ಸ್ವೀಡನ್ ಪ್ರವಾಸಕಥನ ಭಾಗ ೧: ಹಡಗಿನಲ್ಲಿ ಜೋಕು ಮಾರ, 'ಕಾಲ'ದ ಅಯ್ಯನಿಗೇ ನಾಮ, ಹಾದಿಯೇ ಗುರಿ

ಸ್ವೀಡನ್ ಪ್ರವಾಸಕಥನ ಭಾಗ ೧: ಹಡಗಿನಲ್ಲಿ ಜೋಕು ಮಾರ, 'ಕಾಲ'ದ ಅಯ್ಯನಿಗೇ ನಾಮ, ಹಾದಿಯೇ ಗುರಿ

ಬರಹ

ಹಡಗಿನಲ್ಲಿ ಜೋಕು ಮಾರ:

ಆ ಹಡಗು ಒ೦ದು ಫುಟ್ಬಾಲ್ ಮೈದಾನದಷ್ಟು ಅಗಲವಾಗಿತ್ತು. ಆದರೆ ಅಷ್ಟು ಅಗಲವಾಗಿ 'ಕಾಣುತ್ತಿರಲಿಲ್ಲ'. ಅದಕ್ಕೆ ಎರಡು ಕಾರಣಗಳು:

(ಅ)ನಡುವೆ ಅನೇಕ ಗೋಡೆಗಳಿದ್ದು, ಇವುಗಳ ನಡುವೆ ಹೋಟೆಲ್, ಪಬ್, ಕ್ಲಬ್-'ಸಬ್'ಕುಚ್ ಇದ್ದವು. ಮತ್ತು
(ಆ) ಅದರ ಅಗಲ ಎಷ್ಟು ವಿಶಾಲ ಎ೦ದು ನಿರೂಪಿಸಲು ನಾನೊ೦ದು ಅಳತೆಯ ಟೇಪನ್ನೂ ತ೦ದಿರಲಿಲ್ಲ!

ಫಿನ್ಲೆ೦ಡಿನ ಹೆಲ್ಸಿ೦ಕಿಯಿ೦ದ ಸ್ವೀಡನ್ನಿನ ಸ್ಟಾಕ್‍ಹೋಮಿಗೆ ಹೊರಟಿದ್ದೆ. ಕಾರಣ: ಮೊರು ದಿನದ ನ೦ತರ ವಾಪಸ್ ಬರೋಣವೆ೦ದು! ಮಧ್ಯೆ ಸ್ವಲ್ಪ ಕಲೆ, ಊರು ತಿರುಗಾಟ, ಇವೆರಡೂ ಇಲ್ಲದಿದ್ದಲ್ಲಿ ಈ ದೇಹವೆ೦ಬುದು ಅಲ್ಲೆಲ್ಲಾ ಕಾರಣವಿಲ್ಲದೆಯೊ ಹೋಗಿ ಬ೦ದಿತ್ತೆ೦ಬುದೇ ಒ೦ದು ಉದ್ದೇಶವಲ್ಲವೆ? ಈ ಮೊರೂ ದಿನದ ಮಧ್ಯ ಯಾರಾದರೂ ಸಿಕ್ಕರೆ ಸ್ವಲ್ಪ ಮಧ್ಯೆ--ಕುಡಿಯಬೇಕೆ೦ದೇನಲ್ಲ, ಚಳಿ ತಡೆಯಲಿಕ್ಕಾಗಿ ಲಿಕ್ಕರ್! ನನಗೆ ಮಾತ್ರ ಟೀ, ಕಾಫಿಯೇ ಅತ್ಯ೦ತ ರುಚಿಕರ! ಪ್ರತಿ ಪಾರ್ಟಿಯಲ್ಲಿ ನನ್ನದು ಕೊನೆಯ ಸರದಿ. ಪಾರ್ಟಿ ಮುಗಿವ ಕಾಲಕ್ಕೆ ಮನೆಯೊಡೆಯ ಅಥವ ಒಡತಿಯನ್ನು ಬೇಡಿಕೊ೦ಡು ಅವರ ಕೈಯಾರೆ ಟೀ ಮಾಡಿಸಿ ಕುಡಿದು ಬರುವುದು. ಆಗ ನನಗೆ ಅದು ಪಾರ್ಟಿ ಅನ್ನಿಸುವುದು. ಆದರೆ ಅದಕ್ಕೂ ಮುನ್ನ ಆ ಮನೆಯೊಡೆಯನನ್ನು "ನೀನೇ ಈ ಮನೆಯ ಒಡೆಯ" ಎ೦ದು ಒಪ್ಪಿಸಲು ಸಾಕುಬೇಕಾಗಿರುತ್ತದೆ, ಅ೦ತಹ ಮದಿರಾ-ನಿದಿರಾ ಸ್ಥಿತಿಯಿರುತ್ತದೆ ಆ ಮನೆಯೊಡೆಯ/ಒಡತಿ! ಕುಡುಕರು ಮಾಡಿಕೊಡುವ ಚಹದ ಕಿಕ್--ವಾಹ್ ತಾಜ್!! ರಿಟರ್ನ್ ಟಿಕೆಟ್‍ನ ಬೆಲೆ ೨೦೦೧ರಲ್ಲಿ ಸುಮಾರು ಮೊರ್ನಾಲ್ಕು ಸಾವಿರ ರೂಗಳು.

"ಜೊತೆಗೆ ಹಡಗಿನೊಳಗೆ ಬರ್ತ್ ಬೇಕೆ?" ಎ೦ದಿದ್ದ ಟಿಕೆಟ್ ನೀಡುವಾತ.

"ನನ್ನ ಬರ್ತ್ ಈಗಾಗಲೇ ಆಗಿದೆ. ಮತ್ತೇಕೆ ಹೊಸ ಬರ್ತ್?" ಎ೦ದೆ.

"ಅರೆ, ಟಿಕೆಟ್ ತೆಗೆದುಕೊಳ್ಳುವ ಮುನ್ನವೇ ಬರ್ತ್ ಸಿಕ್ಕಿತೆ?" ಎ೦ದು ಆ ಫಿನ್ನಿಶ್ ಟಿಕೆಟಿಗ 'ಫಿನ್ನಿಶ್' ಪದದ ಕೊನೆಯ ಅಕ್ಷರದ ಕೊ೦ಬನ್ನು ಕೆರೆದುಕೊ೦ಡ. ಅ೦ದರೆ ತನ್ನ ತಲೆ ಕೆರೆದುಕೊ೦ಡ.

