ಶ್ರೀಕೃಷ್ಣದೇವರಾಯರ ಫಟ್ಟಾಭಿಷೇಕ- 500 ರ ನೆನಪು...
ವಿಜಯ ನಗರ ಸಾಮ್ಯಾಜ್ಯ ಅಂದಿನ ಕಾಲ ಘಟ್ಟದಲ್ಲಿ ಪ್ರಪಂಚದಲ್ಲೇ ಅಗ್ರಸ್ಥಾನ ಪಡೆದಿತ್ತು. ಸುಮಾರು 300 ವರ್ಷಗಳ ಆಳ್ವಿಕೆಯ ಸಾಮ್ಯಾಜ್ಯ,. ಅದರ ವೈಭವವನ್ನು ಶ್ರೀ ಕೃಷ್ಣದೇವರಾಯನ ಆಳ್ವಿಕೆಯೊಂದಿಗೇ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದದ್ದು. ಶ್ರೀ ಕೃಷ್ಣದೇವರಾಯ ವಿಜಯ ನಗರ ವೈಭವವನ್ನು ವಿಶ್ವದೆತ್ತರಕ್ಕೆ ಕೊಂಡೊಯ್ದ ಜಗತ್ಪ್ರಸಿದ್ಧ ಚಕ್ರವರ್ತಿ. ವಿಚ್ಛಿದ್ರಕಾರೀ ಶಕ್ತಿಗಳ ದುರಾಕ್ರಮಣವನ್ನು ದಮನಗೊಳಿಸಿ ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಚೈತನ್ಯ ನೀಡಿದ ಮಹಾರಾಯ ರಾಯರ ರಾಯ ಶ್ರೀ ಕೃಷ್ಣದೇವರಾಯ. ಆತನ ಆಳ್ವಿಕೆ ಮುಕ್ತಾಯಗೊಂಡ ಬೆನ್ನಿಗೇ ಆಕ್ರಮಣ ಕಾರರಿಂದ ವಿಜಯನಗರ ಭಗ್ನಗೊಂಡು ಪಳಿಯುಳಿಕೆಯಾಯಿತು. ಇಂದಿನ ಹಾಳು ಹಂಪೆಯಲ್ಲಿರುವ ಆ ಪಳಿಯುಳಿಕೆಗಳು ಮೊಕವಾಗಿ ರೋಧಿಸುತ್ತಿವೆ; ಮರೆಯಲಾಗದ ಸಾಮ್ರಾಜ್ಯವೊಂದರ ಕಥೆ ಹೇಳುತ್ತಿವೆ. ಈ ವಾರದ ತರಂಗ ವಾರ ಪತ್ರಿಕೆ ( (4 ಫೆಬ್ರವರಿ 2010) ವಿಶೇಷ ಲೇಖನ ಪ್ರಕಟಿಸಿ ಸಮೃದ್ಧ ಮಾಹಿತಿಯನ್ನೊದಗಿಸಿದೆ ..ಲೇಖನ ಹೀಗೆ ಆರಂಭವಾಗುತ್ತದೆ-
“ಸಾಮ್ರಾಟ್ ಶ್ರೀಕೃಷ್ಣ ದೇವರಾಯ ಮಹಾರಾಯರಿಗೆ ಜಯವಾಗಲಿ’’
ನೆರೆದ ಜನತೆಯ ಜಯಘೋಷ ಮುಗಿಲು ಮುಟ್ಟಿತು.
ಸ್ತುತಿ ಪಾಠಕರು ಉಗ್ಗಡಿಸಿದರು-
ಶ್ರೀಮತ್ ಸಮಸ್ತ ಭುವನಾಶ್ರಯ
ರಾಜಾಧಿರಾಜ ರಾಜ ಪರಮೇಶ್ವರ
ಪೂರ್ವ ಪಶ್ಚಿಮ ದಕ್ಷಿಣ ಸಮುದ್ರಾಧೀಶ್ವರ
ಬೋಪರಾಕ್ ಭೋಪರಾಕ್...
ವೇದ ಮಂತ್ರ, ಜಯಘೋಗಳ ನಡುವೆ ಮಂಗಲ ವಾದ್ಯಗಳು ಅಷ್ಟಾದಶ ನಭೋ ಮಂಡಲವನ್ನು ಭೇಧಿಸುವಂತೆ ಮೊಳಗುತ್ತಿದ್ದವು.
