ಲತೀನ-ಕನ್ನಡ ಪದಕೋಶ

ಲತೀನ-ಕನ್ನಡ ಪದಕೋಶ

Comments

ಬರಹ
ಲತೀನ-ಕನ್ನಡ ಪದಕೋಶ
Dictionarium Latino Canarense  ಎಂಬುದು ೧೮೬೧ರಲ್ಲಿ ಪ್ರಕಟವಾಗಿರುವ ಲತೀನ-ಕನ್ನಡ ಪದಕೋಶ. ಇದು ಈ ನಿಟ್ಟಿನಲ್ಲಿ ಬಂದ ಮೊತ್ತಮೊದಲ ಕೃತಿಯಾಗಿದೆ. ಲತೀನ ಭಾಷೆಯು ಆ ಕಾಲದಲ್ಲಿ ಚರ್ಚಿನ ದೈವಾರಾಧನೆಯ ಅಧಿಕೃತ ಭಾಷೆಯಾಗಿತ್ತು ಹಾಗೂ ಲತೀನಿನಲ್ಲಿ ತರಬೇತಿ ಪಡೆದು ಮಿಷನರಿ ಕೆಲಸ ಹಾಗೂ ಚರ್ಚಿನ ಉಸ್ತುವಾರಿ ಮತ್ತು ಗುರುಅಭ್ಯರ್ಥಿಗಳ ಶಿಕ್ಷಣಕ್ಕಾಗಿ ಯೂರೋಪಿನಿಂದ ನಮ್ಮ ನಾಡಿಗೆ ಬರುತ್ತಿದ್ದ ವಿದ್ವಾಂಸರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಈ ಪದಕೋಶವನ್ನು ರಚಿಸಲಾಗಿದೆ.
ವಿಚಿತ್ರವೆಂದರೆ ಈ ಮಹಾಗ್ರಂಥವನ್ನು ರಚಿಸಿದಾತ ತನ್ನ ಹೆಸರನ್ನು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಆದರೆ ಪುಸ್ತಕದ ಮುಖಪುಟದಲ್ಲಿ  AUCTORE RR EPISCOPO JASSENSI, V. A. MAISSURENSI, etc. etc ಎಂದಿರುವುದನ್ನು ನೋಡಿ ಇದನ್ನು ಬರೆದವರು ಬಿಷಪ್ ಯಸೆನ್ ಎಂಬುದಾಗಿ ಹಲವರು ಊಹಿಸಿದ್ದಾರೆ. ಅಮೆರಿಕದ ಟ್ರುಬ್ನರ್ಸ್ ಆರ್ಕೈವಿನ ಕೆಟಲಾಗಿನಲ್ಲಿ (http://www.archive.org/stream/trbnerscatalogu01cogoog/trbnerscatalogu01cogoog_djvu.txt) ಹಾಗೂ ರಷ್ಯಾದ ಲೈಬ್ರರಿ (http://www.brocgaus.ru/text/047/405.htm) ಆ ಪುಸ್ತಕವನ್ನು ಬರೆದವರು ಬಿಷಪ್ ಯಸೆನ್ ಎಂದೇ ದಾಖಲಿಸಲಾಗಿದೆ. ನೋಡಿ: Jassensi, Episcopi, Dictionarium Latino-Canarense. Svo. pp. viii. and 1880 and 36, half bound. Bengalori, 1861. £1 2s. ಆದರೆ ಇಂಡಿಯಾದ ಓರಿಯೆಂಟಲ್ ಲೈಬ್ರರಿ, ನ್ಯಾಷನಲ್ ಬುಕ್ ಟ್ರಸ್ಟ್ ಅಥವಾ ಕೇಂದ್ರ ಸಾಹಿತ್ಯ ಅಕಾಡೆಮಿ ಮುಂತಾದವುಗಳ ಪುಸ್ತಕಯಾದಿಯಲ್ಲಿ ಈ ಗ್ರಂಥವು ದಾಖಲಾಗಿಲ್ಲ.  
ಇನ್ನು ಮುಖಪುಟದಲ್ಲಿ ನಮೂದಾಗಿರುವ AUCTORE RR EPISCOPO JASSENSI, V. A. MAISSURENSI, etc. etc (ಔಕ್ತೊರೆ ರೆವರೆಂದಿಸ್ಸಿಮೊ ಎಪಿಸ್ಕೊಪೊ ಯಸೆನ್, ವಿಕಾರಿಯೋ ಅಪೊಸ್ತೊಲಿಕೊ ಮಯಿಸ್ಸುರ್)  ಎಂಬುದನ್ನು ಅರ್ಥೈಸಿದಾಗ ಈ ಪುಸ್ತಕವನ್ನು ರಚಿಸಿದವರು: ಪೋಪ್ ಜಗದ್ಗುರುಗಳಿಂದ ಬಿರುದಾಂಕಿತ ಬಿಷಪರಾಗಿ ಮೈಸೂರು ಸೀಮೆಗೆ ಕಳುಹಿಸಲ್ಪಟ್ಟ ಪ್ರೇಷಿತ ಮಹಾಸ್ವಾಮಿಗಳು ಎಂದು ತಿಳಿಯುತ್ತದೆ.
