ಕನಸು ಕಾಣಬಾರದು ಅಂದುಕೊಳ್ಳುತ್ತ...
ಮತ್ತೆ ಮತ್ತೆ ಕೀಬೋರ್ಡ್ ಮುಟ್ಟುತ್ತೇನೆ. ಸುಮ್ಮನಾಗುತ್ತೇನೆ.
ಕಳೆದ ಕೆಲ ದಿನಗಳಿಂದ ಇದು ಹೀಗೇ ನಡೆದುಕೊಂಡು ಬರುತ್ತಿದೆ. ಏನೋ ಬರೆಯಬೇಕೆಂದು ಅಂದುಕೊಳ್ಳುತ್ತೇನೆ. ಎಳೆಯೊಂದು ಮನದ ಮೂಲೆಯಲ್ಲಿ ಕಾಣುತ್ತದೆ. ಮೆತ್ತಗೇ ಹಿಡಿದೆಳೆದರೆ, ಸೊಗಸಾದ ನೇಯ್ಗೆ ಬಂದೀತು ಅಂದುಕೊಳ್ಳುತ್ತೇನೆ. ಅಷ್ಟೊತ್ತಿಗೆ ಮತ್ತೇನೋ ನೆನಪಾಗುತ್ತದೆ. ಎಳೆ ಅಲ್ಲೇ ಒಣಗಿ ಹೋಗುತ್ತದೆ.
ಏಕೆ ಹೀಗಾಗುತ್ತದೆ?
ಮನಸ್ಸಿನ ಯೋಚನೆಯ ಒಂದು ಎಳೆ ಎಂತೆಂಥ ಕನಸುಗಳನ್ನು ತಂದಿಡುತ್ತದೆ ಎಂಬುದನ್ನು ಖುದ್ದು ಅನುಭವಿಸಿದವ ನಾನು. ಎಳೆ ಎಂಬುದು ಮಗುವಿನಂತೆ. ಅದರ ಸಾಧ್ಯತೆಗಳು ಅಪಾರ. ಅದನ್ನು ಬೆಳೆಸಬೇಕಾದ ಜವಾಬ್ದಾರಿಯೂ ಅಷ್ಟೇ ದೊಡ್ಡದು. ಮೊಳಕೆಯೊಡೆದ ಪ್ರತಿಯೊಂದು ಬೀಜಕ್ಕೂ ಪೂರ್ತಿ ಮರವಾಗುವ ಎಲ್ಲ ಸಾಧ್ಯತೆಗಳೂ ಇರುತ್ತವೆ.
ಆದರೆ, ಎಲ್ಲ ಮೊಳಕೆಗಳೂ ಮರವಾಗುವುದಿಲ್ಲ. ಬಹಳಷ್ಟು ಮೊಳಕೆಗಳು ಮುರುಟಿಹೋಗುತ್ತವೆ. ನಮ್ಮ ಬಾಲ್ಯದ ಕನಸುಗಳಂತೆ.
ಎಲ್ಲೋ ಗಂಭೀರ ಚರ್ಚೆಯಲ್ಲಿದ್ದಾಗ, ವಾಹನದಲ್ಲಿದ್ದಾಗ, ನಿದ್ದೆ ಆವರಿಸಿಕೊಳ್ಳುವಾಗ, ನಿದ್ದೆ ತಿಳಿಯಾಗುವಾಗ ಎಷ್ಟೊಂದು ಸುನೀತ ಭಾವನೆಗಳು ಮೊಳಕೆಯೊಡೆಯುತ್ತವೆ. ಎಷ್ಟೋ ಸಾರಿ, ಅವಕಾಶ ಮಾಡಿಕೊಂಡು ಅವನ್ನೆಲ್ಲ ಒಂದು ಕಡೆ ಬರೆದಿಡುತ್ತೇನೆ. ಬಿಡುವಾದಾಗ ಈ ಭಾವನೆಗಳನ್ನು ಬೆಳೆಸಬೇಕು. ಅವಕ್ಕೊಂದು ಪೂರ್ಣರೂಪ ಕೊಡಬೇಕು ಅಂದುಕೊಳ್ಳುತ್ತೇನೆ. ಕೆಲವೊಂದು ಸಿದ್ಧಿಸುತ್ತವೆ. ಇನ್ನು ಕೆಲವು ಮುರುಟಿಹೋಗಿರುತ್ತವೆ.
