ಕಳೆದಿದೆ ಕಂಡಿರಾ...!?

ಕಳೆದಿದೆ ಕಂಡಿರಾ...!?

ಬರಹ

ಕಳೆದಿದಿ ಕಂಡಿರಾ...!?


 


ದಿಗಂತದಿಂ ದಿಗಂತಕ್ಕೇರಿ ಇಳಿಯುವ


ಬೆಳ್ಮುಗಿಲುಗಳೇ, ನನ್ನ ಕಾಮನ ಬಿಲ್ಲು


ಕಳೆದಿದೆ ಎಲ್ಲಾದರೂ ಕಂಡಿರಾ!?


ಏನು? ಎಷ್ಟುದ್ದದ `ಬಿಲ್ಲು' ಎಂದಿರಾ...!?


 


ಎಂದೋ ಒಮ್ಮೆ ಮಿಂಚಿ ಮರೆಯಾದ


ಮನದ ಬಣ್ಣಗಳೆಲ್ಲವ ಜೋಡಿಸಿ


ಹಲವು ಭಾವನೆಗಳ ಮೀಟಿ


ಮರೆಯಾದ ಕಾಮನ ಬಿಲ್ಲದು


ಗೆಳೆಯರೇ ನೀವೇನಾದರೂ ಕಂಡಿರಾ!?


 


ಕಟ್ಟಡಗಳ ದಟ್ಟಡವಿಯಲಿ ಕಣ್ಣು


ಕೋರೈಸುವ ಬೆಳಕಲ್ಲಿ ಧುಮ್ಮಿಕ್ಕುವ


ಧೂಮದಲಿ ಆಕಾಶಕ್ಕೆ ತಲೆಕೊಟ್ಟು


ನಿಲ್ಲುವುದೇ ಸಾಹಸವಾಗಿರುವಾಗ


ನಾ ಹೇಗೆ ಹುಡುಕಲಿ ನನ್ನ ಮುಗಿಲುಗಳೆ?


ಅಷ್ಟ ದಿಕ್ಕುಗಳಲ್ಲೂ ತೇಲುವ ನೀವಲ್ಲದೆ


ಮತ್ತಾರು ದಿಕ್ಕು ನನಗೆ - ನನ್ನ ಕಾಮನ ಬಿಲ್ಲಿಗೆ?


 


ಕೊನೆಯ ಬಾರಿಗೆಂಬಂತೆ ಚಿಕ್ಕಂದಿನಲಿ


ಮುಖ ತೋರಿಸಿ ಕಳೆದುಹೋದ ಗೆಳೆಯ


ಬೆನ್ನ ಬಾಗಿಹನೋ; ಕೆಳಗೆ ಬಿದ್ದಿಹನೋ...


ಬಣ್ಣಗಳ ಚಿತ್ತಾರ ಬಿಳಿಚಿಕೊಂಡಿಹನೋ!?


 


ತಳಮಳ ಮುಗಿಲುಗಳೇ ತಲೆಬಾಗಿ ವಂದಿಸುವೆ


ಜಾಹಿರಾತಿಗೆ ಜಾಸ್ತಿ ಬೆಲೆ ತೆತ್ತಬೇಕು


ನಾ ಬಡವ; ಮಾತೆತ್ತಿದರೆ ತಲೆಎತ್ತಿ


ನಿಮ್ಮ ನೋಡುವುದಷ್ಟೆ ನನಗುಳಿದ ಮಾರ್ಗ


ಕಂಡ ಕೂಡಲೆ ಕಳಿಸಿರೈ ಕಾಮನ ಬಿಲ್ಲ!