ಬಿ.ಟಿ. ಬದನೆ ಯಾವ ಕರ್ಮಕ್ಕೆ?

ಬಿ.ಟಿ. ಬದನೆ ಯಾವ ಕರ್ಮಕ್ಕೆ?

ಬರಹ

  ನಾನು ಕೃಷಿತಜ್ಞನಲ್ಲ, ವಿಜ್ಞಾನಿಯಲ್ಲ, ಕೃಷಿಕನೂ ಅಲ್ಲ. ಹೀಗಿರುವಾಗ ನಾನು ಬಿ.ಟಿ. ಬದನೆಕಾಯಿಯ ಬಗ್ಗೆ ಮಾತನಾಡಲು ಹೊರಟರೆ, ’ನಿನಗೇನು ಗೊತ್ತು ಬದನೇಕಾಯಿ’, ಎಂದು ಯಾರಾದರೂ ಮೂದಲಿಸಿದರೆ ಆಶ್ಚರ್ಯವಿಲ್ಲ. ಆದರೆ ನಾನು ಬಿ.ಟಿ. ಬದನೆಕಾಯಿಯ ಬಗ್ಗೆ ಸಾಕಷ್ಟು ಓದಿದ್ದೇನೆ, ಕೇಳಿದ್ದೇನೆ. ಕೆಲ ಕೃಷಿತಜ್ಞ-ವಿಜ್ಞಾನಿ-ಕೃಷಿಕರ ಬಳಿ ಚರ್ಚಿಸಿದ್ದೇನೆ ಕೂಡ. ಬಿ.ಟಿ. ಬದನೆಯ ಮತ್ತು ಅದರ ಕೃಷಿಯ ಸ್ವರೂಪವನ್ನು ಹಾಗೂ ಒಳ್ಳಿತು-ಕೆಡುಕುಗಳನ್ನು ತಿಳಿದುಕೊಂಡಿದ್ದೇನೆ. ಒಳ್ಳಿತಿಗಿಂತ ಕೆಡುಕೇ ಜಾಸ್ತಿಯೆಂಬ ಸತ್ಯದ ಅರಿವು ನನಗಾಗಿದೆ.

  ಬಿ.ಟಿ. ಬದನೆಯನ್ನು ವಿರೋಧಿಸುವ ತಜ್ಞರು ಚಿಂತನಪೂರ್ಣವಾಗಿ ಮತ್ತು ಆಧಾರಸಹಿತವಾಗಿ ತಮ್ಮ ವಾದ ಮಂಡಿಸಿದರೆ ಬಿ.ಟಿ. ಬದನೆಯ ಪರವಾಗಿರುವವರು ಬರೀ ವಿತಂಡ ವಾದ ಮಾಡುವುದನ್ನು ನಾನು ಗಮನಿಸಿದ್ದೇನೆ. ಅಂಥ ವಿವರಗಳನ್ನೆಲ್ಲ ನಾನಿಲ್ಲಿ ಹೇಳಬೇಕಾದ ಅಗತ್ಯ ಕಂಡುಬರುವುದಿಲ್ಲ. ಏಕೆಂದರೆ, ನೀವೀಗಾಗಲೇ ಬಿ.ಟಿ. ಬದನೆಯ ಬಗ್ಗೆ ಮಾಧ್ಯಮಗಳಿಂದ ಸಾಕಷ್ಟು ತಿಳಿದುಕೊಂಡಿರುತ್ತೀರಿ ಮತ್ತು ತಜ್ಞರು ಇನ್ನುಮುಂದೆಯೂ ವಿವರಗಳನ್ನು ನಿಮ್ಮ ಅರಿವಿಗೆ ತರುತ್ತಲೇ ಇರುತ್ತಾರೆ. ಈ ದೇಶದ ಓರ್ವ ಜವಾಬ್ದಾರಿಯುತ ಹಾಗೂ ವಿವೇಕಿ ಪ್ರಜೆಯಾಗಿ ಮತ್ತು ನನ್ನೆಲ್ಲ ಅರಿವಿನ ಬೆಳಕಿನಲ್ಲಿ ನಾನು ಬಿ.ಟಿ. ಬದನೆಯನ್ನು ಕಡುವಾಗಿ ವಿರೋಧಿಸುತ್ತೇನೆ.

