ಭಾವೀ ವರರೇ ಎಚ್ಚರ

ಭಾವೀ ವರರೇ ಎಚ್ಚರ

ಮದುವೆ ಆಗಲು ಬಯಸುವ ಭಾವೀ ವರರೇ ಎಚ್ಚರ. ಭಾರತೀಯ ನಾರಿ ಎಚ್ಚೆತ್ತು ಕೊಂಡಿದ್ದಾಳೆ. ಕಳೆದ ಗುರುವಾರ ಬಿಹಾರದ ಸರಾಯಿರಂಜನ್ ಗ್ರಾಮದಲ್ಲಿ ಒಂದು ಮದುವೆ. ಪಾನ ಮತ್ತನಾಗಿ ತನ್ನ ಭಾವೀ ಪತಿ ಮದುವೆ ದಿಬ್ಬಣದೊಂದಿಗೆ ಬಂದವರೊಂದಿಗೆ ಅಶ್ಲೀಲವಾಗಿ ಕುಣಿದ ಎಂದು ವಧು ಅವನನ್ನು ವರಿಸಲು ನಿರಾಕರಿಸಿದಳು. ಬೆಚ್ಚಿ ಬಿದ್ದ ವರ ರವಿ ಕುಮಾರ್ ಚೌಧುರಿ ದಾರಿ ಕಾಣದೆ ಪೋಲೀಸರ ಮೊರೆ ಹೊಕ್ಕ. 
ಜಪ್ಪಯ್ಯ ಅನ್ನಲಿಲ್ಲ ಮದುವೆ ಮಂಟಪಕ್ಕೆ ಆಗಮಿಸಿದ್ದ ಸಾಲಂಕೃತ ವಧು. ವಧುವಿನ ತಂದೆ ತನ್ನ ಮಗಳ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ ವರ ಗಂಟು ಮೂಟೆ ಕಟ್ಟುವಂತೆ ಮಾಡಿದ. ಪಾಪ ಬಾಸಿಂಗ ಕಟ್ಟಿಕೊಂಡು ಏನೇನೋ ಆಸೆಗಳನ್ನು ಇಟ್ಟುಕೊಂಡು ಹಸೆ ಮಣೆ ಏರಲು ಬಂದಿದ್ದ ರವಿ ಕುಮಾರನಿಗೆ ಕಾಲಿಗೆ ಬುದ್ಧಿ ಹೇಳುವುದೊಂದೇ ಬಾಕಿ ಉಳಿದಿದ್ದು.   

ಈ ರೀತಿಯ ಅಪೂರ್ವ ಧೈರ್ಯ ಪ್ರದರ್ಶಿಸಿದ ಮದುಮಗಳು ಇತರರಿಗೂ ಮಾದರಿ ಆಗಬೇಕು. ತನ್ನನ್ನು ವರಿಸುವವನಲ್ಲಿ ಸದ್ಗುಣಗಳನ್ನು ಬಯಸುವುದು ಪ್ರತೀ ವಧುವಿನ ಹಕ್ಕು. ಆ ಹಕ್ಕನ್ನು ಈ ಹೆಣ್ಣುಮಗಳು ಮನೋಹರವಾಗಿ ಚಲಾಯಿಸಿದಳು. ಆಕೆಯ ತೀರ್ಮಾನಕ್ಕೆ ಬೆಂಬಲ ಸೂಚಿಸಿದ ಆಕೆಯ ತಂದೆಯೂ ಅಭಿನಂದನಾರ್ಹ. ಇದೇ ರೀತಿ ವಧುಗಳು ಲಜ್ಜೆ ಬಿಟ್ಟು ಹೆಣ್ಣಿನ ಮನೆಯವರಿಂದ ವರ ದಕ್ಷಿಣೆ ಬಯಸುವ ಗಂಡುಗಳನ್ನೂ ಎಡಗಾಲಿಂದ ಒದ್ದು ಸಮಾಜವನ್ನು ಈ ವರದಕ್ಷಿಣೆ ಎಂಬ ಅನಿಷ್ಟ ಪೀಡೆಯಿಂದ ಬಿಡುಗಡೆಗೊಳಿಸಬೇಕು.  
Rating
No votes yet

Comments