ಯುಟ್ಯೂಬ್ ಮೂಲಕ ಐ ಪಿ ಎಲ್

ಯುಟ್ಯೂಬ್ ಮೂಲಕ ಐ ಪಿ ಎಲ್

ಬರಹ

ಯುಟ್ಯೂಬ್ ಮೂಲಕ ಐ ಪಿ ಎಲ್
ಇದೇ ಮೊದಲ ಬಾರಿಗೆ ಕ್ರೀಡೆಯ ಬಗ್ಗೆ ನೇರ ವಿಡಿಯೋ ಪ್ರಸಾರ ಯುಟ್ಯೂಬಿನ ಮೂಲಕ ಲಭ್ಯವಾಗಲಿದೆ.ಸಾಮಾನ್ಯವಾಗಿ ಯುಟ್ಯೂಬ್‌ನಲ್ಲಿ ಜನರು ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ. ಐಪಿಎಲ್ ಕ್ರಿಕೆಟ್ ಪ್ರಸಾರದ ಹಕ್ಕನ್ನು ಹೊಂದಿರುವ ಗ್ಲೋಬಲ್ ಕ್ರಿಕೆಟ್ ವೆಂಚರ್ ಸಂಸ್ಥೆಯೊಂದಿಗೆ ಗೂಗಲ್ ಒಪ್ಪಂದಕ್ಕೆ ಬಂದಿರುವ ಕಾರಣ,ಐ ಪಿ ಎಲ್ 20-20  ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಅಂತರ್ಜಾಲದಲ್ಲಿ ಗೂಗಲ್ ಪಡೆದಿದೆ. ಹೀಗಾಗಿ,ಐಪಿಎಲ್‌ನ ಪಂದ್ಯಗಳನ್ನು ಅಂತರ್ಜಾಲ ಮೂಲಕವೂ ವೀಕ್ಷಿಸಬಹುದು.ಇದು ಗೂಗಲಿಗೆ ಭಾರೀ ಜಾಹೀರಾತು ಆದಾಯ ತರಬಲ್ಲುದು.ಐಪಿಎಲ್ ಎನ್ನುವುದು,ಬಹುಜನಪ್ರಿಯ.ಜತೆಗೆ ಅಂತರ್ಜಾಲದಲ್ಲಿ,ವೀಕ್ಷಕರ ಆಸಕ್ತಿ ಇರುವ ವಿಷಯಗಳ ಬಗ್ಗೆ ಜಾಹೀರಾತನ್ನು ತೋರಿಸಲು ಜಾಹೀರಾತುದಾರರಿಗೆ ಸವಲತ್ತುಗಳನ್ನು ಗೂಗಲ್ ಒದಗಿಸಲಿದೆ.ಹಾಗಾಗಿ,ಹೆಚ್ಚಿನ ಜಾಹೀರಾತುದಾರರು ಐವತ್ತು ಕೋಟಿಯಷ್ಟಾಗಬಲ್ಲ ವೀಕ್ಷಕರನ್ನು ಮುಟ್ಟಲು ಅಂತರ್ಜಾಲ ಮಾಧ್ಯಮವನ್ನು ಬಳಸುವುದು ಸಂಭವನೀಯ.ಐಪಿಎಲ್‌ನಲ್ಲಿ ಒಟ್ಟು ಅರುವತ್ತು ಪಂದ್ಯಗಳಿವೆ.