  ಓರ್ವ ಸಾಮಾನ್ಯ ನಾಗರಿಕನಾಗಿ ನನ್ನಲ್ಲಿ ಇನ್ನೊಂದು ಯೋಚನೆಯೂ ಮೂಡುತ್ತದೆ. ಈ ದೇಶದಲ್ಲಿ ನಾನಾ ಬಗೆಯ ನಾಟಿ ಬದನೆಗಳಿವೆ. ಅವು ಬಿ.ಟಿ. ಬದನೆಗಿಂತ ರುಚಿಕರವಾಗಿರುತ್ತವೆ ಮತ್ತು ಸಮೃದ್ಧವಾಗಿಯೇ ಬೆಳೆಯುತ್ತವೆ. ಅವನ್ನು ಬೆಳೆಯಲು ಸಾಕಷ್ಟು ಭೂಮಿಯೂ ನಮ್ಮಲ್ಲಿದೆ ಮತ್ತು ಸಾಕಷ್ಟು ಕೈಗಳೂ ಇವೆ. ಈ ಕೈಗಳಿಗೆ ಕೆಲಸ ಕೊಡುವ ಬದಲು ಮತ್ತು ಶಕ್ತಿ ನೀಡುವ ಬದಲು ನಮ್ಮ ವ್ಯವಸ್ಥೆಯು ಬಿ.ಟಿ. ಬದನೆಯೆಂಬ ಕುಲಾಂತರಿ ಬದನೆಗೆ ಒತ್ತು ನೀಡಿದರೆ ಬೆಳೆ ಬೆಳೆಯುವ ಭೂಸಂಪತ್ತಿನ ಕಡೆಗಣನೆ ಹಾಗೂ ಕೈಗಳಿಗೆ ಅನ್ಯಾಯ ಮಾಡಿದಂತಲ್ಲವೆ? ಜೊತೆಗೆ, ಪ್ರಕೃತಿಗೆ ಮತ್ತು ಅದರ ನಿಯಮಕ್ಕೆ ವಿರುದ್ಧವಾಗಿ ಸಾಗಿದಂತಲ್ಲವೆ? ವಿರುದ್ಧವಾಗಿ ಸಾಗಿ ಜಯಿಸಿದ ಒಂದಾದರೂ ಉದಾಹರಣೆಯಿದೆಯೆ? ಹಾಗೆ ಜಯಿಸಲು ಎಂದಾದರೂ ಸಾಧ್ಯವೆ? ಮೇಲಾಗಿ, ಪ್ರಕೃತಿಯ ಶಿಶುಗಳಾಗಿ ನಾವು ತಿನ್ನುವ ಆಹಾರವೂ ಪ್ರಕೃತಿನಿಯಮಕ್ಕೆ ಅನುಗುಣವಾಗಿಯೇ ಇರಬೇಕಲ್ಲವೆ? ಜೀವಿಗಳ ಒಡಲಿನಮೇಲೆ ಪ್ರಕೃತಿನಿಯಮವನ್ನು ಮೀರಿ ಪ್ರಯೋಗಗಳನ್ನು ಮಾಡುವುದು ತರವೆ?

  ಅಂದಮೇಲೆ ಈ ಬಿ.ಟಿ. ಬದನೆಕಾಯಿ ಯಾವ ಕರ್ಮಕ್ಕೆ? ಬಿ.ಟಿ. ಬದನೆ ಬೇಡ, ಬೇಡ, ಖಂಡಿತ ಬೇಡ.