ಆ ಸಂದರ್ಭದಲ್ಲಿ ಅಂದರೆ ೧೯ನೇ ಶತಮಾನದಲ್ಲಿ ರೋಮಾಪುರಿಯ ಜಗದ್ಗುರುಗಳು ಎತಿಯೇನ್ ಲೂಯಿ ಶಾರ್ಬೊನೊ ಅವರನ್ನು ಬಿರುದಾಂಕಿತ ಬಿಷಪರಾಗಿ ಅಭಿಷಿಕ್ತಗೊಳಿಸಿ ಮೈಸೂರು ಸೀಮೆಗೆ ಮುಖ್ಯ ಪ್ರೇಷಿತ ಸ್ವಾಮಿಗಳಾಗಿ ಕಳುಹಿಸಿದ್ದರು ಎಂಬ ಎಳೆಯನ್ನು ತೆಗೆದುಕೊಂಡಾಗ ಈ ಲತೀನ್-ಕನ್ನಡ ನಿಘಂಟನ್ನು ರಚಿಸಿದವರು ಶಾರ್ಬೊನೊ ಅವರೇ ಎಂದು ಖಚಿತವಾಗಿ ತಿಳಿದುಬರುತ್ತದೆ. 
ಶಾರ್ಬೊನೊ ಎಂಬುವವರು ಫ್ರಾನ್ಸ್ ದೇಶದವರಾಗಿದ್ದು ಈ ಪದಕೋಶದ ರಚನೆಗೆ ಹದಿನೈದು ವರ್ಷಗಳ ಕಾಲ ಪರಿಶ್ರಮಪಟ್ಟಿದ್ದಾರೆ. ಅವರು ಫ್ರೆಂಚ್ ವಸಾಹತು ಆಗಿದ್ದ ಪಾಂಡಿಚೇರಿಯಲ್ಲಿ ತಮ್ಮ ಮೊದಲ ದಿನಗಳನ್ನು ಕಳೆದು ತಮಿಳು ತೆಲುಗುಗಳ ಪರಿಚಯ ಮಾಡಿಕೊಂಡ ತರುವಾಯ ಕನ್ನಡನಾಡಿಗೆ ಬಂದರು. ಹೀಗಾಗಿ ಅವರು ಕನ್ನಡವನ್ನು ತಮಿಳಿನ ಮೂಲಕ ಕಲಿತ ಸಾಧ್ಯತೆಯಿದೆ. ತಮ್ಮ ತಿಳಿವಳಿಕೆಯ ನಿಲುವಿನಲ್ಲಿ ಅವರು ಕನ್ನಡ ಭಾಷೆಯನ್ನು ಸಂಪದ್ಭರಿತ ಭಾಷೆಯೆಂದು ತಿಳಿದಿಲ್ಲ. ಪುಸ್ತಕದ ಆದಿಯಲ್ಲಿ ನೀಡುವ ಪ್ರಸ್ತಾವನೆಯಲ್ಲಿ  ಅವರು "ಕನ್ನಡವು ನಾಲ್ಕು ಭಾಷೆಗಳಿಂದ ಕಲೆಹಾಕಿರುವ ನುಡಿಯೆಂದು ಹೇಳುವುದುಂಟು . . . ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯು ಸ್ಥಿರತೆಯನ್ನು ತಲುಪಿರುವುದೆಂದು ಹೇಳಲು ಸಾಧ್ಯವಿಲ್ಲ. ಅದರ ಪದವಿನ್ಯಾಸದಲ್ಲಿ ಕೂಡಾ ವೈವಿಧ್ಯ ಮತ್ತು ಬಹುರೂಪವು ಕಾಣಬರುವುದು" ಎಂದು ಹೇಳುತ್ತಾರೆ. 
