ನಿನ್ನ ಮನದ ಅಂಗಳದಲ್ಲಿ ಪುಟ್ಟ ಜಾಗೆ ಬೇಕು...

ನಿನ್ನ ಮನದ ಅಂಗಳದಲ್ಲಿ ಪುಟ್ಟ ಜಾಗೆ ಬೇಕು...

ಕಾಲೇಜು ಕ್ಯಾಂಪಸಿನ ವರಾಂಡದಲ್ಲಿ ಅವನಿಗಾಗಿ ನಾನು ಹುಡುಕಾಡಬೇಕು. ಅದ್ಯಾವುದೋ ಹುಡುಗರ ಗುಂಪಲ್ಲಿ ಅವ ಹಾಸ್ಟೆಲ್್ನತ್ತ ಸಾಗುತ್ತಿದ್ದರೆ ಅವನಿಗೆ ಅರಿವಿಲ್ಲದಂತೆ ನನ್ನ ಹಾಸ್ಟೆಲ್್ನ ಕಿಟಿಕಿಯಿಂದ ಅವನನ್ನೇ ನೋಡುತ್ತಿರಬೇಕು. ಅವ ನನಗೆ ಸಿಕ್ತಾನಾ? ನನ್ನ ಪ್ರೀತಿಯನ್ನು ಅವ ಒಪ್ಪಿಕೊಳ್ತಾನಾ? ಅಂತಾ ನಂಗೊತ್ತಿಲ್ಲ. ಆದ್ರೂ ನಾನು ಅವನನ್ನು ಪ್ರೀತಿಸುತ್ತಿದ್ದೇನೆ. ಒನ್ ವೇ ಲವ್...ಹೂಂ ಕದ್ದು ಮುಚ್ಚಿ ಪ್ರೀತಿಸುವ ಈ ಪ್ರೀತಿಯಲ್ಲಿಯೂ ಒಂದು ಥ್ರಿಲ್ ಇದೆ ಅಲ್ವಾ... 


ಇನ್ನೇನು ವ್ಯಾಲೆಂಟೆನ್ಸ್ ಡೇ ಹತ್ತಿರವಾಗುತ್ತಾ ಬಂತು. ನನ್ನ ಗೆಳತಿಯರೆಲ್ಲಾ ತಮ್ಮ ತಮ್ಮ ಬಾಯ್್ಫ್ರೆಂಡ್ಸ್್ಗಾಗಿ ಉಡುಗೊರೆ ಖರೀದಿಸಿಯಾಗಿದೆ. ಆ ಪ್ರೇಮಿಗಳ ದಿನವನ್ನು ಹೇಗೆ ಕಳೆಯೋದು ಎಂದು ಇಲ್ಲಿ ಕೆಲವರು ಲೆಕ್ಕ ಹಾಕುತ್ತಿದ್ದಾರೆ. ಆದರೆ ನನ್ನದು ನಿಶ್ಶಬ್ದ ಪ್ರಣಯ....ನನ್ನ ಇನಿಯ ನೀನೇ ಎಂದು ನಿನ್ನಲ್ಲಿ ನನ್ನ ಪ್ರೇಮ ನಿವೇದನೆ ಮಾಡಲಾ? ಒಂದು ವೇಳೆ ನೀನು 'ನೋ' ಅಂದು ಬಿಟ್ರೆ ಅನ್ನುವ ಭಯ ಕಾಡ್ತಾ ಇದೆ ಕಣೋ... 


ಈ ಪ್ರೀತಿ ಅಂದ್ರೆ ಹೀಗೇನಾ? ಅಲ್ಲಿ ಇಲ್ಲಿ ಎಲ್ಲಿ ಹೋದರೂ ನನ್ನ ಕಣ್ಣುಗಳು ನಿನ್ನನ್ನೇ ಹುಡುಕುತ್ತಿರುತ್ತವೆ.ಅದೂ ಹೊತ್ತಲ್ಲದ ಹೊತ್ತಲ್ಲಿ ನೀನು ನೆನಪಾಗ್ತೀಯಾ..ನೀನು ಮೊದಲ ಬಾರಿಗೆ ನನ್ನನ್ನು ಕಂಡು ನಕ್ಕಿದ್ದು, ನೀ ನಕ್ಕಾಗ ಬೀಳುವ ಗುಳಿಕೆನ್ನೆ...ಅದೆಲ್ಲಾ ಮನ ಪಟಲದಲ್ಲಿ ಹಾಗೇ ಅಚ್ಚೊತ್ತಿದೆ. ನಿನ್ನ ಹರಟೆ, ನಗು ಎಲ್ಲವೂ ನಂಗಿಷ್ಟಾನೆ. ನಿಂಗೊತ್ತಾ...ಅದನ್ನೇ ನೆನೆದು ಕೊಂಡು ಸುಮ್ನೇ ಸುಮ್ನೇ ನಗ್ತಾ ಇರ್ತೇನೆ... 