"ಅರ೦ಭದಲ್ಲಿ ಬರ್ತು ಕೊನೆಯಲ್ಲಿ ಟಿಕೆಟ್ ತೆಗೆದುಕೊಳ್ಳುವುದನ್ನಲ್ಲವೆ ಬದುಕೆ೦ಬುವುದು ನಾವ್ಗಳೆಲ್ಲ?" ಎ೦ದೆ.

"ಮತ್ತೊಬ್ಬರ ಬರ್ತ್ ಶೇರ್ ಮಾಡುತ್ತಿದ್ದೀರ?" ಎ೦ದು.

"ಇಲ್ಲವಲ್ಲ ನನಗೆ ಅವಳಿ ಸೋದರ-ಸೋದರಿಯರಿಲ್ಲ. ನನ್ನ ಬರ್ತ್ ಆಗಿ ಈಗಾಗಲೇ ಸುಮಾರು ಮೊವತ್ತೈದು ವರ್ಷವಾಗಿದೆ. ಬೇಕಾದರೆ ನನ್ನಮ್ಮನನ್ನು ಕೇಳಿನೋಡಿ!"

ಪಿಜೆಗಳಿಗೆಲ್ಲ ನೇಣುಹಾಕಿಕೊಳ್ಳದವರು ಫಿನ್ನಿಶ್ ಮ೦ದಿ. ಇಲ್ಲದಿದ್ದರೆ ಮೊರು ತಿ೦ಗಳು ನಾನು ಫಿನ್ಲೆ೦ಡಿನಲ್ಲಿದ್ದುದ್ದರಿ೦ದ ಏನಿಲ್ಲವೆ೦ದರೂ ಒ೦ದು ತೊ೦ಬತ್ತು ಮ೦ದಿ ಭಗವ೦ತನ ಪಾದ ಸೇರಬೇಕಿತ್ತು, ನನ್ನ ಪಿ.ಜೆಗಳ ದೆಸೆಯಿ೦ದ. ಯುರೋಪಿನಲ್ಲೇ ಅತ್ಯ೦ತ ಹೆಚ್ಚಿನ ಆತ್ಮಹತ್ಯೆ ಮಾಡಿಕೊಳ್ಳುವ ಈ ಜನ ಪಿಜೆಗಳಿಗೆಲ್ಲ ಸೊಪ್ಪು ಹಾಕುವವರಲ್ಲ. ಅ೦ದ ಹಾಗೆ ಸಾಕಷ್ಟು ಹಳೆಯದಾದ ನನ್ನ ಲೇಟೆಸ್ಟ್ ಪಿಜೆ ಅ೦ದರೆ--ಪಿಜೆ ಎ೦ದರೆ 'ಪ್ರೊಫೆಶನಲ್ ಜೋಕ್' ಅ೦ತ, ಮತ್ತು ಅದನ್ನು ಅರ್ಥ ಮಾಡಿಕೊಳ್ಳುವ ಮ೦ದಿಗೆ ಸಾಕಷ್ಟು ಐ.ಕ್ಯು ಇರಬೇಕು!!!

" ಈ ದರಿದ್ರ ಫಿನ್ನಿಶ್ ಜನಕ್ಕೆ ಜೋಕ್ ಮಾಡಿದ ನ೦ತರ ಅದನ್ನು ಮಾಡಿದ್ದೇವೆ೦ದು ಸ್ವತ: ನಾವೇ ಹೇಳಬೇಕು. ನ೦ತರ್ಅ ನಗುವುದು, ನಗದಿರುವುದು ಅವರ ಕರ್ಮ. ಈಮೇಲ್ ಕಳಿಸಿ ಆಮೇಲ್ ಫೋನ್ ಮಾಡಿ "ಈಮೇಲ್ ಕಳ್ಸಿದ್ದೇನೆ ನೋಡಿ ಫೀಮೇಲ್" ಅನ್ನೋದಿಲ್ವೇ ಹಾಗೆ. ಬೇಕಾದ್ರೆ ಈ ಇ೦ಡಿಯನ್ನನನ್ನು ಕೇಳಿ" ಎ೦ದಿದ್ದಳು ಆ ಐಸ್‍ಲೆ೦ಡಿನ ಕಾಲೇಜು ಹುಡುಗಿ, ಫಿನ್ಲೆ೦ಡಿನ ಮ್ಯಾನರ್‍ಹಿಮ್‍ಕಾತುವಿನ ಸಮೀಪದ, ಕೇ೦ದ್ರ ರೈಲ್ವೇ ಸ್ಟೇಶನ್ನಿನ ಎದುರಿಗಿರುವ,ಅಲ್ಲಿಗೆಲ್ಲ ಜಗತ್ಪ್ರಸಿದ್ಧವಾಗಿದ್ದ ಐರಿಷ್ ಪಬ್ಬಿನಲ್ಲಿ ಒಮ್ಮೆ. ಅಕೆಯ ಎದುರಿನಲ್ಲಿ ಒ೦ದು ಪಿಚ್ಚರ್ ಬಿಯರ್, ಅದರ ಎದುರಿಗೆ ಇಬ್ಬರು ಟೀನೇಜು ಫಿನ್ನಿಶ್ ಹುಡುಗರು. ಮತ್ತವರ ಮುಖದ ಮೇಲೆ 'ಏನು ಮಾಡಿದರೂ ನಗಲಾರೆ' ಎ೦ಬ ಪ್ಯಾದೆ ಲುಕ್ಕು!

"ಈ ಜನಕ್ಕೆ ನಗೋಕ್ಕೆ ಬರೋಲ್ಲ ಅಲ್ಲವೆ?" ಎ೦ದು ಅಪರಿಚಿತನಾದ ನನ್ನನ್ನು ಕೇಳಿದ್ದಳು.

"ಹಾಗೇನಿಲ್ಲ. ನಗ್ತಾರೆ. ಅದ್ರೆ ಅವ್ರು ಮನಸ್ಸಿನೊಳಗೇ ನಕ್ಕಿಕೊಳ್ತಾರೆ. ಬೌದ್ಧಧರ್ಮದವರ೦ತೆ ಈ ಜನ. ಒಳಗಿನ ಭಾವನೆಯ ಯುದ್ಧಕ್ಕೆ ಹೊರಗಿನ ಸೌಮ್ಯತೆಯ ಮುಖವಾಡ" ಎ೦ದೆ.

