ಚಿನಕುರುಳಿ

ಚಿನಕುರುಳಿ

ಬರಹ

೧) ಏನೋ ಸುಮಂತಾ ಸಿಗರೇಟ್ ಎಳೀತೀಯೇನೋ ಎಂದು ಅಪ್ಪ ಕೇಳಿದಾಗ "ಅಪ್ಪಾ ಇದೇನು ಆಫರೊ ?? ಎನ್ ಕ್ವಾಯರಿನೊ?? ಎಂದು ಪ್ರಶ್ನಿಸಿದೆ .

೨) "ಇಂಗು ತೆಂಗು ಇದ್ದರೆ ನಮ್ಮ ಶಾಂತಿ ಕೂಡ ಅಡುಗೆ ಮಾಡುತ್ತಾಳೆ" ಎಂದು ಹೇಳಿದಾಗ "ರೀ ನಾಲ್ಕು ಜನರ ಮುಂದೆ ನನ್ನನ್ನು ಹೊಗಳಬೇಡ್ರಿ" ಎಂದು ನನ್ನ ಶಾಂತಿ ನಾಚಿ ನೀರಾದಳು.

೩)ಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ "ಅನಕ್ಷರಸ್ಥರೇ ಗಮನಿಸಿ"  ಎಂದು ಅನಕ್ಷರತೆಯ ದುಷ್ಪರಿಣಾಮಗಳ ಬಗ್ಗೆ ಬರೆದ ಬ್ಯಾನರ್ ಗಳನ್ನು ತೂಗು ಹಾಕಿದರು.

೪) ಚಿನ್ನದ ಪದಕ ಪಡೆದು ಮೆರಿಟ್ ನಲ್ಲಿ ಬ್ಯಾಂಕ್ ಕೆಲಸಕ್ಕೆ ಸೇರಿಕೊಂಡ ಗ್ರಾಜುಯೇಟ್ ಗಣೇಶನು ಕ್ಯಾಶ್ ನಲ್ಲಿ ಹತ್ತು ರುಪಾಯಿಯ ವ್ಯತ್ಯಾಸ ಕಂಡು ಬಂದಾಗ ಮೊದಲು ನೂರರ ಕಂತೆ ಎಣಿಸಲು ಶುರು ಮಾಡಿದನು.

೫) ತುಂಟತನ ಮಾಡುತ್ತಿದ್ದ ವಿದ್ಯಾರ್ಥಿಯನ್ನು ನೋಡಿ ಸಿಟ್ಟುಗೊಂಡ ತರಗತಿ ಅಧ್ಯಾಪಕರು "ಸಭ್ಯರೊಂದಿಗಿರಲು ನಾಲಾಯಕ್ ನೀನು ಹೋಗು ಹೆಡ್ ಮಾಸ್ಟರ ಬಳಿಗೆ " ಎಂದು ಗುಡುಗಿದರು.

೬)ನೂರು ರುಪಾಯಿ ಕದ್ದು ಜೈಲಿಗೆ ಬಂದು ಪೊಲೀಸರಿಂದ ಸಿಕ್ಕಾಪಟ್ಟೆ ಪೆಟ್ಟು ತಿಂದ ಕಿಸೆಗಳ್ಳನು ಅಜ್ಮಲ್ ಕಸಬ್ ಆರಾಮವಾಗಿ ಬಾಸ್ಮತಿ ಅನ್ನ ಊಟ ಮಾಡುವುದನ್ನು ಕಣ್ಣಾರೆ ನೋಡಿದನು.

೭)ಹತ್ತು ಲೇಖನಗಳಿಂದ ಸ್ವಲ್ಪ ಸ್ವಲ್ಪ ಕದ್ದು , ಖುದ್ದು ಬರೆದ ಲೇಖನವೆಂದು ಪ್ರಕಟಿಸಿದ ಲೇಖನಕ್ಕೆ "ತುಂಬಾ ಚೆನ್ನಾಗಿದೆ" ಎಂದು ಆ ಹತ್ತೂ ಲೇಖಕರು ಪ್ರತಿಕ್ರಿಯಿಸಿದರು.

