ಏನಾಗಿದೆ ಇವರಿಗೆ? ಇಷ್ಟೇನಾ ಇವರು ಓದಿದ್ದು,,,!!

ಏನಾಗಿದೆ ಇವರಿಗೆ? ಇಷ್ಟೇನಾ ಇವರು ಓದಿದ್ದು,,,!!

ಬರಹ

ಏನಾಗಿದೆ ಇವರಿಗೆ?  ಇಷ್ಟೇನಾ ಇವರು ಓದಿದ್ದು, ಇಷ್ಟೇನಾ ಇವರು ಜೀವನವನ್ನು ಅರ್ಥ ಮಾಡಿಕೊಂಡಿದ್ದು?  ಎರಡು ದಿನಗಳಲ್ಲಿ ಇಬ್ಬರು ಸಾಫ್ಟ್ವೇರ್ ಇಂಜಿನಿಯರಗಳ ಆತ್ಮಹತ್ಯೆ, ಅದೂ ವಿಪ್ರೋ ಸಂಸ್ಥೆಯಲ್ಲಿ!  http://in.news.yahoo.com/20/20100119/1416/tnl-another-techie-at-wipro-technologies.html  ಈ ಆತ್ಮಹತ್ಯೆಗಳ ಸುದ್ಧಿ ನನ್ನನ್ನು ಇಂದು ಬಹುವಾಗಿ ಕಾಡಿತು.  ಮನಸ್ಸು ಸುಮಾರು ಒಂಭತ್ತು ವರ್ಷಗಳ ಹಿಂದಕ್ಕೋಡಿತು.  ಐಟಿ ಕಂಪನಿಗಳೊಂದಿಗಿನ ನನ್ನ ಒಡನಾಟ ಶುರುವಾಗಿದ್ದು ೧೯೯೪ರಲ್ಲಿ, ಮಹಾತ್ಮ ಗಾಂಧಿ ರಸ್ತೆಯ ತಿರುವಿನಲ್ಲಿದ್ದ ಬ್ರಂಟನ್ ರಸ್ತೆಯ C-DAC, "ಸೆಂಟರ್ ಫಾರ್ ಡೆವೆಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್"ನಿಂದ.  ಅಲ್ಲಿಂದೀಚೆಗೆ ಮೈಕ್ರೋಲ್ಯಾಂಡ್, ಸಿಸ್ಕೋ ಸಿಸ್ಟಮ್ಸ್, ಹೆಚ್ಪಿ, ಐಬಿಎಮ್, ಎಲ್ಜಿ, ಸೀಮೆನ್ಸ್, ಅಲ್ಲದೆ ಪ್ರಖ್ಯಾತ ಕಾಲ್ ಸೆಂಟರ್ಗಳಾದ ಫಿಲಿಪ್ಸ್ ಹಾಗೂ ಜೇಪಿ ಮೋರ್ಗಾನಗಳಲ್ಲಿ ಭದ್ರತಾ ವಿಭಾಗದಲ್ಲಿ ಕೆಲಸ ಮಾಡಿದ್ದೆ.  ಈ "ಟೆಕ್ಕಿ"ಗಳನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ, ಅವರ ಏಳುಬೀಳುಗಳ ಜೊತೆಯಲ್ಲಿ ಹಲವಾರು ಬಾರಿ ಪಾಲುದಾರನಾಗಿದ್ದೇನೆ. ಆದರೆ ಮನಸ್ಸಿಗೆ ತುಂಬಾ ಹತ್ತಿರವಾಗಿ ನೆನಪಿನಲ್ಲುಳಿದಿದ್ದು ಈ ವಿಪ್ರೋ ಟೆಕ್ನಾಲಜೀಸ್.  

