ಮೈ ನೇಮ್ ಇಸ್ ಅಬ್ದುಲ್, ಬಟ್...

ಮೈ ನೇಮ್ ಇಸ್ ಅಬ್ದುಲ್, ಬಟ್...

ಬರಹ

my name is abdul, but i am not a fanatic. ಖಂಡಿತವಾಗಿಯೂ ಅಲ್ಲ. ಯಾರೋ ನನಗರಿವಿಲ್ಲದ ಜನ ಮಾಡಿದ, ಸತ್ಯವೋ ಮಿಥ್ಯೆಯೋ, ಸುಳ್ಳೋ ಪೊಳ್ಳೋ ಆಗಿರಬಹುದಾದ ಚಾರಿತ್ರಿಕ ಘಟನೆಗಳನ್ನು ಅಗಿದೂ ಅಗಿದೂ ಕರುಬಿ, ಕೊನೆಗೆ ಘಟನೆಗೆ ಸಂಬಂಧವಿಲ್ಲದ ಮುಗ್ಧ, ಅಮಾಯಕ ಜನರ ಜೀವ ಹಿಂಡುವುದು ನನ್ನ ಜಾಯಮಾನವಲ್ಲ, ಅಷ್ಟು ಮಾತ್ರವಲ್ಲ ನಾನು ಬೆಳೆದು ಬಂದ ಸಂಸ್ಕೃತಿಯೂ ನನಗದನ್ನು ಕಲಿಸಿಲ್ಲ. ಮಾತು ಮಾತಿಗೆ ಇಲ್ಲ್ಲಾ ಘಜನಿ, ಘೋರಿ, ಅಲ್ಲಾವುದ್ದೀನ್ ಖಿಲ್ಜಿ, ಅದು ಬಿಟ್ಟರೆ ಕಾಶ್ಮೀರಿ ಪಂಡಿತರ ಗೋಳು, ಇವುಗಳಾಚೆಯೂ ಪ್ರಪಂಚ ಇದೆ, ದಿನವೂ ಹೊಸ ಸೂರ್ಯ, ಚಂದಿರರು ಹುಟ್ಟುತ್ತಾರೆ ಎನ್ನುವ ಪರಿವೆ ಇಲ್ಲದೆ, ಅತ್ಯುತ್ಸಾಹದಿಂದ ಸಮುದಾಯಗಳ ನಡುವೆ ಕಂದಕ ನಿರ್ಮಿಸಲು ಹೊರಟ ಜನ ನಿಸರ್ಗದಿಂದ ಪಾಠ ಕಲಿತು ಸಹಬಾಳ್ವೆ ನಡೆಸಲು ಪ್ರಯತ್ನಿಸಬೇಕು.     


ತಮ್ಮ ಫರ್ಲಾಂಗ್ ಉದ್ದದ ಕಟ್ ಅಂಡ್ ಪೇಸ್ಟ್ ಪ್ರತಿಕ್ರಿಯಯಲ್ಲಿ ಒಬ್ಬರು ಒಂದಿಷ್ಟು ಘಟನೆಗಳ ಬಗ್ಗೆ ಬರೆದರು. ಪಾಪ ಅವರು ಕಟ್ ಅಂಡ್ ಪೇಸ್ಟ್ ಮಾಡುವ ತರಾತುರಿಯಲ್ಲಿ ಭಾರತದ ಉದ್ದಗಲಕ್ಕೂ ನಿರ್ದಿಷ್ಟ ಕೋಮಿನ ಜನರನ್ನು ಗುರಿಯಾಗಿಸಿಕೊಂಡು ನಡೆದ  ಗಲಭೆಗಳ ಬಗ್ಗೆ ಮೌನ ತಾಳಿದ್ದು ಸೋಜಿಗದ ಸಂಗತಿ. ಭಿವಂಡಿ, ಸೀತಾಮಡಿ, ಅಲಿಗಡ, ಮೊರಾದಾಬಾದ್, ಹೈದರಾಬಾದ್, ಸೂರತ್, ಮುಂಬೈ, ಒಂದೇ ಎರಡೇ? ಗಲಭೆ ಅಥವಾ ಶೋಷಣೆ ನಡೆಯದ ಒಂದು ಚದರ ಮೈಲಿನ ಸ್ಥಳ ತೋರಿಸಬಹುದೇ ತಾವು? ಈಗ ಅದಕ್ಕೆಲ್ಲಾ ಹಿಂದೂ ಸೋದರರನ್ನು ಕಾರಣವಾಗಿಸಿ ಹಗೆ ಸಾಧಿಸಲು ಹೊರಟರೆ ತಿಳಿಗೇಡಿತನವಲ್ಲದೆ ಮತ್ತೇನೆಂದು ಕರೆಯಲು ಸಾಧ್ಯ?