ಈ ನಡುವೆ,ಯುಟ್ಯೂಬಿನ ಮೂಲಕ ಚಲನಚಿತ್ರಗಳನ್ನು ಬಾಡಿಗೆ ಆಧಾರದಲ್ಲಿ ತೋರಿಸುವ ಸೇವೆಯನ್ನು ಆರಂಭಿಸಲೂ ಗೂಗಲ್ ಆರಂಭಿಸಿದೆ.ಸುಂಡಾನ್ಸಿನ ಫಿಲ್ಮ್ ಫೆಸ್ಟಿವಲ್ ಜತೆ ಒಪ್ಪಂದ ಮಾಡಿಕೊಂಡು,ಅಲ್ಲಿ ಪ್ರದರ್ಶಿತವಾದ ಚಿತ್ರಗಳ ಪೈಕಿ ಐದನ್ನು,ಯುಟ್ಯೂಬಿನ ಮೂಲಕ ಬಾಡಿಗೆ ಆಧಾರದಲ್ಲಿ ಪ್ರಸಾರ ಮಾಡಲು ಯುಟ್ಯೂಬ್ ನಿರ್ಧರಿಸಿದೆ.ವಿಡಿಯೋ ತುಣುಕುಗಳನ್ನು ಜನರು ಪರಸ್ಪರ ಹಂಚಿಕೊಳ್ಳಲು ಆರಂಭವಾಗಿದ್ದ,ಯುಟ್ಯೂಬ್‌ಗೆ ಇದು ಬಹಳ ದೊಡ್ಡ ಹೆಜ್ಜೆಯಾಗಿದೆ.ಈ ನಿರ್ಧಾರದಿಂದ ಗೂಗಲ್‌ಗೆ ಆದಾಯ ಹೆಚ್ಚುವ ನಿರೀಕ್ಷೆಯಿದೆ.2009 ,2010ಚಿತ್ರೋತ್ಸವಗಳ ಐದು ಚಿತ್ರಗಳು ಮೊದಲಿಗೆ ಇಲ್ಲಿ ಲಭ್ಯವಾಗುತ್ತವೆ.ಇತರ ಚಿತ್ರ ನಿರ್ಮಾಣಸಂಸ್ಥೆಗಳನ್ನೂ ಇತ್ತ ಕಡೆ ಆಕರ್ಷಿಸಲು ಗೂಗಲ್ ಯತ್ನಿಸಲಿದೆ.ಬಾಡಿಗೆ ಎಷ್ಟೆಂಬುದನ್ನು ಚಿತ್ರಾನುಸಾರ ನಿರ್ಧರಿಸಲು ಅವಕಾಶ ಸಿಗಲಿದೆ.
-------------------------------------------------
ಐಪ್ಯಾಡ್  ಬಗ್ಗೆ ಇನ್ನಷ್ಟು ವಿವರಗಳು ಬಹಿರಂಗ


ಆಪಲ್ ಕಂಪೆನಿಯ ಹೊಸ ಉತ್ಪನ್ನ ಟ್ಯಾಬ್ಲೆಟ್ ಸಾಧನ ಎನ್ನುವುದು,ಆ ಸಾಧನಕ್ಕೆ ಐಸ್ಲೇಟ್ ಎಂಬ ಹೆಸರಿಡಲು ನಿರ್ಧಾರವಾಗಿದೆ ಎನ್ನುವುದು ಕಳೆದ ವರ್ಷಾಂತ್ಯದಲ್ಲೇ ಕೇಳಿ ಬಂದ ವದಂತಿ.ಈಗ ಬಹಿರಂಗ ಆಗಿರುವ ಇನ್ನಷ್ಟು ಮಾಹಿತಿಗಳ ಪ್ರಕಾರ,ಐಸ್ಲೇಟ್ ಬಿಡುಗಡೆ ಯಾವ ಕ್ಷಣದಲ್ಲೂ ಆಗಬಹುದು.ಐಸ್ಲೇಟನ್ನು ಕೌಟುಂಬಿಕ ಉಪಯೋಗಕ್ಕಾಗಿ ಇರುವ ಸಾಧನ ಎಂದು ಬ್ರಾಂಡ್ ಮಾಡುವ ಸಾಧ್ಯತೆ  ಇದೆಯಂತೆ.