ಪ್ರತಿಯೊಂದು ಅಪೂರ್ಣ ಕನಸೂ ಹೊಸ ಹೊಸ ಕನಸುಗಳ ಮರಿ ಹಾಕುತ್ತದೆ. ಪ್ರತಿಯೊಂದು ಹೊಸ ಕನಸೂ ಅಪಾರ ಸಾಧ್ಯತೆಗಳ ಕನಸನ್ನು ಸೃಷ್ಟಿಸುತ್ತದೆ. ಪರಿಪೂರ್ಣ ಅನಿಸುವಂಥ ಕಾಲ್ಪನಿಕ ಪ್ರಪಂಚವನ್ನು ಕಣ್ಣೆದುರು ತರುತ್ತವೆ. ನಿಶ್ಯಬ್ದ ತುಂಬಿದ ಈ ಕಾಳರಾತ್ರಿಯಲ್ಲಿ, ಎಲ್ಲ ಕನಸುಗಳನ್ನೂ ಪೋಷಿಸಬೇಕು. ಬೆಳೆಸಬೇಕು. ಅವನ್ನು ಪೂರ್ಣವಾಗಿಸಬೇಕು ಅಂತ ಅಂದುಕೊಳ್ಳುತ್ತೇನೆ. ಮತ್ತೆ ಮತ್ತೆ ಕೀಬೋರ್ಡ್ ಮುಟ್ಟುತ್ತೇನೆ. ಒಂದಿಷ್ಟು ಅಕ್ಷರಗಳನ್ನು ನೇಯುತ್ತೇನೆ. ಕನಸಿನ ಚಿತ್ರ ಅದರಲ್ಲಿ ಮೂಡುತ್ತಿದೆಯೇ ಅಂತ ಆಗಾಗ ಪರೀಕ್ಷಿಸುತ್ತೇನೆ. ಕೆಲವೊಮ್ಮೆ ಚಿತ್ರ ಸರಿಯಾಗಿರುತ್ತದೆ. ಬಹಳಷ್ಟು ಸಾರಿ, ಅಸ್ಪಷ್ಟ.
ಆಗೆಲ್ಲ ಬೇಸರ. ಇನ್ನು ಕನಸು ಕಾಣಬಾರದು ಅಂದುಕೊಳ್ಳುತ್ತೇನೆ. ಇರುವ ಕನಸುಗಳು ಈಡೇರಿದರೆ ಸಾಕು ಎಂದು ನಿರ್ಧರಿಸುತ್ತೇನೆ. ಕಂಪ್ಯೂಟರ್ ಮುಚ್ಚಿ, ಸ್ವಿಚ್ ಆಫ್ ಮಾಡಿ, ಕಣ್ಮುಚ್ಚಿಕೊಂಡ ಪರದೆ ದಿಟ್ಟಿಸುವಾಗ, ಅಲ್ಲಿ ಹೊಸಹೊಸ ಕನಸುಗಳು ಎದ್ದೆದ್ದು ಕುಣಿಯುತ್ತವೆ. ಆಸೆಬುರುಕ ಮಗುವಿನಂತೆ, ಮನಸ್ಸು ಹೊಸ ಹೊಸ ಕನಸುಗಳನ್ನು ಕಾಣತೊಡಗುತ್ತದೆ.
ಎಷ್ಟೊಂದು ಅಪಾರ ಸಾಧ್ಯತೆಗಳನ್ನು ಹೊಂದಿದೆ ಈ ಮನಸ್ಸು ಅಂತ ಅಚ್ಚರಿಯಾಗುತ್ತದೆ. ಹಿಂದಿದ್ದಂತೆ ಈಗಿಲ್ಲ, ಈಗಿರುವಂತೆ ಮುಂದಿರುವುದಿಲ್ಲ. ಪ್ರತಿ ಕ್ಷಣಕ್ಕೂ ಬದಲಾಗುತ್ತಲೇ ಹೋಗುತ್ತದೆ. ಮತ್ತೆ ಮತ್ತೆ ಮುದುಡುತ್ತದೆ, ಅರಳುತ್ತದೆ, ಅಚ್ಚರಿಪಡುತ್ತದೆ. ಎಲ್ಲ ಸೋಲುಗಳ ನಿರಾಶೆ ಉಂಡುಟ್ಟು ಮತ್ತೆ ನಳನಳಿಸುತ್ತದೆ. ಬೆಳೆಯುತ್ತದೆ. ಮುರುಟುತ್ತಲೇ ಹೊಸ ಚಿಗುರುಗಳನ್ನು ಅರಳಿಸುತ್ತದೆ. ಮತ್ತೆ ಕಂಪ್ಯೂಟರ್ ಆನ್ ಮಾಡುವಂತೆ ಮಾಡುತ್ತದೆ.