ಇನ್ನೊಬ್ಬ ಮಿತ್ರರು ರಶ್ದಿ, ತಸ್ನೀಮ ನಸ್ರೀನ್ ಎಂದು ಏನೇನೋ ಕನವರಿಸಿದರು. ಅವರಿಗೆ ಉತ್ತರ ಪೋಲಂಕಿ ರಾಮ ಮೂರ್ತಿ, ಹುಸೇನ್ ರವರೊಂದಿಗೆ ನಾವು ನಡೆದುಕೊಂಡ ಘಟನೆಯಲ್ಲಿ ಸಿಕ್ಕೀತು.


  


ಅದ್ಭುತ ಚಿತ್ರ ಕೊಟ್ಟು ಭಾರತೀಯರ ಮಾತ್ರವಲ್ಲ ವಿಶ್ವದ ಜನರ ಮೆಚ್ಚುಗೆ, ಪ್ರಶಂಸೆಗೆ ಕಾರಣನಾದ  ಶಾರುಕ್ ನಿಗೆ ನಾವೆಲಾ ಒಂದು ಮನವಿ ಸಲ್ಲಿಸಬೇಕು. ನೀನು ಕೋಟಿಗಟ್ಟಲೆ ಜನ ಇಷ್ಟ ಪಡುವ, ಆನಂದಿಸುವ, ಮನಸ್ಸುಗಳನ್ನು ಬೆಸೆಯುವ ಚಿತ್ರ ಮಾಡಬೇಡ, ಬದಲಿಗೆ ನಮ್ಮ ದೇಶದ ೩ ಡಜನ್ ಜನರಿಗೆ ಅವರ ಅಭಿರುಚಿಗೆ ತಕ್ಕುದಾದ ಚಿತ್ರಗಳನ್ನು ಮಾಡಬೇಕು.. ಹೇಗೂ ಕೋಟಿಗಟ್ಟಲೆ ಸಂಪಾದಿಸಿದ್ದಾನಲ್ಲ, ಬೆರಳೆಣಿಕೆಯ ಜನರಿಗಾಗಿ ಕೋಟಿ ಸುರಿದು ಒಂದು ಚಿತ್ರ ಮಾಡಲಿ ಖಾನ್.   


ಇಸ್ಲಾಂ ಪರಧರ್ಮ ಸಹಿಷ್ಣು ಎಂದು ಯಹೂದ್ಯರು ಮುಸ್ಲಿಮರ ಆಶ್ರಯ ಕೇಳಿದಾಗಲೇ ವಿಶ್ವಕ್ಕೆ ವ್ಯಕ್ತವಾಯಿತು. ೭೦೦ ವರ್ಷ  ಸ್ಪೇನ್ ದೇಶದಲ್ಲಿ ಮುಸ್ಲಿಂ ಆಳ್ವಿಕೆ ಕೊನೆಗೊಂಡಾಗ ಮುಸ್ಲಿಮರ ಹಿಂದೆಯೇ ಗಂಟು ಮೂಟೆ ಕಟ್ಟಿಕೊಂಡು ಯಹೂದ್ಯರು ಸ್ಪೇನ್ ದೇಶವನ್ನು ತ್ಯಜಿಸಿದರು. ಏಸು ಕ್ರಿಸ್ತರ ಕೊಲೆಗೆ ಯಹೂದ್ಯರು ಕಾರಣ ಎಂದು ಅವರನ್ನು ಸಿಕ್ಕ ಸಿಕ್ಕಲ್ಲಿ ಕ್ರೈಸ್ತರು ಬೇಟೆಯಾಡಿದಾಗ ಅವರಿಗೆ ಆಶ್ರಯ ನೀಡಿದ್ದು ಇರಾನ್, ತುರ್ಕಿ, ಯೆಮೆನ್, ಮೊರಾಕೊ ಗಳಂಥ ಮುಸ್ಲಿಂ ದೇಶಗಳು.


