ನೂರು ಟನ್ ಉಕ್ಕಿನ ಗುಂಡನ್ನು ಉರುಳಿಸಲಿರುವ ಮೋನಿಯಾ!

ನೂರು ಟನ್ ಉಕ್ಕಿನ ಗುಂಡನ್ನು ಉರುಳಿಸಲಿರುವ ಮೋನಿಯಾ!

ಬರಹ

ಹೈಕಮಾಂಡ್ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ: ನೋಇಲಿ

ಬೆಂಗಳೂರು, ಫೆ 23: ಹೈಕಮಾಂಡ್ ಶಕ್ತಿಯೇನೆಂದು ತೋರಿಸುವುದಕ್ಕಾಗಿ ಅಧಿನಾಯಕಿ ಮೋನಿಯಾ ಗಾಂಧಿಯವರು ತಮ್ಮ ಮನಸ್ಸಿನ ಶಕ್ತಿಯಿಂದಲೇ ನೂರು ಟನ್ ತೂಕದ ಉಕ್ಕಿನ ಗುಂಡನ್ನು ಉರುಳಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಹೈಕಮಾಂಡ್ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಕ್ಷಣಮಾತ್ರದಲ್ಲಿ ಕರ್ನಾಟಕದ ಸರಕಾರವನ್ನು ಉರುಳಿಸಬಹುದು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ವೀರಪ್ಪ ನೋಇಲಿಯವರು ಈ ಸುದ್ದಿಯನ್ನು ದೃಢಪಡಿಸಿ ದ್ದಾರೆ.   ವಿಧಾನಸೌಧದ ಎದುರು ಮೆಟ್ರೋ ಕಾಮಗಾರಿಗಾಗಿ ಹಾಕಿದ್ದ ಟೆಂಟಿನ ಬಳಿ ಕೂತು  ಸುದ್ದಿಗಾರರೊಂದಿಗೆ ಮಾತನಾಡಿದ ನೋಇಲಿ ದೇಶದ ಜನತೆಯೆ ಹೈಕಮಾಂಡ್ ಪರಮಾಧಿಕಾರ ಎಂಥದ್ದು ಎಂದು ಸಾಬೀತು ಪಡಿಸುವ ಸಲುವಾಗಿ ಈ ಪವಾಡ ನಡೆಯಲಿದೆ. ನಮ್ಮದು ದುರ್ಗೆ ಆಳಿದ್ದ ಪಕ್ಷ. ಹೈಕಮಾಂಡ್ ಎಂದರೆ ಸಾಮಾನ್ಯವಲ್ಲ. ಚಿಟಕಿಹೊಡೆಯುವುದರಲ್ಲಿ ಸರಕಾರಗಳನ್ನು ಉರುಳಿಸಬಲ್ಲದು, ಕಣ್ಣು ಮಿಟುಕಿಸುವುದರಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸಬಲ್ಲದು. ಮನಸ್ಸು ಮಾಡಿದರೆ ಹಿಮಾಲಯವನ್ನೇ ಇಟಲಿಗೆ ರವಾನಿಸಿಬಿಡಬಲ್ಲದು.

ತಮ್ಮ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದ ವಿರೋಧ ಪಕ್ಷದವರಿಗೆ ಮೋನಿಯಾರ ಈ ಪವಾಡ ಕಣ್ಣು ತೆರೆಸಲಿದೆ ಎಂದರು. `` ನಮ್ಮ ಪಕ್ಷದಲ್ಲಿ ನೇತಾರರೆಲ್ಲ ಅಧಿನಾಯಕಿಯ ಸುತ್ತ ಸುತ್ತುವ ಗ್ರಹಗಳು ಎಂದು ಹಲವರು ಕಟಕಿಯಾಡುತ್ತಾರೆ. ಅವರಿಗೆ ತಿಳಿದಿರಲಿ, ಈ ಇಡಿಯ ಭೂಮಿಯಷ್ಟೇ ಅಲ್ಲ ಸೂರ್ಯ, ಚಂದ್ರ, ಶನಿ, ಗುರು ಗ್ರಹಗಳೂ ಸಹ ಮೇಡಂ ಸುತ್ತಲೇ ಸುತ್ತುವುದು. ನಾಸಾ ಬಿಡುಗಡೆ ಮಾಡಿದ ಯು ಟ್ಯೂಬ್ ವಿಡಿಯೋದಲ್ಲಿ ಈ ಅಂಶ ಸ್ಪಷ್ಟವಾಗಿದೆ. ಲಿಂಕು ಬೇಕಿದ್ದರೆ ತರೂರರ ಟ್ವಿಟರ್ ಪೇಜಿಗೆ ಭೇಟಿ ನೀಡಿ. ಇಂತಹ ಮಹಾಮಹಿಮ ಹೈಕಮಾಂಡ್ ಪಡೆದಿರುವ ನಮ್ಮ ದೇಶವೇ ಧನ್ಯ.ಮೇಡಂ  ಆಣತಿಯಿಲ್ಲದಿದ್ದರೆ ಯಾವ ಚರ್ಚಿನಲ್ಲೂ ಬೆಲ್ಲು ಮೊಳಗುವುದಿಲ್ಲ, ಕ್ಯಾಂಡಲ್ ಹೊತ್ತುವುದಿಲ್ಲ. ಸರಕಾರ ಇದುವರೆಗೆ ಜೀವಂತವಾಗಿದೆ ಎಂದರೆ ಅದಕ್ಕೆ ಮೇಡಂ ಕೃಪೆಯೇ ಕಾರಣ.''

