ಮನಸು ಕದ್ದ ಹಸುಳೆ ಮೇಲೆ ದರೋಡೆ ಕೇಸು!
(ಬೊಗಳೂರು ಪುಟಾಣಿ ಬ್ಯುರೋದಿಂದ)
ಬೊಗಳೂರು, ನ.3- ಇದು ಹೈ-ಕೆಟ್ ಯುಗವಾಗಿರುವುದರಿಂದ ಪುಟ್ಟು ಪುಟಾಣಿಗಳು ಹುಟ್ಟುವ ಮೊದಲೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಸಾಧ್ಯತೆಗಳನ್ನು ಬೊಗಳೂರು ಬೊಗಳೆ ಬ್ಯುರೋ ಈ ರಾಬರಿ ದೇವಿ ಆಳಿದ್ದ ಬಿಹಾರದಲ್ಲಿ ಮೂರು ತಿಂಗಳ ಮಗು ಬರೋಬರಿ ರಾಬರಿ ಮಾಡಿದ್ದು ಹೌದು ಎಂಬುದು ಸಾಬೀತಾಗಿದೆ.
ಈ ಪುಟ್ಟ ಮಗು ಪುಟ್ಟ ಪುಟ್ಟ ಹೆಜ್ಜೆಯಿಡುತ್ತಲೇ ಆ ಬಸ್ಸಿನಲ್ಲಿದ್ದವರ ಎಲ್ಲ ಪ್ರಯಾಣಿಕರನ್ನು ಸಂಪೂರ್ಣವಾಗಿ ಮೈಮರೆಯುವಂತೆ ಮಾಡಿತ್ತು ಎಂಬುದು ತಿಳಿದುಬಂದಿದೆ. ಇದಲ್ಲದೆ ಅದರ ಬಳಿ ಹರಿತವಾದ ಆಯುಧವೊಂದಿತ್ತು. ಅದು ಕುಡಿನೋಟದಿಂದ ಕಣ್ಣು ಪಿಳಿ ಪಿಳಿ ಮಾಡಿತೆಂದರೆ, ಅಲ್ಲಿದ್ದವರೆಲ್ಲರ ಹೃದಯ ಚುಚ್ಚಿದಂತಾಗಿ ಬೋಲ್ಡಾಗಿ ಬಿಡುತ್ತಿದ್ದರು. ಅವರೆಲ್ಲಾ ಭಾವಪರವಶರಾದಾಗ ಈ ಮಗು ಅವರ ಹೃದಯದಲ್ಲಿದ್ದ ಚಿನ್ನಾ, ರನ್ನಾ, ಮುದ್ದು... ಬಂಗಾರಾ... ಎಲ್ಲವನ್ನೂ ಕದಿಯುತ್ತಿತ್ತು ಎಂದು ಬ್ಯುರೋ ಕಂಡುಕೊಂಡಿದೆ.
ತನ್ನ ಮುದ್ದು ಮುಖಗಳನ್ನು ತೋರಿಸುತ್ತಲೇ ಹಲವಾರು ಮನಸ್ಸುಗಳನ್ನು ದರೋಡೆ ಮಾಡುವ ಈ ಮಗುವಿನ ಮೇಲೆ ಕೇಸು ಜಡಿಯಲಾಗಿದ್ದು, ಆ ಮಗು ಕದ್ದು ತನ್ನ ಮುಗ್ಧ ಮನಸ್ಸಿನಲ್ಲಿ ಶೇಖರಿಸಿಟ್ಟುಕೊಂಡ ಪ್ರೀತಿ, ವಾತ್ಸಲ್ಯವೆಲ್ಲವನ್ನೂ ಹಿಂತಿರುಗಿಸುವಂತೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಾಗಾಗಿ... ಬಾಲ ಲೀಲೆಗಳಿಂದ ದಿನ ಕಳೆಯಲು ನೆರವಾಗುತ್ತಿದ್ದ ನಗುಮುಖದ ಪುಟಾಣಿ ಮಗು ಕಳೆದು ಹೋಗಿದೆಯೇ? ಮೊದಲು ಪೊಲೀಸ್ ಠಾಣೆಯಲ್ಲಿ ಹುಡುಕಿದರೆ ಸಿಗಬಹುದು ಎಂದು ಅಮೂಲ್ಯ ಸಲಹೆ ನೀಡಲಾಗುತ್ತದೆ.
ಅಲ್ಲಾ..., ಪುಟ್ಟ ಮಕ್ಕಳೂಂತ ಅವರಿಗಾಗಿ ನಮ್ಮ ಬ್ಯುರೋ ಏನೇನೆಲ್ಲಾ ಮಾಡಿ ಸ್ಪರ್ಧೆ ಇತ್ಯಾದಿ ಏರ್ಪಡಿಸಿದರೆ.... ಹೀಗಾ ಮಾಡೋದು!!!
Bogaleragale.blogspot.com