ಐಪಿಎಲ್ ಫೇಸ್ ಬುಕ್ ಗೆ ಸ್ಥಳಾಂತರ : ಮೋಡಿ
ಭದ್ರತೆ ದೃಷ್ಟಿಯಿಂದ ಅಭೂತಪೂರ್ವ ಕ್ರಮ
ನವದೆಹಲಿ, ಫೆ.೧೮: ಮಾರ್ಚ್ ೧೨ರಿಂದ ಶುರುವಾಗಲಿರುವ ಐಪಿಎಲ್ ಮೂರನೆಯ ಆವೃತ್ತಿಯನ್ನು ಭದ್ರತೆ ಕಾರಣದಿಂದ ಫೇಸ್ ಬುಕ್ಕಿಗೆ ಸ್ಥಳಾಂತರಿಸಲು ಸರ್ವಸಮ್ಮತವಾಗಿ ತೀರ್ಮಾನಿಸಿರುವುದಾಗಿ ಐಪಿಎ ಲ್ ದೊರೆ ಅಲೆತ ಮೋಡಿ ತಿಳಿಸಿದ್ದಾರೆ.
ಇಲ್ಲಿಯ ಸ್ಥಳೀಯ ಸೈಬರ್ ಕೆಫೆಯಲ್ಲಿ ನೆರೆದ ಸುದ್ದಿಗಾರರೊಂದಿಗೆ ಮಾತನಾಡಿದ ಮೋಡಿ ಭಯೋತ್ಪಾದಕ ಸಂಘಟನೆ ಹುಜಿಯ ಮುಖಂಡನ ಬೆದರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರಕೈಗೊಳ್ಳಲಾಗಿದೆ ಎಂದರು. ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಹರ್ಕತುಲ್ ಜಿಹಾದಿ ಇಸ್ಲಾಮಿ(ಹುಜಿ)ಯ ಕಮ್ಯಾಂಡರ್ ಇಲಿಯಾಸ್ ಕಶ್ಮಿರಿ ಭಾರತದಲ್ಲಿ ನಡೆಯಲಿರುವ ಹಾಕಿ ಪಂದ್ಯಾವಳಿ, ಐಪಿಎಲ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದೇಶಿ ಆಟಗಾರರು ತಮ್ಮ ಜೀವಕ್ಕೆ ತಾವೇ ಜವಾಬ್ದಾರರು, ಪಾಕಿಸ್ತಾನದ ಆಟಗಾರರ ಜೀವಗಳಿಗೆ ಮಾತ್ರ ತಾವು ಜವಾಬ್ದಾರರು ಎಂದು ಬೆದರಿಕೆಯ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕ್ರೀಡಾ ಪಟುಗಳ ರಕ್ಷಣೆಯ ಬಗ್ಗೆ ಕಾಳಜಿ ವ್ಯಕ್ತವಾಯಿತು.
ಕಳೆದ ಆವೃತ್ತಿಯ ಐಪಿಎಲ್ ಪಂದ್ಯಾವಳಿಯನ್ನು ಭದ್ರತೆಯ ದೃಷ್ಟಿಯಿಂದ ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಿ ರಾಜಸ್ಥಾನದ ತಂಡದ ಸೋಲಿಗೆ ಕಾರಣವಾಗಿದ್ದ ಮೋಡಿ ಈ ಬಾರಿ ಯಾರಿಗೂ ಅನ್ಯಾಯವಾಗದ ಹಾಗೆ ಸರ್ವ ಸಮ್ಮತವಾದ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. “ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ನಮ್ಮೆಲ್ಲ ಶೇರುದಾರರ ಹಿತರಕ್ಷಣೆ ಮುಖ್ಯ. ಹಾಗಂತ ನಾವು ಆಟಗಾರರ ಜೀವವನ್ನು ಲೆಕ್ಕಿಸುವುದಿಲ್ಲ ಎಂದೇನಿಲ್ಲ.” ಎಂದಿದ್ದ ಮೋಡಿ ಕಡೆಗೆ ಐಪಿಎಲ್ ಪಂದ್ಯಾವಳಿಗಳನ್ನು ಫೇಸ್ ಬುಕ್ಕಿನಲ್ಲಿ ಆಯೋಜಿಸುವುದಕ್ಕೆ ಮುಂದಾಗಿದ್ದಾರೆ.