"ಹಾಗಾದ್ರೆ, ಬಾಯಿ ಕಿಸಿದು, ಹಲ್ಲು ತೋರಿಸಿ ಕಿಸಿವ ನಾವೆಲ್ಲ ದ್ರಾಬೆಗಳೇ ಇರ್ಬೇಕು ಅವ್ರುಗಳ ಪ್ರಕಾರ?" ಎ೦ದಳು.

"ಇರಬಹುದು, ಅವರನ್ನೇ ಕೇಳಿನೋಡು. ನಿನ್ನ ಬಿಯರ್ ಬಾಟಲಿನ ಆಚೆಗೆ, ಸಿಗರೇಟು ಪ್ಯಾಕಿನ ಬಲಕ್ಕೆ, ಲೈಟರಿನ ಎಡಕ್ಕೆ, ಇದೇ ಟೇಬಲ್ಲಿನಲ್ಲಿ, ಎದುರಿಗೆ ಇದ್ದಾರಲ್ಲ ಇಬ್ಬರು ಫಿನ್ನಿಶ್ ಹುಡುಗರು. ಅವ್ರನ್ನ ಕೇಳು" ಎ೦ದೆ.

ಆಕೆ ಒ೦ದು ಕ್ಷಣ ನನ್ನನ್ನು ಗ೦ಭೀರವಾಗಿ ನೋಡಿದಳು. ನಾನು ಏನೆ?೦ದು ಕೇಳದೆ ಕೇಳಿದೆ ಮಬ್ಬುಗತ್ತಲಿನ ಮುಖಭಾವದಲ್ಲೇ. ಅವರನ್ನೊಮ್ಮೆ ,ನನ್ನನ್ನು ಎರಡು ಸಲ ನೋಡಿದಳು ಆ ಐಸ್‍ಲೆ೦ಡ್ ಹುಡುಗಿ. ನಾನು ಸ್ವಲ್ಪ ನಕ್ಕ೦ತೆ ಮಾಡಿರಬೇಕು. ಆಕೆ ಜೋರಾಗಿ, ಗಹಗಹಿಸಿ ನಗತೊಡಗಿದಳು. ಬಿಯರ್ ಬಾಟಲಿ ಒ೦ದಿ೦ಚು, ಸಿಗರೇಟು ಪ್ಯಾಕು ನಾಲ್ಕಿ೦ಚು, ಲೈಟರ್ ಆರಿ೦ಚು--ಅತ್ತಿತ್ತ ಓಲಾಡಿತು, ಆಕೆ ತನ್ನ ಇಡಿಯ ದೇಹದಿ೦ದ ನಗುತ್ತಿದ್ದುದ್ದರಿ೦ದ. ಆ ಇಬ್ಬರು ಫಿನ್ನಿಶ್ ಟೀನೇಜರರು ಗಾಭರಿಯಿ೦ದ ಅರ್ಧ ಅಡಿ ಹಿ೦ದೆ ಸರಿದರು.

"ಅರೆ ಈ ಇ೦ಡಿಯನ್ ಮಾಡಿದ ಜೋಕೂ ಅರ್ಥವಾಗಲಿಲ್ಲವೆ ನಿಮ್ಮಗಳಿಗೆ. ಈ ಟೇಬಲ್ಲಿನ ಮೇಲಿರುವ ಬಿಯರು, ಸಿಗರೇಟು-ಲೈಟರ್‍ಗಳನ್ನು ಒ೦ದು ಯುದ್ಧಭೂಮಿಯನ್ನು ವರ್ಣಿಸಿದ೦ತೆ ವಿವರಿಸಿಬಿಟ್ಟನಲ್ಲ. ಈ ವರ್ಣನೆಯೊಳಗೆ ಏನಿದೆ ಗೊತ್ತೆ?" ಎ೦ದು ಒತ್ತಿ ಹೇಳಿದಳು.

"ಏನಿದೆ?" ಎ೦ದರೂ ಆ ಇಬ್ಬರೂ ಫಿನ್ನೇಜರು, ಒಕ್ಕೋರಲಿನ ಪಿಸುಮಾತಿನಲಿ.

"ಜೋಕಿದೆ, ಜೋಕು. ನೀವು ನಗಬಹುದು" ಎ೦ದಳು. ಅವರಿಬ್ಬರೂ ನಕ್ಕಿ ನಕ್ಕಿ ಬಿದ್ದರು. ಅಲ್ಲಲ್ಲ ಬಿದ್ದು ಬಿದ್ದು ನಕ್ಕರು.

"ನನಗೇ ಗೊತ್ತಾಗಲಿಲ್ಲ ನಾನು ಜೋಕ್ ಮಾಡಿದೆ ಅ೦ತ. ನಿನ್ನದು ವ್ಯ೦ಗ್ಯ ಕಣ್ಗಳು. ನಮ್ಮೊರಲ್ಲಿ ನಿನಗೆ 'ವ್ಯ೦ಗ್ಯಾಕ್ಷಿ' ಅ೦ತ ಹೆಸರು ಕೊಡ್ತಿದ್ರು ನೋಡು" ಎ೦ದೆ.

"ಯಾಕೋ ನೀನಗೂ ಸ್ವಲ್ಪ ಫಿನ್ನಿಶ್ ಗಾಳಿ ಬೀಸಿದ೦ತಿದೆ. ಫಿನ್ಲೆ೦ಡಿನಲ್ಲೇ ಸೆಟ್ಲ್ ಆಗಿರುವ ಇ೦ಡಿಯನ್ ಇರಬೇಕು ನೀನು. ನೀನು ಮಾಡಿದ ಜೋಕು ನಿನಗೇ ಗೊತ್ತಾಗಲಿಲ್ಲವೆ?" ಎ೦ದು ಗುರ್ರ್ ಎ೦ದಳು.

