ಪದ್ಮಭೂಷಣ ಪ್ರಶಸ್ತಿ ವಿಜೇತ ಪ್ರೊ. ಬಿ.ಎಂ. ಹೆಗ್ಡೆ : ಅಂದು ನಾನು ಕಂಡಂತೆ

ಪದ್ಮಭೂಷಣ ಪ್ರಶಸ್ತಿ ವಿಜೇತ ಪ್ರೊ. ಬಿ.ಎಂ. ಹೆಗ್ಡೆ : ಅಂದು ನಾನು ಕಂಡಂತೆ

ಬರಹ

  MD, FRCP, FRCPE, FRCPG, FRCPI, FACC, FAMS

  ಇದು ಖ್ಯಾತ ಹೃದ್ರೋಗ ತಜ್ಞ ಪ್ರೊ. ಬಿ.ಎಂ. ಹೆಗ್ಡೆಯವರ ಪದವಿಮಾಲೆ!

  ’Dear Prof Hegde, Your efforts to relieve pain everywhere would succeed with God's grace.'

  ಇದು ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದಾಗ ಹೆಗ್ಡೆಯವರ ಬಗ್ಗೆ ನುಡಿದ ಮೆಚ್ಚುಗೆಯ ನುಡಿ.

  ’ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್’ (ಡೀಮ್ಡ್ ವಿಶ್ವವಿದ್ಯಾಲಯ) ಇದರ ಮಾಜಿ ಉಪಕುಲಪತಿ, ಪ್ರಖ್ಯಾತ ವೈದ್ಯ, ಆರೋಗ್ಯ ಸಂಬಂಧಿ ವಿಷಯಗಳ ಕುರಿತು ಹಲವು ಸಂಶೋಧನಾತ್ಮಕ ಪ್ರಬಂಧಗಳ, ಅಸಂಖ್ಯಾತ ಲೇಖನಗಳ ಮತ್ತು ೩೦ಕ್ಕೂ ಹೆಚ್ಚು ಪುಸ್ತಕಗಳ ಕರ್ತೃ, ಅತೀವ ಸಾಮಾಜಿಕ ಕಳಕಳಿಯುಳ್ಳ ಅತಿ ಸರಳಜೀವಿ ಹಾಗೂ ನಿಗರ್ವಿ ಕನ್ನಡಿಗ ಪ್ರೊ. ಬಿ.ಎಂ. ಹೆಗ್ಡೆ ಇವರಿಗಿಂದು ಪದ್ಮಭೂಷಣ ಪ್ರಶಸ್ತಿಯ ಗೌರವ ಸಂದಿದೆ. ಇದು ಕನ್ನಡನಾಡಿಗೆ ಹೆಮ್ಮೆಯ ವಿಷಯ.

  ೨೦೦೩ರಲ್ಲಿ ’ದೆಹಲಿ ಕನ್ನಡಿಗ’ ಪತ್ರಿಕೆಯ ವತಿಯಿಂದ ದೆಹಲಿಯಲ್ಲಿ ನಡೆದ ೨೦ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿದ್ದರು ಹೆಗ್ಡೆಯವರು. ಆ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ನನ್ನದಾಗಿತ್ತು. ಸಮ್ಮೇಳನದಲ್ಲಿ ಅಂದು ಹೆಗ್ಡೆಯವರಿಂದ ಸನ್ಮಾನ ಸ್ವೀಕರಿಸಿದ ಭಾಗ್ಯವೂ ನನ್ನದು. ಸಮ್ಮೇಳನದ ಸಂದರ್ಭದಲ್ಲಿ ನಾನು ಹೆಗ್ಡೆಯವರ ಪಾಂಡಿತ್ಯ, ಸಾಮಾಜಿಕ ಕಳಕಳಿ, ಸರಳತೆ ಮತ್ತು ಭಾಷಣ ಪ್ರೌಢಿಮೆ ಇವುಗಳನ್ನು ಕಣ್ಣಾರೆ ಕಂಡು ಬೆರಗುಗೊಂಡೆ. ನನ್ನ ಭಾಷಣವನ್ನು ಮತ್ತು ಕಾವ್ಯವನ್ನು ಮೆಚ್ಚಿ ಅಂದು ವೇದಿಕೆಯಿಂದ ಅವರಾಡಿದ ಮಾತುಗಳು ನನಗೆ ಪ್ರಶಸ್ತಿಸಮಾನವೆನ್ನಿಸಿದ್ದವು.

  ಸಂಪದಿಗ ಮಿತ್ರರೊಡನೆ ಈ ಸಂದರ್ಭದಲ್ಲಿ ನನ್ನ ಆ ನೆನಪನ್ನು ಮತ್ತು ಇಂದು ನನಗಾಗಿರುವ ಸಂತಸವನ್ನು ಹಂಚಿಕೊಳ್ಳುತ್ತ ಅಂದಿನ ಸಮ್ಮೇಳನದ ಕೆಲವು ಛಾಯಾಚಿತ್ರಗಳನ್ನಿಲ್ಲಿ ಪ್ರಸ್ತುತಪಡಿಸಿದ್ದೇನೆ.