ನಾನಾಗ ವಿಪ್ರೋ ಟೆಕ್ನಾಲಜೀಸ್ ನ ಮಹಾತ್ಮ ಗಾಂಧಿ ರಸ್ತೆಯ ಶಾಖೆಯಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿದ್ದೆ.  ನಮ್ಮ ಉದ್ಯಾನ ನಗರಿಯ ಕೇಂದ್ರ ಭಾಗದಲ್ಲಿದ್ದ ಆ ಕಛೇರಿಯಲ್ಲಿ ವಿಪ್ರೋ ಟೆಕ್ನಾಲಜೀಸ್ ನ ವಿವಿಧ ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನೇಮಕಾತಿಗಳು ನಡೆಯುತ್ತಿದ್ದವು.  ಹಾಗೆ ವಿಶೇಷ ನೇಮಕಾತಿಗಳು ನಡೆಯುವಾಗ ಆಯಾಯ ವಿಷಯಗಳಿಗೆ, ವಿದೇಶಗಳಲ್ಲಿ ನಡೆಯುತ್ತಿದ್ದ ಪ್ರಾಜೆಕ್ಟುಗಳಿಗೆ ಸಂಬಂಧಿಸಿದ ವ್ಯವಸ್ಥಾಪಕರು ನೇಮಕಾತಿ ಪ್ರಕ್ರಿಯೆಯಲ್ಲಿ ಖುದ್ದು ಭಾಗವಹಿಸುತ್ತಿದ್ದರು.  ಅಂದು ಕಾಲೇಜಿನಿಂದ ಸೀದಾ ಯಾವುದೇ ಅನುಭವವಿಲ್ಲದೆ ಬಂದವರನ್ನು ತಿಂಗಳಿಗೆ ಇಪ್ಪತ್ತೈದರಿಂದ ನಲವತ್ತು ಸಾವಿರ ರೂ.ಗಳವರೆಗೆ ಸಂಬಳ ಕೊಟ್ಟು ನೇಮಕಾತಿ ಮಾಡುತ್ತಿದ್ದರು.  ಈ ಹುಡುಗ/ಹುಡುಗಿಯರು ಬರುವಾಗ ತಮ್ಮ ಅಪ್ಪ, ಅಮ್ಮ, ಅಣ್ಣ, ಅಥವಾ ಬೇರಾರೋ ಹಿರಿಯರೊಂದಿಗೆ ಏನೂ ತಿಳಿಯದ ಮುಗ್ಧರಂತೆ ಬಂದು ಸೇರಿಕೊಳ್ಳುತ್ತಿದ್ದವರು, ಕೆಲವೇ ದಿನಗಳಲ್ಲಿ ಬಹುರೂಪಿಗಳಾಗಿ ಬದಲಾಗುತ್ತಿದ್ದರು.  ಟೆರೇಸಿನ ಮೇಲಿದ್ದ ಕ್ಯಾಂಟೀನಿನ ಮೇಲೆ ಕಾಫಿ ಕುಡಿಯಲು ಹೋದರೆ, ಊಟಕ್ಕೆ ಅಂತ ಹೋದರೆ ಮತ್ತೆ ಅವರು ಬರುತ್ತಿದ್ದುದು ಕೆಲವು ಘಂಟೆಗಳ ನಂತರವೇ!  ಕೆಲವೊಮ್ಮೆ ಅವರ ಪ್ರಾಜೆಕ್ಟ್ ಮೇನೇಜರ್ ಅವರನ್ನು ಹುಡುಕಿಕೊಂಡು ಬರುತ್ತಿದ್ದರು.  ಬ್ರಿಗೇಡ್ ರಸ್ತೆ, ಚರ್ಚ್ ರಸ್ತೆಯ ಅದೆಷ್ಟೋ ಹೋಟೆಲ್ಲುಗಳಲ್ಲಿ, ಪಬ್ಬುಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಇದ್ದಕ್ಕಿದ್ದಂತೆ ಕೈಗೆ ಸಿಗದಂತೆ ಮಂಗಮಾಯವಾಗಿ ಬಿಡುತ್ತಿದ್ದರು!

