ಐರಾವತದಲ್ಲಾದ ಒಂದು ಕಹಿ ಅನುಭವ

ಐರಾವತದಲ್ಲಾದ ಒಂದು ಕಹಿ ಅನುಭವ


ನಿನ್ನೆ ಅಂದರೆ ೨೬/೦೧/೨೦೧೦ ನಾನು ತಿರುಪತಿಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ಯ ಐರಾವತದಲ್ಲಿ ( KA 01 F 8440 ) ಬಂದೆ. ಬಸ್ಸು ಬೆಂಗಳೂರು ಕಡೆಗೆ ಹೊರೆಟ ಕೂಡಲೇ ಮನರಂಜನೆಗಾಗಿ ಟಿ.ವಿ ಶುರು ಮಾಡುದ್ರು. ನನ್ನ ಊಹೆಯ ಪ್ರಕಾರವೇ 3 ಹಿಂದಿ ಚಿತ್ರಗಳುಳ್ಳ ಒಂದು ಡಿ.ವಿ.ಡಿ ಯನ್ನು ಹಾಕಿದರು. ಅಲ್ಲಿ ಕೂತವ್ರು ಯಾರೂ ಪಾಪ ಬೇಡ ಅನ್ನಲೇ ಇಲ್ಲ. ಕಂಡಕ್ಟರ್ ಸಾಹೇಬ್ರು ಅಲ್ಲಿದ್ದ ಕೆಲವು ಹಿಂದಿ ಪ್ರಿಯರಿಗೆ ಅವರಿಗೆ ಬೇಕಾದ ಚಿತ್ರವನ್ನು ಆರಿಸಿಕೊಳ್ಳಲು ಆಯ್ಕೆಬೇರೆ ಕೊಟ್ರು. ಏನಾಗುತ್ತೋ ನೋಡೇ ಬಿಡೋಣ ಅಂತ ನಾನು ಸಲ್ಪ ಹೊತ್ತು ಸುಮ್ನೆ ಕೂತೆ.


ಸಲ್ಪ ಹೊತ್ತಿನ ನಂತರ ನಂಗೆ ಆ ಟಾರ್ಚರ್ ತಡಿಯೋದಿಕ್ಕೆ ಆಗ್ಲಿಲ್ಲ. ಆಗ ಎದ್ದು ಹೋಗಿ ಕಂಡಕ್ಟರ್ ಸಾಹೇಬ್ರಿಗೆ


ನಾನು: “ಯಾವ್ದಾದ್ರು ಕನ್ನಡ ಚಲನಚಿತ್ರ ಇದ್ರೆ ಹಾಕಿ, ಹಿಂದಿ ನಮಗೆ ಅರ್ಥ ಆಗ್ತಾ ಇಲ್ಲ”, ಅಂತ ನಿಧಾನವಾಗಿ ಹೇಳ್ದೆ.


ಕಂಡಕ್ಟರ್: “ಕನ್ನಡ ಇಲ್ಲ ಸಾರ್ ಬೇಕಾದ್ರೆ ಟಿ.ವಿ ನ ಆಫ್ ಮಾಡ್ತೀವಿ”


ನಾನು: “ಸರಿ ಆಫ್ ಮಾಡಿ.”


ಅವ್ರು ಆಫೂ ಮಾಡುದ್ರು. ಸ್ವಲ್ಪ ಹೊತ್ತಿನ ನಂತರ ಯಾರೋ ಭೂಪ ತಿರ್ಗ ಶುರು ಮಾಡುಸ್ದ. ನಂಗೆ ತುಂಬಾನೇ ರೇಗೋಯ್ತು. ಕಂಡಕ್ಟರ್ ಬಳಿ ಹೋಗಿ,


ನಾನು: “ಏನ್ ಸಾರ್ ಆಫ್ ಮಾಡ್ತೀನಿ ಅಂತ ಹೇಳಿ ತಿರ್ಗ ಶುರು ಮಾಡುದ್ರಲ್ಲ”  ಅಂತ ಕೇಳ್ದೆ.


ಅದಿಕ್ಕೆ ನನ್ ಮೇಲೆ ರಾಂಗ್ ಆಗೋದ ನಮ್ಮ್ ಕಂಡಕ್ಟ್ರು.


ಕಂಡಕ್ಟರ್: “ಏನ್ರಿ ಒಬ್ರು ಬಂದು ಹಾಕಿ ಅಂತಾರೆ, ಇನ್ನೊಬ್ರು ಬಂದು ಆಫ್ ಮಾಡಿ ಅಂತಾರೆ, ಏನ್ ನಂಗೆ ಅದೇ ಆಟಾನ” ಅಂದ್ಬುಡೋದ.


