ಏಕಾಂಗಿ
ಬರಹ
ಏಕಾಂಗಿ
(2001 ಸೆಪ್ಟೆಂಬರ್ನಲ್ಲಿ ಬರೆದ ಕವನ)
ಬಟಾಬಯಲಲ್ಲಿ ಗೂಟಕ್ಕೆ ಕಟ್ಟಿದ ಹಸು
ಹಗ್ಗ ಬಿಟ್ಟಷ್ಟೇ ದೂರ
ಸುತ್ತಿ ಮೇಯುವ `ಹಸುಗೂಸು'
ಕಟ್ಟಿಹಾಕಿದ ಗೊಲ್ಲ ಎತ್ತಲೋ ಹೋದನಲ್ಲ
ಹಗ್ಗ ಹರಿದೋಡುವ `ತವಕ';
ವ್ಯಾಖ್ಯಾನವಿಲ್ಲದ ಗಮಕ!
ವೃತ್ತಾಕಾರದ ಬಯಲ ಅಂಚಿಗುಂಟ
ಎದ್ದುನಿಂತ ಬೃಹನ್ನಗರದ `ಬೆಳೆ'
ಶಾಪಗ್ರಸ್ಥ ಅರ್ಜುನನಂತೆ `ಬೃಹನ್ನಳೆ'!
ಎಷ್ಟು ಕಿತ್ತರೂ ಆವರಿಸುವ ಕಳೆ
ಬಯಲಲ್ಲಿ ಹಸಿರು ಹರಡಿದ್ದರೂ
ಮೂರು ಮಾರು ಹಗ್ಗದಷ್ಟೇ ಶಥಪಥ
ಅಲ್ಲಲ್ಲಿ ಸಣ್ಣ ಕಾಲು ದಾರಿಗಳಿದ್ದರೂ
ವಿವೇಚನೆಗೊಂದು ಗುರಿಯೇ ಇಲ್ಲ
ಗೊಲ್ಲನಂತೂ ಕಣ್ಮರೆಯಾಗಿಬಿಟ್ಟನಲ್ಲಾ!?
ಯಾರೂ ಹೇಳು-ಕೇಳುವವರಿಲ್ಲ
ಮೈದಡವುವರಂತೂ ಮೊದಲೇ ಇಲ್ಲ
ಬಹುಶಃ ಸಂಜೆಗಷ್ಟೇ ಬರುತ್ತಾನೆ
ಥೂ! ಅವನು ಬಂದರೆಷ್ಟು-ಬಿಟ್ಟರೆಷ್ಟು?
`ಸಂಜೆ'ಯಂತೂ ಬಂದೇ ಬರುವುದಲ್ಲ!?