ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೨: ಭಾರತದ ಇನ್ನೊಬ್ಬನ್ಯಾವನ್ಯಾವನದ್ದೋ ಫಿನಿಶ್ಡ್ ಅಲ್ಲದ ಆತ್ಮಚರಿತ್ರೆಗಳು
ಹೆಲ್ಸಿ೦ಕಿಯ ಮ್ಯೊಸಿಯ೦ ಆಫ್ ಮಾಡರ್ನ್ ಆರ್ಟ್ನಲ್ಲಿ ('ಕಿಯಾಸ್ಮ') ಕಾಫಿ ಕುಡಿವುದು ಆಗಾಗ ನನ್ನ ದಿನನಿತ್ಯದ ರೂಢಿಯಾಗಿರುತ್ತಿತ್ತು. ಭಾರತದಲ್ಲಿ ನಾನು ಕಾಫಿ ಕುಡಿವುದು ಕೋಶಿಸ್‍ನಲ್ಲಿ ಮಾತ್ರ. ಕಾರಣ: ನನಗೆ ಗೊತ್ತಿಲ್ಲ! ಕಾಫಿಯ ಕ್ವಾಲಿಟಿಗೂ ನಾನಲ್ಲಿ ಅದನ್ನು ಕುಡಿವುದಕ್ಕೂ ಸ೦ಬ೦ಧವೇ ಇಲ್ಲ. ನನಗೊ೦ದು ಟೇಸ್ಟ್ ಇರುವುದರಿ೦ದ ಅಲ್ಲಿ ಕಾಫಿ ಕುಡಿಯುತ್ತೇನೆ೦ದರೆ ಆ ಕಾಫಿ ಗ್ಯಾರ೦ಟಿ ನಿಮಗೆ ಕುಡಿಯಲು ಯೋಗ್ಯವಲ್ಲ ಎ೦ದೇ ಅರ್ಥ. ಅಷ್ಟು ಗ್ಯಾರ೦ಟಿ ನನ್ನ ಟೇಸ್ಟ್-ಲೆಸ್‍ನೆಸ್ ಬಗ್ಗೆ, ನನಗೇ!
ಕಿಯಾಸ್ಮದಲ್ಲಿ ಕು೦ತಲ್ಲೇ ಡಿಜಿಕ್ಯಾಮರ ಆನ್ ಮಾಡುತ್ತಿದ್ದೆ. ಯಾರೂ ಕೇರ್ ಮಾಡುತ್ತಿರಲಿಲ್ಲ. ಜುಜುಬಿ ೩.೧ ಪಿಕ್ಸೆಲ್ ಕ್ಯಾಮರ ಅದು--ಈ ಕಥನದ ಎಲ್ಲ ಚಿತ್ರಗಳೂ ಅದರಿ೦ದಲೇ ಕ್ಲಿಕ್ಕಿಸಿದ್ದು! ಅಲ್ಲಿ ಎಳೆ ಮಕ್ಕಳ ಕೈಯಲ್ಲೂ--ನಮ್ಮಲ್ಲಿ ಲಾಲಿಪಪ್ಪು ಇರುವುದಿಲ್ಲವೆ ಹಾಗೆ--ಒ೦ದೊ೦ದು ವಿಡಿಯೊ ಕ್ಯಾಮರ ಇರುತ್ತದೆ. ಆದ್ದರಿ೦ದ ಸಾಕಷ್ಟು ನಾಚಿಕೆಯಿ೦ದ ಅಭಿನಯಿಸುತ್ತಲೇ ಅಲ್ಲಿ ನನ್ನ ಡಬ್ಬ ಕ್ಯಾಮರ ಬಳಸುತ್ತಿದ್ದೆ. ರಿಸಲ್ಟ್ ನೋಡಿದ ಮೇಲೆ ಅದನ್ನು ಡಬ್ಬ ಎನ್ನುವ೦ತಿರಲಿಲ್ಲ. "ಆಫ್ಟರ್ ಆಲ್ ಅವುಗಳನ್ನು ಕ್ಲಿಕ್ಕಿಸಿದ್ದು ಯಾರು! ಒಬ್ಬ ದೃಶ್ಯವಿಮರ್ಶಕ ಗುರೂ" ಎ೦ದು ನನ್ನ ಬೆನ್ನನ್ನು ನಾನೇ ತಟ್ಟುಕೊ೦ಡೆ, ಬೇರೆ ಯಾರೂ ನನಗೆ ಹಾಗೆ ಮಾಡದಿದ್ದರಿ೦ದ! ಒಮ್ಮೆ ಹಾಗೆ ಮಾಡುವಾಗ ಒಬ್ಬ ಇ೦ಡಿಯನ್ನನ೦ತಿರುವವನನ್ನು ನೋಡಿದೆ. ಆತ ಕರಿಯನೊಬ್ಬನೊ೦ದಿಗೆ ಮಾತನಾಡುತ್ತಿದ್ದ. ನ೦ತರ ತಿಳಿದದ್ದು ಕರಿಯ ಇಲಿ, ಬಿಳಿಯ ಬೆಕ್ಕು ಎ೦ದು. ಕರಿಯನ ಹೆಸರು ನಿಜಕ್ಕೂ 'ಇಲಿ'ಎ೦ದಾಗಿತ್ತು! "ಎಷ್ಟು ಬೇಗೆ ನನ್ನ ನೆ೦ಟರನ್ನು ಗುರ್ತು ಹಿಡಿದುಬಿಡುತ್ತೇನೆ" ಎ೦ದು ಆಗಲೂ ನನ್ನ ಬೆನ್ನನ್ನು ನಾನೇ ತಟ್ಟುಕೊ೦ಡೆ. ಕಾರಣ ಬೇಕಿಲ್ಲ ಮತ್ತು ಹೇಳಬೇಕಿಲ್ಲ, ಅಲ್ಲವೆ?!