ನಾನು: ನಮ್ಗೆ ಹಿಂದಿ ಬೇಡ ಸರ್. ಕನ್ನಡ ಇದ್ರೆ ಹಾಕಿ ಇಲ್ಲ ಅಂದ್ರೆ ಆಫ್ ಮಾಡಿ.


ಕಂಡಕ್ಟರ್: ನೋಡಿ ಸಾರ್ ಇದು INTER STATE ಗಾಡಿ, ನಾವು ಇಲ್ಲಿ ಜಾಸ್ತಿ ಜನ ಯಾವ್ದು ಕೇಳ್ತಾರೋ ಅದೇ ಹಾಕೋದು. ಕರ್ನಾಟಕದ ಒಳಗೆ ಓಡೊ ಗಾಡಿ ಆದ್ರೆ ಕನ್ನಡ ಹಾಕ್ತೀವಿ.


ನಾನು: ನಾನು ಕರ್ನಾಟಕದ ಗಾಡಿನ ಬುಕ್ ಮಾಡಿರೋದು. ಆದ್ದರಿಂದ ಕನ್ನಡ ಮನರಂಜನೆ ಕೇಳೋ ಎಲ್ಲಾ ಹಕ್ಕು ನನಗಿದೆ. INTER STATE ಆದ್ದ ಕಾರಣ ಹಿಂದಿ ಹಾಕ್ಬೇಕು ಅಂತ ನಿಯಮ ಏನು ಇಲ್ವಲ್ಲ.


ಕಂಡಕ್ಟರ್: ನಿಯಮ ಇದೆ ಸಾರ್. ನಾವು ಹಿಂದೀನೇ ಹಾಕೋದು.


ತಾಳ್ಮೆ ಕಳೆದು ಕೊಂಡ ನಾನು.


ನಾನು: ಏನ್ ಗುರು ನಮ್ಗೆ ಗೊತ್ತಿಲ್ಲದಿರೊ ನಿಯಮಾನ. ಸರಿ ಹಾಗಾದ್ರೆ ನಾನು ತಿಳ್ಕೊತೀನಿ ಏನ್ ಕಾನೂನಿದೆ ಅಂತ. ನಿಮ್ಮ ಹೆಸರೇನು.


ಅಷ್ಟೆ, ಸ್ವಲ್ಪ ಬಿಸಿ ಆಯ್ತು ಅಂತ ಕಾಣತ್ತೆ. ಸುಮ್ನೆ ಟಿ.ವಿ ಆಫ್ ಮಾಡ್ಬಿಟ್ಟ. ಅದಾದ ಮೇಲೆ ಇನ್ನೂ ಇಬ್ರು ಹೋಗಿ ಏನೋ  ಕಂಡಕ್ಟರ್ ಹತ್ರ ಮಾತಾಡುದ್ರು ಆದ್ರೂ ಟಿ.ವಿ ಏನೋ ಮತ್ತೆ ಶುರು ಆಗ್ಲಿಲ್ಲ. ಸುಮ್ನೆ ಮಲುಗ್ಬಿಟ್ಟೆ.


ಅಲ್ಲಾ ಗುರು ನಮ್ ಕರ್ನಾಟಕದ ಬಸ್ಸಲ್ಲಿ, ನಮ್ಗೆ ಬೇಕಾದ ಕನ್ನಡ ಮನರಂಜನೆ ಕೊಡಕ್ಕೆ ವಿಶೇಷವಾದ ನಿಯಮ ಬೇಕಾ. ಇದುನ್ನ ಈಗ್ಲೆ ವಿಚಾರುಸ್ಕೊಳ್ಳಿಳ್ಳ ಅಂದ್ರೆ ಮುಂದೆ ತುಂಬಾನೆ ಕಷ್ಟ ಆಗುತ್ತೆ. ಮುಂದೆ ಹಿಂದೀ ಮನರಂಜನೇನೇ ಕೊಡ್ಬೇಕು ಅಂತ ನಿಯಮ ಬಂದ್ರೂ ಬರ್ಬೋದು. ನಿಮ್ಗೂ ಇಂತ ಅನುಭವ ಆದ್ರೆ ಅವರಿಗೆ ಈ ಕೆಳಗಿನ ವಿಳಾಸಕ್ಕೆ ಮಿಂಚೆ ಖಂಡಿತ ಬರೆಯಲು ಮರೀಬೇಡಿ.


diropn@ksrtc.org  


ಇಂತಿ,


ನಂದನ್

Rating
No votes yet

Comments