ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

ಕಳೆದ ವಾರ ಏನ್ ಗುರು ಬ್ಲಾಗಿನಲ್ಲಿ ಗೂಗಲ್ ನ್ಯೂಸ್ ಸಂಬಂಧಪಟ್ಟಂತೆ ಒಂದು ಒಳ್ಳೆ ಲೇಖನ ಮೂಡಿ ಬಂದಿತ್ತು. ಲೇಖನವನ್ನು ಓದಿ, “ಹಿಂದಿ, ತಮಿಳು, ತೆಲುಗು, ಮಲಯಾಳಮ್ ಭಾಷೆಗಳಲ್ಲಿ ಗೂಗಲ್ ನ್ಯೂಸ್ ಈಗಾಗಲೇ ಬಂದಿರುವಾಗ, ದೇಶಕ್ಕೇ ಐ.ಟಿ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿರುವ ಕನ್ನಡಿಗರ ಭಾಷೆ ಮಾತ್ರ ಗೂಗಲ್ ನ್ಯೂಸ್-ನಲ್ಲಿ ಯಾಕಿಲ್ಲ?” ಎಂದು ಮನಸ್ಸು ಯೋಚಿಸತೊಡಗಿತ್ತು.

ಇದೇ ಪ್ರಶ್ನೆಗೆ ಉತ್ತರ ಹುಡುಕಿ ಹೊರಟಾಗ, ಇಂಟರ್ನೆಟ್-ನಲ್ಲಿ ಸಿಕ್ಕ ಮಾಹಿತಿ:

.          ಏನ್-ಗುರು ಬ್ಲಾಗಿನಲ್ಲಿ ಹೇಳಿದಂತೆ, ಕನ್ನಡ ಲಿಪಿಯನ್ನೇ ಬಳಸಿ ಗೂಗಲ್-ನಲ್ಲಿ ನಡೆಯುವ ಸರ್ಚ್-ಗಳು ದಿನಕ್ಕೆ ಅಬ್ಬಬ್ಬಾ ಅಂದರೆ ೧೦೦೦ ದಷ್ಟಿರಬಹುದಂತೆ. ತಮಿಳು, ತೆಲುಗು, ಹಿಂದಿ ಭಾಷೆಗಳ ಲಿಪಿಯಲ್ಲಿ ನಡೆಯುವ ಸರ್ಚ್-ಗಳು ಕನ್ನಡಕ್ಕೆ ಹೋಲಿಸಿದರೆ ಬಹಳ ಜಾಸ್ತಿ ಇವೆಯಂತೆ.

.          ಗೂಗಲ್ ನ್ಯೂಸ್ ತಂತ್ರಜ್ನ್ಯಾನವು “ಕ್ಲಸ್ಟರ್ ಟೆಕ್ನಾಲಜಿ” ಬಳಸುತ್ತಾದ್ದರಿಂದ ಗೂಗಲ್ ನ್ಯೂಸ್-ನಲ್ಲಿ ಕನ್ನಡದ ಆಯ್ಕೆ ಮೂಡಿ ಬಂದರೂ, ಹೆಚ್ಚು ಜನರು ಅದನ್ನು ಬಳಸದೇ ಇದ್ದಲ್ಲಿ, ಕ್ಲಸ್ಟರ್ ಟೆಕ್ನಾಲಜಿಯು ಚೆನ್ನಾಗಿ ಕೆಲಸ ಮಾಡಲಾರದು. ಈಗಿನ ಕನ್ನಡದ ಆನ್-ಲೈನ್ ಪತ್ರಿಕೆಗಳಿಗಿರುವ ಒಳಹರಿವು (hit rate) ಅಳೆದು ನೋಡಿದರೆ, ಕ್ಲಸ್ಟರ್ ಟೆಕ್ನಾಲಜಿಗೆ ಉತ್ತಮವಾಗಿ ಕೆಲಸ ನಿರ್ವಹಿಸುವುದು ಕಷ್ಟ ಸಾಧ್ಯವೇ.

ಈ ಮಾಹಿತಿಯಿಂದ ನಮಗೆ ತಿಳಿಯುವುದೇನೆಂದರೆ, ಹೆಚ್ಚು ಕನ್ನಡಿಗರು ಅಂತರ್ಜಾಲದಲ್ಲಿ (internet) ಕನ್ನಡದ ಬಳಕೆ ಮಾಡುತ್ತಿಲ್ಲ. “ಕನ್ನಡ” ಎಂಬ ಪದವನ್ನು ಸರ್ಚ್ ಮಾಡಲೂ “kannada” ಎಂದು ಇಂಗ್ಲಿಷ್-ನಲ್ಲೇ ಬರೆದು ಸರ್ಚ್ ಮಾಡುವವರು ಹೆಚ್ಚು.