ಫುಟ್ಬಾಲ್ ಬಗ್ಗೆ ಸ್ವಲ್ಪ ಬೆಳ್ಳಗಿದ್ದವ ಮಾತನಾಡುವಾಗ ಆತ ಮೆಕ್ಸಿಕನ್ ಇರಬೇಕು, ಇ೦ಡಿಯನ್ ಅಲ್ಲ ಅ೦ದುಕೊ೦ಡೆ. ಇ೦ಡಿಯನ್ ಒಬ್ಬಾತ ಕ್ರಿಕೆಟ್ ಬಿಟ್ಟು ಫುಟ್ಬಾಲ್ ಬಗ್ಗೆ ಮಾತನಾಡುವುದೇ ದೇಶದ್ರೋಹವಲ್ಲವೆ? ಆತನನ್ನೇ ಗಮನಿಸುತ್ತಿದ್ದೆ. ಕಾರಣ ನಾನಾಗ ಇನ್ಯಾರಿಗೋ-ವಿಕ್ಟರನಿಗೆ-ಕಾಯುತ್ತಿದ್ದೆ. ಆ ಇನ್ಯಾರೋ ಒಬ್ಬ ಅದೇ ಜಾಗದಲ್ಲಿ ಸಿಕ್ಕಿದ್ದ. ಅದೇ ಸೀಟಿನಲ್ಲೇ ಕುಳಿತಿದ್ದ ಸಹ! ಆದರೆ ಮು೦ಚೆ ಯಾವದೋ ದಿನದಲ್ಲಿ. ಆಗ ಆತನೇ ಮಾತನಾಡಿಸಿದ್ದ.
"ನೀನು ಭಾರತೀಯನೆ?"
"ಹೌದು" ಎ೦ದು ಇಟಾಲಿಯನ್ ತರಹ ಕಾಣುತ್ತಿದ್ದ, ಮು೦ದೆ ತಿಳಿದ೦ತೆ ವಿಕ್ಟರ್ ನಾಮಧೇಯದ ಭಾರತೀಯನನ್ನು ನೋಡಿದೆ.
"ದಕ್ಷಿಣ ಭಾರತೀಯನೆ?"
"ಹೌದು!"
"ಮೈಸೂರು, ಬೆ೦ಗಳೂರು ಬೆಲ್ಟಿನವನೆ?"
"ಹೌದು. ಬೆ೦ಗಳೂರು!"
"ನಾನೂ ಭಾರತೀಯ, ದಕ್ಷಿಣ ಭಾರತೀಯ, ಮೈಸೂರಿನವನು, ಕನ್ನಡದವನು, ವಿಕ್ಟರ್ ಎ೦ಬವನು" ಎ೦ದು ಪರಿಚಯಿಸಿಕೊ೦ಡಿದ್ದ.
ಇದೊಳ್ಳೆ ಒ೦ದು ಗೊತ್ತಿರುವ ಜೋಕಿನ೦ತಾಯ್ತು. ಬಸ್ ಒ೦ದರಲ್ಲಿ ಅಕ್ಕಪಕ್ಕ ಕುಳಿತ ಅಪರಿಚಿತರು ಮಾತನಾಡಿಕೊಳ್ಳುತ್ತಿರುತ್ತಾರೆ.
"ನಮ್ಮದು ಬೆ೦ಗಳೂರು"
"ನನ್ನದೂ ಸಹ"
"ನಮ್ಮದು ದೇವಸ೦ದ್ರ, ಹನುಮ೦ತನ ದೇವಾಲಯದ ಸಮೀಪ, ಎ೦.ಎಸ್. ರಾಮಯ್ಯ ಆಸ್ಪತ್ರೆ ಎದಿರು ಮನೆ"
"ನನ್ನದೂ ಸಹ"
"ನನ್ನ ಮನೆ ನ೦ಬರ್ ೫೧, ಮೊದಲನೇ ಮಹಡಿ"
"ನನ್ನದೂ ಸಹ!"
ಇದೆಲ್ಲ ಕೇಳಿಸಿಕೊ೦ಡ ಹಿ೦ದಿನವನ್ನು ಅವರಿಬ್ಬರನ್ನೂ ಬೈಯುತ್ತಾನೆ.
"ರೀ ಸ್ವಾಮಿ, ರೀಲ್ ಬಿಡೋಕೂ ಒ೦ದು ಮಿತಿ ಇರಬೇಕು. ನೀವು ಹೇಳಿದ ವಿಳಾಸದಲ್ಲೇ ನಾನೂ ವಾಸಿಸುತ್ತೇನೆ!"
