ಬ್ರಮ್ಹಗಿರಿಯ ಚಾರಣ - 1

ಬ್ರಮ್ಹಗಿರಿಯ ಚಾರಣ - 1

೨ ವರ್ಷಗಳ ಹಿಂದೆ ಬ್ರಮ್ಹಗಿರಿಗೆ ಹೋಗ್ಬೇಕು ಅಂತ ಅರ್ಧಕ್ಕೆ  ಹೋಗಿ ವಾಪಸ್ ಬಂದಿದ್ದ ನಮಗೆ ಮುಂದೊಂದು ದಿನ ಹೇಗಾದ್ರು ಮಾಡಿ ತುದಿ ತಲುಪ್ಲೇಬೇಕು ಅಂತ ನಿರ್ಧಾರ ಮಾಡಿದ್ವಿ. ಪಕ್ಯ, ವೆಂಕ ಮನಸ್ಸು ಮಾಡಿ ಎಲ್ಲ ಬುಕ್ ಮಾಡಿ ಹೊರಡೋದಕ್ಕೆ ಸಿದ್ಧವಾದೆವು. ಆದ್ರೆ ಈ ಟ್ರಿಪ್ನಲ್ಲಿ ನಮ್ಮ್ಹುಡುಗ್ರು ಕೈ ಕೊಟ್ಟಿದ್ರು - >


 (ಮೀಟರ್ - ಶಿವರಾತ್ರಿ ಜಾತ್ರೆಗೆ ಊರಿಗೆ ಹೋಗ್ಬೇಕು ಅಂತ ಡ್ರಾಪ್ ಆದ, ಜಾತ್ರೆಯಲ್ಲಿ ಯಾರಾದ್ರು ಒಳ್ಳೆ ಹುಡ್ಗಿ ಸಿಗ್ತಾಳೆ ಅಂತ ಪ್ಲಾನ್ ಹಾಕ್ದ್ದ ಅಂತ ಕಾಣತ್ತೆ.

ಉಲ್ಲ - ಶಿವರಾತ್ರಿಯಲ್ಲಿ ಜಾಗರಣೆ ಇರ್ಬೇಕು ಅಂದ್ಕೊಂಡಿದ್ದ.

ಶೆಟ್ಟಿ - ಹೋಗಿರೋ ಜಾಗನೇ ಏನು ಹೋಗದು ಬರಲ್ಲ ಅಂದಿದ್ದ, ಪಾಪ ಮಿಸ್ ಮಾಡ್ಕೊಂಡ.


ಜಯ, ಸೌಜ ಮತ್ತೆ ರಶ್ಮಿ - ಕಂಪನಿ ಪಾರ್ಟಿ ಅಂತ ಇಲ್ಲೇ ಉಳ್ ಕೊಂಡ್ರು, ಜಯ ಬರ್ದೇ ಇರೋದು ನೋಡಿ ನನ್ನ ವೆಂಕನ ಕ್ಯಾಮೆರಾಗಳು ಕುಣಿದಾಡುತಿದ್ವು).

ಅಂತೂ ಪಕ್ಯ ನಾವೆಲ್ಲಾ ಸೇರಿ 7 ಜನನ್ನ ಹೊರಡಿಸಿದ್ದ, ಆದ್ರೆ ಕೊನೆ ದಿನ ಅವನಿಗೆ ಕಾಲ್ ಮಾಡಿ ಏನಾದ್ರೂ ತರೋದು ಇದ್ರೆ ಹೇಳಪ್ಪ ಅಂತ ಕೇಳೋಣ ಅನ್ನೋವಷ್ಟರಲ್ಲಿ ೩ ಜನ ಕೈ ಎತ್ತಿದ್ದಾರೆ ಕಣೋ ಅಂದ.
ಸರಿ ಆಯ್ತು ಬಿಡಪ್ಪ, ನಾವು 4 ಜನ ಆಗಿದ್ದಾಗಲಿ ನಡಿ ಹೋಗೋಣ, ವೆಂಕನಿಗೆ ಹೇಳಿ ಮಿಕ್ಕಿದ್ದು ಏನೇನು ತಗೋಬೇಕು ತಗೋ ಬಾ ಅಂದರಾಯ್ತು ಅಂದು ಕೆಲಸ ಮುಗಿಸಿಕೊಂಡು ಲಗೇಜ್ ಪ್ಯಾಕ್ ಮಾಡೋದಕ್ಕೆ ಮನೆ ಬಸ್ ಹತ್ತಿದೆ.

