ಮಿನ್ನಿ ಕಾಲಂ: ಬೇತಾಳ ಕಥಾ ೧- ವಿಕ್ರಮನ ಉತ್ತರಗಳು!
"ಕೇಳಿಲ್ಲಿ ಬೇತಾಳವೇ, ನನಗೆ ಒಂದು ಸಂದೇಹ ಬಂದಿದೆ. ಈಗ ಹೇಗಿದ್ದರೂ ನಾನು ನನ್ನ ಮೌನ ಮುರಿದಾಗಿದೆ. ನಿನ್ನ ಪ್ರಶ್ನೆಗಳಿಗೆ ನನಗೆ ಸರಿ ಕಂಡ ಉತ್ತರಗಳನ್ನು ನಾನು ಹೇಳುವೆ, ಅದಕ್ಕಿಂತ ಮೊದಲು ನನಗೆ ಬಂದ ಸಂದೇಹಗಳನ್ನೂ ನಾನು ಕೇಳುವೆ, ಅದಕ್ಕೆಉತ್ತರವು ನಿನಗೆ ತಿಳಿದೂ ನೀನು ಹೇಳದೆ ಇದ್ದರೆ ನಿನ್ನ ತಲೆಯೂ ಎರಡು ಹೋಳಾದೀತು, ಹುಷಾರ್! " ಎಂದು ಹೇಳುತ್ತಾನೆ. ಅಲ್ಲ, ಸಾಯಲಿಕ್ಕೆ ತಲೆ ಎರಡು ಹೋಳು ಆದರೇನು, ಅಥವಾ ಸಾವಿರ ಆದರೇನು, ಪಾಪ ಬೇತಾಳಕ್ಕೆ ಬಯಲೋಜಿ ವೀಕ್ ಎಂದುಕೊಳ್ಳುತ್ತ ಸುಮ್ಮನಿರುತ್ತಾನೆ. ಅಲ್ಲದೆ, ಇಷ್ಟಾಗಿ ಇದು ಬೇತಾಳ, ಇದಕ್ಕೆ ಸಾಯುವ ಭಯವು ಇರಲು ಸಾಧ್ಯವೇ ಎನ್ನುವ ಫಿಲಾಸೋಫಿಕಲ್ ಥಿಂಕಿಂಗ್ ಮೋಡ್ ಗೆ ಒಂದು ಕ್ಷಣ ಬೀಳುತ್ತಾನೆ.
ಅಷ್ಟರಲ್ಲಿ, ಬೇತಾಳವು " ಆಯಿತು, ವಿಕ್ರಮಾದಿತ್ಯನೇ, ಭಯಂಕರ ಶಾಣ್ಯ ಆಗಿ ಬಿಟ್ಟಿದೀಯ ನೀನು" ಎನ್ನುತ್ತಾ, " ಕೇಳುವಂತವನಾಗು ನಿನ್ನ ಸಂದೇಹಗಳನ್ನು! ಗೊತ್ತಿಲ್ಲ ಅಂದ್ರೆ, ಸ್ವಲ್ಪ ಎಕ್ಷ್ಟ್ರಾ ಡಾಟಾ ಪಾಯಿಂಟ್ಸ್ ಎರ್ರ ಬಿರ್ರಿ ಸೇರಿಸಿ, ಕರ್ವ್ ಫಿಟ್ ಮಾಡಿ ಹೇಳುತ್ತೇನೆ" ಎನ್ನುತ್ತದೆ.
