ಜನರ ಪ್ರಾಣ, ತುರ್ತು ಸೇವೆ - ಒಂದು ಪ್ರಹಸನ

ಜನರ ಪ್ರಾಣ, ತುರ್ತು ಸೇವೆ - ಒಂದು ಪ್ರಹಸನ

ಬರಹ
ಮೊನ್ನೆ ನಮ್ಮ ಬೆಂಗಳೂರಿನ ಕಾರ್ಲ್ಟನ್ ಟವರಿನಲ್ಲಿ ನಡೆದ ದೊಡ್ಡ ದುರಂತದ ಬಗ್ಗೆ ಈ ಸಣ್ಣ ಲೇಖನ. ದುರ್ಘಟನೆ ಹೇಗಾಯ್ತು, ಎಷ್ಟು ಜನ ಜೀವ ಕಳೆದುಕೊಂಡರು ಅನ್ನೋದು ಎಲ್ಲರಿಗೂ ಗೊತ್ತು. ನಮ್ಮಲ್ಲಿ ಈಗ ಜನರ ಪ್ರಾಣ, ಹಾಗು ತುರ್ತು ಪರಿಸ್ಥತಿ ಸೇವೆಗಳು ಹಾಗು ಅರಿವು ಎನ್ನುವುದು ಯಾವ ರೀತಿ ನಾಪಾಸಾಗಿದೆ, ಜನರಲ್ಲಿ ಸಾಮಾನ್ಯ ಅರಿವೂ ಇಲ್ಲವಾಗಿದೆ.

ಅಲ್ಲಿ ಆ ಕಟ್ಟಡದಲ್ಲಿ ಬೆಂಕಿ ಬಿದ್ದು ಒಳಗಿನ ಜನ ಕಂಗಾಲಾಗಿದ್ದರು. ಹೊರಗೆ ಅಗ್ನಿಶಾಮಕ ಹಾಗು ತುರ್ತು ಸೇವೆ ವಾಹನಗಳು ಆ ಜಾಗಕ್ಕೆ ಬರಲು ಹರಸಾಹಸ ಪಡುತ್ತಾ ಇದ್ದವು. ಇಲ್ಲಿ ಹೊರಗಡೆ ಜನರು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು, ಗುಂಪು ಗುಂಪಾಗಿ ಇದರ ಬಗ್ಗೆ ವಿಶ್ಲೇಷಣೆ ಕೊಡ್ತಾ ನಿಂತಿದ್ದರು.

ಜೊತೆಗೆ, ಅಲ್ಲಿ ಸಂಭವಿಸಿದ ವಾಹನ ದಟ್ಟಣೆ, ಜ್ಯಾಮ್ ನಲ್ಲಿದ್ದ ಜನರು ಹೇಗೆ ನಡೆದುಕೊಳ್ತಾ ಇದ್ದರು ಅನ್ನೋದನ್ನ ನಾನು ಕಣ್ಣಾರೆ ಕಂಡಿದೀನಿ. ನನ್ನ ಪಕ್ಕದ ಬೈಕಿನಲ್ಲಿ ಹೋಗುತ್ತಿದ್ದ ಒಬ್ಬಾತ ತನ್ನ ಮನೆಗೆ ಫೋನ್ ಮಾಡಿ "ಇನ್ನೂ ಜ್ಯಾಮ್ ಜಾಸ್ತಿ ಆಗೋ ಥರಾ ಇದೆ, ಹೆಂಗಾದ್ರೂ ಮಾಡಿ ಬೇಗ ಮನೆ ಸೇರ್ಕೋತೀನಿ.." ಅಂತಾ ಹೇಳಿ, ಸಂದಿ ಗೊಂದಿಯಲ್ಲಿ ಗಾಡಿ ನುಗ್ಗಿಸಿ, ಮುಂದೆ ಹೋದ.

ಈ ವಿಚಾರವನ್ನು ಬದಿಗೆ ಹಾಕೋಣ. ಅಲ್ಲಿ ಕಟ್ಟಡದಲ್ಲಿ ಬೆಂಕಿ ಉರಿಯುತ್ತಿದ್ದಾಗ, ಟ್ರಾಫಿಕ್ ದಟ್ಟಣೆಯಿಂದಾಗಿ ತುರ್ತು ಸೇವೆ ವಾಹನಗಳು ಅಲ್ಲಿಗೆ ಸರಿಯಾದ ಸಮಯಕ್ಕೆ ಬರುವುದು ಬಹಳ ತಡವಾಯಿತು. ಈ ಕಾರಣಕ್ಕೆ, ಕೆಲವರು ಗಾಬರಿ ತಡೆಯಲಾರದೆ ಮೇಲಿನಿಂದ ಜಿಗಿದು ಜೀವ ಕಳೆದುಕೊಂಡರು.