 ಎಲ್ಲ ಪ್ಯಾಕ್ ಮಾಡ್ಕೊಂಡು ವೆಂಕನ ರೂಮಿಗೆ ಹೋಗಿ ಅಲ್ಲಿಂದ ಆಟೋದಲ್ಲಿ ಮಜೆಸ್ಟಿಕ್ಗೆ ಹೋದ್ವಿ. ಸ್ವಲ್ಪ ಹೊತ್ತಾದ ಮೇಲೆ ಪಕ್ಯ ಮತ್ತೆ ಅವನ ಫ್ರೆಂಡ್ ರಂಜನ್ (ಡುಮ್ಮ - ಪಕ್ಯ ಕರೆಯೋದು) ಬಂದ್ರು. 11.30ರ ವೋಲ್ವೋಗೆ ಹತ್ತು ಕುಳಿತ್ವಿ, ಎರಡು ದಿನ ಬೆಂಗಳೂರಿಗೆ  ಬರಲ್ಲ ಅಂತ ಸಲಾಂ ಹೊಡೆದು ಡ್ರೈವರ್ ಕೊಟ್ಟ ರಗ್ಗನ್ನು ಹೊದ್ಕೊಂಡು ನಿದ್ರಾದೇವಿಗೆ ಶರಣಾದೆವು.

ಬಸ್ಸು ಮುಂಜಾನೆ 4.30ರ ಸುಮಾರಿಗೆ ಗೋಣಿಕೊಪ್ಪಲಿನಲ್ಲಿ  ನಮ್ಮನ್ನು ಕೆಡವಿ ಅದರ ಹಾದಿ ಹಿಡಿಯಿತು. ಗೋಣಿಕೊಪ್ಪಲಿನಿಂದ ಶ್ರೀ ಮಂಗಲಕ್ಕೆ 5.45ಕ್ಕೆ ಮೊದಲ ಬಸ್, ಅಲ್ಲಿವರೆಗೆ ನಾವು ಗೋಣಿಕೊಪ್ಪಲಿನಲ್ಲೆ ಕಾಲ ದೂಡಬೇಕಿತ್ತು ಜೊತೆಗೆ ಬೆಳಗಿನ ಕೆಲಸಗಳನ್ನು!.
ಅರ್ಧ ಗಂಟೆ ಹರಟೆ ಹೊಡ್ಕೊಂಡು ಕೂತವರು ಪಕ್ಯನಿಗೆ ಹೋಗಿ ಯಾವುದಾದರು ಲಾಡ್ಜ್ ಇದೆಯಾ ವಿಚಾರಿಸ್ಕೊಬಾ ಅಂದ್ವಿ.

ಪಕ್ಯ ಹೋಗಿ 10 ನಿಮಿಷ ಆದ್ಮೇಲೆ ಬಂದವನು, 1 ಲಾಡ್ಜ್ ಇದೆ ಆದ್ರೆ 2 ಬೆಡ್ರೂಮ್ ಅಂತೆ 600 ರೂ ಹೇಳ್ದಾ ಅಂದ.
ವೆಂಕ ಇದ್ದವನು 'ಲೇ ಹೆಗ್ನ, ನಾವೇನು 24 ಗಂಟೆ ಲಾಡ್ಜ್ನಲ್ಲಿರಲ್ಲ ಒಂದೆರಡು ಗಂಟೆಗೆ ಮಾತ್ರ ಅಂತ ಕೇಳಬೇಕಿತ್ತು'.
ನೀನೆ ಹೋಗಿ ಕೆಳ್ಕೊಬಾರಪ್ಪ ಅಂದ ಪಕ್ಯ.
ಬಾ ಅಂತ ಪಕ್ಯನ್ನ ವೆಂಕ ಎಳ್ಕೊಂಡು ಹೋದ.
ಹೋಗಿ 10 ನಿಮಿಷದೊಳಗೆ ಶ್ರೀ ಮಂಗಲಕ್ಕೆ ಹೋಗೋ ಬಸ್ ಬಂತು. ನಾನು ವೆಂಕನಿಗೆ ಕಾಲ್ ಮಾಡಿ 'ಲೇ, ಬಸ್ ಬಂತು ಕಣ್ರೋ' ಅಂದೆ.
ಪಾಪ ಟಾಯ್ಲೆಟ್ನಲ್ಲಿದ್ದ ಅನ್ಸತ್ತೆ 'ಹೋಗ್ಲಿ ಬಿಡು ಇನ್ನೊಂದು ಬಸ್ ಕ್ಯಾಚ್ ಮಾಡಣ' ಅಂದ.

