ಕಾಲೇಜು ಬಸ್ಸಿನಲ್ಲಿ ನಿಸ್ತಂತು ಜಾಲ ತಂದ ಮಾಯಾಜಾಲ
ಕಾಲೇಜು ಬಸ್ಸಿನಲ್ಲಿ ನಿಸ್ತಂತು ಜಾಲ ತಂದ ಮಾಯಾಜಾಲ
ತಾಸುಗಟ್ಟಲೆ ಪಯಣಿಸಿ,ಕಾಲೇಜಿಗೆ ತಲುಪುವ ವಿದ್ಯಾರ್ಥಿಗಳು ಬಸ್ಸಿನಲ್ಲಿ,ಸುಮ್ಮನೆ ಹರಟೆ ಕೊಚ್ಚುವುದು,ಗಲಾಟೆ ಮಾಡುವುದು ಸಾಮಾನ್ಯ.ಆದರೆ ಅಮೆರಿಕಾದ ಟ್ಯೂಕ್ಸನ್‌ನ ಶಾಲಾ ಬಸ್ಸಿನಲ್ಲಿ ಮೊಬೈಲ್ ರೌಟರ್ ಅನ್ನು ಬಳಸಿ,ಚಲಿಸುವ ಬಸ್ಸಿನಲ್ಲಿ ನಿಸ್ತಂತು ಅಂತರ್ಜಾಲ ಸೇವೆ ಆರಂಭಿಸಿದ ಬಳಿಕ,ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.ಈಗ ವಿದ್ಯಾರ್ಥಿಗಳು ತಮ್ಮ ಲ್ಯಾಪ್‌ಟಾಪಿನಲ್ಲಿ ಅಂತರ್ಜಾಲಕ್ಕೆ ಸಂಪರ್ಕಿಸಿ,ಕ್ಲಾಸಿನಲ್ಲಿ ನೀಡಿದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಯತ್ನಿಸುವುದೋ,ಅಲ್ಲ ಅಂತರ್ಜಾಲ ಜಾಲಾಡುವುದೋ ಮಾಡುತ್ತಾ,ಬಸ್ಸಿನಲ್ಲಿ ಶಾಂತ ಪರಿಸ್ಥಿತಿ ಇರುತ್ತದೆ ಎಂದು ಬಸ್ಸಿನ ನಿರ್ವಾಹಕರು ಹೇಳುತ್ತಾರೆ ಎಂದು ನ್ಯೂಯಾರ್ಕ್‌ಟೈಮ್ಸ್ ವರದಿ ಮಾಡಿದೆ.ಅಟೊನೆಟ್ ಕಂಪೆನಿಯು ಒದಗಿಸಿದ ಮೊಬೈಲ್ ರೌಟರನ್ನಿದರಲ್ಲಿ ಬಳಸಲು ಸುಮಾರು ಹತ್ತು ಸಾವಿರ ಆರಂಭಿಕ ಮತ್ತು ತಿಂಗಳಿಗೆ ಮೂರು ಸಾವಿರ ಖರ್ಚು ಬರುತ್ತದೆಯಂತೆ.ನಮ್ಮ ಹೆದ್ದಾರಿಗಳಲ್ಲಿನ ಹೊಂಡಗಳಲ್ಲಿ ಎದ್ದು-ಬಿದ್ದು ಓಡುವ ಬಸ್ಸುಗಳಲ್ಲಿ ಅಂತರ್ಜಾಲ ಇದ್ದರೂ ಲ್ಯಾಪ್‌ಟಾಪ್ ತೆರೆಯುವ ಧೈರ್ಯ ಯಾರಿಗೆ ಬರಬೇಕು ಅಲ್ಲವೇ?
--------------------------------------------
ಗೂಗಲ್ ಬುಸುಗುಟ್ಟುತ್ತಿದೆ!