ಈ ಪದಕೋಶದ ರಚನೆಗೆ ಶಾರ್ಬೊನೊ ಅವರು ಪುದುಚೇರಿಯಿಂದ ಪ್ರಕಟವಾದ ಲತೀನ್-ತಮಿಳು ನಿಘಂಟಿನ ಸಹಾಯ ಪಡೆದಿದ್ದಾರೆ. ಆದರೆ ಗ್ರಂಥದ ಮುಕ್ತಾಯದ ವೇಳೆಗೆ ಅವರಿಗೆ ರೀವ್ ಅವರ ನಿಘಂಟು ದೊರೆತು ಕನ್ನಡ ಸಾಹಿತ್ಯದ ಅಲ್ಪ ಪರಿಚಯವಾದುದರ ಕುರುಹು ದೊರೆಯುತ್ತದೆ. ಫರ್ಡಿನೆಂಡ್ ಕಿಟೆಲರಂತೆ ಭಾಷಾಧ್ಯಯನ, ಗ್ರಂಥಸಂಪಾದನೆ, ನಿಘಂಟು ರಚನಾಶಾಸ್ತ್ರದ ಗೋಜಿಗೆ ಹೋಗದೆ ಅವರು ಲತೀನ್ ಪದಕ್ಕೆ ಹತ್ತಿರವಾದ ಕನ್ನಡ ಪದವನ್ನು ನೀಡುವುದರಲ್ಲಿಯೇ ತೃಪ್ತರಾಗಿದ್ದಾರೆ. ಆದರೆ ಇದೊಂದು ಪ್ರಾರಂಭಿಕ ಪ್ರಯತ್ನ ಎಂಬುದನ್ನು ಮಾತ್ರ ತಳ್ಳಿಹಾಕುವಂತಿಲ್ಲ, (ಕಿಟೆಲರ ಪದಕೋಶ ಪ್ರಕಟವಾಗಿದ್ದು ೧೮೯೪ರಲ್ಲಿ) ಅದಕ್ಕಾಗಿಯೇ ಈ ಕೃತಿಯು ನಮಗೆ ಮುಖ್ಯವಾಗುತ್ತದೆ ಮಾತ್ರವಲ್ಲ ಐತಿಹಾಸಿಕವಾಗಿಯೂ ಮಹತ್ವದ್ದಾಗುತ್ತದೆ.
ಯಾವುದೇ ಭಾಷಾ ಬೆಳವಣಿಗೆಯಲ್ಲಿ ತೋರಿಬರುವ ಒಂದು ಅನಿವಾರ್ಯ ಪ್ರಕ್ರಿಯೆಯನ್ನು ತಮ್ಮ ಪ್ರಸ್ತಾವನೆಯಲ್ಲಿ ಶಾರ್ಬೊನೊ ಅವರು ದಾಖಲಿಸುತ್ತಾ ಹೀಗೆ ಹೇಳುತ್ತಾರೆ - "ಹಿಂದುಸ್ಥಾನಿಯಿಂದಲೋ ಸಂಸ್ಕೃತದಿಂದಲೋ ಬಂದ, ಇಲ್ಲವೆ ಕನ್ನಡ ದೇಶ ಶಬ್ದಾವಳಿಯಲ್ಲಿ ಸಿಗುವ ಆದಷ್ಟು ಪರ್ಯಾಯ ಪದಗಳನ್ನು ನಾನು ಇಲ್ಲಿ ಸೇರಿಸಿದ್ದೇನೆ. ಆಂಗ್ಲ ಪದಗಳನ್ನು ಮಾತ್ರ, ಅವೆಷ್ಟು ಬಳಕೆಯಲ್ಲಿದ್ದರೂ, ಸೇರಿಸಿಲ್ಲ. ಆದರೂ ನನ್ನ ಅಭಿಪ್ರಾಯದ ಮೇರೆಗೆ ಇಂತಹ ಹಲವು ಪದಗಳನ್ನು ಸ್ವೀಕರಿಸಿ ಅಂಗೀಕರಣ ಕೊಡುವ ಕಾಲವು ಬಲು ದೂರವಿಲ್ಲ. ಕಾರಣ ಆ ಅರ್ಥಗಳಲ್ಲೇ ಬಳಸಲಾಗುತ್ತಿದ್ದ ಅನೇಕ ದೇಶಿ ಪದಗಳು ಲೋಪವಾಗಿ ಅಳಿದುಹೋಗುವಷ್ಟು ಈ ಹೊಸ ಆಂಗ್ಲ ಪದಗಳು ಬಳಕೆಗೆ ಬರಲಾರಂಭಿಸಿವೆ" (ಸ್ವಾಮಿ ದೇವದತ್ತ ಕಾಮತರ ಅನುವಾದ). ಶಾರ್ಬೊನೋ ಅವರ ಈ ಮಾತು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ಈ ಒಂದು ನಿಟ್ಟಿನಲ್ಲಿ ಅಂದರೆ ಭಾಷಾಧ್ಯಯನದ ದೃಷ್ಟಿಯಿಂದಲೂ ಈ ಲತೀನ್-ಕನ್ನಡ ಪದಕೋಶ ನಮಗೆ ಮುಖ್ಯವಾಗುತ್ತದೆ. 