"ಎಲ, ಎಲಾ, ಬೇತಾಳವೇ! ನಾನಂದುಕೊಂದ ಹಾಗೆ ದಡ್ಡ-ಮುಂಡೆ-ಗಂಡ ಬೇತಾಳವಲ್ಲ, ನೀನು, ಪರವಾಗಿಲ್ಲ" ಎಂದುಕೊಳ್ಳುತ್ತ, " ನಿನ್ನ ಕಥೆಯ ಮೊದಲ ಭಾಗದಲ್ಲಿ, ಬೋರಾಗಿ ಕೂತಿರುವಾಗ ಕಲ್ಲು ಬಂಡೆಯನ್ನು ಜಾಸ್ತಿ ಹೊತ್ತು ನೋಡುತ್ತಾ ಕುಳಿತರೂ ಅದರ ಮೇಲೆಯೇ ಲವ್ವಾಗುತ್ತದೆ, ಎಂದು ಹೇಳುತ್ತೀಯ, ಹಾಗೆಯೇ ಶ್ಯಾಮಲೆಯು ವಾದಿಮನನ್ನು ಪ್ರೀತಿಸತೊಡಗುತ್ತಾಳೆ, ಇದನ್ನು ಪ್ರೀತಿ ಅನ್ನಬಹುದೇ ಎಂದು ಸಂದೇಹವನ್ನೂ ವ್ಯಕ್ತ ಪಡಿಸುತ್ತೀಯ. ನಿನಗೆ ಏನು ಅನ್ನಿಸುತ್ತದೆ? ಅದು ನಿಜವಾದ ಪ್ರೀತಿಯೇ? ಅದು ಪಕ್ಕಕ್ಕೆ ಇರಲಿ, ನಿಜವಾದ ಪ್ರೀತಿ ಎಂದರೆ ಏನು? ಇಷ್ಟಕ್ಕೂ ಈ ವಯಸ್ಸಿನವರಿಗೆ ಆಗುವ ಸೋ ಕಾಲ್ಡ್ ಪ್ರೀತಿ, ಪ್ರೀತಿ ಅಲ್ಲವೆಂದು ನಿನ್ನ ಅಭಿಪ್ರಾಯವೇ? ಸುಮ್ಮನೆ ತಯ್ಯಾ ಥಕ ಎಂದು ಕುಣಿಯುತ್ತಾರೆ ಎಂದು ನಿನ್ನ ಅಭಿಪ್ರಾಯ ಅಲ್ಲವಷ್ಟೇ?" ಎಂದು ಕೇಳುತ್ತಾನೆ.
ಬೇತಾಳವು, " ಇದೊಳ್ಳೇ ಕಷ್ಟಕ್ಕೆ ಬಂತಲ್ಲಪ್ಪ. ಶ್ಯಾಮಲೆಗೆ ವಾದಿಮನ ಮೇಲಿರುವ ಪ್ರೀತಿ ನಿಜವೋ ಅಲ್ಲವೋ ಅಂತ ಕೇಳಿದರೆ ಹೌದೋ ಅಲ್ಲವೋ ಅಂತ ೧ ಅಥವಾ ೨ ಮಾರ್ಕ್ಸ್ ಕ್ವಶ್ಚನ್ ಗೆ ಉತ್ತರ ಹೇಳೋ ಹಾಗೆ ಹೇಳಬಹುದಿತ್ತು, ಆದರೆ, ನಿಜವಾದ ಪ್ರೀತಿ ಎಂದರೇನು ಅಂತೆಲ್ಲ ಕೇಳಿ ಕಿತಾಪತಿ ಮಾಡ್ತಿದಾನಲ್ಲ" ಎಂದುಕೊಳ್ಳುತ್ತ, " ಅದೇನಯ್ಯ, ಸುಮ್ಮನೆ ತಯ್ಯ ಥಕ ಅಂತ ಕುಣಿಯುವುದು ಅಂದರೆ? " ಎಂದು ವಿಕ್ರಮನಿಗೆ ಉಲ್ಟಾ ಪ್ರಶ್ನೆ ಇಡುತ್ತದೆ.
"ಅಂದರೆ, ಸುಮ್ಮನೆ ಯಾವುದೇ ರೀತಿಯ ಅರ್ಥವಿಲ್ಲದೆ, ತಾವೇನೋ ಸಾಧಿಸುತ್ತಿದ್ದೇವೆ ಎಂದು ತಿಳಿದು ಜೀವನ ಆರಂಭಿಸುವುದು, ಆಮೇಲೆ, ಅಯ್ಯೋ, ದೂರದ ಬೆಟ್ಟವೇ ನುಣ್ಣಗೆ, ತಣ್ಣಗೆ ಚೆನ್ನಾಗಿತ್ತಲ್ಲಪ್ಪ ಸಿವಾ ಎನ್ನುವ ಭಾವ ಆವರಿಸಿ ಕೊಂಡು ಬದುಕುವ ಪ್ರಾಣಿಗಳನ್ನು ತಯ್ಯ ಥಕ ಎಂದು ಕುಣಿಯುವವರು ಎಂದು ರೆಫರ್ ಮಾಡಿದೆ. ನಿನ್ನ ಸಂದೇಹ ಪರಿಹಾರ ಆದರೆ, ಈಗ ನನ್ನ ಸಂದೇಹ ಕ್ಕೆ ಉತ್ತರ ಕೊಡಬಹುದಲ್ಲವೇ" ಎನ್ನುತ್ತಾನೆ, ವಿಕ್ರಮಾದಿತ್ಯ.
