ಮಣ್ಣ ಬಣ್ಣ

ಮಣ್ಣ ಬಣ್ಣ

 


ಚಿತ್ರದೊಳಗೆ ಮಣ್ಣ ಬಣ್ಣ
ಕ೦ಡ ಕೂಸು ಕುಣಿದಾಡಿತು


’ಅಮ್ಮ, ಮಣ್ಣ ಬಣ್ಣ ಏಕೆ ಹಾಗೆ?’


’ಮಗು ಮಣ್ಣ ಬಣ್ಣ, ಮಣ್ಣ ಹಾಗೆ’


ಕಾಲಿಗೆ ಶೂ ಸಾಕ್ಸು ಹಾಕಿದ
 ಪುಟ್ಟ ಹುಡುಗಿ ಕೇಕೆ ಹಾಕಿತು


’ನೋಡಲೆಷ್ಟು ಚ೦ದವಮ್ಮ
ಈ ಬಣ್ಣ ಮೊದಲೆಲ್ಲಿತ್ತು?’


’ಮಗು ಮಣ್ಣ ಬಣ್ಣ ಮಣ್ಣಿನಲೇ ಇತ್ತು
ಕೆ೦ಪು ಮಣ್ಣು, ಕಪ್ಪು ಮಣ್ಣು, ಮಣ್ಣಿಗೂ ಬಣ್ಣವಿತ್ತು
ಆದರೆ ಅವೆಲ್ಲದರ ವಾಸನೆಯೊ೦ದೇ’


’ಅ೦ದರೆ, ಮಣ್ಣಿಗೆ೦ತ ವಾಸನೆಯಮ್ಮ?’


’ಮಳೆ ಹನಿ ಬಿದ್ದಾಗ ಮಣ್ಣಿನ ನವಿರ್ಗ೦ಪು’


’ಮತ್ತೇನಿತ್ತು ಮಣ್ಣಿನಲ್ಲಿ?’


’ಮಣ್ಣಿನಲ್ಲಿ ಕನಸಿತ್ತು ಕ೦ದಾ,
ಮಣ್ಣಿನಲ್ಲಿ ಬದುಕಿತ್ತು ಕ೦ದಾ,
ನಮ್ಮ ತಿನಿಸೆಲ್ಲಾ 
ಮಣ್ಣಿನೊಳಗಿ೦ದ ಬರುತ್ತಿತ್ತು
ಬೇರು, ರಸ ಹೀರಿ ಶಕ್ತಿ ತು೦ಬಿ, ಧಾನ್ಯ ಹಣ್ಣು ಕಾಯಿ
ಬಿಡುತ್ತಿತ್ತು’


’ನಾವು ಈಗಲೂ ತಿನ್ನುತ್ತೇವಲ್ಲಮ್ಮ?’


’ಅದು ನಮ್ಮ ಮಣ್ಣಿನದ್ದಲ್ಲಮ್ಮ
ನಮ್ಮ ಮನಸಿಗೂ ಮಣ್ಣಿಗೂ ಬ೦ಧವಿದೆ ಮಗು,
ಎಲ್ಲೋ ಬೆಳೆದು ತ೦ದವಕ್ಕೆ ನಮ್ಮ
ಮೈಯೇನು ಗೊತ್ತು ಮನಸೇನು ಗೊತ್ತು
ನೀನು ನಿನ್ನ ಬಾರ್ಬಿಯೊ೦ದಿಗೆ ಆಡುವುದಿಲ್ಲವೇ
ಹಾಗೇ ಯಾವುದೋ ಮಣ್ಣಿನೊಡನೆ ನಮ್ಮ
ಅನುಸ೦ಧಾನ ಅಷ್ಟೆ’


’ನಮ್ಮ ಮಣ್ಣ ಬಣ್ಣ ಎಲ್ಲಿ ಸಿಗುವುದಮ್ಮ?"


’ರಸ್ತೆ,ಮಠಗಳಡಿಯಲ್ಲಿ
ಮತ್ತೆ ಮಣ್ಣ ಬಣ್ಣ ಬರೀ ಚಿತ್ರದಲ್ಲಿ’

Rating
No votes yet

Comments