ಈ ಪದನೆರಕೆಯಲ್ಲಿ ಶಾರ್ಬೊನೊ ಅವರು ಬರೀ ಲತೀನ ಪದಗಳನ್ನು ಅಕಾರಾದಿಯಾಗಿ ಕೊಡುತ್ತಾ ಅವಕ್ಕೆ ಅರ್ಥಪ್ರಾಪ್ತಿಯನ್ನು ನೀಡುತ್ತಿಲ್ಲ. ಬದಲಿಗೆ ಅವರು ಲತೀನ ಪಂಡಿತ ಭಾಷೆ, ದಿನಬಳಕೆಯ ಭಾಷೆ, ಕವಿಗಳ ಸಾಲುಗಳನ್ನು ವಿಶದೀಕರಿಸುತ್ತಾ ಅವುಗಳ ಜೊತೆಜೊತೆಗೇ ಕನ್ನಡದ ಪದಗಳಲ್ಲಿನ ವಿವಿಧ ಪ್ರಾದೇಶಿಕ ಭೇದಗಳು, ಅರ್ಥಾಂತರಗಳು, ಅರ್ಥವೈವಿಧ್ಯಗಳನ್ನು ಸಹಾ ವಿಶದೀಕರಿಸುತ್ತಾರೆ. ಕನ್ನಡಿಗರ ಆಡುಮಾತಿನಲ್ಲಿ ಬಳಕೆಯಲ್ಲಿರುವ ಪದಗಳನ್ನೇ - ಅವುಗಳ ಮೂಲ ಯಾವುದೇ ಇದ್ದರೂ - ಮೊದಲು ನೀಡುತ್ತಾರೆ. ಅವರು ಮುದ್ರಣಕ್ಕಾಗಿ ಬಳಸಿದ ಕನ್ನಡ ಲಿಪಿಯು ಅಂದಿನ ಅಂದರೆ ಹತ್ತೊಂಬತ್ತನೇ ಶತಮಾನದ ಕನ್ನಡ ಲಿಪಿಯಾಗಿದ್ದು ಮೇಲುನೋಟಕ್ಕೆ ಓದಲು ಸ್ವಲ್ಪ ಕ್ಲಿಷ್ಟವೆಂಬಂತೆ ತೋರುತ್ತದೆಯಾದರೂ ಅಲ್ಪ ಪ್ರಯತ್ನವನ್ನು ತೊಡಗಿಸಿದರೆ ಆ ಕ್ಲಿಷ್ಟತೆ ಪರಿಹಾರವಾಗುವುದರಲ್ಲಿ ಸಂಶಯವಿಲ್ಲ. 
ಕ್ರೈಸ್ತ ಮಿಷನರಿಗಳು ತಮ್ಮ ಅವಿಭಾಜ್ಯ ಕರ್ತವ್ಯವಾಗಿದ್ದ ಅಧ್ಯಾತ್ಮವನ್ನು ಬದಿಗಿರಿಸಿ ನೇಮನಿಷ್ಠೆಯೋ ಎಂಬಂತೆ ಕನ್ನಡದ ಅಧ್ಯಯನದಲ್ಲಿ ತೊಡಗಿದ್ದರು. ಮತ್ತು ಅವರ ಕನ್ನಡದ ಕೆಲಸಗಳು ವಿದ್ವತ್ತಿನ ನೆಲೆಯಲ್ಲಿ ನಿರ್ವ್ಯಾಜವಾಗಿ ನಿಲ್ಲುವಂಥವು. ಅದಕ್ಕೆ ಅವರ ಐರೋಪ್ಯ ಶಿಕ್ಷಣಪದ್ಧತಿಯು ಅಪಾರವಾಗಿ ನೆರವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ. ಐರೋಪ್ಯ ಶಿಕ್ಷಣಪದ್ಧತಿಯಂತೆ ಅವರು ಭಾಷಾಕಲಿಕೆ ಮತ್ತು ಗ್ರಂಥಸಂಪಾದನೆಗಳನ್ನು ಪ್ರಸ್ತುತಪಡಿಸಿದ ಪರಿಣಾಮವಾಗಿ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಜೈನಯುಗ, ಶರಣಯುಗ, ದಾಸಯುಗಗಳೆಂದು ಕರೆದಂತೆ ಹತ್ತೊಂಬತ್ತನೇ ಶತಮಾನವನ್ನು ಕ್ರೈಸ್ತಯುಗವೆಂದು ಕರೆಯುವುದರಲ್ಲಿ ಹಿಂಜರಿತವೇಕೆ? ಇರಬಾರದು. ಕ್ರೈಸ್ತ ಮಿಷನರಿಗಳು ಹಾಗೂ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಕ್ರೈಸ್ತ ಅಧಿಕಾರಿಗಳು ನಮ್ಮ ನಾಡುನುಡಿಗೆ ಸಲ್ಲಿಸಿದ ಕೊಡುಗೆಯ ಕುರಿತೇ ಹಲವಾರು ಗ್ರಂಥಗಳನ್ನು ಬರೆಯಲಾಗಿದೆ. ಕನ್ನಡ ಬಂಧುಗಳು ಹಾಗೂ ಅಧ್ಯಯನಶೀಲರು ಕಿಟೆಲ್, ರೈಸ್, ಫ್ಲೀಟ್, ಮೊಗ್ಲಿಂಗ್, ಬುಚರ್, ರೀವ್, ಸ್ಯಾಂಡರ‍್ಸನ್, ಮ್ಯಾಕರೆಲ್, ವೈಗಲ್, ಮೆಕೆಂಝಿ, ವಿಲ್ಕ್ಸ್ ಮುಂತಾದ ಇತರ ಐರೋಪ್ಯರ ಕೃತಿಗಳನ್ನು ಆದರಿಸಿದಂತೆ ನಮ್ಮ ಈ ಶಾರ್ಬೊನೊ ಎಂಬ ಫ್ರೆಂಚ್ ಪಾದ್ರಿಯ ಕೃತಿಯನ್ನೂ ಒಪ್ಪಿಸಿಕೊಳ್ಳುವರೇ? 