ಮನಸ್ಸಿನೆದುರು ಮೂಡುವ ಚಿತ್ರಗಳನ್ನು ಅಕ್ಷರಗಳನ್ನಾಗಿಸುವುದು ಸುಲಭವಲ್ಲ. ಹಾಗಂತ ಸುಮ್ಮನೆ ಕೂಡುವುದು ಸಾಧ್ಯವೂ ಇಲ್ಲ. ಒಂದಿಷ್ಟು ಬರೆಯುವುದು, ಅಳಿಸುವುದು, ಹೊಸ ಬರಹಗಳನ್ನು ಮೂಡಿಸುವುದು, ಛಕ್ಕಂತ ಹೊಳೆದ ಎಳೆಗಳನ್ನು ಹಿಡಿದೆಳೆಯುತ್ತ ಹೊಸ ನೇಯ್ಗೆಗೆ ಪ್ರಯತ್ನಿಸುವುದು, ಬರೆದುದನ್ನು ಓದುತ್ತ, ಮೆಚ್ಚುತ್ತ, ಅಳಿಸುತ್ತ, ಕೊನೆಗೊಮ್ಮೆ, ಪರವಾಗಿಲ್ಲ ಎಂಬ ಒಂದಿಷ್ಟು ಪ್ಯಾರಾಗಳನ್ನು ದಿಟ್ಟಿಸುವಾಗ-
ಛೇ, ಇದು ನಾನು ಕಂಡ ಕನಸೇ ಅಲ್ಲ ಎಂಬ ನಿರಾಶೆ.
ಶಿಶುನಾಳ ಶರೀಫರು ತಮಾಷೆ ಮಾಡಿದಂತಾಗುತ್ತದೆ: ತರವಲ್ಲ ತಗಿ ನಿನ್ನ ತಂಬೂರಿ ಸ್ವರ... ಎಷ್ಟೋ ಸಂದರ್ಭಗಳಲ್ಲಿ, ಬರೆದುದನ್ನೆಲ್ಲ ಅಳಿಸಿ, ಮತ್ತೆ ಕಂಪ್ಯೂಟರ್ ಮುಚ್ಚಿ, ಸುಮ್ಮನೇ ಕೂಡುತ್ತೇನೆ. ಮುಚ್ಚಿದ ಕಣ್ರೆಪ್ಪೆಗಳ ಒಳಗಿನ ಸ್ವಪ್ನಲೋಕದಲ್ಲಿ ಸಾವಿರ ಸಾವಿರ ಕನಸುಗಳ ಕಲಸುಮೇಲೋಗರ. ನಿತ್ಯನೂತನ ಚಿತ್ರಚಿತ್ತಾರ. ಅವನ್ನೇ ಧೇನಿಸುತ್ತ ಕೂತಾಗ, ಮನಸ್ಸು ಪಿಸುಗುಡುತ್ತದೆ:
ಜಗತ್ತಿನ ಸಮೃದ್ಧ ಭಾಷೆ- ಮೌನ.
ನಾನು ಮೌನವಾಗಿ ಮುಗುಳ್ನಗುತ್ತೇನೆ.
- ಚಾಮರಾಜ ಸವಡಿ
Comments
ಉ: ಕನಸು ಕಾಣಬಾರದು ಅಂದುಕೊಳ್ಳುತ್ತ...
In reply to ಉ: ಕನಸು ಕಾಣಬಾರದು ಅಂದುಕೊಳ್ಳುತ್ತ... by santhosh_87
ಉ: ಕನಸು ಕಾಣಬಾರದು ಅಂದುಕೊಳ್ಳುತ್ತ...
ಉ: ಕನಸು ಕಾಣಬಾರದು ಅಂದುಕೊಳ್ಳುತ್ತ...
In reply to ಉ: ಕನಸು ಕಾಣಬಾರದು ಅಂದುಕೊಳ್ಳುತ್ತ... by srikanth
ಉ: ಕನಸು ಕಾಣಬಾರದು ಅಂದುಕೊಳ್ಳುತ್ತ...
ಉ: ಕನಸು ಕಾಣಬಾರದು ಅಂದುಕೊಳ್ಳುತ್ತ...
In reply to ಉ: ಕನಸು ಕಾಣಬಾರದು ಅಂದುಕೊಳ್ಳುತ್ತ... by ಹೇಮ ಪವಾರ್
ಉ: ಕನಸು ಕಾಣಬಾರದು ಅಂದುಕೊಳ್ಳುತ್ತ...