10 ನಿಮಿಷ ಆದ್ಮೇಲೆ ಇಬ್ರೂ ಬಂದ್ರು.
ಅಬ್ಬ ಈಗಂತೂ ಫುಲ್ ಆರಾಮ್ ಅಂದ್ರು ಇಬ್ರು.

'ಏನ್ರಪ್ಪ ಲಾಡ್ಜ್ ಸಿಕ್ತಾ? ಹಾಗಿದ್ರೆ' ರಂಜನ್ ಕೇಳ್ದ.

ಇಲ್ಲ ಅಂದ ವೆಂಕ.

ಮತ್ತೆ ಹೆಂಗೆ ಫುಲ್ ಆರಾಮ್??


'ಆ ಲಾಡ್ಜ್ ಹತ್ರ ಹೋದ್ವಿ 500 ರೂ ಕಡಿಮೆ ಬರ್ಲಿಲ್ಲ, ಅಷ್ಟು ಕೊಡೋದು ವೇಸ್ಟ್ ಅಂದ್ಕೊಂಡು ಹೊರಡೋದಕ್ಕೆ ರೆಡಿಯಾದ್ವಿ. ರಿಸಪ್ಶನಿಷ್ಟ್ ಮಲಗೋಕೆ ರೆಡಿಯಾಗ್ತಿದ್ದ, ಅವ್ನು ಮಲಗಿದ್ದು ಕನ್ಫರ್ಮ್ ಆದ್ಮೇಲೆ , ಪಕ್ಕದಲ್ಲೇ ಟಾಯ್ಲೆಟ್ ಇತ್ತು ಹೋಗಿ ಮುಗಿಸ್ಕೊಂಡು ಬಂದ್ವಿ' ಅಂದ ವೆಂಕ.

'ನನ್ಮಕ್ಳ ಇದೇ ಕೆಲಸ ಮಾಡಿ, ನಮ್ಮ ಕಥೆ ಈಗ ಹಾಗಿದ್ರೆ' ಅಂದೆ.

'ಆ ರೋಡ್ ಡೆಡ್ ಎಂಡ್ನಲ್ಲಿ ಲಾಡ್ಜ್ ಇದೆ ಫಸ್ಟ್ ಫ್ಲೋರ್ನಲ್ಲಿ, ಹೋಗಿ ನಿಮ್ಮ ಲಕ್ ಟ್ರೈ ಮಾಡಿ'.

ಸರಿನಪ್ಪ ಅಂದ್ಕೊಂಡು ನಾನು ಹೊರಟೆ. ಹೋಗಿ ನೋಡಿದೆ ಇನ್ನೂ ಪುಣ್ಯಾತ್ಮ ಸುಖ ನಿದ್ರೆಯಲ್ಲಿದ್ದ. ನಿಂಗೆ ದೇವ್ರು ಇದೇ ರೀತಿ ಸುಖ ನಿದ್ರೆ ಕೊಡಲಿ ನಾನು ವಾಪಸ್ ಹೋಗೋವರೆಗೂ ಅಂದ್ಕೊಂಡು ನನ್ನ ಕೆಲಸಕ್ಕೆ ಹೋದೆ. ಅಕಸ್ಮಾತ್ ವಾಪಸ್ ಹೋಗೋವಾಗ ಸಿಕ್ಕಿದ್ರೆ ಏನು ಹೇಳೋದು ಅಂತ ಮನಸ್ನಲ್ಲೇ ಸ್ಕೆಚ್ ಹಾಕೊಂಡು ಪ್ರಕ್ರ್ರುತಿ ಕರೆ ಮುಗಿಸಿ ವಾಪಸ್ ಹೊರಟೆ, ಸದ್ಯ ಅವ್ನು ಎದ್ದಿರಲಿಲ್ಲ.