ಕುಟುಂಬದ ಸದಸ್ಯರೆಲ್ಲರೂ ತಮ್ಮ ಮಿಂಚಂಚೆಗಳತ್ತ ಕಣ್ಣುಹಾಯಿಸಲು,ಬಿಸಿಬಿಸಿ ಸುದ್ದಿಗಳಿಗಾಗಿ,ನ್ಯೂಯಾರ್ಕ್ ಟೈಮ್ಸ್ ಅಂತಹ ತಾಣಗಳನ್ನು ಪರಿಶೀಲಿಸಲು,ಪರಸ್ಪರ ಸಂದೇಶಗಳನ್ನು ಕೊಟ್ಟುಕೊಳ್ಳಲು,ಇದನ್ನು ಬಳಸಬೇಕೆಂದು ಆಪಲ್ ಯೋಚನೆ.ಅದು ಹಲವು ಟಿವಿ ಪ್ರಸಾರಕರ ಜತೆಯೂ ಒಪ್ಪಂದ ಮಾಡಿಕೊಂಡು ಜನಪ್ರಿಯ ಟಿವಿ ಕಾರ್ಯಕ್ರಮಗಳನ್ನು ಐಸ್ಲೇಟ್ ಮೂಲಕ ಲಭ್ಯವಾಗಿಸಲು ಪ್ರಯತ್ನಿಸುತ್ತಿದೆಯಂತೆ.ಜತೆಗೆ ಪುಸ್ತಕ ಪ್ರಕಾಶಕರ ಜತೆ ಸೇರಿಕೊಂಡು,ಪುಸ್ತಕಗಳನ್ನು ಇ-ಬುಕ್ ಆಗಿಸಿ,ಇದರ ಮೂಲಕ ಒದಗಿಸಲು ಯೋಜಿಸಿದೆಯಂತೆ.
-----------------------------------------------------------------------------
ಕೃಷ್ಣದೇವರಾಯ ಅಂತರ್ಜಾಲ ತಾಣಕ್ಕೆ


ವಿಜಯನಗರ ಸಾಮ್ರಾಜ್ಯದ ಶ್ರೀಕ್ರಷ್ಣದೇವರಾಯ ಮಹಾರಾಜ.ತುಳುವ ವಂಶದ ಈ ದೊರೆಯ ಕಾಲವನ್ನು ಸುವರ್ಣಯುಗವೆಂದು ಕರೆಯಲಾಗುತ್ತದೆ.ಈತನ ಪಟ್ಟಾಭಿಷೇಕದ ಐನೂರನೇ ವರ್ಷಾಚರಣೆ ಈಚೆಗೆ ಹಂಪಿಯಲ್ಲಿ ಅದ್ದೂರಿಯಾಗಿ ಆಚರಿಸಲ್ಪಟ್ಟಿತು.  http://krishnadevaraya.in ಅಂತರ್ಜಾಲ ತಾಣವು ಈ ಸಂದರ್ಭದಲ್ಲಿ ಆಸ್ತಿತ್ವಕ್ಕೆ ಬಂದಿದೆ.ಇಲ್ಲಿ ಮಹಾರಾಜನ ಆಡಳಿತದ,ಕಾರ್ಯಕ್ರಮಗಳ ವಿವರಗಳಿವೆ.ಅಂತರ್ಜಾಲತಾಣ  ತಾಣವಿನ್ನೂ ಸಂಪೂರ್ಣವಾದ ಹಾಗಿಲ್ಲ.ಹೆಚ್ಚಿನ ಕೊಂಡಿಗಳು ಒಂದು ವಾಕ್ಯಕ್ಕೇ ಸೀಮಿತವಾಗಿದೆ,ವಿವರಗಳನ್ನು ಹೊಂದಿಲ್ಲ!
--------------------------------------------------------------------
ಬಿಎಸೆನೆಲ್‌ನಿಂದ ಗ್ರಾಹಕರತ್ತ ಡಬಲ್ ಬಿಲ್ಲೆಸೆತ!
