ಹೂವಾಗಿ ಅರಳುವ ಮುನ್ನವೇ ಬಾಡಿತೇ?

ಹೂವಾಗಿ ಅರಳುವ ಮುನ್ನವೇ ಬಾಡಿತೇ?


ದಿನೇ ದಿನೇ ಹೆಚ್ಚುತ್ತಿರುವ ಟಿವಿ ಚಾನೆಲ್ ಗಳ ಈ ಸ್ಪರ್ಧಾಯುಗದಲ್ಲಿ ಚಾನೆಲ್ ಗಳು ವೀಕ್ಷಕರನ್ನು ಆಕರ್ಷಿಸಲು ಮಾಡುತ್ತಿರುವ ಪ್ರಯತ್ನ ಹೇಳತೀರದು . ಹೇಗೆ ಜನರನ್ನು ತಮ್ಮತ್ತ ಆಕರ್ಷಿಸಬೇಕು ಎಂಬುದರ ಬಗ್ಗೆ ವಿಚಾರಗಳು ನಡೆಯುತ್ತಲೇ ಇರುತ್ತವೆ . ಒಂದಕ್ಕಿಂತ ಒಂದು ಒಳ್ಳೆಯ ಕಾರ್ಯಕ್ರಮಗಳನ್ನು ತಂದು ಜನರನ್ನು ಟಿವಿಯೆಡೆಗೆ ಮೋಡಿ ಮಾಡುತ್ತಿವೆ . ಹೀಗಿದ್ದಾಗಲೇ ಧಾಳಿ ಇಟ್ಟಿದ್ದು “ರಿಯಾಲಿಟಿ ಶೋ "ಗಳು . ಸಾಮಾನ್ಯ ಜನರನ್ನು ಪರದೆಯ ಮೇಲೆ ಕಾಣಿಸಿಕೊಳ್ಳಲು ,ಜನರಿಗೆ ಮನೋರಂಜನೆಯ ಹೊಸ ಕಾರ್ಯಕ್ರಮವನ್ನು ಶುರು ಮಾಡುವ ಕಾರಣದಿಂದ ಶುರು ಆಗಿದ್ದು" ರಿಯಾಲಿಟಿ ಶೋ"ಗಳು .



ಈ ರೆಅಲಿಟಿ ಶೋ ಗಳಲ್ಲಿ ರಿಯಾಲಿಟಿಯೇ ಹೊರಟು ಹೋಗಿದೆ . ಬರೀ ಹೆಸರು , ಕೀರ್ತಿ ಸಂಪಾದನೆಗೋಸ್ಕರ ಪ್ರತಿಯೊಬ್ಬರೂ ಟಿವಿಯಲ್ಲಿ ಕಾಣಬಯಸುತ್ತಾರೆ .ಈ ರಿಯಾಲಿಟಿ ಶೋಗಳು ಒಬ್ಬ ಸಾಮಾನ್ಯ ಮನುಷ್ಯನಿಗೆ ಹೀರೋ \ಹೀರೋಇನ್ ಆಗುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ .ಈ ರಿಯಾಲಿಟಿ ಶೋಗಳಲ್ಲಿ ನೃತ್ಯ ,ಸಂಗೀತ ,ನಟನೆ ಹೀಗೆ ಯಾವುದಾದರೂ ಇರುತ್ತದೆ ಕೆಲವು ರಿಯಾಲಿಟಿ ಶೋಗಳು ಜನರಿಗೆ ತಮ್ಮ ಪ್ರತಿಭೆ ಪ್ರದರ್ಶನ ಮಾಡಲು ಒಳ್ಳೇ ಅವಕಾಶವನ್ನು ಕಲ್ಪಿಸಿಕೊಡುತ್ತದೆ . ಹಾಗೇ ಕೆಲವು ದುಷ್ಪರಿಣಾಮಗಳೂ ಇವೆ . ಮೊದಲೆಲ್ಲ ಇದು ಬರೀ 18 ವರುಷ ಮೇಲಿನವರಿಗಷ್ಟೇ ಸೀಮಿತವಾಗಿತ್ತು .ಆದರೆ ಈಗ ಅದು ಚಿಕ್ಕ ಮಕ್ಕಳಿಗೂ ತೆರೆದುಕೊಂಡಿದೆ .

