ತೃಪ್ತಿ,

ತೃಪ್ತಿ,

ತೃಪ್ತಿ,
ನಿನಗಾಗಿ ಹಂಬಲಿಸಿ ಕಾದಿರುವೆ
ನೀನೇಕಿನ್ನೂ ಮರೀಚಿಕೆಯಾಗಿರುವೆ ಹೇಳು?

ಹುಡುಗುತನದ ಹುಡುಗಾಟದ ಬಾಲ್ಯದಲ್ಲಿ
ಮನೆಯಂಗಳದ ಒಳಗೆ ಹೊರಗೆ
ಅಚ್ಚರಿಗಳ ಅರಿವಿನ ಆಚೆ ಈಚೆ ಹುಡುಕಿದ್ದು
ನಿನ್ನನ್ನೇ ಅಲ್ಲವೇನು?

ತೊಳೇರಿಸುವ ತಾರುಣ್ಯದ ತೊಟ್ಟಿಲಲ್ಲಿ
ನನ್ನೂರು ಪರವೂರು ಹತ್ತೂರುಗಳಲ್ಲಿ
ಕತ್ತಲಿನ ಗುಹೆಗಳಲ್ಲಿ,ಗೊಂಡಾರಣ್ಯದಲ್ಲಿ
ಅದರ್ಶಗಳ,ಗಾಜಿನರಮನೆಯ ಅಂತರ್ಯದ ನೆಲಮಾಳಿಗೆ ಯೊಳಗೆ
ತಡಕಾಡಿದ್ದು ನಿನ್ನ ಬೆಚ್ಚನೆಯ ಅಪ್ಪುಗೆಯ ಬಿಸುಪಲ್ಲಿ
ಕರಗಿ ನೀನೇಆಗಬೇಕಂದಲ್ಲವೇ ಹೇಳು?

ತೃಪ್ತಿ,
ಕನಸಿನ ಕನ್ಯೆಯೋ,ಅಂಬರದ ಅಪ್ಸರೆಯೋ.
ನೀನೆಲ್ಲಿ ಹೋದೆಯೇ,ಕನ್ನಡಿಯೊಳಗಿನ ಕಿನ್ನರಿ?
ತುಂಬು ಸಂಸಾರದ,ಸಡಗರದ,ಜಾತ್ರೆಯ ನಡುವೆ
ನಿನ್ನದೊಂದು ಕಡೆಗಣ್ಣನೊಟವೂ ಇಲ್ಲದಾಯ್ತೇ ಗೆಳತಿ?
ಆಸೆ,ಮಾತ್ಸರ್ಯಗಳೆಂಬ ಸವತಿಯ ಕಾಟಕ್ಕೆ,
ದುಡ್ಡಿನ ಗುಡ್ಡವನೊಟ್ಟುವ,ಬಿರು ಬಿಸಿಲ ಕಾಯಕಕ್ಕೆ ಹೆದರಿ ಬೆದರಿ
ಮಾಯವಾದೆಯೇನೇ?

ತೃಪ್ತಿ,
ಒಡಲ ಜೀವ ಚೈತನ್ಯವೇ
ಇನ್ನಾದರೂ ಬರಲಾರೆಯಾ,ನೆಮ್ಮದಿಯ ನೆರಳಾಗಿ,
ಭಾವದ ಗೆಳತಿಯಾಗಿ,ತಂಪೆರೆವ ತಾಯಾಗಿ,ತಣ್ಣನೆಯ ತನುವಾಗಿ?

ಹೊರಟಿಹೆನು ಇಂದು,ಹೊಗದೂರಿಗೆ ಒಂಟಿಯಾಗಿ...
ಅರೆ!
"ಒಬ್ಬಂಟಿಯಲ್ಲವೋ ಮೂಢ ನಾನಿರುವೆ ನಿನ್ನೊಳಗೆ,
ನಿನ್ನೆದೆಯ ಒಳಗೇ"

ತೃಪ್ತಿ,
ಹೊರಗೆ ಊರೆಲ್ಲ,ಅವರಿವರ ಬಳಿಯೆಲ್ಲ,ನೀನಿರುವೆಯೋ ಎಂದು
ಅರಸಿದ್ದು ಹುಸಿಯಾಯಿತೇ?...
ಅರಿವಾಯಿತೇ ಇಂದು!

ನಿನ್ನಿರವು ನನ್ನರಿವಾಗಿ,ಬಲವಾಗಿ ಹೆಪ್ಪುಗಟ್ಟುತ್ತಿದ್ದರೆ,ಹಾರಾಡಬಹುದಿತ್ತಲ್ಲವೇ
ಅನಂತ ಆಕಾಶದಲಿ ಜೋಡಿ ಹಕ್ಕಿಯಾಗಿ!?

ಇರಲಿ ಬಿಡು.ಈಗಲಾದರೂ ಬಂದೆಯಲ್ಲ,ಅಲ್ಲ
ಅರಿತೆನಲ್ಲ..ತೃಪ್ತಿ
ನೀನಿರುವೆ ಜೊತೆಯಾಗಿ,ಆನಂದ ಪಯಣದಲಿ
ಜೊತೆಗಾತಿಯಾಗಿ..
-----------------

Rating
No votes yet

Comments