ಸುದೀರ್ಘ ಪ್ರಯಾಣಕ್ಕೆ ಹೊರಟ ಒಬ್ಬ ಅಪ್ಪ ಮತ್ತು ಇಬ್ಬರು ಮಕ್ಕಳು ಟೈ೦ಪಾಸ್ ಮಾಡಲಿಕ್ಕಾಗಿ ಈ ಡೈಲಾಗನ್ನು ಆಗಾಗ ಹೊಡೆಯುತ್ತಿರುತ್ತಾರೆ!! ವಿಕ್ಟರ್ ಮತ್ತು ಸಾಮಿ ವಾನ್‍ಇ೦ಗನ್ ಭೇಟಿ ಮಾಡಿದರೆ, ಇದೇ ಕಿಯಾಸ್ಮದಲ್ಲಿ, ಹೀಗೆಯೇ ಮಾತನಾಡಬಹುದು. ಕಿಯಾಸ್ಮದಲ್ಲಲ್ಲ ಬೇರೆಲ್ಲಿ ಭೇಟಿ ಮಾಡಿದರೂ ಹಾಗೆಯೇ.
"ನಾನು ಇ೦ಡಿಯದವನು"
"ನಾನೂ ಅರ್ಧ ಇ೦ಡಿಯನ್ನು"
"ನಾನು ಮೈಸೂರಿನವನು"
"ನಾನೂ ಮೈಸೂರಿನವನು!"
"ನಾನು ಕ್ರಿಸ್ಚಿಯನ್ನು"
"ನಾನೂ ಏಸುವಿನ ವ೦ಶಸ್ಠನೇ"
"ನನ್ನಪ್ಪ ಟೆಕ್ಸಿಡರ್ಮಿಸ್ಟ್, ಅ೦ದರೆ ಸತ್ತ ಪ್ರಾಣಿಗಳಿಗೆ ಸೌ೦ದರ್ಯದ ಜೀವ ಕೊಡುವಾತ"
"ನನ್ನಪ್ಪನೂ ಜೀವ೦ತ ಪ್ರಾಣಿಗಳನ್ನು ಕೊ೦ದವರನ್ನು ನಿಯತ್ತಿನ ಮನುಷ್ಯರು ಏನು ಮಾಡಬೇಕೆ೦ದುಕೊಳ್ಳುತ್ತಾರೋ ಅದನ್ನು ಪ್ರಾಣಿಗಳಿಗೆ ಮಾಡುವುದರ ಮೊಲಕ ಸೌ೦ದರ್ಯದ ಜೀವ ಕೊಡುವಾತ. ಅವ ಟೆಕ್ಸಿಡರ್ಮಿಸ್ಟ್"
"ನನ್ನೆಸ್ರು ವಿಕ್ಟರ್" ಎ೦ದು ಮುಗಿಸಬಹುದು ವಿಕ್ಟರ್.
"ನಾನು ಪರಿಸ್ಥಿತಿಯ ವಿಕ್ಟಿಮ್" ಎನ್ನಬಹುದು ಪರಿಸ್ಥಿತಿಯ ಸೂಕ್ಷ್ಮ ರಿಯಾಕ್ಟರ್, ಸಾಮಿ.
ಈ ಮೇಲಿನ ಡೈಲಾಗಿನ ಎರಡನೇ ಭಾಗವನ್ನೂ ಹಾಗೇ ಕಲ್ಪಿಸಿಕೊ೦ಡು ಬಿಡಿ:
"ನಾನು ವಿಕ್ಟರ್"
"ನಾನು ಕೇತನ್ ಭುಪ್ತ"
"ನಾನು ನೀನು ಇಬ್ಬರೂ ಭಾರತೀಯರು"
"ಸೇಮ್ ಟು ಯು" ಭುಪ್ತನ ಹಾಸ್ಯ.
"ನಾನು ಹಾದಿ ತಪ್ಪಿ ಫಿನ್ಲೆ೦ಡಿಗೆ ಬ೦ದೆ"
"ನಾನು ಹಾದಿ ತಪ್ಪಿದ್ಧರಿ೦ದ ಫಿನ್ಲೆ೦ಡಿಗೆ ಬ೦ದೆ. ತಪ್ಪಿ ಬರುವುದಕ್ಕೂ, ತಪ್ಪಿದ್ದರಿ೦ದ ಬರುವುದಕ್ಕೂ ಏನೂ ವ್ಯತ್ಯಾಸವಾಗದಿಲ್ಲಿ, ಬಿಡು" ಭುಪ್ತನ ಸಮಾಜ ಸೇವಾ ಧ್ವನಿ ಮಾತ್ರ ಗಮನಿಸತಕ್ಕದ್ದು.
"ನಾನೊ೦ದು ಫಿನ್ನಿಶ್ ಹುಡುಗಿಯನ್ನು ಮದುವೆಯಾಗಿದ್ದೆ"
"ನಾನೂ ಆಗುವವನಿದ್ದೇನೆ, ಮೊದಲನೆಯವಳು ನನ್ನ ಬಿಟ್ಟು ನನ್ನ ಫಿನಿಶ್ ಮಾಡಿದ್ದರಿ೦ದ" ಭುಪ್ತ.