Dictionarium Latino Canarense  ಎಂಬುದು ೧೮೬೧ರಲ್ಲಿ ಪ್ರಕಟವಾಗಿರುವ ಲತೀನ-ಕನ್ನಡ ಪದಕೋಶ. ಇದು ಈ ನಿಟ್ಟಿನಲ್ಲಿ ಬಂದ ಮೊತ್ತಮೊದಲ ಕೃತಿಯಾಗಿದೆ. ಲತೀನ ಭಾಷೆಯು ಆ ಕಾಲದಲ್ಲಿ ಚರ್ಚಿನ ದೈವಾರಾಧನೆಯ ಅಧಿಕೃತ ಭಾಷೆಯಾಗಿತ್ತು ಹಾಗೂ ಲತೀನಿನಲ್ಲಿ ತರಬೇತಿ ಪಡೆದು ಮಿಷನರಿ ಕೆಲಸ ಹಾಗೂ ಚರ್ಚಿನ ಉಸ್ತುವಾರಿ ಮತ್ತು ಗುರುಅಭ್ಯರ್ಥಿಗಳ ಶಿಕ್ಷಣಕ್ಕಾಗಿ ಯೂರೋಪಿನಿಂದ ನಮ್ಮ ನಾಡಿಗೆ ಬರುತ್ತಿದ್ದ ವಿದ್ವಾಂಸರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಈ ಪದಕೋಶವನ್ನು ರಚಿಸಲಾಗಿದೆ.
ವಿಚಿತ್ರವೆಂದರೆ ಈ ಮಹಾಗ್ರಂಥವನ್ನು ರಚಿಸಿದಾತ ತನ್ನ ಹೆಸರನ್ನು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಆದರೆ ಪುಸ್ತಕದ ಮುಖಪುಟದಲ್ಲಿ  AUCTORE RR EPISCOPO JASSENSI, V. A. MAISSURENSI, etc. etc ಎಂದಿರುವುದನ್ನು ನೋಡಿ ಇದನ್ನು ಬರೆದವರು ಬಿಷಪ್ ಯಸೆನ್ ಎಂಬುದಾಗಿ ಹಲವರು ಊಹಿಸಿದ್ದಾರೆ. ಅಮೆರಿಕದ ಟ್ರುಬ್ನರ್ಸ್ ಆರ್ಕೈವಿನ ಕೆಟಲಾಗಿನಲ್ಲಿ (http://www.archive.org/stream/trbnerscatalogu01cogoog/trbnerscatalogu01cogoog_djvu.txt) ಹಾಗೂ ರಷ್ಯಾದ ಲೈಬ್ರರಿ (http://www.brocgaus.ru/text/047/405.htm) ಆ ಪುಸ್ತಕವನ್ನು ಬರೆದವರು ಬಿಷಪ್ ಯಸೆನ್ ಎಂದೇ ದಾಖಲಿಸಲಾಗಿದೆ. ನೋಡಿ: Jassensi, Episcopi, Dictionarium Latino-Canarense. Svo. pp. viii. and 1880 and 36, half bound. Bengalori, 1861. £1 2s. ಆದರೆ ಇಂಡಿಯಾದ ಓರಿಯೆಂಟಲ್ ಲೈಬ್ರರಿ, ನ್ಯಾಷನಲ್ ಬುಕ್ ಟ್ರಸ್ಟ್ ಅಥವಾ ಕೇಂದ್ರ ಸಾಹಿತ್ಯ ಅಕಾಡೆಮಿ ಮುಂತಾದವುಗಳ ಪುಸ್ತಕಯಾದಿಯಲ್ಲಿ ಈ ಗ್ರಂಥವು ದಾಖಲಾಗಿಲ್ಲ.  

ಇನ್ನು ಮುಖಪುಟದಲ್ಲಿ ನಮೂದಾಗಿರುವ AUCTORE RR EPISCOPO JASSENSI, V. A. MAISSURENSI, etc. etc (ಔಕ್ತೊರೆ ರೆವರೆಂದಿಸ್ಸಿಮೊ ಎಪಿಸ್ಕೊಪೊ ಯಸೆನ್, ವಿಕಾರಿಯೋ ಅಪೊಸ್ತೊಲಿಕೊ ಮಯಿಸ್ಸುರ್)  ಎಂಬುದನ್ನು ಅರ್ಥೈಸಿದಾಗ ಈ ಪುಸ್ತಕವನ್ನು ರಚಿಸಿದವರು: ಪೋಪ್ ಜಗದ್ಗುರುಗಳಿಂದ ಬಿರುದಾಂಕಿತ ಬಿಷಪರಾಗಿ ಮೈಸೂರು ಸೀಮೆಗೆ ಕಳುಹಿಸಲ್ಪಟ್ಟ ಪ್ರೇಷಿತ ಮಹಾಸ್ವಾಮಿಗಳು ಎಂದು ತಿಳಿಯುತ್ತದೆ.