ಸ್ತುತಿ ಪಾಠಕರು ಉಸಿರು ಬಿಗಿಹಿಡಿದು ಉಗ್ಗಡಿಸುತ್ತಿದ್ದರು-
ಭಾಷೆಗೆ ತಪ್ಪದ ರಾಯರ ಗಂಡ
ಅರಿರಾಯ ಗಜಗಂಡ ಭೇರುಂಢ
ಯದುಕುಲ ಸಂಜಾತ ತಳುವ ವಂಶೋದ್ಭವ
ನರಸ ಭೂಪಾಲ ತನಯ
ಶ್ರೀ ವೀರುಪಾಕ್ಷ ಪಾದಪದ್ಮಾರಾಧಕನಿಗೆ
ಭೋಪರಾಕ್ ಭೋಪರಾಕ್...
ಅಭೂತಪೂರ್ವ ವೈಭವದ ಮೆರವಣಿಗೆಯಲ್ಲಿ ಪ್ರಜೆಗಳ ವಂದನೆ.....
ಮತ್ತೊಮ್ಮ ಕೈಎತ್ತಿ ನಮಸ್ಕರಿಸುತ್ತ, ಸಾಗಿದ ರಾಜ, ಇಂದ್ರನ ದರ್ಬಾರನ್ನೂ ಮೀರಿಸುವಂಥ ಭವ್ಯಾಲಂಕೃತ ದರ್ಬಾರು ಮಂಟಪ ಪ್ರವೇಶಿಸುವ ಮೊದಲು...
...ಭೋಪರಾಕ್ ಭೋಪರಾಕ್...
ಕನ್ನಡ ರಾಜ್ಯ ರಮಾರಮಣ ಭೋಪರಾಕ್..
ಕರ್ಣಾಟಕ ರತ್ನ ಸಿಂಹಾಸನಾಧೀಶ್ವರ ಭೋಪರಾಕ್..
ಹೀಗೆ ಪಟ್ಟಾಭಿಷೇಕ ಸಮಾರಂಭದ ಆರಂಭವನ್ನು ಕಣ್ಣಿಗೆ ಕಟ್ಟಿದಂತೆ ವರ್ಣಿಸುತ್ತ ಮುಂದುವರೆ ಯುತ್ತದೆ...ಶ್ರೀಕೃಷ್ಣದೇವರಾಯನ ಇತಿಹಾಸವನ್ನೇ ತೆರೆದಿಡುವ ವಿಜಯ ನಗರ ಸಾಮ್ರಾಜ್ಯದ ವೈಭವವನ್ನು (ಇಂದಿನ ಹಂಪಿಯ ಗತ ವೈಭವವನ್ನು) ಮತ್ತೊಮ್ಮ ಕಟೆದು ನಿಲ್ಲಿಸುವ ಸಮಗ್ರ ಲೇಖನ...ಬಹುತೇಕ ಇಂದಿನ ಪೀಳಿಗೆಯವರಿಗೆ ತಿಳಿಯದ ವಿಷಯಗಳು. ಪ್ರತಿಯೊಬ್ಬ ಕನ್ನಡಿಗರೂ ಓದಲೇ ಬೇಕಾದ ಲೇಖನ ಬರೆದ ಕಾ.ನಿ. ಸಂಪಾದಕರಾದ ಯು.ಬಿ.ರಾಜಲಕ್ಷ್ಮೀ ಮತ್ತು ಪ್ರಕಟಿಸಿದ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾಪೈ ಅವರಿಗೆ ನಮ್ಮ ಕನ್ನಡಿಗರು ಧನ್ಯವಾದಗಳನ್ನು ಹೇಳಲೇ ಬೇಕು..