“ಫೇಸ್ ಬುಕ್ ವಿಶ್ವದಾದ್ಯಂತ ಸುರಕ್ಷಿತವಾದ ಕ್ರೀಡಾ ವಾತಾವರಣ ರೂಪಿಸುವಲ್ಲಿ ಯಶಸ್ವಿಯಾಗಿದೆ. ಲಕ್ಷಾಂತರ ಮಂದಿ ರೈತರು ಕ್ರೀಡಾಮನೋಭಾವದಿಂದ ಬೆಳೆ ತೆಗೆಯುವುದಕ್ಕೆ ನೆರವಾಗಿದೆ. ಒಂಚೂರು ರಕ್ತಪಾತವಿಲ್ಲದೆ ಮಾಫಿಯಾಗಳು ಯುದ್ಧ ನಡೆಸಿಕೊಳ್ಳಲು ಸಹಾಯ ಮಾಡಿದೆ. ಹಿಂಸಾಚಾರವಿಲ್ಲದೆ ವ್ಯಾಂಪೈರುಗಳು ಸಹಜೀವನ ನಡೆಸುವುದಕ್ಕೆ ಕಾರಣವಾಗಿದೆ. ಇಂತಹ ವ್ಯವಸ್ಥೆಯಲ್ಲಿ ಐಪಿಎಲ್ ಆಯೋಜಿಸಲು ಹರ್ಷವಾಗುತ್ತದೆ.”
ಮೋಡಿಯವರ ಈ ನಿರ್ಧಾರವನ್ನು ಸ್ವಾಗತಿಸಿರುವ ಫೇಸ್ ಬುಕ್ ನಿರ್ದೇಶಕ ಮಖೇಡಿ ಮ್ಯಾಥ್ಯುಸ್. “ಇದೊಂದು ಸ್ವಾಗತಾರ್ಹ ತೀರ್ಮಾನ. ಐಪಿಎಲ್ ಮೂರನೆಯ ಆವೃತ್ತಿಯನ್ನು ಫೇನ್ ಬುಕ್ಕಿನಲ್ಲಿ ಆಯೋಜಿಸಲು ನಮಗೂ ಹರ್ಷವಾಗುತ್ತದೆ. ಆಟಗಾರರು ತಮ್ಮ ತಮ್ಮ ದೇಶಗಳಲ್ಲೇ, ತಮ್ಮ ಮನೆಯ ಸೋಫಾಗಳಲ್ಲೇ ಕೂತು ಭಾಗವಹಿಸಬಹುದು. ವೀಕ್ಷಕರು ಕೂಡ ಆಫೀಸುಗಳಲ್ಲಿ, ಮನೆಗಳಲ್ಲಿ ಕೂತೇ ಪಂದ್ಯ ವೀಕ್ಷಿಸಬಹುದು. ಜೊತೆಗೆ ಕಪಿಸೇನೆಗಳ ಬೆದರಿಕೆ, ಭಯೋತ್ಪಾದಕರ ಬೆದರಿಕೆಗಳಿಗೂ ಅಂಜದೆ ವಿಶ್ವದಾದ್ಯಂತ ಎಲ್ಲರೂ ಪಾಲ್ಗೊಳ್ಳಬಹುದು.”
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಂತರ್ಜಾಲದ ಪ್ರಭಾವವನ್ನು ಅವಗಣಿಸಿ ಸಮಾಜ ಪ್ರಗತಿಯತ್ತ ಸಾಗಲು ಸಾಧ್ಯವಿಲ್ಲ ಎಂದಿರುವ ತಂತ್ರಜ್ಞ ತಂತ್ರೇಶ್ ಜಾದವ್ “ಬೆರಳು ಮುರಿತ, ತೊಡೆ ಸಂದು, ಭುಜದ ನೋವುಗಳಿಲ್ಲದೆ ಆಟಗಾರರು ಆರಾಮವಾಗಿ ಆಡಬಹುದಾದ ಅಂತರ್ಜಾಲದ ಐಪಿಎಲ್ ಆವೃತ್ತಿ ಕ್ರಾಂತಿಕಾರಿಯಾದ ಬೆಳವಣಿಗೆ. ಇದರಿಂದ ಆಟಗಾರರು ತಮ್ಮ ಆಟಕ್ಕೆ ಯಾವ ರೀತಿಯಿಂದಲೂ ಸಂಬಂಧಿಸದ ದೈಹಿಕ ಫಿಟ್‌ನೆಸ್ಗಾಗಿ ಶ್ರಮ ಪಡಬೇಕಿಲ್ಲ. ಅಲ್ಲದೆ ಕೂತಲ್ಲೇ ದೇಹವನ್ನು ಬಿಟ್ಟು ಸಂಚಾರ ಹೋಗಿ ಬರುತ್ತಿದ್ದ ಪೌರಾಣಿಕ ಕತೆಗಳನ್ನು ನಿಜ ಮಾಡಿ ತೋರಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಜೈ ಐಟಿ!”