ಆ ಸಂದರ್ಭದಲ್ಲಿ ಅಂದರೆ ೧೯ನೇ ಶತಮಾನದಲ್ಲಿ ರೋಮಾಪುರಿಯ ಜಗದ್ಗುರುಗಳು ಎತಿಯೇನ್ ಲೂಯಿ ಶಾರ್ಬೊನೊ ಅವರನ್ನು ಬಿರುದಾಂಕಿತ ಬಿಷಪರಾಗಿ ಅಭಿಷಿಕ್ತಗೊಳಿಸಿ ಮೈಸೂರು ಸೀಮೆಗೆ ಮುಖ್ಯ ಪ್ರೇಷಿತ ಸ್ವಾಮಿಗಳಾಗಿ ಕಳುಹಿಸಿದ್ದರು ಎಂಬ ಎಳೆಯನ್ನು ತೆಗೆದುಕೊಂಡಾಗ ಈ ಲತೀನ್-ಕನ್ನಡ ನಿಘಂಟನ್ನು ರಚಿಸಿದವರು ಶಾರ್ಬೊನೊ ಅವರೇ ಎಂದು ಖಚಿತವಾಗಿ ತಿಳಿದುಬರುತ್ತದೆ. 
ಶಾರ್ಬೊನೊ ಎಂಬುವವರು ಫ್ರಾನ್ಸ್ ದೇಶದವರಾಗಿದ್ದು ಈ ಪದಕೋಶದ ರಚನೆಗೆ ಹದಿನೈದು ವರ್ಷಗಳ ಕಾಲ ಪರಿಶ್ರಮಪಟ್ಟಿದ್ದಾರೆ. ಅವರು ಫ್ರೆಂಚ್ ವಸಾಹತು ಆಗಿದ್ದ ಪಾಂಡಿಚೇರಿಯಲ್ಲಿ ತಮ್ಮ ಮೊದಲ ದಿನಗಳನ್ನು ಕಳೆದು ತಮಿಳು ತೆಲುಗುಗಳ ಪರಿಚಯ ಮಾಡಿಕೊಂಡ ತರುವಾಯ ಕನ್ನಡನಾಡಿಗೆ ಬಂದರು. ಹೀಗಾಗಿ ಅವರು ಕನ್ನಡವನ್ನು ತಮಿಳಿನ ಮೂಲಕ ಕಲಿತ ಸಾಧ್ಯತೆಯಿದೆ. ತಮ್ಮ ತಿಳಿವಳಿಕೆಯ ನಿಲುವಿನಲ್ಲಿ ಅವರು ಕನ್ನಡ ಭಾಷೆಯನ್ನು ಸಂಪದ್ಭರಿತ ಭಾಷೆಯೆಂದು ತಿಳಿದಿಲ್ಲ. ಪುಸ್ತಕದ ಆದಿಯಲ್ಲಿ ನೀಡುವ ಪ್ರಸ್ತಾವನೆಯಲ್ಲಿ  ಅವರು "ಕನ್ನಡವು ನಾಲ್ಕು ಭಾಷೆಗಳಿಂದ ಕಲೆಹಾಕಿರುವ ನುಡಿಯೆಂದು ಹೇಳುವುದುಂಟು . . . ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯು ಸ್ಥಿರತೆಯನ್ನು ತಲುಪಿರುವುದೆಂದು ಹೇಳಲು ಸಾಧ್ಯವಿಲ್ಲ. ಅದರ ಪದವಿನ್ಯಾಸದಲ್ಲಿ ಕೂಡಾ ವೈವಿಧ್ಯ ಮತ್ತು ಬಹುರೂಪವು ಕಾಣಬರುವುದು" ಎಂದು ಹೇಳುತ್ತಾರೆ. 
ಈ ಪದಕೋಶದ ರಚನೆಗೆ ಶಾರ್ಬೊನೊ ಅವರು ಪುದುಚೇರಿಯಿಂದ ಪ್ರಕಟವಾದ ಲತೀನ್-ತಮಿಳು ನಿಘಂಟಿನ ಸಹಾಯ ಪಡೆದಿದ್ದಾರೆ. ಆದರೆ ಗ್ರಂಥದ ಮುಕ್ತಾಯದ ವೇಳೆಗೆ ಅವರಿಗೆ ರೀವ್ ಅವರ ನಿಘಂಟು ದೊರೆತು ಕನ್ನಡ ಸಾಹಿತ್ಯದ ಅಲ್ಪ ಪರಿಚಯವಾದುದರ ಕುರುಹು ದೊರೆಯುತ್ತದೆ. ಫರ್ಡಿನೆಂಡ್ ಕಿಟೆಲರಂತೆ ಭಾಷಾಧ್ಯಯನ, ಗ್ರಂಥಸಂಪಾದನೆ, ನಿಘಂಟು ರಚನಾಶಾಸ್ತ್ರದ ಗೋಜಿಗೆ ಹೋಗದೆ ಅವರು ಲತೀನ್ ಪದಕ್ಕೆ ಹತ್ತಿರವಾದ ಕನ್ನಡ ಪದವನ್ನು ನೀಡುವುದರಲ್ಲಿಯೇ ತೃಪ್ತರಾಗಿದ್ದಾರೆ. ಆದರೆ ಇದೊಂದು ಪ್ರಾರಂಭಿಕ ಪ್ರಯತ್ನ ಎಂಬುದನ್ನು ಮಾತ್ರ ತಳ್ಳಿಹಾಕುವಂತಿಲ್ಲ, (ಕಿಟೆಲರ ಪದಕೋಶ ಪ್ರಕಟವಾಗಿದ್ದು ೧೮೯೪ರಲ್ಲಿ) ಅದಕ್ಕಾಗಿಯೇ ಈ ಕೃತಿಯು ನಮಗೆ ಮುಖ್ಯವಾಗುತ್ತದೆ ಮಾತ್ರವಲ್ಲ ಐತಿಹಾಸಿಕವಾಗಿಯೂ ಮಹತ್ವದ್ದಾಗುತ್ತದೆ.