ಈ ಎರಡು ಆತ್ಮಹತ್ಯೆಗಳ ಸುದ್ಧಿ ಓದಿ ನನಗೆ ಈ ಪ್ರಸಂಗ ನೆನಪಾಯಿತು.  ಹೀಗೆ ನೇಮಕಾತಿಯಾಗುತ್ತಿದ್ದಾಗ ಒಮ್ಮೆ ಬಂದವಳು ದುಂಡು ಮುಖದ, ಎತ್ತರದ ನಿಲುವಿನ, ಮುಗ್ಧ ನಗುವಿನ ಸ್ನಿಗ್ಧ ಮುಖದ ಪಂಜಾಬಿ ಚೆಲುವೆ, ಬೆಂಗಳೂರಿನಲ್ಲೇ ಓದಿದ್ದರಿಂದ ನಿರರ್ಗಳವಾಗಿ ಕನ್ನಡ ಮಾತಾಡುತ್ತಿದ್ದಳು.  ಬಂದ ಕೆಲ ದಿನಗಳಲ್ಲೇ ಎಲ್ಲರ ಜೊತೆ ಹೊಂದಿಕೊಂಡು, ಸ್ನೇಹಮಯಿಯಾಗಿ, ಎಲ್ಲರಿಗೂ ತುಂಬಾ ನೆಚ್ಚಿನವಳಾಗಿ ಬಿಟ್ಟಿದ್ದಳು.  ಅವಳ ಸ್ನೇಹಕ್ಕಾಗಿ ಬಹುಶ: ಅಂದು ಅಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬರೂ ಹಾತೊರೆಯುತ್ತಿದ್ದರು.  ಅಂಥಾ ಸುಂದರಿ ಒಬ್ಬನ ಪ್ರೇಮ ಪಾಶದಲ್ಲಿ ಬಿದ್ದು, ಪಾರ್ಕು, ಸಿನಿಮಾ, ಅಲ್ಲಿ ಇಲ್ಲಿ ಅಂತ ಸುತ್ತಿ ಕೊನೆಗದು ಎಲ್ಲರಿಗೂ ಗೊತ್ತಾಗಿ, ಆ ಮಹಾಶಯ ಅವಳಿಗೆ ಕೈ ಕೊಟ್ಟು, ಅವಳೂ ಆತ್ಮಹತ್ಯೆಗೆ ಮುಂದಾಗಿದ್ದಳು.  ಎಲ್ಲಿಂದ ಗೊತ್ತೇ?  ಅದೇ ಮಹಾತ್ಮ ಗಾಂಧಿ ರಸ್ತೆಯ ಬಾರ್ಟನ್ ಸೆಂಟರ್ನ ಹನ್ನೆರಡನೆಯ ಮಹಡಿಯಲ್ಲಿದ್ದ ’ಐವರಿ ಟವರ್’ ಹೋಟೆಲಿನ ಬಾಲ್ಕನಿಯಿಂದ!  ಅಂದು ಪುಣ್ಯಕ್ಕೆ ಅಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಹಳೆಯ ಗೆಳೆಯನೊಬ್ಬನನ್ನು ನೋಡಲು ಹೋಗಿದ್ದೆ, ಸಂಜೆ ಅದಾಗಲೇ ಎಂಟು ಘಂಟೆಯಾಗಿತ್ತು, ಈ ಪಂಜಾಬಿ ಸುಂದರಿ, ಒಂದು ರೂಮಿನಿಂದ ಹೊರಬಂದು ಟಾಯ್ಲೆಟ್ಟಿನ ಒಳ ಹೋಗಿ ಹೊರಬಂದು, ಅತ್ತಿತ್ತ ನೋಡಿ ನಿಧಾನವಾಗಿ ಆ ಬಾಲ್ಕನಿಯ ಕಟ್ಟೆ ಹತ್ತಲು ಕಾಲಿಟ್ಟಳು.  