ನನ್ನ ಮಗ \ಮಗಳು ಟಿವಿಯಲ್ಲಿ ಬರುತ್ತಾಳೆ \ನೆ ,ಬಹುಮಾನ ಗೆಲ್ಲುತ್ತಾರೆ ಎಂದರೆ ಪಾಲಕರು ಅದೆಷ್ಟು ಸಂತಸ ಪಡುತ್ತಾರೆ . ಆದರೆ ಎಲ್ಲಾ ಮಕ್ಕಳೂ ಬಹುಮಾನ ಗೆಲ್ಲಲು ಸಾದ್ಯವೇ ? ಎಷ್ಟೋ ಮಕ್ಕಳಿಗೆ ಓದಿನೆಡೆಗೆ ಆಸಕ್ತಿ ಇರುತ್ತದೆ ,ಇನ್ನು ಕೆಲವರಿಗೆ ಕ್ರೀಡೆಯಲ್ಲಿ ಆಸಕ್ತಿ ಇರುತ್ತದೆ . ಆದರೆ ಇದು ಎಷ್ಟೋ ಪಾಲಕರ ಕಣ್ಣಿಗೆ ಕಾಣುವುದೇ ಇಲ್ಲ .ಪಕ್ಕದ ಮನೆಯವರ ಮಗಳ ಹಾಗೇ ನನ್ನ ಮಗಳೂ ಟಿವಿಯಲ್ಲಿ ಬರಲಿ ಎಂಬ ತಮ್ಮ ಆಶಯದಂತೆ ಮಕ್ಕಳನ್ನು ಈ ರಂಗಕ್ಕೆ ಒತ್ತಾಯಪೂರ್ವಕವಾಗಿ ತಳ್ಳುತ್ತಿರುವರೆ ಹೆಚ್ಚು . ಎಷ್ಟು ಮಕ್ಕಳಿಗೆ ಎಲ್ಲಾ ಪ್ರತಿಭೆ ಇರಲು ಸಾದ್ಯ ಹೇಳಿ ? ಮಕ್ಕಳ ಮನಸ್ಸಿನ ಮೇಲೆ ಇದು ಎಷ್ಟು ಘಾಡವಾದ ಪರಿಣಾಮ ಬೀರುತ್ತದೆ ಎಂದು ಯಾರಿಗೂ ಬೇಕಾಗಿಲ್ಲ .ಈ ರಿಯಾಲಿಟಿ ಶೋಗಳು ಒಂದು ರೀತಿಯಲ್ಲಿ ಮಕ್ಕಳು ಹಾಗೂ ಪಾಲಕರ ಭಾವನೆಗಳ ಜೊತೆ ಆಟ ಆಡುವಂತಾಗಿ ಬಿಟ್ಟಿವೆ.

ನಾವು ಬಾಲ-ಕಾರ್ಮಿಕವನ್ನು ವಿರೋಧಿಸುತ್ತೇವೆ .14 ವಯಸ್ಸಿನ ಒಳಗಿನ ಮಕ್ಕಳಿಗೆ ಬೇರೆ ಯಾವುದೇ ರಂಗದಲ್ಲೂ ಕೆಲಸಕ್ಕೆ ಹೋಗಲು ಬಿಡುವುದಿಲ್ಲ .ಹೊಟ್ಟೆ ಪಾಡಿಗೋಸ್ಕರ ದುಡಿಯುವ ಮಗುವನ್ನು ಬಾಲ- ಕಾರ್ಮಿಕ ಎಂದು ಪರಿಗಣಿಸಿ ಅವರನ್ನು ಶಾಲೆಗಳಿಗೆ ಹೋಗಲು ಪ್ರೋತ್ಸಾಹಿಸುವ ನಾವು ,ಈ ರಿಯಾಲಿಟಿ ಶೋಗಳು ಹೇಗೆ ಪ್ರೂತ್ಸಾಹಿಸುತ್ತಿದ್ದೇವೆ ಅನ್ನಿಸಿಬಿಡುತ್ತದೆ ಒಂದೊಂದು ಸಲ . ಹೀಗಿರುವ ನಾವು ತೀರ 12 ವರ್ಷಕ್ಕಿಂತ ಕೆಳಗಿನ ಮಕ್ಕಳು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರೆ ಮಾತ್ರ ಎಲ್ಲಿಲ್ಲದ ಸಂತೋಷದಿಂದ , ಬೇಗ ಬೇಗ ಎಲ್ಲಾ ಕೆಲಸವನ್ನು ಮುಗಿಸಿ , ಟಿವಿ ಮುಂದೆ ಕುಳಿತು ಘಂಟೆಗಟ್ಟಲೆ ಸಮಯ ಕಳೆಯುತ್ತಾ ಕೃತಾರ್ಥರಾಗುತ್ತೇವೆ . ಇಂದು ಈ ರಿಯಾಲಿಟಿ ಶೋಗಳು ತುಂಬಾ ಜನ ವೀಕ್ಷರನ್ನು ಆಕರ್ಶಿಸಿದೆ , ಕಾರ್ಯಕ್ರಮ ಸೂಪರ್ ಹಿಟ್ ಆಗಿದೆ .ಈ ಶೋಗಳಲ್ಲಿ ತಮ್ಮ ಮಕ್ಕಳು ಭಾಗವಹಿಸುತ್ತಾರೆ ಎಂದರೆ ಅಪ್ಪ ,ಅಮ್ಮ ,ಜೊತೆಗೆ ತಾತ -ಅಜ್ಜಿ ಇಡೀ ಕುಟುಂಬವೇ ಹೆಮ್ಮಯಿಂದ ಭಾಗವಹಿಸುತ್ತವೆ . ಆದರೆ ಅದೇ ಮಗು ಶಾಲೆಯಲ್ಲಿ ಪಾಲಕರ ದಿನಾಚರಣೆ ಇದೆ ಬನ್ನಿ ಎಂದರೆ ಬರದ ಪಾಲಕರು ಅದೆಷ್ಟು ಇದ್ದರೋ ? ಇಲ್ಲಿ ಉದ್ಭವವಾಗುವ ಪ್ರಶ್ನೆ ಪಾಲಕರಿದ್ದಲ್ಲ . ಮಕ್ಕಳಿದ್ದು ….ಮಕ್ಕಳ ಮನಸಿನ ಭಾವನೆಗಳಿಗೆ ಎಲ್ಲಿ ಬೆಲೆ ಇದೆ ?

ಮೊನ್ನೆ ಮೊನ್ನೆ ಒಂದು ಸುದ್ದಿ ಕೇಳಿದ ನೆನಪು . "ಬಾಲಕಿಯೊಬ್ಬಳು ತನಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಪಾಲಕರು ಬಿಡದ ಕಾರಣ ,ತನ್ನ ದುಪಟ್ಟವನ್ನೇ ಉರುಳಾಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ".
ಇಲ್ಲಿ ನೋಡಿ :
http://thatskannada.oneindia.in/news/2010/01/05/girl-suicide-fuels-tv-bashing.html
ಇದೆಲ್ಲ ಬೇಕಾ ? ಅಂತ ಅನಿಸಿಬಿಡುತ್ತದೆ . ನಕ್ಕು ನಲಿಯಬೇಕಾದ ಇನ್ನೂ ಹನ್ನೊಂದೇ ವರುಷದ ಮಗು ಆತ್ಮ ಹತ್ಯೆಗೆ ಶರಣಾಗುತ್ತದೆ ಎಂದರೆ ಈ ರಿಯಾಲಿಟಿ ಶೋಗಳ ಪರಿಣಾಮಗಳು ಕಡಿಮೆ ಏನಿರಲಿಕ್ಕಿಲ್ಲ !! ಸ್ವಚ್ಛಂದವಾಗಿ ಆಟ ಆಡಿಕೊಂಡು ಖುಷಿ- ಖುಷಿಯಾಗಿ ಬಾಲ್ಯವನ್ನು ಕಳೆಯುವ ಕಾಲದಲ್ಲಿ , ಅವರು ಈ ರಿಯಾಲಿಟಿ ಶೋಗಳಿಗೆ ಬಲಿಯಾಗಿ ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ . ಮನೆಯಂಗಳದಲ್ಲಿ ಕುಂಟಾಬಿಲ್ಲೆ ಆಡಿಕೊಂಡು ಹಾಯಾಗಿದ್ದ ಮಕ್ಕಳು ಈಗ ಯಾವುದೋ ಡಾನ್ಸ್ ಕ್ಲಾಸ್ಸೋ ,ಸಂಗೀತ ಕ್ಲಾಸ್ಸೋ ಅಂತ ಬ್ಯುಸಿ ಆಗಿ ಬಿಟ್ಟಿದ್ದಾರೆ . ಇದೆಲ್ಲ ಮೊದಮೊದಲಿಗೆ ತುಂಬಾ ಚೆನ್ನಾಗಿರುತ್ತದೆ .ಆದರೆ ದಿನಗಳುರುಳಿದಂತೆ ಮಕ್ಕಳಿಗೆ ತಮ್ಮ ಮೇಲೆ ತಮಗೇ ಬೇಸರ ಉಂಟಾಗಬಹುದು . ಬಹುಮಾನ ಗೆದ್ದರೆ ಬೀಗುವ ಪಾಲಕರು, ಮಕ್ಕಳಿಗೆ ಸೋತರೆ , ಅಂದರೆ ಬಹುಮಾನ ಗೆಲ್ಲದಿದ್ದರೆ ಅದನ್ನು ಹೇಗೆ ಸ್ವೀಕರಿಸಬೇಕು ಎಂಬುದನ್ನು ಕಲಿಸಿರುವುದಿಲ್ಲ . ಮಕ್ಕಳಿಗೆ ಹೋಗಲಿ ತಮಗೇ ಗೊತ್ತಿರುವುದಿಲ್ಲ ಇದು ವಿಷಾದನೀಯ .

ಎಷ್ಟೋ ಟಿವಿ ರಿಯಾಲಿಟಿ ಶೋಗಳ ಜನರು ಮಕ್ಕಳನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆಂದು ಕೆಳಲ್ಪಟ್ಟಿದೆ . ಸರಿಯಾದ ಸಮಯದಲ್ಲಿ ಊಟ ತಿಂಡಿ ಸಿಗದೇ , audition ಪಾಸು ಆದರೆ ಸಾಕು ಎಂದು ನಿತ್ರಾಣವಾಗಿ ಕೂರುವ 5 -7 ವರ್ಷದ ಮಕ್ಕಳನ್ನು ಕಂಡರೆ ಯಾರಿಗೆ ತಾನೇ ಬೇಸರವಾಗುವುದಿಲ್ಲ ಹೇಳಿ ? ಇದೆಲ್ಲ ಯಾಕೆ ಬೇಕು ? ಮಕ್ಕಳಿಗೆ ಸ್ಪರ್ಧಾ ಮನೋಭಾವ ಬೆಳೆಸಬೇಕು , ಆದರೆ ಅದು ತೀರ ಅವರ ಜೀವ ತೆಗೆದುಕೊಳ್ಳುವಷ್ಟು ಆಗಬಾರದು ಅಲ್ಲವಾ ?ಆರೋಗ್ಯಕರವಾಗಿರಬೇಕು .ಮಕ್ಕಳು ಸೋತರೆ ಸ್ವಂತ ಪಾಲಕರೇ ಅವರನ್ನು ಕೀಳಾಗಿ ಕಂಡರೆ ಮಕ್ಕಳು ಕಕ್ಕಾ-ಬಿಕ್ಕಿ ಆಗದೆ ಇರಲಾರರು .ಒಂದು ವೇಳೆ ಸೋತರೆ ಜೀವನವೇ ಮುಗಿದಂತೆ ಕೊರಗುವುದು ಯಾಕೆ ?ಬದಲಿಗೆ ಅವರ ಮಕ್ಕಳಿಗೆ ಆಸಕ್ತಿ ಇದ್ದಲ್ಲಿ ಮುಂದುವರೆಸುವುದು ಒಳ್ಳೆಯದಲ್ಲವೇ ? ಹುಟ್ಟಿದ ಮಕ್ಕಳೆಲ್ಲ ಶಾಹ್ರುಖ್ ಖಾನ್ , ಐಶ್ವರ್ಯ ನೇ ಆಗಲು ಸಾಧ್ಯವಾ ?