ಗೂಗಲ್ ಕೂಡಾ ಟ್ವಿಟರ್ ಅಂತಹದೇ ಸೇವೆ ನೀಡುವ ಸಾಹಸಕ್ಕಿಳಿದಿದೆ.ಗೂಗಲ್ ಬಜ್(buzz) ಎಂಬ ಹೊಸ ಸೇವೆಯು ಗೂಗಲ್‌ನ ಮಿಂಚಂಚೆಯ ಒಳಗೇ ಸಿಗಲಾರಂಭಿಸಿದೆ.ಇದರಲ್ಲಿ ಬಳಕೆದಾರ ತನ್ನ ಸಂದೇಶವನ್ನು ಇತರರಿಗೆ ನೀಡಬಹುದು.ತನ್ನ ಚಿತ್ರ,ವಿಡಿಯೋ ಅಥವ ಅಂತರ್ಜಾಲ ಕೊಂಡಿಗಳನ್ನು ಹಂಚಿಕೊಳ್ಳಬಹುದು.ಬ್ಲಾಗುಗಳನ್ನು ನೀಡಬಹುದು.ಬಳಕೆದಾರ ಇತರರನ್ನು ಹಿಂಬಾಲಿಸಬಹುದು.ಇತರರೂ ಬಳಕೆದಾರರನ್ನು ಹಿಂಬಾಲಿಸಬಹುದು.ಟ್ವಿಟರ್ ಸಂದೇಶವೂ ಇಲ್ಲಿ ಕಾಣಿಸುವಂತೆ ಮಾಡಲು ಸಾಧ್ಯ.ಇದರಲ್ಲಿ ಟ್ವಿಟರ್,ಪೇಸ್‌ಬುಕ್ ಸೇವೆಗಳಿಗಿಂತ ಹೇಳಿಕೊಳ್ಳುವ ವಿಶೇಷತೆಯೇನೂ ಕಾಣಿಸುತ್ತಿಲ್ಲ.ಆದರೆ,ಇದು ಮಿಂಚಂಚೆಯ ಜತೆಗೇ ಕಾಣಿಸುವುದು,ಗೂಗಲ್ ಸೇವೆ ಜನಪ್ರಿಯವಾಗಲು ಒಂದು ಕಾರಣವಾಗಬಹುದು.ಮಿಂಚಂಚೆ ಖಾತೆ ಪರಿಶೀಲಿಸುವಾಗ ಇದು ಕಣ್ಣಿಗೆ ಬಿದ್ದು,ಇತರರ ಸಂದೇಶಕ್ಕೆ ಪ್ರತಿಕ್ರಿಯಿಸುವಂತೆ ಆಗುವುದು ಸಹಜ ತಾನೇ?ಟ್ವಿಟರ್,ಫೇಸ್‌ಬುಕ್ ಆದರೆ,ಅವುಗಳ ಅಂತರ್ಜಾಲ ತಾಣಗಳಿಗೆ ಹೋದರೆ ಮಾತ್ರಾ ಅಲ್ಲಿ ಬಂದಿರುವ ಸಂದೇಶಗಳು ಕಾಣಿಸುತ್ತವೆ.ಗೂಗಲ್‌ನದ್ದೇ ಆದ ಅರ್ಕುಟ್ ಸೇವೆಗೂ ಇದು ಸ್ಪರ್ಧೆ ನೀಡಬಹುದು.
--------------------------------------------------------------------
ಗೂಗಲ್‌ನಿಂದ ಶರವೇಗದ ಅಂತರ್ಜಾಲ ಸಂಪರ್ಕ ಯೋಜನೆ
ತಾನೂ ಅಂತರ್ಜಾಲ ಸೇವಾದತೃವಾಗಿ(ಐ ಎಸ್ ಪಿ) ಶರವೇಗದ ಸಂಪರ್ಕ ನೀಡುವುದು ಅಷ್ಟೇನೂ ದುಸ್ಸಾಧ್ಯ ಕೆಲಸವಲ್ಲ ಎಂದು ಇತರ ಐ ಎಸ್ ಪಿಗಳಿಗೆ ತೋರಿಸಿಕೊಟ್ಟು,ಶರವೇಗದ ಸಂಪರ್ಕದಿಂದಾಗುವ ಲಾಭಗಳಿಗೆ ಬಳಕೆದಾರರನ್ನು ಪರಿಚಯಿಸುವ ಸಾಹಸಕ್ಕೆ ಇಳಿಯಲು ಗೂಗಲ್ ಬಯಸಿದೆ.