ಆಗ್ಲೇ ೬.೩೦ ಆಗಿತ್ತು, ಹೊಟ್ಟೆ ಬೇರೆ ಚುರುಗುಡ್ತಿತ್ತು. ಆಗ ತಾನೇ ಒಂದು ಹೋಟೆಲ್ ಓಪನ್ ಆಗಿತ್ತು, ಎಲ್ಲರೂ ಅಲ್ಲಿಗೆ ಹೆಜ್ಜೆ ಹಾಕಿದೆವು. ಅಲ್ಲೇ ಇದ್ದ ಸಿಂಕಲ್ಲೇ ಬ್ರಶ್ ಮಾಡಿ ಇಡ್ಲಿ,ಬನ್, ಚೌ ಚೌ ಬಾತ್ ಆರ್ಡರ್ ಮಾಡಿದೆವು. ಬೆಟ್ಟ ಹತ್ತಬೇಕಲ್ಲ ಬೆಳಗ್ಗೆ ಜಾಸ್ತಿ ತಿಂದರೆ ಚೆನ್ನಾಗಿ ಹತ್ತಬಹುದು ಅಂತ ಸರಿಯಾಗಿ ತಿಂದ್ವಿ.

ತಿಂಡಿ ತಿಂದು ಹೊರಗೆ ಬಂದ ಕೂಡಲೇ ಬಸ್ ಸ್ಟ್ಯಾಂಡ್ನಲ್ಲಿ  ಶ್ರೀ ಮಂಗಲ, ಇರ್ಪು, ಕುಟ್ಟ ಅಂತ ಕೂಗ್ತಿದ್ರು. 7.15ರ ಸುಮಾರಿಗೆ ಶ್ರೀ ಮಂಗಲ ಬಸ್ ಹತ್ತಿದ್ವಿ. ವೆಂಕ, ಪಕ್ಯ, ರಂಜನ್ ಬಸ್ ಹತ್ತಿದ ತಕ್ಷಣವೇ ಪಾಚ್ಕೊಂಡ್ರು. ಬಸ್ ಶ್ರೀ ಮಂಗಲ ಬರೋ ಹೊತ್ತಿಗೆ 8.15 ಆಗಿತ್ತು. ಇಳಿದವರೇ ಟ್ರೆಕ್ ಮಾಡೋದಕ್ಕೆ ಅನುಮತಿ ಪಡೆಯೋದಕ್ಕೆ ಫಾರೆಸ್ಟ್ ಆಫೀಸಿಗೆ ಹೋದ್ವಿ.
ಅಲ್ಲಿ 8.15 ಆದ್ರೂ ಹೊರಗಡೆ ಲೈಟ್ ಹಾಗೇ ಉರೀತಿತ್ತು, ಅವ್ರು ಬರೋದು ೯ ಅಂತ ಗೊತ್ತಾಯ್ತು. ಅಲ್ಲೇ ಸ್ವಿಚ್ ಇದೆಯೇನೋ ಅಂತ ನೋಡಿದ್ವಿ, ಉಹುಂ, ಇರ್ಲಿಲ್ಲ. ನಾನು ಪಕ್ಯನಿಗೆ ಹೇಳ್ದೆ, ಅವನು ವೆಂಕನ ಸಲಹೆಯ ಮೇರೆಗೆ ಮೈನ್ ಸ್ವಿಚ್ ಆರಿಸಿ ಬಂದ.