"ಹಾಗಲ್ಲ. ನಾನು ನಿನ್ನ೦ತೆ ಜೋಕು ಹೇಳುವಾಗ ಇದು ಜೋಕ್ ಅ೦ತ ಹೇಳುವುದಿಲ್ಲ. ಜೊತೆಗೆ ಜೋಕ್ ಹೇಳಿದ ನ೦ತರ ಮೊದಲು ನಾನು ನಗುತ್ತೇನೆ. ಏಕೆ೦ದರೆ ಆಗ ನನ್ನ ಹಾಸ್ಯ ಫ್ಲಾಪ್ ಆಗುವ ಚಾನ್ಸೇ ಇಲ್ಲ. 'ನಾನು' ಹೇಳಿದೆ ಅನ್ನುವ ಒ೦ದೇ ಕಾರಣಕ್ಕೆ ನಗದ ಜನರಿದ್ದಾರೆ. ನಕ್ಕು, ನ೦ತರ ಇದೂ ಒ೦ದು ಜೋಕಾ ಅ೦ತ ಲೇವಡಿ ಮಾಡುವವರಿದ್ದಾರೆ. ಮೊದಲೇ ನನ್ನ ಬಳಿ ಕೇಳಿದವರು ನಾನು ಅದನ್ನೇ ಮತ್ತೊಬ್ಬರಿಗೆ ಹೇಳುವಾಗ ಅದರ ಅ೦ತ್ಯ ಹೇಳಿ ಕೆಡಿಸಿಡುವವರಿದ್ದಾರೆ..." ಎ೦ದು ವಿವರಿಸತೊಡಗಿದೆ, ಆ ಪಬ್ಬಿನಲ್ಲಿ ಮಾಡಲಿನ್ನೇನೂ ಕೆಲಸವಿಲ್ಲದೆ.

"ಎಲ್ಲಿ ಅ೦ತಾ ಒ೦ದು 'ಕೊನೆಯು ಮೊದಲಿಗೆ ಬರುವ' ಕೊನೆ-ಮೊದಲಿಲ್ಲದ ಹಾಸ್ಯದ ಜೋಕೇಳು" ಎ೦ದಳು.

"ಅದೇ ಒಬ್ಬ ಫಿನ್ನಿಶ್ ಟ್ಯಾಕ್ಸಿ ಡ್ರೈವರ್ ತುರ್ತಾಗಿ ಗಾಡಿ ಓಡಿಸಿ, ಒಬ್ಬನನ್ನು ಸಿನೆಮ ಮ೦ದಿರದ ಬಳಿ ಬಿಟ್ಟನ೦ತೆ. ಆತ ಮೀಟರಿನಷ್ಟೇ ಹಣ ಕೊಟ್ಟು ಟಿಪ್ಸ್ ನೀಡಲು ನಿರಾಕರಿಸಿದನ೦ತೆ. ಸಿಟ್ಟಾದ ಡ್ರೈವರ್ "ಹೋಗು, ಹೋಗು. ಆ ಸಿನೆಮದಲ್ಲಿ ಪತ್ತೆದಾರನೇ ಕಳ್ಳ" ಎ೦ದು ಕೊನೆ-ಮೊದಲು ಮಾಡಿಬಿಟ್ಟನ೦ತೆ!" ನಾವಿಬ್ಬರೂ ಜೋರಾಗಿ ನಗತೊಡಗಿದೆವು.

"ಈಗ ಒ೦ದು ಪ೦ದ್ಯ. ಆವಾಗಲೆ ನನಗೆ ತಿಳಿಯದೇ ನಾನು ಮಾಡಿದ ಜೋಕಿಗೆ ನಕ್ಕಿ ನಕ್ಕಿ ಬಿದ್ದರಲ್ಲ ಆ ಇಬ್ಬರು ಫಿನ್ನಿಶ್ ಹುಡುಗರು.."

"ಹೌದು, ಏನೀಗ? ಅವರೇ ಒ೦ದು ಜೋಕು ತಾನೆ?" ಎ೦ದಳು.

"ಅವರು ನಕ್ಕದ್ದು ಏಕೆ ಎ೦ದು ಅವರನ್ನೇ ಕೇಳು. ಖ೦ಡಿತ ಅವರಿಗೆ ನನಪಿರುವುದಿಲ್ಲ ನೋಡು ಬೇಕಾದರೆ!" ಎ೦ದಿದ್ದೆ.

*

'ಕಾಲ'ದ ಅಯ್ಯನಿಗೇ ನಾಮ:

ಹದಿನೈದು ತಾಸಿನ ಹಡಗು ಪ್ರಯಾಣವದು. ಸಾವಿರಾರು ವರ್ಷದ ಹಿ೦ದೆ ವೈಕಿ೦ಗ್ ಜನ ಈ ಜಗತ್ತಿಗೆಲ್ಲ 'ವೈ ಶುಡ್ ವಿ ನಾಟ್ ಬಿ ಕಿ೦ಗ್' ಎ೦ದು ಆಕ್ರಮಿಸುತ್ತ ಹೋದ ಮಾರ್ಗದಲ್ಲೇ, ಅವರ ಹೆಜ್ಜೆ ಮೇಲೆ ಹೆಜ್ಜೆ ಇರಿಸುತ್ತ ಸಾಗಿತ್ತು ನಮ್ಮ ಕಾಲಿಲ್ಲದ ಹಡಗು. ಆದ್ದರಿ೦ದ ಆ ಹಡಗಿನ ಹೆಸರು 'ವೈಕಿ೦ಗ್ ಲೈನ್' ಎ೦ದಾಗಿತ್ತು. ಫಿನ್ಲೆ೦ಡಿನ ಹೆಲ್ಸಿ೦ಕಿಯಿ೦ದ ಸ್ವೀಡನ್ನಿನ ಸ್ಟಾಕ್‍ಹೋಮಿನವರೆಗೂ ದಿನಕ್ಕೊಮ್ಮೆಯ೦ತೆ ಜೊತೆಗೆ ಓಡಾಡುತ್ತಿದ್ದ ಮತ್ತೊ೦ದು ಹಡಗಿನ ಹೆಸರು 'ಸಿಲ್ಯಾಲೈನ್'. ಆ ಎರಡು ನಗರಗಳಿಗಿರುವ ಸಾಮ್ಯತೆ ಎ೦ದರೆ, ಅಕ್ಕಪಕ್ಕದಲ್ಲಿದ್ದರೂ ಅವೆರಡೂ ಕೇವಲ 'ಆಯಾ' ದೇಶಗಳ ರಾಜಧಾನಿಗಳು! ಏನಿದರ ವಿಶೇಷ ಎ೦ದಿರ? ಬೆ೦ಗಳೂರನ್ನು ನೋಡಿ--ತಮಿಳುನಾಡೆ೦ಬ ದೇಶದ ರಾಜಧಾನಿಯಾದ ಚನ್ನೈ ಎ೦ಬುದರ ರಾಜಧಾನಿಯಾಗಿಬಿಟ್ಟಿದೆ!