ಯಾವುದೇ ಭಾಷಾ ಬೆಳವಣಿಗೆಯಲ್ಲಿ ತೋರಿಬರುವ ಒಂದು ಅನಿವಾರ್ಯ ಪ್ರಕ್ರಿಯೆಯನ್ನು ತಮ್ಮ ಪ್ರಸ್ತಾವನೆಯಲ್ಲಿ ಶಾರ್ಬೊನೊ ಅವರು ದಾಖಲಿಸುತ್ತಾ ಹೀಗೆ ಹೇಳುತ್ತಾರೆ - "ಹಿಂದುಸ್ಥಾನಿಯಿಂದಲೋ ಸಂಸ್ಕೃತದಿಂದಲೋ ಬಂದ, ಇಲ್ಲವೆ ಕನ್ನಡ ದೇಶ ಶಬ್ದಾವಳಿಯಲ್ಲಿ ಸಿಗುವ ಆದಷ್ಟು ಪರ್ಯಾಯ ಪದಗಳನ್ನು ನಾನು ಇಲ್ಲಿ ಸೇರಿಸಿದ್ದೇನೆ. ಆಂಗ್ಲ ಪದಗಳನ್ನು ಮಾತ್ರ, ಅವೆಷ್ಟು ಬಳಕೆಯಲ್ಲಿದ್ದರೂ, ಸೇರಿಸಿಲ್ಲ. ಆದರೂ ನನ್ನ ಅಭಿಪ್ರಾಯದ ಮೇರೆಗೆ ಇಂತಹ ಹಲವು ಪದಗಳನ್ನು ಸ್ವೀಕರಿಸಿ ಅಂಗೀಕರಣ ಕೊಡುವ ಕಾಲವು ಬಲು ದೂರವಿಲ್ಲ. ಕಾರಣ ಆ ಅರ್ಥಗಳಲ್ಲೇ ಬಳಸಲಾಗುತ್ತಿದ್ದ ಅನೇಕ ದೇಶಿ ಪದಗಳು ಲೋಪವಾಗಿ ಅಳಿದುಹೋಗುವಷ್ಟು ಈ ಹೊಸ ಆಂಗ್ಲ ಪದಗಳು ಬಳಕೆಗೆ ಬರಲಾರಂಭಿಸಿವೆ" (ಸ್ವಾಮಿ ದೇವದತ್ತ ಕಾಮತರ ಅನುವಾದ). ಶಾರ್ಬೊನೋ ಅವರ ಈ ಮಾತು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ಈ ಒಂದು ನಿಟ್ಟಿನಲ್ಲಿ ಅಂದರೆ ಭಾಷಾಧ್ಯಯನದ ದೃಷ್ಟಿಯಿಂದಲೂ ಈ ಲತೀನ್-ಕನ್ನಡ ಪದಕೋಶ ನಮಗೆ ಮುಖ್ಯವಾಗುತ್ತದೆ. 