೮)ಪಾಪ ನನ್ನ ಮಗಳು ಸೋಮವಾರ ತವರಿಗೆ ಬಂದರೆ ನಂತರ ನಾಲ್ಕು ದಿನ ಬಿಟ್ಟು ಶುಕ್ರವಾರವೇ ತವರಿಗೆ ಬರುವುದು ಅದೇ ನನ್ನ ಗಯ್ಯಾಳಿ ಸೊಸೆ ಪ್ರತೀ ದೀಪಾವಳಿಗೆ ತವರಿಗೆ ಹೋಗುತ್ತಾಳೆ ಎಂದು ಅತ್ತೆ ತಮ್ಮ ದುಃಖ ತೋಡಿಕೊಂಡರು.

೯)ಆಗ ತಾನೇ ಉಪನಯನವಾಗಿ ಗಾಯತ್ರೀ ಮಂತ್ರ ಗೊತ್ತಿಲ್ಲ ಎಂದ ವಟುವಿಗೆ " ಯಾಕೋ ಸುಳ್ಳು ಹೇಳ್ತೀಯಾ ?? ಅಪ್ಪ ಆ ದಿನ ಕಾಲ ಮೇಲೆ ಕೂರಿಸಿಕೊಂಡು ಕಿವಿಯಲ್ಲಿ ಏನು ಹೇಳಿಕೊಟ್ಟರೋ?? " ಎಂದು ಬೈದಾಗ ಅಪ್ಪ "ನೋಡು ಈಗ ಎಲ್ಲರೂ ಉಡುಗೊರೆ ಕೊಡುತ್ತಾರೆ ಜಾಗ್ರತೆಯಿಂದ ಎಲ್ಲಾ ತೆಗೆದುಕೊಂಡು ಅಮ್ಮನ ಬಳಿ ಕೊಡು ಎಂದರು" ಎಂದು ಮಾಣಿ ಸತ್ಯ ನುಡಿದ.

೧೦)ಒಬ್ಬಳು ಹೆಂಗಸಿನ ಹಿಂದೆ ಆರು ಮಕ್ಕಳು ಇಳಿದಾಗ " ಏನಮ್ಮಾ.... ಅರ್ಧ ಮಕ್ಕಳನ್ನು ಮನೆಯಲ್ಲಿ ಕೂರಿಸಿ ಇನ್ನು ಉಳಿದವರನ್ನು ಕರೆದುಕೊಂಡು ಬರಬಾರದೆ??" ಎಂದ ಕಂಡಕ್ಟರಗೆ  "ನಾನು ಈಗ ಮಾಡಿದ್ದೂ ಅದನ್ನೇ ಎಂದು ಹೇಳಿ ಆಕೆ ಬಿರಬಿರನೆ ಮುನ್ನಡೆದಳು.

೧೧)ಕಂಪ್ಯೂಟರ್ ಕ್ಲಾಸ್ ನಿಂದ ಮನೆಗೆ ಬಂದ ಎಲ್.ಕೆ.ಜಿ ಪೋರನು ಮನೆಯಲ್ಲಿದ್ದ ಬೀಗದ ಕೈ ಇಡುವ ಕೀ ಬೋರ್ಡು, ಮೌಸು (ಇಲಿ), ವಿಂಡೋಸ್ (ಕಿಟಕಿ),ಚಿಪ್ಪು (CHIP),ಕೆಲಸದ ರಾಮ (RAM),ಸ್ಕ್ರೀನು, ಇದನ್ನೆಲ್ಲಾ ಜೋಡಿಸಿ ಕಂಪ್ಯೂಟರ್ ಮಾಡಿಕೊಡಬೇಕೆಂದು ಹಠ ಹಿಡಿದನು.

===========================ವಿಕಟಕವಿ ===================================