ಇನ್ನೂ ಮುಕ್ಕಾಲು ಗಂಟೆ ಏನು ಮಾಡೋದು ಅಂದ್ಕೊಂಡು ಶ್ರೀ ಮಂಗಲ ಪೇಟೆ ಸುತ್ತೋಕೆ ೩ ಜನ ಹೊರಟ್ವಿ, ರಂಜನ್ ಅಲ್ಲೇ ಬಿಟ್ಟು.
ಪೇಟೆ ಸುತ್ತಾಡಿ ೧ ಲೋಟ ಕಾಫಿ ಕುಡಿದು ವಾಪಸ್ ಹೋದ್ವಿ, ಆಗ ತಾನೇ ಬಂದಿದ್ರು, ಪರ್ಮಿಶನ್ ತಗೊಂಡಾದ್ಮೇಲೆ  ಆ ವಯ್ಯಂಗೆ ಹೊರಗಡೆ ಲೈಟ್ ಉರೀತಿತ್ತು ಮೈನ್ ಸ್ವಿಚ್ ಆರಿಸಿದ್ವಿ ಈಗ ಆನ್ ಮಾಡ್ತೀವಿ , ಅದ್ರ ಸ್ವಿಚ್ ಆಫ್ ಮಾಡಿ ಅಂದ್ವಿ, ಅವ್ನು ಹಂಗೆ ಮುಖ ನೋಡಿ ಆಗ್ಲಿ ಸಾರ್ ಅಂದ.

ಶ್ರೀ ಮಂಗಲದಿಂದ ಇರ್ಪುಗೆ ಬಸ್ನಲ್ಲಿ ಹೋಗ್ಬೇಕಿತ್ತು, ಅಕ್ಕಿ ದಿನಸಿ ಸಾಮಾನು ತಗೊಂಡು ಬಸ್ ಹತ್ತಿದೆವು. ಇನ್ನೇನು ಬಸ್ ಹೊರಡ್ಬೇಕು ಅಷ್ಟರಲ್ಲಿ ಇನ್ನೊಂದು ಟ್ರೆಕ್ ಟೀಮ್ ಬಂತು. ಒಬ್ಬನ ಕೈಲಿ ಪ್ಲಾಸ್ಟಿಕ್ ತಟ್ಟೆ ಇತ್ತು. ನಮಗೆ ಅನುಮಾನ ಬಂದು, ಪಕ್ಯ ತಟ್ಟೆ ತೆಗೆದುಕೊಂಡಿದೀಯೇನೋ ಅಂದೆ, ಅವ್ನು ಇಲ್ಲ ಅಂತ ಮುಖ ಅಲ್ಲಾಡಿಸಿದ. 'ಅದ್ಯಾವ ಸೀಮೆ ಟ್ರಿಪ್ ಆರ್ಗನೈಸ್ ಮಾಡ್ತೀರೋ, ನಿನ್ನ ಜನ್ಮಕ್ಕೆ ಒಂದಿಷ್ಟು, ಹೋಗಿ ತಗೋ ಬಾ' ವೆಂಕ ಕ್ಯಾಕರಿಸಿ ಉಗಿತಿದ್ದ.
ಪಕ್ಯ ಓಡಿ ಹೋಗಿ ತಂದ.

ಬಸ್ ಇರ್ಪು ತಲುಪುವ ಹೊತ್ತಿಗೆ 10.30 ಗಂಟೆ ಆಗಿತ್ತು. ಜಾತ್ರೆ ನಡೀತಿತ್ತು ಶಿವರಾತ್ರಿ ಹಬ್ಬದ ಪ್ರಯುಕ್ತ. ಅಲ್ಲಿಂದ ೩ ಜನ ಗೈಡ್ ಒಟ್ಟಿಗೆ ಹೊರಟ್ವಿ, ಒಟ್ಟು 3 ಟೀಮ್ (18 ಜನ) ನಮ್ದು ಸೇರಿ. ಶುರುವಾಯ್ತು ಅಲ್ಲಿಂದ ನಮ್ಮ ಚಾರಣ......

ಮುಂದುವರೆಯುವುದು........

Rating
No votes yet

Comments