ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಒಂದನೇ ಕಂತು)

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಒಂದನೇ ಕಂತು)

ಬರಹ


ಒಂದು ವರ್ಷದಲ್ಲಿ ಸುಮಾರು ಹದಿನೈದು ಲಕ್ಷ ಹೊರ ರೋಗಿಗಳಿಗೆ ಉಪಚಾರ ನೀಡುವ, ಹೆಚ್ಚು ಕಡಿಮೆ ಒಂದು ಲಕ್ಷ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಅಭಾವೈವಿಸಂ (All India Institute of Medical Sciences, AIIMS) ಭಾರತದ ಅತ್ಯುಚ್ಚ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದು ಎಂಬುದರಲ್ಲಿ ಸಂಶಯವಿಲ್ಲ; ಇದು ಭಾರತದ ಸರ್ವಶ್ರೇಷ್ಠ ವೈದ್ಯಕೀಯ ವಿಜ್ಞಾನ ಸಂಸ್ಥೆ ಎಂದು ಕೂಡ ಹೆಸರು ಪಡೆದಿತ್ತು/ಪಡೆದಿದೆ.

ಭಾರತ ದೇಶದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಹಾಗೂ ಅವರ ಸಂಪುಟದಲ್ಲಿ ಆರೋಗ್ಯ ಸಚಿವೆಯಾಗಿದ್ದ ರಾಜಕುಮಾರಿ ಅಮೃತ್ ಕೌರ್ ಅವರುಗಳ ಕನಸಿನ ಕೂಸು ದೇಶದ ರಾಜಧಾನಿ ನವದೆಹಲಿಯಲ್ಲಿರುವ ಅಭಾವೈವಿಸಂ. ಸ್ಥಳೀಯವಾಗಿ 'ಮೆಡಿಕಲ್' ಎಂದೇ ಪ್ರಖ್ಯಾತವಾಗಿದೆ. ಸಾವಿರದ ಒಂಭೈನೂರ ಐವತ್ತಾರರಲ್ಲಿ ಲೋಕಸಭೆಯ ಅಧಿನಿಯಮದಂತೆ ಒಂದು ಸ್ವಾಯತ್ತ ಸಂಸ್ಥೆಯಾಗಿ (an autonomous institution through an Act of Parliament) ಅತ್ಯುತ್ತಮ ಮಟ್ಟದ 'ರೋಗಿಗಳ ಆರೈಕೆ', ವೈದ್ಯಕೀಯ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ 'ಸಂಶೋಧನೆ' ಅಲ್ಲದೇ ದೇಶಕ್ಕೆ ಮಾದರಿಯಾಗಬಲ್ಲ 'ಸ್ನಾತಕ ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಶಿಕ್ಷಣ'ಗಳನ್ನೂ ಗುರಿಯಾಗಿತ್ತುಕೊಂಡು ಈ ಸಂಸ್ಥೆ ಜನ್ಮ ತಾಳಿತು. ಹಾಗಾಗಿ ಭಾರತದ ಅನೇಕ ಗಣ್ಯರ ಆರೋಗ್ಯವನ್ನು ನೋಡಿಕೊಳ್ಳುವ ಜವಾಬ್ದಾರಿ ಅಭಾವೈವಿಸಂಗೆ ಇರುವುದು ಸ್ವಾಭಾವಿಕವಷ್ಟೇ.

ಆದರೆ ಈ ಸಂಸ್ಥೆಯ ಕುರಿತು ನಿಮ್ಮೊಡನೆ ಎರಡು ಮಾತು ಹಂಚಿಕೊಳ್ಳಲು ನನಗೆ ಸ್ಫೂರ್ತಿ ನೀಡುವುದು (ಸಂಪದದಲ್ಲಿ ಮೊದಲ ಬಾರಿಗೆ ಲೇಖನವೊಂದನ್ನು ಬರೆಯುವ ಸಾಹಸ ಮಾಡುತ್ತಿರುವುದು), ವೈದ್ಯಕೀಯ ವಿಜ್ಞಾನದಲ್ಲಿ ಆಗುತ್ತಿರುವ ಪ್ರಗತಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಈ ಸಂಸ್ಥೆಯಿಂದಾಗಿ ಭಾರತ ದೇಶದ ಬಡವರನ್ನು ಕೆಲವೇ ಮಟ್ಟಿಗಾದರೂ ತಲುಪುತ್ತಿದೆ ಎಂಬುದರಿಂದಾಗಿದೆ.