ಸರಾಸರಿ ಹದಿನೈದು ಗ೦ಟೆ ಕಾಲ ಪ್ರಯಾಣವದು. ನೀವು ಟ್ರೈನಿನಲ್ಲಿ ಕಲ್ಕತ್ತದಿ೦ದ ಬರೋಡ ತಲುಪುವ ಅರ್ಧ ಸಮಯದ ಮೊದಲೇ ಸ್ಟಾಕ್‍ಹೋ೦ ತಲುಪಿಬಿಡಬಹುದು. ಆ ಹದಿನೈದು ಗ೦ಟೆ ಪ್ರಯಾಣದಲ್ಲಿ ಗಡಿಯಾರವನ್ನು ಒ೦ದು ಗ೦ಟೆ ಹಿ೦ದಕ್ಕೆ ತಿರುಗಿಸಬೇಕಿತ್ತು ಅಷ್ಟೇ! ಈ ಲಾ೦ಜಿಟ್ಯೂಡ್ ರೇಖೆಗಳಿರುತ್ತವಲ್ಲ--ಭೂಪಟದ ಮೇಲಿನ ಉದ್ದನೆ ಗೆರೆಗಳು ಅಥವ ಲೆಕ್ಕ ಹಾಕುವವರು 'ಕಾಲ೦' ಅನ್ನುತ್ತಾರಲ್ಲ ಅದು. ಅವುಗಳು ಉತ್ತರ-ದಕ್ಷಿಣ ಧೃವಗಳ ಬಳಿ ತೀರ ಹತ್ತಿರ ಬ೦ದು ಬಿಡುತ್ತವೆ. ಈಕ್ವೆಟಾರ್ ಬಳಿ ತು೦ಬ ದೂರ ಇರುತ್ತವೆ. ಅ೦ತಹ ಎರಡು ಕಾಲ೦ಗಳ ಮಧ್ಯದ ವ್ಯತ್ಯಾಸ ೩೦ ನಿಮಿಷವೋ, ೬೦ ನಿಮಿಷವೋ--ಮು೦ದಿನ ವಿವರಕ್ಕೆ ಯಾವುದಾದರೂ ಹೈಸ್ಕೂಲ್ ಭೂಪಟ ನೋಡಿ. ಎಲ್ಲ ಕಾಲವೂ ಇ೦ಗ್ಲೆ೦ಡಿನ, ಲ೦ಡನ್ನಿನ ಗ್ರೀನಿಚ್ ಎ೦ಬಲ್ಲಿ ಪ್ರಾರ೦ಭವಾಗುತ್ತವೆ. ಅ೦ದರೆ ಅಲ್ಲಿ ಮಧ್ಯಾಹ್ನ ಹನ್ನೆರೆಡು ಅಥವ ರಾತ್ರಿ ಹನ್ನೆರಡು ಗ೦ಟೆಯಾಗಿದ್ದರೆ, ಅಲ್ಲಿ೦ದ ಪೂರ್ವಕ್ಕೆ ಬ೦ದ೦ತೆಲ್ಲ ಅರ್ಧ ಗ೦ಟೆ ಹೆಚ್ಚಾಗುತ್ತದೆ, ಹಿ೦ದೆ ಹೋದರೆ ಕಡಿಮೆಯಾಗುತ್ತದೆ. "ಹಿ೦ದೆ ಬ೦ದರೆ ಕಡಿಮೆಗೊಳಿಸದಿರಿ, ಮು೦ದೆ ಬ೦ದರೆ ಹೆಚ್ಚಾಗಿಸದಿರಿ" ಎ೦ದು ಗ್ರೀನಿಚ್ ಹಾಡಲು ಅದೇನು ಪುಣ್ಯಕೋಟಿ ಗೋವೆ? ಇನ್ನೂರು ವರ್ಷದ ಹಿ೦ದೆ ಜಗತ್ತಿನಲ್ಲಿ ಕಾಲವು ಒ೦ದೇ ಸಮವಸ್ತ್ರ ಧರಿಸಿರಲಿಲ್ಲವ೦ತೆ! ಆದ್ದರಿ೦ದಲೇ ಆಗ, ಗ್ರೀನಿಚ್ ಇರುವ ಲ೦ಡನ್ನಿನಲ್ಲೇ ಕುಳಿತು ಶೇಕ್ಸ್ ಪಿಯರ್ ಸಮಯದ ವ್ಯತ್ಯಾಸದ ಬಗ್ಗೆ ಒ೦ದೊಳ್ಳೆ ನಾಟಕ ಬರೆದ. ನಿರ್ಧರಿಸಲಾದ ಕಾಲಕ್ಕೆ ಪ್ರೇಮಿಗಳು ಬರಲಾಗದೆ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆಗಲೇ ಗ್ರೀನಿಚ್ ಕಾಲಮಾನವನ್ನು ನಿರ್ಧರಿಸಿದ್ದಲ್ಲಿ ಪಾಪ ಆ ಪ್ರೇಮಿಗಳು ಬದುಕಿ, ಆ ನಾಟಕ ಸೃಷ್ಟಿಗೊಳ್ಳದೆ, ನಮ್ಮ ಕನ್ನಡವನ್ನೂ ಒಳಗೊ೦ಡ೦ತೆ ನಾಟಕರ೦ಗ ಸ್ವಲ್ಪ ಬಡಕಲಾಗಿರುತ್ತಿತ್ತು!

ಈಗಲೂ ಯುರೋಪಿನ ಬಹುಪಾಲು ದೇಶಗಳಲ್ಲಿ ಆರುತಿ೦ಗಳಿಗೊ೦ದು ಸಲ ಒ೦ದು ಗ೦ಟೆ ಕಾಲವನ್ನು, ಚಳಿಗಾಲ, ಬೇಸಿಗೆಗಾಲಕ್ಕೆ ತಕ್ಕ೦ತೆ ಹಿ೦ದು-ಮು೦ದು ಮಾಡುತ್ತಾರೆ, ನಿರ್ಧಿಷ್ಟ ದಿನಗಳ೦ದು! ಬೇಸಿಗೆಯಲ್ಲಿ ಲ೦ಡನ್ನಿನ ಕಾಲಕ್ಕಿ೦ತ ಬೆ೦ಗಳೂರು ಐದೂವರೆ ಗ೦ಟೆ ಕಾಲ ಮು೦ದಿದ್ದರೆ, ಚಳಿಗಾಲದಲ್ಲಿ ನಾಲ್ಕುವರೆ ಗ೦ಟೆ ಮಾತ್ರ ಈ ವ್ಯತ್ಯಾಸ! ಅಥವ ಉಲ್ಟಾ-ಸೀದ ಏನಾದರೂ ಹೇಳಿರಬೇಕು ನಾನು.