``ಸ್ವಾಮಿ, ಆ ಮಹಾತಾಯಿಗೆ ಅಟೋಂದು ಶಕ್ತಿ ಅದೆ ಅಂತ ನಂಗೂ ಗೊತ್ತು. ಆಯಮ್ಮ ತನ್ನ ಶಕ್ತಿಯನ್ನೆಲ್ಲ ಗುಂಡುಕಲ್ಲು ಉರುಳಿಸಕೆ ಯಾಕೆ ಯೇಸ್ಟ್ ಮಾಡಬೇಕು. ಆವಮ್ಮ ಮನಸ್ಸು ಮಾಡಿದರೆ ಬಗೆಹರೀದ ತೊಂದ್ರೆ ಇಲ್ಲ. ಇಂಗೆ ಬೀಡಿ ಹೊಗೆಯಂಗೆ ಮೇಲ್ಕೇರ್ತಿರೋ ಉಣ್ಣೋ ಸಾಮಗ್ರಿ ರೇಟನ್ನ ಉರುಳ್ಸೋಕೆ ಮೇಡಂಗೆ ಆಗಾಕಿಲ್ವಾ?''   ನೊಯಿಲಿಯವರ ಮಾತನ್ನು ಆಲಿಸುತ್ತಿದ್ದ ಮೆಟ್ರೋ ಕಾಮಗಾರಿಯ ನೌಕರ ಸಾಮಾನ್ಯಪ್ಪ ಕೇಳಿದ  ಪ್ರಶ್ನೆಗೆ  ಉತ್ತರ ತಿಳಿಯದೆ ಸಚಿವರು ಮೌನವಾಗಿದ್ದರು.

ಕೆಲಸಮಯದ ನಂತರ ಸಚಿವರು ಸಾಮಾನ್ಯಪ್ಪನನ್ನು ಪಕ್ಕದಲ್ಲಿ ಕೂರಿಸಿಕೊಂಡು ಎಲ್ಲಾ ಸಮಸ್ಯೆಗೂ ಪರಿಹಾರವಿದೆಯೆಂದು ಭರವಸೆ ನೀಡಿದರು. ``ಮೇಡಂ ಕೈಲಿ ಸಾಧ್ಯವಾಗದ್ದು ಏನೂ ಇಲ್ಲ. ನೀನು ಅದೇನೋ ಜುಜುಬಿ ಕೆಲಸ ಮಾಡಲಿ ಮೇಡಂ ಅಂದೆಯಲ್ಲ ಅದನ್ನ ನೂರನಲವತ್ತು ಅಕ್ಷರದೊಳಗೆ ಟೈಪ್ ಮಾಡಿ ಟ್ವಿಟರಿನಲ್ಲಿ ಪೋಸ್ಟ್ ಮಾಡು. ನಮ್ ತರೂರ ಗಮನಕ್ಕೆ ತಾ. ಆಮೇಲೆ ಅದನ್ನು ಅವರು ಮೇಡಂ ಮುಂದಿಡುವರು.''

ಸಚಿವರ ಉತ್ತರದಿಂದ ಸಂತೃಪ್ತನಾದ ಸಾಮಾನ್ಯಪ್ಪ ಬೀಡಿಗೆ ಕಾಸು ಪಡೆದು ಟೆಂಟಿನ ಮರೆಗೆ ಸರಿದನು.