್ಧ ಬರೆದ ಕವಿತೆಗಳು, ಜೊತೆಯೇ ಇರದ ಹಾಡುಗಳು..ಆದರೆ, ಇಂದಿಗೂ ನನ್ನ ಉಸಿರಿನೊಂದಿಗೆ ಬೆರೆತಿರುವ ನಿನ್ನ ನೆನಪುಗಳೇ ನನ್ನ ಬದುಕಿನ ಚೈತನ್ಯವಾಗಿದೆ.
ನಿನಗೆ ನೆನಪಿರಬಹುದು, ನೀನು ಹೇಳುತ್ತಿದ್ದೆ.."ಬದುಕಿರೋವಾಗ, ನಾವು ಇದ್ದೂ ಇರದಹಾಗೆ ಇರಬೇಕು. ಸತ್ತಾಗ, ಇಲ್ಲದಿದ್ದರೂ ಇರೋಹಾಗೆ ಇರಬೇಕು." ಅಂತ. ಆದರೆ, ನನ್ನ ಮನಸ್ಸು ಮಾತ್ರ ನಿನ್ನನ್ನು ಮರೆತರೂ ಮರೆಯದಹಾಗೆ ಜೋಪಾನ ಮಾಡಿದೆ. ಅದೇ ಕಾರಣಕ್ಕೆ, ಇವತ್ತು ನಿನ್ನ ಜನುಮದಿನ ಅಂತ ನೆನಪಾಗಿ, ಮನದ ಮಾತುಗಳಿಗೆಲ್ಲ ಈ ಅಕ್ಷರದ ರೂಪಕೊಟ್ಟಿದೆ, ಈ ನನ್ನ ಏಕಾಂಗಿ ಮನಸ್ಸು.
ಪ್ರೀತಿಯ, ನಲ್ಮೆಯ ಗೆಳತಿಗೆ ಜನುಮದಿನದ ಹಾರ್ದಿಕ ಶುಭಾಷಯಗಳು... :-)
ನೀನಿಲ್ಲದ ಬಾಳಗೀತೆಯಲಿ,
ತಪ್ಪಿದೆ ಶ್ತುತಿಯು,
ಮರೆತಿದೆ ಪದವು,
ಕಾಡುವ ನಿನ್ನದೇ ನೆನಪಿನಲಿ...
ಆದರೂ,
ಬಯಸಿಹೆ ನಿನ್ನಯ ಕ್ಷೇಮವ,
ನಿನ್ನದೆ ಸುಂದರ ಬಾಳಿನಲಿ..
---- ಇಂತಿ ನಿನ್ನ ಪ್ರೀತಿಯ..
???