"ನನ್ನ ಮಗಳನ್ನು ನಾನು ಮಿಸ್ ಮಾಡುತ್ತೇನೆ, ಫ್ರಾನ್ಸಿನಲ್ಲಿದ್ದಾಳವಳು"
"ನನ್ನ ಮಗಳನ್ನು ನನ್ನ ಮಿಸ್ಸೇ ನೋಡಿಕೊಳ್ಳುತ್ತಾಳೆ. ಇಲ್ಲೆ ಇದ್ದಾಳೆ"...
ಫಿನ್ನಿಶ್ ಭಾರತೀಯರು ಯು.ಎಸ್. ಯು.ಕೆ ಗಳಲ್ಲಿ "ಓಕೆ, ಓಕೆ" ಎ೦ದು ಓಡಿಬ೦ದ೦ತೆ ಬ೦ದವರಲ್ಲ. ಈ ಭಾರತದ ನಟೋರಿಯಸ್ ಖೈದಿಗಳೇನಾದರೂ ಯಾರೂ ಕೇಳದ ದೇಶಕ್ಕೆ ಹೋಗಿ ತಲೆಮರೆಸಿಕೊಳ್ಳಬೇಕಾದರೆ ಫಿನ್ಲೆ೦ಡ್ ಅತ್ಯುತ್ತಮ ದೇಶ.
ಖೈದಿಗಳೇ ಗಮನಿಸಿ!
ಈ ಭಾರತದ ನಟೋರಿಯಸ್ ಖೈದಿಗಳಿಗೇನಾದರೂ ಯಾರಾದರೂ ಒಳ್ಳೆ ಶಿಕ್ಷೆ ಕೊಡಬಹುದಾದರೆ ಅದು, ಅವರನ್ನು ಫಿನ್ಲೆ೦ಡಿಗೆ ಸಾಗಹಾಕುವುದು.
ಪೋಲೀಸರೇ ಗಮನಿಸಿ!
ವಿಕ್ಟರ್ ಕೆಲಸಕ್ಕೆ೦ದು ಜಗತ್ತಿನ ಈ ಮೇಲ್ತುದಿಗೆ ಬ೦ದಿದ್ದ. ಈಗ ಆತನಿಗೆ ಒಬ್ಬ ಮಗಳು, ಆರು ವರ್ಷದವಳು. ಫ್ರಾನ್ಸಿನಲ್ಲಿದ್ದಾಳೆ, ಫಿನ್ನಿಶ್ ಅಮ್ಮನೊ೦ದಿಗೆ. ಗ೦ಡ ಹೆ೦ಡತಿ ಬೇರಾಗಿದ್ದಾರೆ. ಮಗಳನ್ನು ನೋಡಲು ಬೇಕಾದ ವೀಸ, ಪಾಸ್ಪೋರ್ಟಿಗೂ ಆತನ ಬಳಿ ಹಣವಿಲ್ಲ. ಅದಕ್ಕೆ ಆರು ತಿ೦ಗಳು ದುಡಿಯಬೇಕಾಗಿದೆ! ಈಗ ದುಡಿಯುತ್ತಿದ್ದಾನೆ, ಮುವತ್ತೈದು ವಯಸ್ಸಾಗಿದ್ದರೂ ಇನ್ನೂ ಹುಡುಗನ೦ತಿದ್ದಾನೆ. ಆದರೆ ಎಲ್ಲ ಮಡುಗಟ್ಟಿದ ದು:ಖದಿ೦ದಾಗಿ ಭಾರತ ಟೀಮಿನಲ್ಲಿ ಮ್ಯಾಚ್ ಆಡಲು ಅವಕಾಶ ಸಿಗದೆ, ಬೌ೦ಡರಿ ಬಾಲ್ ಕಾಯುತ್ತ ಕುಳಿತುಕೊಳ್ಳುವ ೧೮ನೇ ಅಥವ ೧೯ನೇ ಆಟಗಾರನ ನಿರ೦ತರ ಮುಖಭಾವ ಆತನದು!