ರಾಜನ ಮಾತು ಕೇಳಿ ಗಂಭೀರವಾದ ಬೇತಾಳವು, " ನನ್ನ ಅಭಿಪ್ರಾಯ ಅವರ ಮುಂದಿನ ಜೀವನಕ್ಕೆ ಯಾವುದೇ ರೀತಿ ಸಂಭಂದಿಸಿದ್ದಾಗಿರಲಿಲ್ಲ. ಮುಂದಿನ ಜೀವನ ಚೆನ್ನಾಗಿ ಇರಬಹುದು ಅಥವಾ ಇಲ್ಲದಿರಬಹುದು. ಆ ಪ್ರಾಬಬಿಲಿಟಿ ೫೦-೫೦ ಅಲ್ಲವೇ? ಅದನ್ನು ಆಗಲೇ ಹೇಳಲು ಹೇಗೆ ಸಾಧ್ಯ? ಕಲ್ಲನ್ನೇ ಜಾಸ್ತಿ ಹೊತ್ತು ನೋಡುತ್ತಾ ಕುಳಿತರೆ ಪ್ರೀತಿ ಆಗುತ್ತದೆ ಎಂದರೆ, ಈ ಪ್ರೀತಿ ಹುಟ್ಟುವ ಸಂದರ್ಭಗಳು ಸಾಧಾರಣವಾಗಿ ಈ ರೀತಿಯದಾಗಿರುತ್ತವೆ ಎಂದು ಹೇಳಿದನೇ ಹೊರತು, ಅದಕ್ಕೂ ಅವರ ಮುಂದಿನ ಜೀವನಕ್ಕೂ ಯಾವುದೇ ತಳಕು ಹಾಕಲಿಲ್ಲ. ಅದಾಗಿ, ನಿಜವಾದ ಪ್ರೀತಿ ಎಂದರೇನು ಎಂಬ ನಿನ್ನ ಪ್ರಶ್ನೆಗೆ, ಅದರ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದುಕೊಂಡು, ನನ್ನ ಪ್ರಶ್ನೆಗಳಿಗೆ ಬರೋಣವೇ?"ಎನ್ನುತ್ತಾ " ನಿನ್ನ ನೆನಪನ್ನು ರೆಫ್ರೆಶ್ ಮಾಡಲು ಇನ್ನೊಮ್ಮೆ ಕೇಳುತ್ತೇನೆ,
೧. ಅಪ್ಪನ ಆರೋಗ್ಯ ನಿಜವಾಗಲೂ ಶ್ಯಾಮಲೆಗೆ ಮುಖ್ಯವೇ? ಹಾಗಿದ್ದಲ್ಲಿ, ಅಪ್ಪನ ಮಾನಸಿಕ ಆರೋಗ್ಯಕ್ಕೆ ಕುಂದು ತರುವಾಗ ಈಕೆಯೇ ಯಾಕೆ ಮುಖ್ಯ ಪಾತ್ರ ವಹಿಸಲು ಸಾಧ್ಯವೇ?
೨. ತಂದೆಗೆ ಮಗಳ ಇಷ್ಟವೇ, ತನ್ನ ಇಷ್ಟವಾದಲ್ಲಿ, ಆರೋಗ್ಯವನ್ನು ಕಳೆದುಕೊಳ್ಳುವ ಮುನ್ನವೇ ಯಾಕೆ ಈ ನಿರ್ಣಯಕ್ಕೆ ಬರಲಿಲ್ಲ?
೩. ಇಲ್ಲಿ ಇಬ್ಬರದೂ ಸ್ವಾರ್ಥವು ಮಾತ್ರ ಗೋಚರವೇ? " ಎಂದು ಕೇಳಿತು.