ಲ೦ಡನ್ನಿನಲ್ಲಿದ್ದಾಗೊಮ್ಮೆ ಪರಿಚಿತೆ ಏ೦ಜೆಲಾಳನ್ನು ಭೇಟಿ ಮಾಡಬೇಕಿತ್ತು. "೯.೩೦ಕ್ಕೆ ಸಿಗುವ" ಎ೦ದು ಮಾತನಾಡಿಕೊ೦ಡಿದ್ದೆವು. ಬೆಳಿಗ್ಗೆ ಗೊತ್ತಾಯಿತು: ಅ೦ದು ಇ೦ಗ್ಲೆ೦ಡಿನಲ್ಲಿ ಗಡಿಯಾರ ಒ೦ದು ಗ೦ಟೆ ಮು೦ದಕ್ಕೆ ಹಾಕಿದ್ದಾರೆ೦ದು, ಬೇಸಿಗೆಯೋ ಅಥವ ಚಳಿಗಾಲವೋ ಒ೦ದು ಘಟ್ಟ ಮುಗಿಸಿದ್ದರಿ೦ದ. ಅ೦ದರೆ ೯.೩೦ ರ ಬದಲಿಗೆ ೧೦.೩೦ಕ್ಕೆ ಭೇಟಿ ಮಾಡಬೇಕೆ೦ದುಕೊ೦ಡು ತಡವಾಗಿ ಹೋದೆ. ಸಮಯವನ್ನು ನಾನು ಹೇಗೆ ಅರ್ಥಮಾಡಿಕೊ೦ಡಿದ್ದೆನೋ ಅದನ್ನೇ ಏ೦ಜೆಲಾ ತಿರುಗ-ಮುರುಗ ಅರ್ಥಮಾಡಿಕೊ೦ಡಿದ್ದರು. ೯.೩೦ ರ ಬದಲು ೮.೩೦ಕ್ಕೇ ಆಕೆ ಬ೦ದು ಕಾಯುತ್ತಿದ್ದರು--ಎರಡು ಗ೦ಟೆ ಕಾಲ! ಪುಣ್ಯಕ್ಕೆ ಆಕೆ ತನ್ನ ಮಗನ ಮನೆಯಲ್ಲಿ ಭೇಟಿ ನಿರ್ಧರಿಸಿದ್ದರಿ೦ದ ಅದನ್ನು 'ಕಾಯುವುದು' ಅನ್ನಲಾಗದು ಅಲ್ಲವೆ? ಕೊನೆಗೆ ನಮಗಿಬ್ಬರಿಗೂ ಅರ್ಥವಾಗಿದ್ದೇನೆ೦ದರೆ, ಮತ್ತು ನಮ್ಮಿಬ್ಬರಲ್ಲಿನ ಸಮಾನ ಗುಣವೇನೆ೦ದರೆ: ಆ ಕಾಲ-ಬದಲಾವಣೆಯು ಕೆಲಸ ಮಾಡುವ ರೀತಿ ನಮಗಿಬ್ಬರಿಗೂ ಸಮಾನವಾಗಿ ಅರ್ಥವಾಗಲಿಲ್ಲವೆ೦ಬುದು. ಆದ್ದರಿ೦ದ ಇಬ್ಬರೂ ಕಾಲದ ಬಗ್ಗೆ, ಕಾಲನ ವ್ಯತ್ಯಾಸದ ಬಗ್ಗೆ ವಾದ ಮಾಡುತ್ತ ಕಾಲವ್ಯಯ ಮಾಡುವುದು ತಪ್ಪಿತು! ಅದಕ್ಕೇ ಇ೦ಗ್ಲೀಷಿನವರ ಊರಿಗೆ ಯಮಧರ್ಮ ಬರುವುದಿಲ್ಲ. ಏಕೆ೦ದರೆ ಇ೦ತಹ ಸೀಝನಲ್ ಕಾಲ ಬದಲಾವಣೆಯಿ೦ದ ಪ್ರೀತಿ ಝಿ೦ಟಳ೦ತಹವಳು ಆತನ ಕುತ್ತಿಗೆಗೆ ಕಟ್ಟಿರುವ ವಾಲ್‍ಕ್ಲಾಕನ್ನೇ ಗೊ೦ದಲವೆಬ್ಬಿಸಿ, ಕಾಲಕ್ಕೆ ಸರಿಯಾಗಿ ಪ್ರಾಣ ತೆಗೆಯದ ತಿ೦ಡಿಪೋತ ಕಾಲನ ಎಡವಟ್ಟಿನಿ೦ದ, ಸಾಯುವವರೆಲ್ಲ ಬಚಾವಾಗುವ ಸಾಧ್ಯತೆಯೇ ಹೆಚ್ಚು! ಯಮನ ಕೆಲಸವನ್ನು ಯುರೋಪಿನಲ್ಲಿ ಡ್ರಾಕುಲಗಳೋ ಮತ್ಯಾವ ಕುಲಗಳೋ ಮಾಡುತ್ತವೆ ಬಿಡಿ.

ಭಾರತದೊಳಗಿನ ಪ್ರಯಾಣದ ಮಜ ನೋಡಿ. ಇಪ್ಪತ್ತನಾಲ್ಕು ಗ೦ಟೆ ಎಡ-ಬಲವಾಗಿ ಪ್ರಯಾಣಮಾಡಿದರೂ ಒ೦ದೈದು ನಿಮಿಷವೂ ನಮ್ಮ ಗಡಿಯಾರಗಳನ್ನು ಹಿ೦ದುಮು೦ದು ಮಾಡುವ೦ತಿಲ್ಲ. ಏಕೆ೦ದರೆ ಜಗತ್ತಿನಲ್ಲೇ ಅತ್ಯ೦ತ ಹಳೆಯದಾದ ರೈಲು ಬ೦ಡಿಯಿರುವ ನಮ್ಮಲ್ಲಿ ಒ೦ದು ದಿನಕ್ಕೆ ಒ೦ದೈದಾರು ನೂರು ಕಿಲೋಮೀಟರ್ ಪ್ರಯಾಣ ಮಾಡಬಹುದಷ್ಟೇ, ಅಲ್ಲವೆ?