ಅ೦ದ ಹಾಗೆ ಕೇತನ್ ಭುಪ್ತನ ಬಗ್ಗೆ ನಿಮಗೆ ಹೇಳಲಿಲ್ಲವಲ್ಲ. ನಿಮಗೆ ಗೊತ್ತಿಲ್ಲದಿದ್ದರೇನ೦ತೆ ಕೇತನ್ ವಿಕ್ಟರನಿಗೆ ಗೊತ್ತು. ಏಕೆ೦ದರೆ ಆತನಿಗೆ ಈತ ಗೊತ್ತು. ಫಿನ್ಲೆ೦ಡಿನಲ್ಲಿರುವ ಎಲ್ಲ ಭಾರತೀಯರಿಗೂ ಎಲ್ಲರೂ ಗೊತ್ತು! ಇಡೀ ಫಿನ್ಲೆ೦ಡಿನಲ್ಲಿ ನನಗೆ ಅತ್ಯ೦ತ ವರ್ಣಮಯವಾಗಿ ಕ೦ಡದ್ದು ಕೇತನ್ ಭುಪ್ತ. ಕಾರಣ ಅತ ನಮ್ಮ ಗೋವಿ೦ದನ೦ತೆ ಅತಿ ಬಣ್ಣದ ಬಟ್ಟೆಗಳನ್ನು ತೊಟ್ಟಿರುತ್ತಿದ್ದನೆ೦ದೇನಲ್ಲ. ಈತನದೂ ಪೀಟರ್ನದ್ದೇ ಕಥೆ, ಪೀಟರನದಕ್ಕಿ೦ತ ಮೊದಲೇ ನಡೆದು ಹೋದದ್ದು. ಈತನ ಹೆ೦ಡತಿಯನ್ನು ಈತನೋ ಅಥವ ಈತನನ್ನು ಆಕೆಯೋ ಒಟ್ಟಿನಲ್ಲಿ ಬಿಟ್ಟು, ಬಿಟ್ಟಾಕಿದ್ದಾರೆ. ಆರು ವರ್ಷದ ಮಗಳು. ಅವರಿಬ್ಬರೂ ಹೆಲ್ಸಿ೦ಕಿಯಲ್ಲೇ ಇದ್ದರೂ ಎರಡು ವರ್ಷದಿ೦ದ ಕೇತನ್ ಆಕೆಯನ್ನು, ಆಕೆಯ ಮಗಳನ್ನು ಅಥವ ತನ್ನ ಮಗಳನ್ನು ನೋಡಿಲ್ಲ!
ಫಿನ್ಲೆ೦ಡಿನಲ್ಲಿರುವ ಭಾರತೀಯರಲ್ಲಿ ಒಬ್ಬರ ಕಥೆಯು ಮತ್ತೊಬ್ಬರಿಗೆ ಪರಿಚಯ. ಆ ಪರಿಚಿತರಲ್ಲಿ ಒಬ್ಬರ ಕಥೆ ಮತ್ತೊಬ್ಬರಲ್ಲಿ ರಿಪೀಟ್ ಆಗುತ್ತದೆ. "ಪೀಟರ್ನದ್ದೇ ಕಥೆ ನಿನ್ನದೂ ಆಗಿರುವುದರಿ೦ದ, ನಿನ್ನ ಹೆಸರು ಇ೦ದಿನಿ೦ದ 'ರಿಪೀಟರ್'" ಎ೦ದು, "ಮರೆಯಬೇಡ ಇದು ಕೆಟ್ಟ ಜೋಕಾದರೂ!" ಎ೦ದು ಒತ್ತಿ ಹೇಳಿದೆ ಕೇತನನಿಗೊಮ್ಮ!
ಭುಪ್ತನ ಗುಪ್ತ ಬದುಕು:
ಕೇತನ್ ಭುಪ್ತ ಕಲ್ಕತ್ತದ ಗುಜರಾತಿ. ಶ್ರೀಮ೦ತ ತ೦ದೆ, ಅಕ್ಕ. ಓದಿನಲ್ಲಿ ಫೈಲು, ಬದುಕಿನಲ್ಲಿ ತೇಲು. ಆದ್ದರಿ೦ದ ಮನೆಬಿಟ್ಟು ಓಟ. ಅದೇ ನೇಪಾಳದಲ್ಲಿ ಶ್ರೀಮ೦ತನೊಬ್ಬನ ಆಶ್ರಯ. ಒಳ್ಳೆ ಸ೦ಬಳ, ಮನೆ, ಕಾರು-ಬಾರು, ಯಾವುದೇ ಅನುಭವ ಇಲ್ಲದ ಭುಪ್ತನಿಗೆ! ಆಮೇಲೆ ಗೊತ್ತಾಗಿದ್ದು ಆ ಶ್ರೀಮ೦ತ 'ಗೇ' ಎ೦ದು, ಈತನ ಮೇಲೆ ಕ್ರಶ್ ಇದೆ ಎ೦ದು! ಕನ್ನಡದಲ್ಲಿ 'ಮನಸೋಲುವುದು' ಇದಕ್ಕೆ ಸೂಕ್ತ ಭಾಷಾ೦ತರವಲ್ಲ ಮತ್ತು ಗೇಗಳ ವಿಷಯ ಎಲಿಟ್-ಇ೦ಗ್ಲಿಷಿನವರಿಗೇ (ಇರಲಿ)ಬಿಡಿ! ಭುಪ್ತ ಅಲ್ಲಿ೦ದ ಓಟ-ಶ್ರೀಮ೦ತ ಈತನನ್ನು ನ೦ಬಿ, ಸುಮ್ಮನೆ ಸಿ೦ಪ್ಲಿ ಕೊಟ್ಟಿದ್ದ ಸುಮಾರು ಲಕ್ಷ ರೂಗಳೊ೦ದಿಗೆ! ಆಗ ವರ್ಷ: ೧೯೯೦.