ವಿಕ್ರಮಾದಿತ್ಯನು, "ಶ್ಯಾಮಲೆಗೆ ತನ್ನ ತಂದೆಯ ಆರೋಗ್ಯವು ಮುಖ್ಯವೇ ಆಗಿದೆ. ಆದರೆ, ಅದಕ್ಕಿಂತ ಹೆಚ್ಚಾಗಿ ತನ್ನ ಸ್ವಾರ್ಥವು ಮುಖ್ಯವಾಗಿದೆ. ಹಾಗಾಗಿ, ತನ್ನ ಸ್ವಾರ್ಥಕ್ಕಾಗಿ ತಂದೆಯ ಆರೋಗ್ಯ ಬಲಿಯಾದಾಗ ಆಕೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗಲಾರಳು. ಆದರೆ, ಸ್ವಾರ್ಥವು ಸಂತ್ರಪ್ತಿಯನ್ನು ಹೊಂದಿದ ನಂತರ, ತನ್ನಿಂದಾಗಿ ತನ್ನ ತಂದೆಯ ಆರೋಗ್ಯವು ಕ್ಷಯಿಸಿರುವುದು ಆಕೆಯ ಸುಪ್ತ ಮನಸ್ಸಿನ ಅರಿವಿಗೆ ಬಂದಿದೆ. ತಂದೆಯ ಆರೋಗ್ಯವೂ ಆಕೆಗೆ ಮುಖ್ಯವೇ ಆಗಿರುವ ಕಾರಣ, ತಾನೇ ತನ್ನ ತಂದೆಯನ್ನು ರೋಗ ಗ್ರಸ್ತನನ್ನಾಗಿ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವುದು ಆಕೆಗೆ ನಿಲುಕದ ಮಾತು. ಆದ್ದರಿಂದ, ಬೀದಿಯಲ್ಲಿ ಹೋಗುವ ದಾಸಣ್ಣನನ್ನೂ, ಪಕ್ಕದ ಮನೆಯ ದೊಡ್ಡ ಕಣ್ಣಿನವನನ್ನೂ, ಆಚೆಮನೆಯ ಗಟ್ಟಿ ಧ್ವನಿಯವನನ್ನೂ ಬಯ್ಯುತ್ತಾಳೆ. ಅದು, ಅವಳಿಗೆ, ತನ್ನ ತಂದೆಯ ಸ್ಥಿತಿಗೆ ತಾನು ಕಾರಣ ಅಲ್ಲ ಅನ್ನುವ pseudo-comfort ನ್ನು ಕೊಡುತ್ತದೆ. ಅದು ಅವಳಿಗೆ ಮಾನಸಿಕ ಸಮಾಧಾನವನ್ನು ಕೊಡುತ್ತದೆ ಎಂದು ಅನ್ನಿಸುತ್ತದೆ." ಎಂದು ಹೇಳುತ್ತಾನೆ.
"ನಿನ್ನ ಎರಡೆನೆಯ ಪ್ರಶ್ನೆಗೆ, ತನ್ನ ಆರೋಗ್ಯವು ಹದಗೆಡುವುದನ್ನು ತಂದೆಯು ಮೊದಲೇ ದೂರದೃಷ್ಟಿಯಿಂದ ನೋಡಬಲ್ಲವನಾಗಿ ಇದ್ದರೆ, ಮೊದಲೇ ಒಪ್ಪಿಕೊಳ್ಳುತ್ತಿದ್ದನು ಎಂದೆನಿಸುತ್ತದೆ!" ಎನ್ನುತ್ತಾನೆ.
"ಮೂರನೆಯ ಪ್ರಶ್ನೆಗೆ, ಸ್ವಾರ್ಥವಿಲ್ಲದವರು ಈ ಜಗತ್ತಿನಲ್ಲಿ ಯಾರಾದರೂ ಕಾಣಸಿಗಲು ಸಾಧ್ಯವೇ? ಬೇತಾಳವೇ? ಅದಿರಲಿ, ಆದರೆ, ನೀನು ಹೇಳಿದ ಕಥೆಯಲ್ಲಿ, ಶ್ಯಾಮಲೆಯ ಸ್ವಾರ್ಥವು ಆಕೆಯ ತಂದೆಯ ಸ್ವಾರ್ಥಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗೋಚರವಾಗುವುದು ನಿಜ. ಆದರೆ, ನಿನ್ನ ಕಥೆಯಲ್ಲಿ ಕೇವಲ ತಂದೆ ಮಗಳ ವಿಷಯವು ಮಾತ್ರ ಬಂದಿರುವುದರಿಂದ, ವಾದಿಮನ ವಿಷಯವು ಸರಿಯಾಗಿ ತಿಳಿಸದೇ ಇರುವುದರಿಂದ, ವಿಷಯದ ಗಹನತೆ ಕಡಿಮೆ ಆಗಿರಬಹುದು, ಬೇತಾಳವೇ!" ಎನ್ನುತ್ತಾ " ನಾನು ನಿನ್ನ ಎಲ್ಲಾ ಮಣ್ಣಾಂಗಟ್ಟಿ ಪ್ರಶ್ನೆಗಳಿಗೆ ನನಗೆ ತಿಳಿದಂತೆ ಉತ್ತರಿಸಿದ್ದೇನೆ, ಇನ್ನು ನೀನು ಜಾಸ್ತಿ ತಲೆ ತಿನ್ನದೇ, ಮರಹತ್ತುತ್ತಿರು, ಮತ್ತೆ ಎತ್ತಿ ಹಾಕಿಕೊಂಡು ಬರುವೆ" ಎನ್ನುತ್ತಾನೆ.
ಸುಂಯ್ ಎಂದು ಹಾರಿದ ಬೇತಾಳವು, "ಮತ್ತೆ ಬರುವೆಯಲ್ಲ" ಎನ್ನುತ್ತಾ ಮರದ ಮೇಲೇರಿತು!