ಎರಡನೆಯದಾಗಿ, ಕನ್ನಡಿಗರು ತಮಗೆ ಬೇಕಾದ ಸುದ್ದಿಯನ್ನು ಪಡೆಯಲು ಇಂಗ್ಲಿಷ್ ತಾಣಗಳನ್ನೇ ಹೆಚ್ಚು ಬಳಸುತ್ತಾರೆ. ಬೆಂಗಳೂರಿನ ಐ.ಟಿ ಕಂಪನಿಗಳಲ್ಲಿ ಕೆಲಸ ಮಾಡಲು ಪರರಾಜ್ಯಗಳಿಂದ ಬಂದಿರುವ ಜನರು, ತಮಗೆ ಬೇಕಾದ ಸುದ್ದಿಯನ್ನು ತಮ್ಮ ಭಾಷೆಯ ಸುದ್ದಿ ತಾಣಗಳಿಂದಲೇ ಪಡೆಯುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅವರ ಜೊತೆಯೇ ಕೆಲಸ ಮಾಡುವ ಕನ್ನಡಿಗರಿಗೆ ಮಾತ್ರ ಈ ಹವ್ಯಾಸ ಯಾಕೋ ಅಂಟಿಕೊಂಡಂತಿಲ್ಲ.

ಗೂಗಲ್ ನ್ಯೂಸ್-ನಲ್ಲಿ ಕನ್ನಡದ ಅನುಪಸ್ಥಿತಿ ಹೋಗಲಾಡಿಸಲು ನಾವು ಕನ್ನಡಿಗರು ಈ ಕೆಲವು ಕೆಲಸಗಳನ್ನು ಮಾಡಬಹುದಾಗಿದೆ.

.          ಯಾವುದೇ ವಿಷಯಗಳನ್ನು/ಸುದ್ದಿಯನ್ನು ಇಂಟರ್ನೆಟ್-ನಲ್ಲಿ ಹುಡುಕುವಾಗ ಆದಷ್ಟು ಕನ್ನಡ ಲಿಪಿಯನ್ನೇ ಬಳಸಿ ಹುಡುಕೋಣ. ಉದಾಹರಣೆಗೆ, ಅಮೇರಿಕಾ ಅಧ್ಯಕ್ಷ ಒಬಾಮಾ  ಬಗ್ಗೆ ಹುಡುಕುವಾಗ “Obama”ಎಂದು ಸರ್ಚ್ ಎಂಜಿನ್-ನಲ್ಲಿ ಬರೆಯುವ ಬದಲು “ಒಬಾಮಾ” ಎಂದು ಬರೆಯೋಣ.
ಪ್ರತಿಯೊಂದು ಸರ್ಚ್-ಅನ್ನೂ ಕಲೆ ಹಾಕಿ ಅಳೆದು ನೋಡುವ ಗೂಗಲ್ ಕಂಪನಿಗೆ, ಕನ್ನಡ ಸರ್ಚ್-ಗಳು ಜಾಸ್ತಿಯಾದರೆ ಗೂಗಲ್ ನ್ಯೂಸ್-ನಲ್ಲಿ ಕನ್ನಡ ತರಲು ಸ್ಪೂರ್ಥಿ ಖಂಡಿತ ಸಿಗಬಹುದು.

.          ಯಾವ ಕನ್ನಡ ಪತ್ರಿಕೆಗಳನ್ನು ಮನೆಗೆ ತರಿಸುವುದಿಲ್ಲವೋ, ಅವನ್ನು ಪ್ರತಿದಿನ ಆನ್-ಲೈನ್ ಓದುವ ಹವ್ಯಾಸ ಬೆಳೆಸಿಕೊಳ್ಳೋಣ ಮತ್ತು ನಮ್ಮ ಪರಿಚಯದವರಿಗೂ ಈ ರೀತಿಯ ಹವ್ಯಾಸ ಬೆಳೆಸಿಕೊಳ್ಳುವಂತೆ ಹುರಿದುಂಬಿಸೋಣ.

ನೆನಪಿರಲಿ, ಕನ್ನಡದ ಬಗ್ಗೆ ಕಾಳಜಿ ಇರುವ, ಇಂಟರ್ನೆಟ್ ಸೌಲಭ್ಯ ಹೊಂದಿರುವ ನಾವು ಮಾತ್ರ ಈ ಕೆಲಸ ಮಾಡಬಲ್ಲೆವು. ನಾವೇ ಮಾಡಬೇಕು.

ನಾವು ಈಗಲಾದರೂ ಎಚ್ಚೆತ್ತುಕೊಂಡು ಈ ಕೆಲಸ ಮಾಡದೇ ಇದ್ದಲ್ಲಿ, ಈಗಸದ್ಯಕ್ಕೆ ಕನ್ನಡದಲ್ಲಿ ಸುದ್ದಿ ತಾಣ ಹೊಂದಿರುವ ಯಾಹೂ ಮತ್ತು ಎಮ್.ಎಸ್.ಎನ್ ಕೂಡ ಗೂಗಲ್ ನ್ಯೂಸ್ ದಾರಿಯನ್ನೇ ಹಿಡಿಯಬಹುದು.
ಇಂಟರ್ನೆಟ್-ನಲ್ಲಿ ತಮಿಳು ತೆಲುಗು ಭಾಷೆಗಳು ಮೆರೆಯುತ್ತಿರುವಾಗ, ಕನ್ನಡಕ್ಕೆ ಜಾಗವೇ ಇಲ್ಲ ಎಂದಾಗುವುದು ಬೇಡ ಅಲ್ವಾ?

 

--

ಪ್ರಿಯಾಂಕ್

Rating
No votes yet

Comments