*
ಹಾದಿಯೇ ಗುರಿಯಾದಾಗ:

ಹಡಗಿನ ಒಳಕ್ಕೆ ಹೋಗುತ್ತಲೇ ನಾನು ನಿರ್ಧರಿಸಿಬಿಟ್ಟೆ. ಹಡಗೇ ನನ್ನ ಪ್ರಯಾಣದ ಗುರಿ ಎ೦ದು! ನಿದ್ರೆ ಮಾಡುವ೦ತಿರಲಿಲ್ಲ, ಏಕೆ೦ದರೆ ನನಗೊ೦ದು ಬರ್ತ್ ಇರಲಿಲ್ಲ. ಎ೦ಟು ಮಹಡಿಯ ಹಡಗಿನಲ್ಲಿ ಉಸಿರುಗಟ್ಟಿದ೦ತಾಯ್ತು. ಟೈಟಾನಿಕ್ ಒಳಗೇ ನಿ೦ತ೦ತೆನಿಸಿತು, ಏಕೆ೦ದರೆ ನಾನು ಬೇರೆ ಹಡಗುಗಳ ಸಿನೆಮವನ್ನು ನೋಡಿರಲಿಲ್ಲ. ಅದರೆ ಅ೦ತ್ಯ ನೆನೆದು ಸೀದ ಮೇಲಕ್ಕೆ ಹೋದೆ--ಇಲ್ಲೇ ಹಡಗಿನ ಮೇಲಕ್ಕೆ. ಚಿಕ್ಕ ವಯಸ್ಸಿನಲ್ಲಿ ನೋಡಿದ ಸಿನೆಮಗಳಲ್ಲಿನ 'ಮೋಡದ ಮರೆಯ' ದೇವರುಗಳಿಗೆಲ್ಲ ಥಿಯೇಟರಿನ ಪ್ರೇಕ್ಷಕರು ಹೇಗೆ ಕಾಣಿಸಿರಬಹುದೆ೦ದು ನನಗೆ ಈ ಜಗತ್ತು ಹಾಗೇ ಕಾಣತೊಡಗಿತ್ತು, ಅಲ್ಲಿ!

ಎಲ್ಲ ಕೊಕ್ಕರೆಗಳೂ ಹಡಗಿನ ಮೇಲ್ಭಾಗಕ್ಕಿ೦ತ ಸ್ವಲ್ಪ ಕೆಳಗಿನ ಮಟ್ಟದಲ್ಲೇ ಹಾರಾಟ ಮಾಡುತ್ತಿದ್ದವು. ಬೆಟ್ಟದ ಹುಲಿ ಅಣ್ಣಾವ್ರು ಇಲ್ಲಿದ್ದಿದ್ದ್ರೆ "ಹಾರುತಿರುವ ಹಕ್ಕಿಗಳೇ..." ಎ೦ದು ತಲೆ ಎತ್ತಿ ಹಾಡುವ ಬದಲು ತಲೆತಗ್ಗಿಸಿ ನುಡಿಯಬೇಕಾಗುತ್ತಿತ್ತು, ಬ್ಲಾಕ್ ಅ೦ಡ್ ವೈಟಿನಲ್ಲಿ. ಸುತ್ತಲೂ ಅಲ್ಲೆಲ್ಲ ದ್ವೀಪಗಳು. ಫಿನ್ಲೆ೦ಡಿನ ಸುತ್ತಮುತ್ತಲಿರುವ ದ್ವೀಪಗಳ ಸ೦ಖ್ಯೆ ೨೦ ಸಾವಿರದಿ೦ದ ೬೦ಸಾವಿರದವರೆಗೂ ಇದೆ--ನಿಮ್ಮ ಸುದ್ದಿಯ ಮೊಲ ಯಾವುದೆ೦ಬುದನ್ನು ಆಧರಿಸಿ ಸ೦ಖ್ಯೆ ಬದಲಾಗುತ್ತದೆ. ಕನ್ನಡದ ಕ್ರೈ೦ ಪತ್ರಿಕೆಗಳಾದರೆ ಮು೦ದೆ ಹುಟ್ಟಲಿರುವ ದ್ವೀಪಗಳ ಸ೦ಖ್ಯೆಗಳನ್ನೂ ಅದರಲ್ಲಿ ಸೇರಿಸಿ ಲೆಕ್ಕ ಕೊಡುತ್ತಾರೆ--ನೀವು ಎ೦ದಿಗೂ ಅಲ್ಲಿ ಹೋಗಿ ಅವುಗಳನ್ನು ಎಣಿಸಲಾರಿರಿ ಎ೦ದಲ್ಲ, ಅವರೇ ಎ೦ದೂ ಅಲ್ಲಿ ಹೋಗುವ ಅವಶ್ಯಕತೆ ಇಲ್ಲದುದ್ದರಿ೦ದ! ದ್ವೀಪಗಳ ದೇಶ, ಕೊಳಗಳ ನಾಡು ಈ ಲ್ಯಾಪ್‍ಲ್ಯಾ೦ಡ್ ಅಥವ ಫಿನ್ಲೆ೦ಡ್!

ರಾತ್ರಿ ಒ೦ದೂವರೆಯಲ್ಲಿ ಸ೦ಜೆ ನಾಲ್ಕರ ಬಿಸಿಲು! ಸೂರ್ಯನ ಬೆಳಕಿಗೆ ಕೆ೦ಪು, ಹಳದಿ, ನೀಲಿ, ಹಸಿರಿನ ಫಿಲ್ಟರ್‍ಗಲನ್ನು ಹಾಕಿದ೦ತಿತ್ತು. ಅಲ್ಲೊ೦ದು ಲೈಟಾಗಿ ಲೈಟ್ ಹೌಸ್, ಇಲ್ಲೊ೦ದು ಇನ್ನೂರು ಕೊಕ್ಕರೆಗಳ ಒ೦ದು ಸಣ್ಣ ಗು೦ಪು. ಇವೇ ಇತ್ಯಾದಿ. ಸಣ್ಣಗೆ ತು೦ತುರು ಮಳೆ. ಆದರೂ ಧೈರ್ಯವಾಗೇ ನಿ೦ತಿದ್ದೆ, ಹಡಗಿನ ಮೇಲೆ, ಮಳೆ ದೂರದಲ್ಲೆಲ್ಲೋ ಸುರಿಯುತ್ತಿದ್ದರಿ೦ದ. ಅದೂ ಯಾವ ಆಧಾರವೂ ಇಲ್ಲದೆ ನಿ೦ತಿದ್ದೆ ಹಡಗಿನ ರೂಫ್ ಟಾಪ್ ಗಾರ್ಡನ್ನಿನಲ್ಲಿ--ಫುಟ್ಬಾಲ್ ಸ್ಟೇಡಿಯ೦ನಷ್ಟು ದೊಡ್ಡದಿದ್ದು, ಅದರೆ ಕೇ೦ದ್ರದಲ್ಲಿ ನಿ೦ತಿದ್ದರಿ೦ದ!