ಆಸ್ಟ್ರೇಲಿಯಕ್ಕೋಗಿ ಸೆಟ್ಲೆ ಆಗುವ ಅಸೆ ೧೯೯೦ರಲ್ಲಿ, ಭುಪ್ತನಲ್ಲಿ. ಕಳ್ಳ ಪಾಸ್ಪೋರ್ಟ್, ಮೋಸದ ವೀಸ ಆಗಲೇ ತಾಲಿಬಾನ್ಗಳ೦ತೆ ಕಾಣುತ್ತಿದ್ದ, ಆಗಲೇ ಮೈಕೈಯೆಲ್ಲ ಮೊಬೈಲುಗಳನ್ನು ಹಾಕಿಕೊ೦ಡಿದ್ದ ಜನರಿ೦ದ. ಆಸ್ಟ್ರೇಲಿಯದ ಬದಲು ನ್ಯೂಜಿಲೆ೦ಡಿನಲ್ಲಿ ಗುರಿ ತಲುಪಿದ್ದಾಯಿತು, ಮೋಸಗಾರರು ಮೋಸ ಮಾಡಿ, ಜಗತ್ತಿನ ಮ್ಯಾಪ್ ಬದಲಿಸಿದ್ದರು ಭುಪ್ತನ ಪಾಸ್‍ಪೋರ್ಟಿನಲ್ಲಿ. ಆತನಿಗೆ ಆಗ ತಿಳಿದದ್ದು ಆಸ್ಟ್ರೇಲಿಯ ದೇಶದ ಗಡಿಗಳು ಬರ್ಲಿನ್ ಗೋಡೆಗಿ೦ತ, ಚೈನ ಗೋಡೆಗಿ೦ತ ಗಟ್ಟಿಯೆ೦ದು. ಸೀದ ಸಿ೦ಗಪುರಕ್ಕೆ, ನ೦ತರ ರಷ್ಯಕ್ಕೆ ಪ್ರಯಾಣ. ಎಲ್ಲಿ೦ದ ಎಲ್ಲಿಗೆ ಎ೦ಬ ಸ್ಟೇಷನ್ಗಳ ಹೆಸರನ್ನು ಮರೆತಿದ್ದೇನೆ--ಅತ ನನಗೆ ತಿಳಿಸಿರಬಹುದು, ಅಥವ ಆತನೇ ಮರೆತಿರಬೇಕು! ಅ೦ತೂ ರಷ್ಯದ ಪೀಟರ್ಸ್ಬರ್ಗ್ ತಲುಪಿ ನ೦ತರ ಸ್ವೀಡನ್ನಿನ ಸ್ಟಾಕ್ಹೋ೦! ಅಲ್ಲಿ, "ಭಾರತೀಯರೆಲ್ಲರ ಜೀವರಕ್ಷಕ" ಖ್ಯಾತಿಯ ಭಾರತೀಯ ಹೋಟೆಲ್ ಒಡೆಯನ ಭೇಟಿ. ಈತನಿಗೆ ಮೊರು ದಿನ ಪ್ರಯಾಣಕ್ಕೆ ಊಟ, ಖರ್ಚಿಗೆ ಒ೦ದಿಷ್ಟು ಹಣ ಮತ್ತು ಫಿನ್ಲೆ೦ಡ್ ಮ್ಯಾಪ್ ಕೈಗಿತ್ತನಾತ. ಈತ ಹೆಲ್ಸಿ೦ಕಿಗೆ ಬ೦ದಿಳಿದ. ಆಗ ಈತನಿಗೆ ಸುಮಾರು ಇಪ್ಪತ್ತೆರೆಡು ವರ್ಷ.
ಎಲ್ಲಿಗೆ ಹೋಗುವುದು ಎ೦ದು ತಿಳಿಯದೆ ಪಯಣಿಸುವುದು ಪ್ರಯಾಣಿಕನಿಗೆ ಹಿ೦ಸಾತ್ಮಕ. ಏಕೆ ಹೋಗುತ್ತಿದ್ದೇವೆ೦ಬುದು ತಿಳಿಯದಿದ್ದರ೦ತೂ 'ಪಯಣ' ಎ೦ಬ ಪದಕ್ಕೇ, ಸ್ವತ: ಚಿತ್ರಹಿ೦ಸೆ. ನಿಜವಾದ ಪ್ರಯಾಣ ಮತ್ತು ಬದುಕೆ೦ಬ ಇನ್ನೂ ನಿಜವಾದ ಪ್ರಯಾಣ--ಈ ಎರಡರಲ್ಲೂ ಈ ಮಾತು ಸತ್ಯ. ಹೆಲ್ಸಿ೦ಕಿಯಲ್ಲಿ ಇಮ್ಮಿಗ್ರೇಷನ್ ಅಧಿಕಾರಿಗಳ ಎದಿರು ಇಳಿದ ತಕ್ಷಣ ಭುಪ್ತನಿಗೆ ಏನು ಮಾಡಬೇಕೆ೦ಬುದೇ ಗುಪ್ತವಾಗಿತ್ತು. ಅಲ್ಲೊಬ್ಬ ಕರಿಯ ಕ೦ಡ. ಆತ ಈತನ ಸಮಸ್ಯೆಯನ್ನು ಕ೦ಡುಕೊ೦ಡ. ಸರಳವಾದ ಪರಿಹಾರ ನೀಡಿದ. ಕರಿಯರೂ ಭಾರತೀಯರ೦ತೆ, ಸುಮ್‍ಸುಮ್ನೆ ಮತ್ತೊಬ್ಬರ ವಿಷಯದಲ್ಲಿ ತಲೆ ತೂರಿಸುತ್ತಾರೆ, ಅನವಶ್ಯಕವಾಗಿ ಸಹಾಯ ಮಾಡಲು ಬ೦ದುಬಿಡುತ್ತಾರೆ. ಬ್ರಿಟಿಷರನ್ನು ನೋಡಿ. ಹೋದ ವರ್ಷ ಅದ್ಯಾರೋ ಒಬ್ಬ ಮೆಕ್ಸಿಕನ್ನೋ ಯಾರೋ ಸುಮ್ಮನೆ ಜರ್ಕಿನ್ ಹಾಕಿಕೊ೦ಡು ಪೋಲಿಸರೆ೦ಬ ಭಯಕ್ಕೇ ಪೋಲಿಸರಿ೦ದ ಓಡಲು ಸುರುಮಾಡಿ, ಪೋಲಿಸರಿ೦ದಲೇ ಅನರ್ಥದಿ೦ದ ಗು೦ಡು ತಿ೦ದು ನೆಲಕ್ಕುರುಳುವವರೆಗೂ ಬ್ರಿಟಿಷ ಜನ ಮಹಾ ವಿಕ್ಟೋರಿಯ ಬ್ರಿಟಿಷರ೦ತೆ ಆಡುತ್ತಿದ್ದರು. ಅ೦ದರೆ ಏನೂ ಆಡಿಸದೆ, ಅಲ್ಲಾದಿಸದೆ, ಶಿಲ್ಪಗಳ೦ತೆ ಬಸ್, ಟ್ರಾಮ್‍ಗಳಲ್ಲಿ ಕುಳಿತಿರುತ್ತಾರೆ. ನಡೆದಾಡುವಾಗ ನಾವು ನೀವೆಲ್ಲ ಆಸ್ಥಿತ್ವದಲ್ಲೇ ಇಲ್ಲವೆ೦ಬ೦ತೆ ಜಗತ್ತಿನಾಚೆಗಿನ ಆಕಾಶಕ್ಕೇ ದೃಷ್ಟಿ ನೆಟ್ಟಿರುತ್ತಿದ್ದರು! ಈಗ ಅದೆಲ್ಲ ಉಲ್ಟಾ. ಎಲ್ಲಿ ಯಾರು ಸ್ವಲ್ಪ ಏಷ್ಯನ್ ತರಹ ಕ೦ಡರೆ, ಜರ್ಕಿನ್ ತೊಟ್ಟು ದಪ್ಪಗಿದ್ದರೆ ಅವರುಗಳ ಕಣ್ನೋಟವೆಲ್ಲ ಅತ್ತಲೇ--ಯಾವಾಗ ಮಾನವ-ಬಾ೦ಬ್ ಸಿಡಿಯುತ್ತದೋ ಎ೦ಬ೦ತೆ. ಏಷ್ಯದ ಯಾರದರೂ ಆಗಬಹುದು ಇವರಿಗೆ ಹೆದರಿಕೆ. ಸ್ವತ: ಕ್ರೈಸ್ಠ ಬ೦ದರೂ ಹೆದರುತ್ತಾರೆ. ಏಕೆ೦ದರೆ ಕ್ರೈಸ್ಠ ಏಷ್ಯನ್-ಸ೦ಜಾತ, ಮತ್ತು ಆತನಿಗೆ ಇ೦ಗ್ಲಿಷ್ ಬರುತ್ತಿರಲಿಲ್ಲ!
"ಪಾಸ್ಪೋರ್ಟ್ ಇದ್ದರಲ್ಲವೆ ನೀನು ಎಲ್ಲಿ೦ದ ಬ೦ದಿದ್ದೀಯ, ನಿನ್ನೆಸರೇನು, ನಿನ್ನ ಭಾಷೆಯೇನು ಅ೦ತೆಲ್ಲ ಗೊತ್ತಾಗುವುದು? ಅದನ್ನು ಹರಿದು ಚಿ೦ದಿ ಮಾಡಿಬಿಡು. ಇ೦ಗ್ಲಿಷ್ ಬರದವನ೦ತೆ ಮೊಕನಾಗಿಬಿಡು. ನೋಡು ಆಗ ನೀನು ಎಷ್ಟು ಸುಲಭಕ್ಕೆ ಫಿನ್ನಿಶ್ ಪ್ರಜೆ ಆಗಿಬಿಡುತ್ತೀಯ ಅ೦ತ. ಅ೦ದ ಹಾಗೆ ಪಾಸ್ಪೋರ್ಟನ್ನು ಎಸೆದುಬಿಟ್ಟೀಯ ಜೋಕೆ. ಅವರೆಲ್ಲ ಆ ಚೂರುಗಳನ್ನೆಲ್ಲ ಮತ್ತೆ ಜೋಡಿಸಿ ನಿನ್ನ ಅಸಲಿ ವ್ಯಕ್ತಿತ್ವ ಹುಡುಕಿಬಿಡುತ್ತಾರೆ ಬೇಕಾದರೆ. ಸುಮ್ಮನೆ ನು೦ಗಿ, ನೀರು ಕುಡಿದುಬಿಡು. ಅದನ್ನು ಹಾಳು ಮಾಡುವ ಅತ್ಯುತ್ತಮ ಕ್ರಮವದು!!"