ಈ ಪದನೆರಕೆಯಲ್ಲಿ ಶಾರ್ಬೊನೊ ಅವರು ಬರೀ ಲತೀನ ಪದಗಳನ್ನು ಅಕಾರಾದಿಯಾಗಿ ಕೊಡುತ್ತಾ ಅವಕ್ಕೆ ಅರ್ಥಪ್ರಾಪ್ತಿಯನ್ನು ನೀಡುತ್ತಿಲ್ಲ. ಬದಲಿಗೆ ಅವರು ಲತೀನ ಪಂಡಿತ ಭಾಷೆ, ದಿನಬಳಕೆಯ ಭಾಷೆ, ಕವಿಗಳ ಸಾಲುಗಳನ್ನು ವಿಶದೀಕರಿಸುತ್ತಾ ಅವುಗಳ ಜೊತೆಜೊತೆಗೇ ಕನ್ನಡದ ಪದಗಳಲ್ಲಿನ ವಿವಿಧ ಪ್ರಾದೇಶಿಕ ಭೇದಗಳು, ಅರ್ಥಾಂತರಗಳು, ಅರ್ಥವೈವಿಧ್ಯಗಳನ್ನು ಸಹಾ ವಿಶದೀಕರಿಸುತ್ತಾರೆ. ಕನ್ನಡಿಗರ ಆಡುಮಾತಿನಲ್ಲಿ ಬಳಕೆಯಲ್ಲಿರುವ ಪದಗಳನ್ನೇ - ಅವುಗಳ ಮೂಲ ಯಾವುದೇ ಇದ್ದರೂ - ಮೊದಲು ನೀಡುತ್ತಾರೆ. ಅವರು ಮುದ್ರಣಕ್ಕಾಗಿ ಬಳಸಿದ ಕನ್ನಡ ಲಿಪಿಯು ಅಂದಿನ ಅಂದರೆ ಹತ್ತೊಂಬತ್ತನೇ ಶತಮಾನದ ಕನ್ನಡ ಲಿಪಿಯಾಗಿದ್ದು ಮೇಲುನೋಟಕ್ಕೆ ಓದಲು ಸ್ವಲ್ಪ ಕ್ಲಿಷ್ಟವೆಂಬಂತೆ ತೋರುತ್ತದೆಯಾದರೂ ಅಲ್ಪ ಪ್ರಯತ್ನವನ್ನು ತೊಡಗಿಸಿದರೆ ಆ ಕ್ಲಿಷ್ಟತೆ ಪರಿಹಾರವಾಗುವುದರಲ್ಲಿ ಸಂಶಯವಿಲ್ಲ. 
ಕ್ರೈಸ್ತ ಮಿಷನರಿಗಳು ತಮ್ಮ ಅವಿಭಾಜ್ಯ ಕರ್ತವ್ಯವಾಗಿದ್ದ ಅಧ್ಯಾತ್ಮವನ್ನು ಬದಿಗಿರಿಸಿ ನೇಮನಿಷ್ಠೆಯೋ ಎಂಬಂತೆ ಕನ್ನಡದ ಅಧ್ಯಯನದಲ್ಲಿ ತೊಡಗಿದ್ದರು. ಮತ್ತು ಅವರ ಕನ್ನಡದ ಕೆಲಸಗಳು ವಿದ್ವತ್ತಿನ ನೆಲೆಯಲ್ಲಿ ನಿರ್ವ್ಯಾಜವಾಗಿ ನಿಲ್ಲುವಂಥವು. ಅದಕ್ಕೆ ಅವರ ಐರೋಪ್ಯ ಶಿಕ್ಷಣಪದ್ಧತಿಯು ಅಪಾರವಾಗಿ ನೆರವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ. ಐರೋಪ್ಯ ಶಿಕ್ಷಣಪದ್ಧತಿಯಂತೆ ಅವರು ಭಾಷಾಕಲಿಕೆ ಮತ್ತು ಗ್ರಂಥಸಂಪಾದನೆಗಳನ್ನು ಪ್ರಸ್ತುತಪಡಿಸಿದ ಪರಿಣಾಮವಾಗಿ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಜೈನಯುಗ, ಶರಣಯುಗ, ದಾಸಯುಗಗಳೆಂದು ಕರೆದಂತೆ ಹತ್ತೊಂಬತ್ತನೇ ಶತಮಾನವನ್ನು ಕ್ರೈಸ್ತಯುಗವೆಂದು ಕರೆಯುವುದರಲ್ಲಿ ಹಿಂಜರಿತವೇಕೆ? ಕ್ರೈಸ್ತ ಮಿಷನರಿಗಳು ಹಾಗೂ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಕ್ರೈಸ್ತ ಅಧಿಕಾರಿಗಳು ನಮ್ಮ ನಾಡುನುಡಿಗೆ ಸಲ್ಲಿಸಿದ ಕೊಡುಗೆಯ ಕುರಿತೇ ಹಲವಾರು ಗ್ರಂಥಗಳನ್ನು ಬರೆಯಲಾಗಿದೆ. ಕನ್ನಡ ಬಂಧುಗಳು ಹಾಗೂ ಅಧ್ಯಯನಶೀಲರು ಕಿಟೆಲ್, ರೈಸ್, ಫ್ಲೀಟ್, ಮೊಗ್ಲಿಂಗ್, ಬುಚರ್, ರೀವ್, ಸ್ಯಾಂಡರ‍್ಸನ್, ಮ್ಯಾಕರೆಲ್, ವೈಗಲ್, ಮೆಕೆಂಝಿ, ವಿಲ್ಕ್ಸ್ ಮುಂತಾದ ಇತರ ಐರೋಪ್ಯರ ಕೃತಿಗಳನ್ನು ಆದರಿಸಿದಂತೆ ನಮ್ಮ ಈ ಶಾರ್ಬೊನೊ ಎಂಬ ಫ್ರೆಂಚ್ ಪಾದ್ರಿಯ ಕೃತಿಯನ್ನೂ ಒಪ್ಪಿಸಿಕೊಳ್ಳುವರೇ? 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet