ಹೆಸರಿಲ್ಲದವಳು ; ಅವನ ಉಸಿರಾದವಳು.

ಹೆಸರಿಲ್ಲದವಳು ; ಅವನ ಉಸಿರಾದವಳು.

ಬರಹ

ಸದ್ದಿಲ್ಲದೆ ನಡೆದು ಹೋಗಿತ್ತು. ಅಲ್ಲಿ, ಸಮಾರಂಭದ ಗೌಜಿಯಿತ್ತು. ಶುಭಸಮಯ ರಂಗುಚೆಲ್ಲಿತ್ತು. ಓಲಗದ ಗದ್ದಲ, ಗೆಲುವಿತ್ತು. ಸುಗಂಧ ಸುವಾಸನೆ ಎಲ್ಲೆಡೆ ಹರಡಿತ್ತು. ನಗೆಮಲ್ಲಿಗೆ ಪರಿಮಳ ಸೂಸಿತ್ತು. ಕಣ್ಣೀರು ಕೆಲವು ಕಣ್ಣ ತೋಯಿಸಿತ್ತು. ಮಂಗಳ ಮಂತ್ರಗಳೂ ಮೊಳಗಿತ್ತು. ಮಧುರ ಮನಸೆರಡು ಒಂದಾಗಿತ್ತು. ಅವನ ಮದುವೆ ಸುದ್ದಿಯಿಲ್ಲದೆ ನಡೆದು ಹೋಗಿತ್ತು. ಹುಣ್ಣಿಮೆಯ ಇರುಳಂತೆ ಕಳೆದುಹೋಗಿತ್ತು, ವಾಸ್ತವವೂ ಮರೆತಿತ್ತು.

ಮರೆತ ನೆನಪು ದಿಬ್ಬಣ ಹೊರಟಿತು, ಸಿಂಗಾರವಿಲ್ಲದ ಮದುವಣಗಿತ್ತಿಯೊಂದಿಗೆ. ನೆನಪೊಂದೇ ಅಲ್ಲಿ ಅವಳ ಜೊತೆ. ನೂರೊಂದು ಕನಸ ಬಂಡಿ ಏರಿದವಳು ಏಕಾಂಗಿಯಾಗಿ ಉಳಿದು ಹೋದಳು. ಸಿಹಿ ತಿಳಿಯುವ ಮೊದಲೇ ಕಹಿ ಉಂಡಿದ್ದಳು ಅವಳು.

ಅವಳು ಅವನ ಮೊದಲು ಕಂಡದ್ದು ಬರಿಯ ಅಕ್ಷರಗಳಲ್ಲಿ. ಅವಳ ಪ್ರತಿಯೊಂದು ಕಥೆಗೂ ಅವನ ಕಿರುಸಾಲಿನ ಮನದಿಂಗಿತವಿರುತ್ತಿತ್ತು. ಬರೆಯುವ ಅಭ್ಯಾಸವಿರದಿದ್ದರೂ, ಓದುವ ಅಭಿರುಚಿ ಅವನಲ್ಲಿತ್ತು. ಅವನ ಅಂತಹಾ ಸಾಲುಗಳಿಗೆ ಅವಳ ಇಂಗಿತ, ಪ್ರತ್ಯುತ್ತರಗಳು ಅವನನ್ನು ಸುಮ್ಮನಾಗಿಸುತ್ತಿದ್ದವು, ಮತ್ತೊಂದು ಪ್ರಶ್ನೆ ಬಾರದಂತಾಗಿಸುತ್ತಿದ್ದವು. ಬರಿಯ ಅಕ್ಷರಗಳೇ ಅವನನ್ನು ಅವಳೆಡೆಗೆ ಒಯ್ದದ್ದು, ಅವಳನ್ನು ಅವನೆದೆಗೆ ದೂಡಿದ್ದು. ಹಾಗೇ, ಅವರ ಸಂಗ, ಸಂವಾದ ಬರವಣಿಗೆಯ ಪರಿಧಿ ದಾಟಿತು, ಮುಂದುವರೆಯಿತು, ಸಶೇಷವಾಯಿತು.. ಒಬ್ಬರನ್ನೊಬ್ಬರು ನೋಡದೇ..! ಅಂತರಪಟವೂ ಸರಿದಿತ್ತು, ಮದುವೆ ಮಂಟಪದಲ್ಲಿ.

ಮಂಟಪದಲ್ಲೆಲ್ಲೂ ಗಮ್ಮತ್ತೇ ಗಮ್ಮತ್ತು. ಅಂಥದೇ ಗಮ್ಮತ್ತು ಅಂದೊಮ್ಮೆ ಅವಳಲ್ಲೂ ಇತ್ತು. ಅವಳ ಗೆಳತಿಯಿಂದ ಅವನ ಒಂದು ಫೊಟೋ ಸಿಕ್ಕಿತ್ತು. ಅವರೆಲ್ಲಾ ಸಹಪಾಠಿಗಳೆಂದೂ ತಿಳಿಯಿತು. ಅವನೊಬ್ಬ ಮುಗ್ಧ ಹುಡುಗನೆಂದೂ ಗೊತ್ತಾಯ್ತು. ಅಂದಿನಿಂದ ಅವಳಿಗವನು ಆಪ್ತನಂತಾಯ್ತು. ಬದಲಾಯ್ತು ಅವಳ ಕಥಾ ಪ್ರಪಂಚ.

ಪ್ರಪಂಚ ಅಷ್ಟು ಸಣ್ಣದೆಂದು ಅವಳೆಂದೂ ಗ್ರಹಿಸಿರಲಿಲ್ಲ, ಸಂಬಂಧಿಕರ ಮದುವೆಯೊಂದರಲ್ಲಿ ಅವನನ್ನು ಕಾಣುವವರೆಗೆ..! ಫೋಟೋದಲ್ಲಿ ಕಂಡ ಮುಖಚರ್ಯೆ ಹೆಚ್ಚೇನೂ ಬದಲಾಗಿರಲಿಲ್ಲ, ಚಿಗುರು ಮೀಸೆಯ ಹೊರತಾಗಿ. ವಿಪರ್ಯಾಸವೆಂದರೆ ಅವನಿಗಿದೊಂದೂ ತಿಳಿದೇ ಇರಲಿಲ್ಲ, ಅವಳು ತನ್ನನ್ನು ಪರಿಚಯಿಸಿಕೊಳ್ಳುವವರೆಗೂ..! ಮತ್ತೆಂದೂ ಅವರ ಪ್ರಪಂಚದಲ್ಲಿ ಕತ್ತಲಾಗಲಿಲ್ಲ... ತಲೆಯೆತ್ತಲಾಗಲಿಲ್ಲ ಅವಳಿಂದ, ದುಃಖ ಉಮ್ಮಳಿಸಿ, ನೆನಪು ಜೊತೆಯಾಗಿ.

ಜೊತೆಯಾಗಿ ಅವನೊಂದಿಗೆ ಹೆಜ್ಜೆಹಾಕಬೇಕೆಂದು ಹಚ್ಚಿದ ದೀಪ ಆರಿ ಹೋಯ್ತು ಅಂದು, ಅವನ ಜೀವನ ಸಂಗಾತಿಯಾಗುವ ವಿಷಯ ಬಂದಾಗಿನಂದು. ಹೆಸರಿಲ್ಲದವಳು ಅವನ ಉಸಿರಾಗಬಯಸಿದ್ದಳು. ಅದೆಷ್ಟೋ ವರುಷಗಳ ಅವರ ಅಂಥಾ ಸ್ನೇಹಕ್ಕೆ, ಅವಳೊಂದಿಗಿನ ಒಡನಾಟಕ್ಕೆ, ಅವನಿಗೇ ಸಮರ್ಪಣ ಎನಿಸುವ ಅವಳ ನಿಶ್ಕಲ್ಮಷ ಅನುರಾಗಕ್ಕೆ ತರ್ಪಣವೆರೆದಿದ್ದ. ನಿಸ್ಸಹಾಯಕನಂತೆ ಅನುಕಂಪದ ದೃಷ್ಟಿ ಬೀರಿದ್ದ. ತರ್ಕಬದ್ಧವಾದ ತನ್ನ ಮನದಿಂಗಿತವನ್ನು ಅವಳಲ್ಲಿ ಅರುಹಿ, ಕೈಯಲ್ಲಿ ಮದುವೆಯ ಕಾಗದವಿತ್ತಿದ್ದ, ಜೊತೆಗೆ ನಾಲ್ಕು ಕಾಳು ಅಕ್ಷತೆ.

ಅಕ್ಷತೆಗಳಾಗಲೇ ಹಾರೈಕೆಯನ್ನು ಹೊತ್ತು ವಧೂವರರನ್ನು ಆಶೀರ್ವದಿಸಲಾರಂಭಿಸಿತ್ತು. ನಿಂತಲ್ಲೂ ಅವಳೊಳಗೆ ಅವನ ಆ ಮಾತುಗಳೇ ಮಾರ್ದನಿಸುತಿತ್ತು. "ನನ್ನನ್ನು ಮರೆತುಬಿಡು. ಮನೆಯವರ ಒತ್ತಾಯ, ಓರಗೆಯವರ ಒತ್ತಾಸೆ. ಅಲ್ಲದೆ ಅವಳು..." ಜೀವನವನ್ನು ಅವಳದೇ ದೃಷ್ಟಿಯಲ್ಲಿ ಓದಿದವನು ಅವಳಿಂದಲೇ ದೂರವಾಗಿದ್ದ. ಸಹಜತೆ, ತನ್ನತನ, ನಂಬಿಕೆಗಳನ್ನು ಹಣ, ಅಂತಸ್ತು, ಖ್ಯಾತಿಗಳಾಗಿ ತಿದ್ದಿದ್ದ. ತನಗಾಗಿ ಮಿಡಿಯುವ ಇನ್ನೊಂದು ಮನದ ಮಾತ ಅರಿಯದವನಾಗಿ, ಓರಗೆಯವರ ಒತ್ತಾಸೆಯ ಓಲೈಸಿದ್ದ. ಸಂತಸದ ಅಂಗಳ ಮರೆತು ದೂರದ ಬೆಟ್ಟವನೇ ನೆಚ್ಚಿದಂತಿದ್ದ. ಅವನ ಆ ಮಾತು, ಅವನ ಬಗೆಗಿನ ಅವಳ ತಹತಹಿತ, ತುಡಿತಗಳ ತಳ ಅಲ್ಲಾಡಿಸಿದವು. ಹೊಸ ಕಥೆಯನ್ನು ಹೊಸದೊಂದು ಪುಟದಲ್ಲಿ ಬರೆಯಾಲರಂಭಿಸಿದ್ದನು. ಹಳೆಯದನ್ನೆಲ್ಲ ನಿಲ್ಲಿಸಿ, ಹೊಸ ಕಥಾಹಂದರ ರೂಪಿಸಿ, ಹೊಸ ಜಗದ ರೂಪಸಿಯ ಕೈ ಹಿಡಿದು.

ಕೈಹಿಡಿದು ಅವರು ನಡೆದ ಹಾದಿಯೆಷ್ಟೋ.? ಕಳೆದ ಕಾಲವೆಷ್ಟೋ.? ಸವಿದ ಸಮಯವೆಷ್ಟೋ.? ಆದರಿಂದು ಅಲ್ಲಿ ಬರಿಯ ಏಳು ಹೆಜ್ಜೆಗಳು ಅವರನ್ನು ಬಂಧಿಸಿದ್ದವು, ಜೊತೆಯಾಗಿಸಿದ್ದವು ಜನುಮ ಜನುಮಗಳವರೆಗೆ. ಹೋಮದ ಮುಂದೆ ಕುಳಿತು ಹೊಗೆ ಸಹಿಸಲಾಗದೆ ಅವನ ಕಣ್ಣುಗಳು ತುಂಬಿತ್ತು. ಕಣ್ಣೊರೆಸಿದ ಅವನ ಹೆಗಲ ಶಾಲೂ ನೆನೆದಿತ್ತು. ಗುಣಗಳೆಲ್ಲವನು ಗೌಣ ಮಾಡಿ, ವಚನ ಮರೆತವನನ್ನು ನೆನೆದು ಅವಳ ಕಣ್ಣೂ ತುಂಬಿತ್ತು. ಮರೆಯಲಾಗದ ಮನಸ ಮುನಿಸ ಸಹಿಸದೆ ಮನಸೂ ಅಳುತಿತ್ತು. ಸೀರೆಯ ಸೆರಗೂ ನೆನೆದಿತ್ತು, ಹಾರೈಸಲೆಂದು ಕೈಯಲ್ಲಿರಿಸಿಕೊಂಡಿದ್ದ ಆ ಅಕ್ಷತೆಯೂ...