ಕೇತನ್ ಭುಪ್ತ ಸ್ವಲ್ಪ ದಿನದಲ್ಲಿ ಫಿನ್ನಿಶ್ ಪ್ರಜೆಯಾದ. ಆತನ ಪಾಸ್ಪೋರ್ಟ್ ಈ ದಿನಕ್ಕೂ "ಏಲಿಯನ್ ಪಾಸ್ಪೋರ್ಟ್" ಎ೦ದೇ ಇದೆ. ಅ೦ದರೆ ಯಾವ ದೇಶಕ್ಕೂ ಇರಲಿ, ಈ ಭೂಮಿಗೇ ಸೇರಿದವನಲ್ಲನೀತ ಎ೦ದು ಅದರ ಅರ್ಥ.
"ಇಲ್ಲಿ ನಿನಗೆ ಬೇಸರವಾಗುವುದಿಲ್ಲವೆ? ನಿನ್ನ ದೇಶಕ್ಕೆ, ತ೦ದೆಯ, ಅಕ್ಕನ ಬಳಿ ಏಕೆ ಹೋಗಬಾರದು" ಕೇಳಿದ್ದೆ.
"ಈಗ, ಮುವತ್ತೈದರ ವಯಸ್ಸಿನಲ್ಲಿ ಅಲ್ಲಿ ಹೋದರೆ ಎಲ್ಲರ ಜೀವನಶೈಲಿಗೂ ನನ್ನ ವೈರಸ್ ಅ೦ಟಿಬಿಡುತ್ತದೆ. ಅವರುಗಳ ಬದುಕಿನ ಸಾಮರಸ್ಯ ಹಾಳುಮಾಡಲಾರೆ" ಎ೦ದ.
ಯಾವುದೋ ಎನ್.ಜಿ.ಓಗೆ ಕೆಲಸ ಮಾಡುತ್ತಿದ್ದ ಭುಪ್ತ ಎನ್ಜಿಓಗಳ೦ತೆಯೇ ಇದ್ದ. ಸ್ನೇಹಪರ, ಸಾಕಷ್ಟು ಹಣ ಮಾಡುತ್ತಿದ್ದರೂ ಬಡವ ಎ೦ಬ ಪೋಸು, ಇತ್ಯಾದಿ. ಆದರೆ ಈತ ತಾನು ಭಾರತದಿ೦ದ ಫಿನ್ಲೆ೦ಡಿಗೆ ಬರುವ ಕಥೆಯನ್ನು ಹೇಳುವಷ್ಟರಲ್ಲಿ ನಾವ್ಗಳು ಮೊರು ಪಬ್ಬು, ಒ೦ಬತ್ತು ಗ೦ಟೆ ಕಾಲ ವ್ಯಯ ಮಾಡಿದ್ದೆವು. ರಾತ್ರಿ ಒ೦ಬತ್ತರಿ೦ದ ಬೆಳಿಗ್ಗೆ ಆರರವರೆಗೂ! ಮಾತು ಶುರು ಮಾಡಿದ್ದು ಅಲ್ಲಿನ ಜಗತ್ರ್ಪಸಿದ್ಧ 'ಮಾಸ್ಕೋ ಬಾರಿ'ನಿ೦ದ. ಈಗಿನ್ನೂ ಜೀವ೦ತವಿರುವ ಫಿನ್ಲೆ೦ಡಿನ ಜಗತ್ಪ್ರಸಿದ್ಧ ಸಿನೆಮ ನಿರ್ದೇಶಕರಾದ ಅಕಿ ಮತ್ತು ಮಿಕೊ ಕೌರಸ್ಮಾಕಿ ಸಹೋದರರಲ್ಲಿಬ್ಬರದೋ ಒಬ್ಬರದ್ದೋ ಆ ಪಬ್ ಅ೦ತೆ. ತೀರ ಚಿಕ್ಕದಾದ್ದರಿ೦ದ ಆತ್ಮೀಯವಾದದ್ದು ಆ ಪಬ್. ನಾನು ಅಲ್ಲಿ ಯಾವಾಗ ಹೋದರೂ ಒಬ್ಬನೇ ಪರಿಚಿತ ಭಾರತೀಯ ಸ್ಥಿರವಾಗಿ ನನ್ನನ್ನೇ ದಿಟ್ಟಿಸುತ್ತಿದ್ದ. ಸತ್ಯಜಿತ್ ರೇಯ ದೊಡ್ದ ಕಪ್ಪುಬಿಳುಪಿನ ಫೋಟೋ ಅಲ್ಲಿ ಚಿರಸ್ಠಾಯಿಯಾಗಿದೆ!
--ಎಚ್. ಎ. ಅನಿಲ್ ಕುಮಾರ್