ನಿಜ ಹೇಳಲಾ...ನನಗೂ ಒಬ್ಬ ಗೆಳೆಯ ಬೇಕು ಅಂತಾ ಅನಿಸಿದ್ದು ನಿನ್ನನ್ನು ನೋಡಿದಾಗಲೇ. ನಿನ್ನ ಜೊತೆ ತುಂಬಾ ಹೊತ್ತು ಮಾತಾಡಬೇಕು. ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನನ್ನ ಪ್ರೀತಿಯನ್ನು ಮೌನವಾಗಿಯೇ ತಿಳಿಸಬೇಕು. ಸುರಿವ ಮಳೆಯಲ್ಲಿ ಕೈ ಕೈ ಹಿಡಿದು ನೆನೆಯಬೇಕು...ದಿನಾಲೂ ನಿನಗೆ ಪ್ರೀತಿಯ ಮೆಸೇಜ್ ಕಳುಹಿಸಬೇಕು..ಮತ್ತೆ ನೈಟ್ ಟಾಕ್ ಟೈಮ್ ಆಫರ್  ಮೂಲಕ ರಾತ್ರಿಯೆಲ್ಲಾ ಪಿಸು ಮಾತಲ್ಲಿ ಪ್ರೀತಿಯ ಮಳೆಗೆರೆಯಬೇಕು. ಈ ಹಿತವಾದ ಚಳಿಯಲ್ಲಿ ನಿನ್ನ ತುಂಟಾಟದ ಮಾತುಗಳನ್ನು ಕೇಳಿ ಹೊದ್ದ ಕಂಬಳಿಯೊಳಗೆ ಮುಸು ಮುಸು ನಗಬೇಕು.. 


ಹೀಗೆ ನಿನ್ನನ್ನೇ ಕನಸು ಕಾಣುತ್ತಿದ್ದೇನೆ ಕಣೋ. ನಿನ್ನ ತಮಾಷೆಗಳಿಗೆ ಜೊತೆಯಾಗಿ ನಗಲು, ನೀನು ಬೇಜಾರಾದಾಗ ಸಂತೈಸಲು...ಪ್ರೀತಿಯ ಆಳವನ್ನರಿಯಲು ನನಗೂ ಒಂದು ಅವಕಾಶಕೊಡು. ನಿನ್ನ ಮನಸ್ಸಿನ ಗೂಡಿನಲ್ಲಿ ನನಗೆ ಒಂದು ಪುಟ್ಟ ಜಾಗ ಕೊಟ್ಟು ಬಿಡು ಗೆಳೆಯಾ...ಈ ಜೀವನವೇ ನಿನಗಾಗಿ ಮೀಸಲಿರಿಸುತ್ತಿದ್ದೇನೆ. ನನ್ನ ಜೀವದ ಗೆಳೆಯನಾಗಿ, ನನ್ನ ಉಸಿರಾಗಿ ನೀನು ಬರುವಿಯಾದರೆ ನನ್ನ ಹೃದಯದ ಬಾಗಿಲು ನಿನಗಾಗಿ ..ನಿನಗಾಗಿ ಮಾತ್ರ ಸದಾ ತೆರೆದೇ ಇರುವುದು.


 (ಈ ಓಲೆ 10/02/2010 ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಒಲವಿನ ಓಲೆ ವಿಭಾಗದಲ್ಲಿ ಪ್ರಕಟಿತವಾಗಿದೆ.)

Rating
No votes yet

Comments