ಇಸ್ಲಾಂ ಧರ್ಮದ ಪ್ರವಾದಿಯ ಬಗ್ಗೆ ಮೈಸೂರು ವಿಶ್ವ ವಿದ್ಯಾಲಯದ Prof. ರಾಮಕೃಷ್ಣ ರಾವ್ ಬಹಳ ಸೊಗಸಾಗಿ ಬರೆದಿದ್ದಾರೆ. ಅದನ್ನು ಸ್ವಲ್ಪ ಓದಿದರೆ ಜ್ಞಾನ ವೃದ್ಧಿಗೆ ಸಹಾಯವಾಗಬಹುದು.  


ಕೊನೆಯದಾಗಿ ಶತಮಾನಗಳಿಂದ ನಿರ್ದಿಷ್ಟ ಪಂಗಡಗಳಿಗೆ, ವರ್ಗಗಳಿಗೆ ಸೇರಿದ ಕೋಟ್ಯಂತರ ಜನರನ್ನು ಸವರ್ಣೀಯರು ಸಮಾನರನ್ನಾಗಿ ಕಾಣಲು ವಿಫಲರಾಗಿ ಆ ಜನ ಇಂದಿಗೂ ಕೀಳರಿಮೆಯಿಂದ ಬಳಲುತ್ತಿರುವುದನ್ನು(ಮಾನಸಿಕ ಭಯೋತ್ಪಾದನೆ)  V.T. ರಾಜಶೇಖರ್ ಅವರ ಬಾಯಲ್ಲಿ ಕೇಳಬೇಕು.   


ಮೇಲಿನ ವಿಷಯ ಬರೆಯಲು, ಪ್ರಸ್ತಾಪಿಸಲು ಕಾರಣ ಯಾರೂ ಸಭ್ಯಸ್ಥರಲ್ಲ, ಅವರವರ ಕೈಯ್ಯಲ್ಲಿ ಸಾಧ್ಯವಾಷ್ಟೂ ತಪ್ಪು ನೆಪ್ಪುಗಳು ನಡೆದಿವೆ ಎಂದು ತೋರಿಸಲು ಮಾತ್ರ.


ಇದುವರೆಗೂ ನಮ್ಮ ಭಾರತೀಯ ಸಂಸ್ಕೃತಿಯನ್ನು ಕೊಂಡಾಡುತ್ತಿದ್ದ  ವಿಶ್ವ ನಮ್ಮೆಡೆ ಅನುಮಾನದಿಂದ ನೋಡಲು ತೊಡಗಿದೆ. ಅದಕ್ಕೆ ಕಾರಣ ಒರಿಸ್ಸಾದಲ್ಲಿ ನಡೆದ ಕ್ರೈಸ್ತ ವಿರೋಧಿ ಗಲಭೆಗಳನ್ನು ತನಿಖೆ ಮಾಡಲು ಅಮೆರಿಕೆ ಮತ್ತು ಐರೊಪ್ಯ ರಾಷ್ಟ್ರಗಳಿಂದ ಜನ ಬಂದಿದ್ದು. ಇವರನ್ನು ಒಳಗೆ ಬಿಟ್ಟುಕೊಂಡಿದ್ದು ನಾವು ಮಾಡಿದ ತಪ್ಪು. ಮುಸ್ಲಿಮರ ವಿರುದ್ಧ ಇಷ್ಟೆಲ್ಲಾ ಗಲಭೆಗಳು ನಡೆದರೂ ಯಾವ ಮುಸ್ಲಿಂ ಅಥವಾ ಅರಬ್ ರಾಷ್ಟ್ರಗಳಿಂದಾಗಲಿ ತನಿಖಾ ತಂಡ ನಮ್ಮ ಧರೆಯ ಮೇಲೆ ಇಳಿಯಲಿಲ್ಲ. ಅದಕ್ಕೆ ಭಾರತೀಯ ಮುಸ್ಲಿಮರು ಆಸ್ಪದವನ್ನೂ ಕೊಡುವುದಿಲ್ಲ.  ಇದು ಸೋದರ ಮಧ್ಯೆಯ ವಿವಾದ. ಅದನ್ನು ನಮ್ಮ ನಮ್ಮಲ್ಲೇ ಚರ್ಚಿಸಿ, ಸಂವಾದ ನಡೆಸಿ ಪರಿಹಾರ ಕಂಡುಕೊಳ್ಳುತ್ತೇವೆ.


ಬನ್ನಿ, ಕಂದಕ ತೋಡುವ ಕೆಲಸ ಅಲ್ಲಿಗೇ ನಿಲ್ಲಿಸಿ ಸುಂದರ ನಾಡೊಂದನ್ನು ಕಟ್ಟೋಣ.