ಆದರೆ,ಶ್ರೀಕೃಷ್ಣದೇವರಾಯ ಮತ್ತು ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಇಂತಹ ಅಪರೂಪದ ಲೇಖನವನ್ನು ಓದುವಾಗ ನನಗೆ ಅನಿಸಿದ್ದು-
ಅಂದಿನ ಕಾಲಘಟ್ಟದಲ್ಲಿ ರಾಜನೆಂದರೆ ರಾಜಾಪ್ರತ್ಯಕ್ಷ ದೇವತಾ...ಭವ್ಯಾಲಂಕೃತ ರಾಜನ ದರ್ಬಾರು. ಅದನ್ನು ಪ್ರವೇಶಿಸುವ ಆಸೀನರಾಗುವ ರಾಜ ಮಹಾರಾಜರು, ಅದು ಗತವೈಭವವಷ್ಟೇ ಎಂದು ನಾವು ಉಸಿರ್ಗರೆದು ಸುಮ್ಮನಾಗಿ ಬಿಡುತ್ತೇವೆ. ಸ್ವಲ್ಪ ಸುಧೀರ್ಘವಾಗಿ ಆಲೋಚಿಸಿದರೆ ಅಂದಿನ ಕಾಲದ ರಾಜಮರ್ಯಾದೆ, ಪ್ರಜೆಗಳು ರಾಜನಲ್ಲಿ ಆತನ ಆಳ್ವಿಕೆಯಲ್ಲಿ ಇಟ್ಟಿದ್ದ ವಿಶ್ವಾಸ ನಂಬಿಕೆಗಳು ಎದ್ದು ತೋರುತ್ತದೆ. ಅಂದೂ ವಂಚಕರು, ರಾಜದ್ರೋಹಿಗಳಿದ್ದರು, ಆದರೇನು! ದೈವಿಕ ಧಾರ್ಮಿಕ ನಂಬಿಕೆಗಳೇ ವಿಜೃಂಭಿಸುತ್ತಿದ್ದ ಕಾಲವದು. ಆ ಧರ್ಮನಿಷ್ಠ ನಿಷ್ಠೂರ ಸತ್ಯ ನ್ಯಾಯಪರತೆಯನ್ನು ನಾವೆಂದೂ ಮತ್ತೆ ಕಾಣಲಾರೆವೆಂಬಷ್ಟು ಹದಗೆಟ್ಟು ಹೋಗಿದೆ ಇಂದಿನ ರಾಜಕೀಯ. ಹೊಲಸು ರಾಜಕೀಯವೆಂದೇ ಜನಜನಿತವಾಗಿಬಿಟ್ಟಿದೆ.
ಮುಖ್ಯಮಂತ್ರಿಗಳ ದರ್ಬಾರಿನಲ್ಲಿ ಭೋಪರಾಕ್ ಹೇಳುವ ಸ್ತುತಿ ಪಾಠಕರು ಈಗಿಲ್ಲ ಬಿಡಿ. ಅಂತಹ ಭೋಪರಾಕ್ ಸ್ತುತಿಗಳನ್ನೇ ಉಸುರುತ್ತ ಊಸರುವಳ್ಳಿಗಳಂತೆ ತಿರುಗಾಡುವ ಸಾರ್ಥಪರ ಸಮಯಸಾಧಕ ಹಿಂಬಾಲಕರಾದ ವಂಧಿಮಾಗಧರಿಗೇನು ಕಡಿಮೆಯಿಲ್ಲ....
ಅಷ್ಟಕ್ಕೂ ನಮ್ಮ ರಾಜಕಾರಣಿಗಳು ಇತಿಹಾಸದಿಂದ ಪಾಠ ಕಲಿಯುತ್ತಾರೆಯೇ...?
ಶ್ರೀ ಕೃಷ್ಣ ದೇವರಾಯರ 500ನೇ ಪಟ್ಟಾಭಿಷೇಕ ಮಹೋತ್ಸವ ಆಚರಿಸುವ ನೆಪದಲ್ಲಿ ಕೋಟಿಗಟ್ಟಲೆ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ತಮ್ಮ ಹೊಟ್ಟೆಗೆ ಬೇಳೆ ಬೇಯಿಸಿಕೊಳ್ಳುವ ಹುನ್ನಾರು ನಡೆಯುತ್ತಿರುವದಂತೂ ತೆರೆದಿಟ್ಟ ರಹಸ್ಯ! ಗತವೈಭ ನೆನಪಿಸಿಕೊಳ್ಳುವ ನಾವುಗಳೆಲ್ಲ ಹಿಂದೆ ಮುತ್ತು ರತ್ನಗಳನ್ನು ಸೇರಿನಲ್ಲಿ ಅಳೆಯುತ್ತಿದ್ದ ಮಾರುತ್ತಿದ್ದ ಆ ಕಾಲ ಹೇಗಿತ್ತು...? ಈಗೇಕೆ ಇಂಥ ದುರ್ಗತಿ ಬಂತು...? ಎಂದು ಮಮ್ಮಲ ಮರುಗುವುದಷ್ಟೇ...
Comments
ಉ: ಶ್ರೀಕೃಷ್ಣದೇವರಾಯರ ಫಟ್ಟಾಭಿಷೇಕ- 500 ರ ನೆನಪು...
In reply to ಉ: ಶ್ರೀಕೃಷ್ಣದೇವರಾಯರ ಫಟ್ಟಾಭಿಷೇಕ- 500 ರ ನೆನಪು... by hariharapurasridhar
ಉ: ಶ್ರೀಕೃಷ್ಣದೇವರಾಯರ ಫಟ್ಟಾಭಿಷೇಕ- 500 ರ ನೆನಪು...