ಅಮೆರಿಕಾದ ಕೆಲವು ನಗರಗಳಲ್ಲಾದರೂ ಫೈಬರ್ ಜಾಲಗಳನ್ನು ಸ್ಥಾಪಿಸಿ,ಅವುಗಳ ಮೂಲಕ ಸೆಕೆಂಡಿಗೆ ಗಿಗಾಬಿಟ್ ವೇಗದ ಅಂತರ್ಜಾಲ ಸೇವೆ ಒದಗಿಸಿ,ಚಲನಚಿತ್ರಗಳ ವಿಡಿಯೋವನ್ನೂ ಒಂದೆರಡು ನಿಮಿಷಗಳೊಳಗೆ ಡೌನ್‌ಲೋಡ್ ಮಾಡಲು ಸಾಧ್ಯವಾಗಿಸಿ,ಸದ್ಯದ ಐ ಎಸ್ ಪಿ ಸೇವೆ ಒದಗಿಸುವ ವೆರಿಜೋನ್,ಅಮೆರಿಕಾ ಆನ್‌ಲೈನ್ ಮುಂತಾದವರಿಗೆ ಶಾಕ್‌ಟ್ರೀಟ್‌ಮೆಂಟ್ ನೀಡಲು ಗೂಗಲ್ ಬಯಸಿದೆ.ಗೂಗಲ್ ಪ್ರವೇಶಿಸುವ ಕ್ಷೇತ್ರದಲ್ಲಿ ಹಣಗಳಿಕೆ ಸುಲಭ ಸಾಧ್ಯವಲ್ಲ.ಇಂತಹ ಯೋಜನೆಯನ್ನು ಬಹಿರಂಗವಾಗಿಸಿ,ಐ ಎಸ್ ಪಿಗಳು ತಮ್ಮ ಸೇವೆಯನ್ನು ಉತ್ತಮಗೊಳಿಸುವತ್ತ ಯೋಚಿಸುವಂತೆ ಮಾಡಿರುವುದು ಗೂಗಲ್ ಹೆಗ್ಗಳಿಕೆ.
-----------------------------------------------------
ಆನ್‌ಲೈನ್ ಪಾವತಿಗೆ ಬಾಧೆ
ಪೇಪಾಲ್ ಹಣ ಪಾವತಿಸಲು ಆನ್‌ಲೈನ್‌ನಲ್ಲಿ ಸೇವೆ ಒದಗಿಸುತ್ತಿದೆ.ಭಾರತದ ಬಳಕೆದಾರರಿಗೂ ಈ ಸೇವೆ ಲಭ್ಯ.ಬ್ಯಾಂಕ್ ಅಥವ ಕ್ರೆಡಿಟ್‌ಕಾರ್ಡ್ ಮೂಲಕ ಹಣ ಪಾವತಿಗೆ ಅವಕಾಶ ನೀಡುವ ಸರಳ ವ್ಯವಸ್ಥೆ ಇಲ್ಲಿದೆ.ಈಗ ಭಾರತಕ್ಕೆ ಹರಿದು ಬರುವ ವಿದೇಶಿ ಹಣದ ಬಗ್ಗೆ ಪೇಪಾಲ್ ರಿಸರ್ವ್ ಬ್ಯಾಂಕಿನ ನೀತಿಗಳಿಗೆ ಅನುಗುಣವಾಗಿ ಕಾರ್ಯಾಚರಿಸುತ್ತಿಲ್ಲವೆಂಬ ಕಾರಣದಿಂದ, ರಿಸರ್ವ್ ಬ್ಯಾಂಕ್ ಪೇಪಾಲ್ ಕಂಪೆನಿಗೆ ನೋಟಿಸು ನೀಡಿರುವ ಹಿನ್ನೆಲಿಯಲ್ಲಿ,ಪೇಪಾಲ್ ಭಾರತದ ಬಳಕೆದಾರರಿಗೆ ಹಣಪಾವತಿ ಸೇವೆ ನಿಲ್ಲಿಸಿದೆ.ಇದು ಇ-ವಾಣಿಜ್ಯದಲ್ಲಿ ತೊಡಗಿರುವ ಭಾರತೀಯರಿಗೆ ತೊಂದರೆ ತಂದಿದೆ.ಇನ್ನು ಕೆಲವು ತಿಂಗಳುಗಳ ಕಾಲ ತನ್ನ ಸೇವೆ ಬಾಧಿತವಾಗಬಹುದು ಎನ್ನುವುದು ಪೇಪಾಲ್ ಹೇಳಿಕೆ.ಒಮ್ಮೆ ತನ್ನ,ವ್ಯವಹಾರವನ್ನು ನೇರ್ಪುಗೊಳಿಸಿದೊಡನೆ ಪಾವತಿ ಸೇವೆ ಮತ್ತೆ ಪ್ರಾರಂಭವಾಗುತ್ತದೆ ಎಂದು ಪೇಪಾಲ್ ಹೇಳಿಕೊಂಡಿದೆ.
