ಸಮಗಾರ ಸಾವು

ಸಮಗಾರ ಸಾವು

ಸಿಡಿಮದ್ದ ಸಿಡಿತದಲಿ ಮುರಿದು ಬಿದ್ದಿಹರಿಬ್ಬರು
ತಾಯ್ನಾಡ ಬಯಕೆಗೆ ಬಾಳ ನೈವೇದ್ಯವಿತ್ತ ಧೀರ ಯೋಧರು
ಹದಿನೆಂಟರ ಹರೆಯದ ಮುಗ್ಧನೊಬ್ಬ ಇನ್ನೂ ಬಲಿಯದ ಮೈ
ನಲ್ವತ್ತರ ಮತ್ತೊಬ್ಬ ಕಂಡಿಹನು ಯುದ್ಧಗಳ, ಬಡಿದಾಡಿಹನು  ಹೊಯ್ ಕಯ್

ಹರೆಯದ ಹುಡುಗನಿಗೆ ಪಳಗಿಲ್ಲ ಮೈ -ಮನ . ಅಳಿದಿಲ್ಲ ಹುಡುಗುತನ
ಎಳೆಯ ಹೃದಯದಲ್ಲಿನ್ನೂ ಕಳೆದಿಲ್ಲ ಮಗುತನ ಮೊಳೆತಿಲ್ಲ ಧೀರತನ
ತುಕಡಿಗವ ನಿಮಿತ್ತ,  ಯುದ್ದದಾವೇಶಕೆ ಬಲಿಯಾದ ಮೇಷ
ಮರಣದ ಮುಂದು ಸಿಡಿದ ಬೈಗಳೋ, ದೇವನನೇ ಕೊಲ್ಲುವಾವೇಶ.



ಇನ್ನೊಬ್ಬ ಅನುಭವದ ಮೂಟೆ, ಸಾವಿಗಂಜದ ಮನಸು
ಜೀವನದ ತುಂಬೆಲ್ಲ ಕಂಡಿಹನು ಸಾವಿನ ಸೊಗಸು
ಕಡೆ ಉಸಿರಲವನ ಮನದಲಿ ಏನಿತ್ತೋ ಕೇಳಿದವರಾರು
ನುಡಿ ಕೇಳಿ ಅರಿಯಬಲ್ಲೆಯಾದರೆ ಅಮ್ಮಾ ಎಂದವನ ಒರಲು..?

ತುಕಡಿಯೊಡೆಯ ಸರ್ದಾರ ದುಃಖದಲಿ ಘೋಷಿಸಿದ ಉಳಿದವರ ಮುಂದೆ
"ವೀರರಿವರೇ ಸೈ, ತಾಯ್ನಾಡಿಗಾಗಿ ನೀಡಿಹರು ಜೀವಾರ್ಪಣ
ನಮಗಿವರದೇ ಆದರ್ಶ, ಇವರೇ ನಮ್ಮ ಹೆಮ್ಮೆ"
ಇದೇ ಮಾತ ಎರಡು ಪ್ರತಿಗಳಲಿ ಇಬ್ಬರ ಮನೆಗೂ ಕಳಿಸಿಬಿಡಿ ಒಮ್ಮೆ.

The leveller - ಎಂಬ ರಾಬರ್ಟ್ ಗ್ರೇವ್ಸ್  ರ ಪದ್ಯದ ಭಾವಾನುವಾದ.

Rating
No votes yet

Comments