ಒಡನೆಯೇ ಮಿಂಚಿನ ವೇಗದಲ್ಲಿ ಓಡಿದ ನನ್ನ ಗೆಳೆಯ ಆ ಸುಂದರಿಯನ್ನು ತನ್ನ ಎರಡೂ ಕೈಗಳಿಂದ ಹಿಡಿದೆಳೆದು ಮಗುವಿನಂತೆ ಎತ್ತಿಕೊಂಡು ಭದ್ರತಾ ಕಚೇರಿಯ ಸನಿಹಕ್ಕೆ ತಂದಿಳಿಸಿದ.  ಅಲ್ಲಿ ನನ್ನನ್ನು ಆ ಸಮಯದಲ್ಲಿ ಕಂಡ ಅವಳು ಕಕ್ಕಾಬಿಕ್ಕಿಯಾದಳು.  ಗೊಳೋ ಎಂದು ಮುಖ ಮುಚ್ಚಿಕೊಂಡು ಅಳತೊಡಗಿದಳು.  ಏನು ಮಾಡಬೇಕೆಂದು ತೋಚದೆ, ಕೊನೆಗೆ ಅವಳನ್ನು ಆದಷ್ಟು ಸಾಂತ್ವನಗೊಳಿಸಿ, ಈ ರೀತಿ ನಡೆದುಕೊಳ್ಳಲು ಕಾರಣವೇನೆಂದು ಕೇಳಿದರೆ ಅದೇ, "ಪ್ರೇಮ ವೈಫಲ್ಯ".  ಅವಳಿಗೆ ಸಾಕಷ್ಟು ತಿಳಿ ಹೇಳಿ, 'ಈ ಹುಚ್ಚಾಟವನ್ನು ಬಿಟ್ಟು ನಿನ್ನ ಪಾಲಕರ ಶ್ರಮವನ್ನು ವ್ಯರ್ಥ ಮಾಡದೆ, ಅವರಿಗೂ ನಿನಗೆ ಸಾಕಷ್ಟು ಕೊಟ್ಟ ಸಮಾಜಕ್ಕೂ ನೀನು ವಾಪಸ್ ಕೊಡಬೇಕಿರುವುದು ತುಂಬಾ ಇದೆ, ಅದನ್ನರಿತು ಬಾಳುವುದು ನಿನಗೊಳ್ಳೆಯದು’ ಎಂದು ತಿಳಿ ಹೇಳಿದಾಗ, ಮುಗ್ಧ ಮಗುವಿನಂತೆ ಹೂಗುಟ್ಟಿ, ತನ್ನ ಒಡಹುಟ್ಟಿದ ಅಣ್ಣನಂತೆ ಭಾವಿಸಿ, ನನ್ನ ಭುಜದ ಮೇಲೆ ತಲೆಯಿಟ್ಟು ಕಂಬನಿ ಸುರಿಸಿ, ನನಗೆ ವಂದಿಸಿ ಹೋದ ಹುಡುಗಿ, ಮುಂದೆ ಕೆಲವೇ ದಿನಗಳಲ್ಲಿ ತನ್ನ ಪ್ರಾಜೆಕ್ಟಿನ ಮೇಲೆ ಫಿನ್ಲೆಂಡಿಗೆ ಹಾರಿದಳು, ಮತ್ತೆ ಹಿಂತಿರುಗಿ ಬರಲಿಲ್ಲ, ಅಲ್ಲಿಯೇ ತನ್ನ ಹೊಸ ಜೀವನ ಕಟ್ಟಿದಳು.