---------------------------------------------
ನೀಲಿಹೂವು ಮತ್ತು ಒಂಟಿಹಕ್ಕಿ
http://neelihoovu.wordpress.com ವಿಳಾಸದಲ್ಲಿ ಲಭ್ಯವಿರುವ ಕನ್ನಡ ಬ್ಲಾಗ್ ರಂಜಿತ್ ಅಡಿಗರದ್ದು.ಉಡುಪಿಯ ಈ ಬ್ಲಾಗಿಗ ತನ್ನ ನವಿರು ಬರಹಗಳು,ಕತೆಗಳು ಮತ್ತು ಕವನಗಳ ಮೂಲಕ ಜನರನ್ನು ರಂಜಿಸುತ್ತಿದ್ದಾರೆ.ಪತ್ರಿಕೆಗಳಲ್ಲೂ ಆಗಾಗ ಕಾಣಿಸಿಕೊಳ್ಳುವ ಇವರ ಬರಹಗಳನ್ನೂ ಇಲ್ಲಿ ಕಾಣಬಹುದು.ಸದ್ಯ ಕೆಲಸಕ್ಕಾಗಿ ಸಿಂಗಾಪುರದಲ್ಲಿದ್ದರೂ ಕನ್ನಡದ ನಂಟನ್ನು ಬಿಡದಿರುವಂತೆ ಮಾಡುವಲ್ಲಿ ಬ್ಲಾಗ್ ಕಾಣಿಕೆಯೂ ಇರಬಹುದು.ಒಂದು ಸಾಲಿನ ನ್ಯಾನೋಕತೆಗಳ ಗುಚ್ಛವೀ ತಾಣದ ಹೈಲೈಟ್.
ಇಂಜಿನಿಯರಿಂಗ್ ವಿದ್ಯಾರ್ಥಿ ಸುಪ್ರೀತ್ ಭರವಸೆಯ ಬರಹಗಾರನಾಗಿ ಅಂತರ್ಜಾಲದಲ್ಲಿ ಪರಿಗಣಿಸಲ್ಪಡುವ ಯುವಕ.ಇವರ http://ontihakki.wordpress.com ಬ್ಲಾಗ್ ವೈಚಾರಿಕ ಬರಹಗಳು,ಕವನ,ಅವರ ಓದಿನ ಬಗ್ಗೆ ಹಲವು ಮಜಲುಗಳನ್ನು ಪರಿಚಯಿಸುವ ಬ್ಲಾಗ್ ತಾಣ.ಅವರ ಸಂಪಾದಕತ್ವದಲ್ಲಿ ಸಡಗರ ಎಂಬ ಪತ್ರಿಕೆಯೂ ಪ್ರಕಟಣೆಯಾಗುತ್ತಿತ್ತು.ಸದ್ಯ ಮುದ್ರಣ ನಿಲ್ಲಿಸಿದ್ದರೂ,ಆನ್‌ಲೈನ್ ಪತ್ರಿಕೆಯಾಗಿ http://kalaravapatrike.wordpress.com/ ಆಗಿ ಬ್ಲಾಗ್ ತಾಣದಲ್ಲಿ ಲಭ್ಯವಿದೆ.
-----------------------------------------------
ವರ್ಕ್ ಈಗ ಯಾರದ್ದು?
ಆರ್ದ್‌ವರ್ಕ್ ಒಂದು ಬಗೆಯ ಶೋಧ ಸೇವೆ.ಇಲ್ಲಿ ನಿಮ್ಮ ಸಂಶಯಗಳಿಗೆ ಉತ್ತರಿಸುವ ಪರಿಣತನ ಶೋಧ ನಡೆಸಿಕೊಡುವ ಸೇವೆ ಸಿಗುತ್ತದೆ.ಆರ್ದ್‌ವರ್ಕ್ ಕೆಲಸ ಆರಂಭಿಸಿ ಒಂದು ವರ್ಷವಷ್ಟೇ ಆಯಿತು.ಇದರಲ್ಲಿ ಯಾರು ಬೇಕಾದರೂ,ತಮ್ಮ ಪರಿಣತಿ ಇರುವ ಕ್ಷೇತ್ರಗಳ ಬಗ್ಗೆ ನೋಂದಾಯಿಸಿಕೊಳ್ಳಬಹುದು.ನಂತರ ಇತರರಿಂದ ಪ್ರಶ್ನೆಗಳು ಬಂದಾಗ,ನೀವಾ ಕ್ಷೇತ್ರದಲ್ಲಿ ಪರಿಣತರೆಂದು ನೋಂದಾಯಿಸಿಕೊಂಡಿದ್ದರೆ,ಪ್ರಶ್ನೆಗೆ ಉತ್ತರಿಸುವ ಅದೃಷ್ಟ ನಿಮ್ಮದಾಗಬಹುದು.ನೀವು ಉತ್ತರಿಸಲು ತಡ ಮಾಡಿದರೆ,ಪ್ರಶ್ನೆ ಇತರ ಪರಿಣತರಿಗೆ ವರ್ಗಾಯಿಸಲ್ಪಡಬಹುದು.ಈ ಕೆಲಸಕ್ಕೆ ಮಿಂಚಂಚೆ,ಮೊಬೈಲ್ ಇತ್ಯಾದಿ ವಿವಿಧ ಮಾಧ್ಯಮಗಳನ್ನು ವರ್ಕ್ ಬಳಸುತ್ತದೆ.ನಿಮಗೆ ಪ್ರಶ್ನೆಗೆ ಉತ್ತರಿಸಲು ಸಮರ್ಥರು ಗೊತ್ತಿದ್ದರೆ,ಪ್ರಶ್ನೆಯನ್ನು ಅವರಿಗೆ ವರ್ಗಾಯಿಸುವ ಸ್ವಾತಂತ್ರ್ಯವೂ ಇದೆ.ನಿಮ್ಮ ಸಂಶಯಗಳನ್ನು ಪ್ರಶ್ನೆಯನ್ನು ವರ್ಕ್‌ಗೆ ಕಳಿಸಿ,ಉತ್ತರವನ್ನು ಕೆಲವೇ ನಿಮಿಷಗಳಲ್ಲಿ ಪಡೆಯುವ ಭರವಸೆ ಇಡಬಹುದು.ಈ ಕಂಪೆನಿಯೀಗ ಗೂಗಲ್‌ನಿಂದ ಖರೀದಿಯಾಗಿದೆ.ವರ್ಕ್‌ನ ಸೇವೆ ಮೊದಲಿನಂತೆ ಮುಂದುವರಿಯಲಿದ್ದು,ಇದೀಗ ಗೂಗಲ್ ಲ್ಯಾಬಿನ ಭಾಗವಾಗಿ ಸೇವೆಯನ್ನು ನೀಡಲಿದೆ.ಗೂಗಲ್‌ನೊಳಗೆ ಸೇರಿದ ವರ್ಕ್ ಸೇವೆ ಇನ್ನಷ್ಟು ಹೊಳಪು ಪಡೆಯುವುದು ನಿಶ್ಚಿತ.ಗೂಗಲ್‌ನ ಅಸಂಖ್ಯಾತ ಬಳಕೆದಾರರ ಲಾಭ,ಸೇವೆಯನ್ನು ಇನ್ನೂ ಹೆಚ್ಚು ತ್ವರಿತವಾಗಿ ಮತ್ತು ಸಮರ್ಥವಾಗಿ ನೀಡಲು ವರ್ಕ್‌ಗೆ ಸಹಾಯ ಮಾಡಲಿದೆ.ಈ ಕಂಪೆನಿಯನ್ನು ತನ್ನದಾಗಿಸಿಕೊಳ್ಳಲು ಗೂಗಲ್ ಐವತ್ತು ದಶಲಕ್ಷ ಡಾಲರು ಖರ್ಚು ಮಾಡಿದೆ.
ಉದಯವಾಣಿ----------------------------------------------------------