ಇವೆಲ್ಲ ಶೋಗಳಲ್ಲಿ ಭಾಗವಹಿಸುವವರ ಪಾಡಾದರೆ ಇನ್ನೂ ಮನೆಯಲ್ಲೇ ಕುಳಿತು ಟಿವಿ ನೋಡುವ ಮಕ್ಕಳ ಪಾಡು ಕೇಳಿ .ಕಾರ್ಟೂನಗಳನ್ನು ನೋಡಿಕೊಂಡು ಖುಷಿ ಪಡುತ್ತಿದ್ದ ಮಕ್ಕಳು ,ರಿಮೋಟ್ ಕೈಗೆ ಸಿಕ್ಕಿದ ತಕ್ಷಣ ಯಾವುದಾದರೂ ಚಾನೆಲ್ ನಲ್ಲಿ ರಿಯಾಲಿಟಿ ಶೋಗಳು ಬರುತ್ತಿದ್ದರೆ ತಪ್ಪದೇ ನೋಡುತ್ತಾರೆ .ಇದರಿಂದ ಅವರ ಓದು - ಬರಹವೂ ಸ್ವಲ್ಪ ಮಟ್ಟಿಗೆ ಕೆಡುವಂತಾಗುತ್ತದೆ . ಮಕ್ಕಳನ್ನು ಕೂರಿಸಿಕೊಂಡು ಭಗತ್ ಸಿಂಗ್ , ಶಿವಾಜಿ ,ಇಂಥವರ ಬಗ್ಗೆ ಕಥೆ ಹೇಳುವುದೆಲ್ಲ ಈಗ ಕಣ್ಣಿಗೆ ಕಾಣುವುದು ಬಲು ಅಪರೂಪ . ಅಸಲಿಗೆ ಈ ರಿಯಾಲಿಟಿ ಶೋಗಳ ಅವಶ್ಯಕತೆ ಇದೆಯಾ ? ಹೌದು ಇದೆ . ನಿರ್ಮಾಪರಿಗೆ ಒಳ್ಳೇ ದುಡ್ಡಾಗುತ್ತದೆ , ಮತ್ತೆ ನಮಗೂ ಮನೋರಂಜನೆಯಾಗುತ್ತದೆ , ದಿನಾ ಬರುವ ,ನಾವು ನೋಡುವ ಧಾರಾವಾಹಿಗಳಿಗಿಂತ ಭಿನ್ನವಾಗಿದೆ ಅಂತ ನೀವಂದರೆ ಅಲ್ಲ ಹೇಳಲಾಗುವುದಿಲ್ಲ .

ಮಾಧ್ಯಮಗಳಿಂದ ಜನರಿಗೆ ಕಲಿಯಲು ಸಂದೇಶಗಳಿರಬೇಕು.ಆದರೆ ಈಗ ಹೇಗಾಗಿಬಿಟ್ಟಿದೆ ಎಂದರೆ ಬೇರೆಯವರ ದುಃಖ ,ಅಸಹನೆ ,ನಿರಾಸೆ ನೋಡುವುದೇ ಮನೋರಂಜನೆ ಆಗಿಬಿಟ್ಟಿದೆ .ಅದು ಹಾಗಾಗಬಾರದು .ಮಕ್ಕಳಿಗೆ ರಿಯಾಲಿಟಿ ಶೋಗಳಿಗೆ ಕರೆದುಕೊಂಡು ಹೋಗುವುದಕ್ಕಿಂತ ಮುಂಚೆ ಪಾಲಕರು ,ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬಬೇಕು .ನಾವು ಗೆದ್ದರೂ ಸಂತೋಷ ,ಸೋತರೂ ಪರವಾಗಿಲ್ಲ , ಭಾಗವಹಿಸುವುದು ಮುಖ್ಯ ,ಎಂದು ಕಡಾಖಂಡಿತ ನಿರ್ಧಾರ ಮಾಡಿಕೊಂಡೇ ಮನೆಯಿಂದ ಹೊರಗೆ ಹೊರಡ ಬೇಕು .ಈ ನಿಟ್ಟಿನಲ್ಲಿ ಪಾಲಕರು ಸ್ವಲ್ಪ ಗಮನ ಹರಿಸಿದರೆ, ಅವಮಾನ ,ಒತ್ತಡ ತಾಳಲಾರದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವ ಮುಗ್ಧ ಕಂದಮ್ಮಗಳನ್ನು ಕಾಪಾಡಬಹುದು . ಹೂವಾಗಿ ಅರಳಬೇಕಾದ ಕಂದಮ್ಮಗಳನ್ನು ಚಿಗುರಿನಲ್ಲೇ ಹೊಸಕಿ ಹಾಕುತ್ತಿರುವ ಈ ರಿಯಾಲಿಟಿ ಶೋಗಳ ಯಾವುದೇ ಪ್ರಭಾವ ಬೀರದಂತೆ ಕಾಪಾಡುವುದು ಪಾಲಕರ ಕರ್ತವ್ಯ .

Rating
No votes yet

Comments