ಏನು ಹೇಳಬೇಕೋ ಗೊತ್ತಾಗುತ್ತಿಲ್ಲ, ಪಾಲಕರು ತಮ್ಮ ಮುದ್ದಿನ ಕಣ್ಮಣಿಗಳಾಗಿ ಬೆಳೆಸಿ, ಅವರು ಕೇಳಿದ್ದನ್ನೆಲ್ಲಾ ಕೊಡಿಸಿ, ತಮ್ಮ ಹೊಟ್ಟೆ ಬಟ್ಟೆ ಕಟ್ಟಿ, ಅವರುದ್ಧಕ್ಕೂ ಹಣ ಸುರಿದು, ಇಂಜಿನಿಯರ್ ಮಾಡಿಸಿದರೆ, ಇಲ್ಲಿ ಕೆಲಸಕ್ಕೆಂದು ಬಂದು, ಯಾರೋ ಒಬ್ಬ ಗೊತ್ತಿಲ್ಲದ ಹುಡುಗ/ಹುಡುಗಿಯ ಮಾತಿಗೆ ಮರುಳಾಗಿ, ಅವರ ಹಿಂದೆ ಸುತ್ತಿ, ಕೊನೆಗೆ ನನ್ನ ಪ್ರೇಮ ವಿಫಲವಾಯಿತು ಎಂಬ ಬಹು ದೊಡ್ಡ ಕಾರಣ ನೀಡಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟರೆ ಈ ಜೀವನಕ್ಕೆ ಬೆಲೆ ಎಲ್ಲಿದೆ?  ಇಷ್ಟೇನಾ ಜೀವನ ಅಂದ್ರೆ, ಪ್ರೀತಿ ಪ್ರೇಮ ಬಿಟ್ಟರೆ ಬೇರೇನೂ ಇಲ್ಲವೇ?  ಎರಡು ಜೀವಗಳು ಸೇರಿ, ಸೃಷ್ಟಿ ಕ್ರಿಯೆ ಮುಂದುವರೆದು ಜೀವನದ ಕೊಂಡಿ ನಿಲ್ಲದಂತೆ ನಡೆಯಲು ಹೆಣ್ಣು ಗಂಡುಗಳ ಸಮ್ಮಿಲನ ಅತ್ಯವಶ್ಯಕ.  ಆದರೆ ಅದನ್ನೇ ಸರ್ವಸ್ವವೆಂದು ತಿಳಿದರೆ ಇವರು ತಾವು ಹುಟ್ಟಿ ಬೆಳೆದ ಸಮಾಜಕ್ಕೆ, ಹೊತ್ತು ಹೆತ್ತು ಸಾಕಿ ಸಲಹಿದ ಪಾಲಕರಿಗೆ ಕೊಟ್ಟಿದ್ದೇನು?  ಇವರಿಗೆ ಆ ಗುರುತರ ಜವಾಬ್ಧಾರಿಯ ಅರಿವಿಲ್ಲವೇ? ಅಥವಾ ಇಂಜಿನಿಯರ್ಗಳಾಗುವ ಹೊತ್ತಿಗೆ ನೈತಿಕವಾಗಿ ಪಾತಾಳಕ್ಕೆ ಕುಸಿದು ಹೋಗಿರುತ್ತಾರೆಯೇ? ಅಥವಾ ಇವರು ಓದುತ್ತಿರುವ ವಿದ್ಯೆಯಲ್ಲಿ ನೈತಿಕತೆಯ ಕೊರತೆಯಿದೆಯೇ?  ಮಾನವೀಯ ಮೌಲ್ಯಗಳ ಅರಿವಿಲ್ಲದೆ ಇವರ ವಿದ್ಯಾಭ್ಯಾಸವಾಗುತ್ತಿದೆಯೇ?  ಇದಕ್ಕೆ ಪರಿಹಾರವೇನು ?  ನೂರೆಂಟು ಪ್ರಶ್ನೆಗಳು, ಉತ್ತರಗಳು ಮಾತ್ರ ಸಿಗುತ್ತಿಲ್ಲ.  ಸಮಾಜಕ್ಕೆ ಭದ್ರ ಬುನಾದಿಗಳಾಗಿ, ಆಧಾರ ಸ್ತಂಭಗಳಾಗಿ ನಿಲ್ಲಬೇಕಿರುವ ವಿದ್ಯಾವಂತರ ಈ ಆತ್ಮಹತ್ಯೆಗಳು ಒಗಟಾಗಿ ಉಳಿದು ಬಿಟ್ಟಿವೆ.