ದೆಹಲಿಯ (ಹಾಗೂ ದೇಶದ?; ಕರ್ನಾಟಕದ ಮಾಧ್ಯಮಗಳಲ್ಲಿ ಅಭಾವೈವಿಸಂ ಸುದ್ದಿ ಬರುತ್ತಾ ಇರುತ್ತಾ? ಹೇಳಿ.) ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುವ ಅಭಾವೈವಿಸಂ ಕಳೆದ ಕೆಲವು ವರ್ಷಗಳಲ್ಲಿ ಸಂಸ್ಥೆಯ ಈ ಹಿಂದಿನ ನಿರ್ದೇಶಕರಾಗಿದ್ದ ಜಗವಿಖ್ಯಾತ ಹೃದಯ ಶಸ್ತ್ರ ಚಿಕಿತ್ಸಾ ತಜ್ಞ ಡಾ. ವೇಣುಗೋಪಾಲ್ ಮತ್ತು ಆಗಿನ ಆರೋಗ್ಯ ಮಂತ್ರಿ ಶ್ರೀ ಅಂಬುಮಣಿ ರಾಮಾದೋಸ್ ಅವರುಗಳ ನಡುವಿನ ತೀವ್ರ ಭಿನ್ನಾಭಿಪ್ರಾಯಗಳಿಂದಾಗಿ (ಅದೊಂದು ದೊಡ್ಡ ಕಥೆ - ಸಾಧ್ಯವಾದರೆ ಅದರ ಕುರಿತು ಇನ್ನೊಮ್ಮೆ ಬರೆಯುವೆ) ಋಣಾತ್ಮಕ ಪ್ರಸಿದ್ಧಿ (negative publicity) ಪಡೆದಿತ್ತು. ತದನಂತರ ಸಂಸ್ಥೆಯಲ್ಲಿ ಪ್ರಧಾನ ಮಂತ್ರಿ ಶ್ರೀ ಮನಮೋಹನ್ ಸಿಂಗ್ ಅವರ ಹೃದಯ ಶಸ್ತ್ರ ಚಿಕಿತ್ಸೆ ಕನ್ನಡಿಗರಾದ ಡಾ. ಸಂಪತ್ ಕುಮಾರ್ ಅವರ ನೇತೃತ್ವದಲ್ಲಿ ನಡೆದು, ನಿರ್ದೇಶಕರೂ, ಆರೋಗ್ಯ ಮಂತ್ರಿಗಳೂ ಬದಲಾಗಿ ಇತ್ತೀಚಿಗೆ ಯಾವ ದೊಡ್ಡ ಹಗರಣಗಳಿಲ್ಲದೆ ಚೇತರಿಸಿಕೊಳ್ಳುತ್ತಿದೆ.

(ದಯವಿಟ್ಟು ಬರಹದಲ್ಲಿರಬಹುದಾದ ತಪ್ಪುಗಳನ್ನು ತಿದ್ದಿರಿ; ಪ್ರತಿಕ್ರಿಯೆಗಳಿಂದ ಪ್ರೋತ್ಸಾಹಿಸಿ. ಮುಂದಿನ ಕಂತುಗಳಲ್ಲಿ ಸಂಸ್ಥೆಯ ಯಾವ aspect ಕುರಿತು ಹೆಚ್ಚು ಬರೆಯಲಿ? ತಿಳಿಸಿ.)