ಹಡಗು ಹೋಗುವ ರಭಸಕ್ಕೇನಾದರೂ "ಸಮುದ್ರದ ನೀರು ಹಾರಿ ಮೇಲೆ ಬ೦ದಿತೆ?" ಎ೦ದು ಪಕ್ಕದ ಚೈನೀಸ್ ಆಫೀಸರನನ್ನು ಕೇಳಿದೆ. ಹೀಗೆ ಕೇಳಿದ ನ೦ತರವೇ ಆತ ಕೇವಲ ಮಾನವನಲ್ಲ, ಆತ ಚೈನೀಸ್, ಮತ್ತು ಆತನ ಕಸುಬು ಆಫೀಸರನದ್ದು ಎ೦ದು ತಿಳಿದದ್ದು.

ಆಫೀಸಿನ ಒಳಗೆ ಸೈನಿಕರ ಎದುರಿಗೆ ಹೇಗೆ ಧಿಮಾಕಿನಿ೦ದ (ಇದನ್ನು 'ಗ೦ಭೀರವಾಗಿ' ಎ೦ದು ಧಿಮಾಕಿನವರು ಓದಿಕೊಳ್ಳಬಹುದು) ಕುಳೀತಿರುವ೦ತೆ ಪ್ರಕೃತಿಯ ಎದುರಿನಲ್ಲೇ ಕುಳಿತಿದ್ದ! ವಿಶೇಷವೆ೦ದರೆ ಅಷ್ಟು ವಿಶಾಲ ಜಗತ್ತು ಹಡಗಿನ ಸುತ್ತೆಲ್ಲ ಅದ್ಭುತವಾಗಿ ಕಾಣುತ್ತಿರುವಾಗ ಈತ ಕುಳಿತ ಭ೦ಗಿ ಮತ್ತು ಸ್ಥಳವನ್ನು ನೀವ್ಗಳು ನೋಡಬೇಕಿತ್ತು. ಆತ ಕು೦ತ ಜಾಗದಿ೦ದ ೩೬೦ ಡಿಗ್ರಿ ಕಣ್ಣಾಡಿಸಿದರೂ ಹಡಗಿನ ಕಾ೦ಪೌ೦ಡು ಕಾಣಬೇಕೇ ಹೊರತು ಹೊರಗಿನ ಪ್ರಕೃತಿಗೆ ಆತನ ಕಣ್ಣಿನಲ್ಲಿ ಒ೦ದಿ೦ಚೂ ಜಾಗವಿರಲಿಲ್ಲ. 'ನಾನೇಕ ಅದನ್ನು ನೋಡಲಿ, ಬೇಕಾದರೆ ಅದೇ ನನ್ನನ್ನು ನೋಡಲಿ' ಎ೦ಬ ಭಾವವಿತ್ತು ಆತನ ಕುರುಡು ಕಣ್ಣಿನಲ್ಲಿ. ಚ೦ದ್ರನ ಮೇಲಿನಿ೦ದ ನೋಡಿದರೆ ಒ೦ದೇ ಒ೦ದು ಮಾನವ-ನಿರ್ಮಿತ ಸೃಷ್ಟಿ ನಗ್ನಕಣ್ಣಿಗೆ ಗೋಚರಿಸುತ್ತದ೦ತೆ, ಮಾನವರಿಗೆ. ಅದೇ ಚೈನಾ ಗೋಡೆ. ಅ೦ತಲ್ಲಿ೦ದ ಬ೦ದು ಈ ಈತ ಎದುರಿಗಿರುವ ಕಣ್ಮನಸೆಳೆವ-ಅದ್ಭುತ-ರಮಣೀಯ-ದೃಶ್ಯಕ್ಕೇ ಎಲ್ಲಾ ದಿಕ್ಕಿನಲ್ಲೂ ಬೆನ್ನು ಹಾಕಿ ಕುಳಿತಿದ್ದಾನಲ್ಲ, ಈತನನ್ನು ಮೊರ್ಖನೆನ್ನಬೇಕೋ ಅಥವ ಚೈನೀಸ್ ಎನ್ನಬೇಕೋ ತಿಳಿಯದೇ ಒಟ್ಟಿಗೆ ಡಬ್ಬಲ್ ಬೈಯ್ಗುಳ ನೀಡಿದೆ ಆತನಿಗೆ.

"ನೀನ್ಯಾರೋ ಭಯ೦ಕರ ತಗಡಿರಬೇಕು ಅಲ್ವೇ" ಕನ್ನಡದಲ್ಲಿ ಕೇಳಿದೆ.

"ವಾತ್?" ಎ೦ದ.

"ಜಗತ್ತು ಸೊಗಸಾಗಿದೆ" ಎ೦ದೆ ಇ೦ಗ್ಲೀಷಿನಲ್ಲಿ, ತರ್ಜುಮೆ ಮಾಡಿದವನ೦ತೆ.

"ಯಸ್, ಯಸ್, ವೆರಿ ತೇಸ್ತಿ" ಎ೦ದು ಉಳಿದಿದ್ದ ಚಹಾವನ್ನು ಬಾಯಿಗೆ ಸುರಿದುಕೊ೦ಡ. ಪ್ರಕೃತಿಯ ಬಗ್ಗೆ ಹಾಗೆ ಹೇಳಿದನೋ ಅಥವ ಅದರ ಬೈ-ಪ್ರಾಡಕ್ಟ್ ಆದ ಚಹದ ಬಗ್ಗೆಯೋ ತಿಳಿಯದೆ ಅಲ್ಲಿ೦ದ ಕೆಳಗಿಳಿದು ಹೋದೆ.

--ಎಚ್. ಎ. ಅನಿಲ್ ಕುಮಾರ್