ಹೊಸ ವರ್ಷದ ಮೊದಲ ತಿಂಗಳೇ ಬಿಎಸೆನೆಲ್‌ನ ದ.ಕ. ದೂರಸಂಪರ್ಕ ಜಿಲ್ಲೆಯಲ್ಲಿ ಗ್ರಾಹಕರಿಗೆ ಶಾಕ್ ಅನುಭವವಾಗಿದೆ.ಹಲವು ಸ್ಥಿರ ದೂರವಾಣಿ ಗ್ರಾಹಕರಿಗೆ ಎರಡೆರಡು ಬಿಲ್‌ಗಳು ತಲುಪಿವೆ.ಒಂದು ಸರಿಯಾದ ಬಿಲ್ ಆದರೆ,ಇನ್ನೊಂದು ಹಳೆಯ ಬಿಲ್ ಅಂಚೆಯ ಮೂಲಕ ಒಂದರ ಹಿಂದೆ ಇನ್ನೊಂದರಂತೆ ಬಟವಾಡೆಯಾಗಿದೆ.ಇದು ಕಂಪ್ಯೂಟರ್ ದೋಷವೇ,ಅಲ್ಲ ಕಂಪ್ಯೂಟರಿಗೆ ವೈರಸ್ ಅಂತಹ ಕಾಟದ ಕಾರಣವೇ ಎಂದು ಗ್ರಾಹಕರು ಅಚ್ಚರಿ ಪಡುವಂತಾಗಿದೆ.ಬಿಎಸೆನೆಲ್ ಕಚೇರಿಯನ್ನು ಸಂಪರ್ಕಿಸಿದಾಗ,ಸರಿಯಾದ ಬಿಲ್ ಪಾವತಿಸಿ,ಮತ್ತೊಂದು ಬಿಲ್ಲನ್ನು ಕಡೆಗಣಿಸಿ,ಎನ್ನುವ ಸಲಹೆ ಸಿಕ್ಕಿದೆ.ನೇರವಾಗಿ ಬಿಲ್ ಪಾವತಿಸುವ ಗ್ರಾಹಕರಿಗೆ ಸಮಸ್ಯೆಯಿಲ್ಲ.ಬ್ಯಾಂಕುಗಳಲ್ಲಿ ಈಸಿಎಸ್(ECS) ಮೂಲಕ ಪಾವತಿ ವ್ಯವಸ್ಥೆ ಮಾಡಿದವರಿಗೆ,ಸಂಬಂಧಿಸಿದ ಬ್ಯಾಂಕುಗಳೂ ಎರಡೂ ಬಿಲ್ ಪಡೆದು,ಬ್ಯಾಂಕಿನ ಕಂಪ್ಯೂಟರುಗಳು ತಪ್ಪಾಗಿ ಎರಡನ್ನೂ ಪಾವತಿಸಿದರೆ ಎನ್ನುವ ಸಂಶಯಕ್ಕೀಡಾಗಿದ್ದಾರೆ.ಒಂದು ವೇಳೆ ಪಾವತಿಯಾದರೆ,ಮುಂದಿನ ಬಿಲ್‌ನಲ್ಲಿ ಸರಿಯಾಗಬಹುದು ಎಂದು ಆಶಿಸುವುದಷ್ಟೇ ಗ್ರಾಹಕರಿಗೆ ಸದ್ಯಕ್ಕೆ ಉಳಿದಿರುವ ಮಾರ್ಗ!
--------------------------------------------------------------------------------
ಟ್ವೀಟಲಾರಂಭಿಸಿರುವ ಬಿಲ್‌ಗೇಟ್ಸ್,ಶಾರುಖ್
ಅಂತರ್ಜಾಲ ಸೇವೆ ಟ್ವಿಟರ್,ನಿಧಾನವಾಗಿ ಖ್ಯಾತನಾಮರನ್ನು ತನ್ನೆಡೆಗೆ ಸೆಳೆಯುತ್ತಿದೆ.ಇದೀಗ ಬಿಲ್‌ಗೇಟ್ಸ್ ಮತ್ತು ಶಾರುಖ್ ಖಾನ್ ಸರದಿ.ಮೈಕ್ರೋಸಾಫ್ಟ್ ಕಂಪೆನಿಯಿಂದ ವಿರಮಿಸಿದ ಬಳಿಕವೂ,ಬಿಲ್‌ಗೇಟ್ಸ್ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ.ಅವರೀಗ ಬಿಲ್ ಮತ್ತು ಮೆಲಿಂದಾ ಗೇಟ್ಸ್ ಫೌಂಡೇಶನ್ ಮೂಲಕ ಸಮಾಜಸೇವಾ ಕಾರ್ಯಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.ತನ್ನ ಚಟುವಟಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು,ಮತ್ತು ಅಭಿಮಾನಿಗಳ ಸಂಪರ್ಕ ಸಾಧಿಸಲು,ಬಿಲ್ ಗೇಟ್ಸ್ ಅವರು ಟ್ವಿಟರ್ ಖಾತೆಯನ್ನು ಬಳಸಲಾರಂಭಿಸಿದ್ದಾರೆ. www.twitter.com/billgates ಮೂಲಕ ಅವರು ತಮ್ಮ ಸಂದೇಶಗಳನ್ನು ಜಗಜ್ಜಾಹೀರು ಮಾಡುತ್ತಿದ್ದಾರೆ.ಅವರ ಖಾತೆಯನ್ನು ಟ್ವಿಟರ್ ಪ್ರಮಾಣೀಕರಿಸಿ,ಅದು ಅವರದ್ದೇ ಖಾತೆ,ನಕಲಿಯಲ್ಲ ಎಂದು ಶ್ರುತ ಪಡಿಸಿದ ಬಳಿಕ,ಅವರನ್ನು ಹಿಂಬಾಲಿಸುವವರ ಸಂಖ್ಯೆ ಒಂದೇ ಸವನೆ ಏರತೊಡಗಿದ್ದು,ಕೆಲವೇ ದಿನಗಳ ಬಳಿಕವೀಗ ಹಿಂಬಾಲಕರ ಸಂಖ್ಯೆ ಮೂರು ಲಕ್ಷವನ್ನು ದಾಟಿದೆ.ತಮ್ಮ ಮೊದಲ ಟ್ವೀಟ್ ಸಂದೇಶದಲ್ಲಿ "ಹಲ್ಲೋ ವರ್ಲ್ಡ್" ಎಂಬ ಜನಪ್ರಿಯ ಕ್ರಮವಿಧಿಯ ಸಾಲಿನ ಮೂಲಕವೇ ಆರಂಭಿಸಿದ,ಬಿಲ್ ಗೇಟ್ಸ್,ತಮ್ಮ ಭಾರತ ಭೇಟಿಯ ಸಂದರ್ಭದ ಚಿತ್ರಗಳನ್ನೂ ಇನ್ನೊಂದು ಸಂದೇಶದ ಜತೆ ನೀಡಿದ್ದಾರೆ.
ಇತ್ತ ಬಾಲಿವುಡ್ ಬಾದಶಾಹ್ ಶಾರೂಖ್ ಖಾನ್ ಕೂಡಾ ತಮ್ಮ ಮಿತ್ರ ಕರಣ್‌ಜೋಹರ್ ಅವರ ಒತ್ತಾಯಕ್ಕೆ ಮಣಿದು ಟ್ವಿಟರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ.www.twitter.com/iamsrk ಎನ್ನುವುದು ಅವರ ಖಾತೆಯ ವಿಳಾಸ.ಅವರೂ ಬಹಳ ಬೇಗನೇ ತಮ್ಮ ಹಿಂಬಾಲಕರನ್ನು ಗಳಿಸಿಕೊಳ್ಳುತ್ತಿದ್ದಾರಾದರೂ ಆ ಸಂಖ್ಯೆ ಒಂದು ಲಕ್ಷವನ್ನಿನ್ನೂ ತಲುಪಿಲ್ಲ.

udayavani