ನನ್ನ ಒಂದೇ ಒಂದು ಪ್ರಶ್ನೆ. ಈ ಘಟನೆಯು ನಡೆದ ಕಟ್ಟಡಕ್ಕೆ HAL ಬಹಳ ಹತ್ತಿರವಿದೆ. HAL ನಲ್ಲಿ, ವೈದ್ಯಕೀಯ ಮತ್ತು ತುರ್ತು ಪರಿಸ್ಥಿತಿಗಳಿಗಾಗಿ ಒಂದು ಹೆಲಿಕಾಪ್ಟರ್ ಸದಾ ಸನ್ನದ್ಧವಾಗಿ ಇಟ್ಟಿರುತ್ತಾರೆ. ಈ ಹೆಲಿಕಾಪ್ಟರಿನ ಸೇವೆಯನ್ನು ಏಕೆ ಉಪಯೋಗಿಸಿಕೊಳ್ಳಲಿಲ್ಲ ? ಈ ಕಾರ್ಲ್ಟನ್ ಕಟ್ಟಡದ ಅತ್ಯಂತ ಸಮೀಪದಲ್ಲಿ "ಲೀಲಾ ಪ್ಯಾಲೆಸ್" ನಲ್ಲಿ ಹೆಲಿಪ್ಯಾಡ್ ಕೂಡಾ ಇದೆ. ಕಟ್ಟಡದ ಮೇಲಂತಸ್ತಿನಲ್ಲಿ ಸಿಕ್ಕಿದ್ದ ಜನರನ್ನು ತಾರಸಿಗೆ ಕಳುಹಿಸಿ, ಅಲ್ಲಿಂದ ಅವರುಗಳನ್ನು ಈ ಹೆಲಿಕಾಪ್ಟರಿನ ಮೂಲಕ ಕಾಪಾಡಬಹುದಿತ್ತು.

ಪಕ್ಕದ ರಾಜ್ಯದ ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕಾಡಿನ ಕಡೆ ಕಾಣೆಯಾಯಿತು ಎಂದೊಡನೆ, ವಾಯುದಲವನ್ನು ಕಳುಹಿಸಿ ಕಾಡಿನಲ್ಲಿ ಶೋಧನೆ ಆರಂಭಿಸಿದರು.ಆದರೆ ಇಲ್ಲಿ ಕಣ್ಣ ಮುಂದೆ ಹತ್ತಿ ಉರಿಯುತ್ತಿದ್ದ ಕಟ್ಟಡದಿಂದ, ಜನರು ಗಾಬರಿಯಾಗಿ ಮೇಲಿನಿದ ಜಿಗಿದು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಬಂದರೂ ಕೂಡಾ, ಈ ಹೆಲಿಕಾಪ್ಟರಿನ ಉಪಯೋಗ ಪಡೆಯಲು ನಮ್ಮಲ್ಲಿ ಯಾರೂ ಯೋಚಿಸಲಿಲ್ಲ ಎನ್ನುವುದು ದೊಡ್ಡ ಸೋಜಿಗದ ಸಂಗತಿ. ಯಾರಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು HAL ಅನ್ನು ಸಂಪರ್ಕಿಸಿ, ಹೆಲಿಕಾಪ್ಟರಿನ ಸೇವೆ ಕೊರಿದ್ದಲ್ಲಿ, ತಕ್ಷಣಕ್ಕೆ ಬಂದು, ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದಾಗಿತ್ತು, ಅಥವಾ ಯಾವುದೇ ಸಾವು ಸಂಭವಿಸುವುದನ್ನು ತಪ್ಪಿಸಬಹುದಿತ್ತು.

ಹೀಗೇಕೆ ಆಗಲಿಲ್ಲ / ಮಾಡಲಿಲ್ಲ ? ನನ್ನಂಥ ಸಾಮಾನ್ಯ ನಾಗರಿಕನಿಗೆ ಇದು ಹೊಳೆದಿದೆ ಎಂದರೆ, ಸಾರ್ವಜನಿಕ ಇಲಾಖೆಗಳಲ್ಲಿ ಇರುವ ಹಿರಿಯ ಅಧಿಕಾರಿಗಳಿಗೆ ಇದು ಏಕೆ ಹೊಳೆಯಲಿಲ್ಲ ?

We Indians are not Proactive.. we are just Reactive - ಎನ್ನುವ ಮಾತು ಬಹಳ ನಿಜ. ಇದನ್ನು ಬಹಳ ಕಂಡಿದೀವಿ. ಒಂದೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾದಾಗ ಕೂಡಾ ಹೀಗೆ ಆಯಿತು. ನಾವು ಆ ದಿನ ಊಟಕ್ಕೆ ಹೊರಗೆ ಹೋಗಿದ್ದೆವು. ನಮ್ಮ ಆಫೀಸು ಇರುವುದು ಡೈರಿ ಸರ್ಕಲ್ (ಕ್ರೈಸ್ಟ್ ಕಾಲೇಜ್) ಬಳಿ. ವಾಪಾಸ್ ಬಂದಾಗ ಇಡೀ ಹೊಸೂರು ರಸ್ತೆಯಲ್ಲಿ ಅಲ್ಲೋಲ ಕಲ್ಲೋಲ. ಐದು ಮಂದಿ ಕಾರಿನಲ್ಲಿ ಊಟ ಮುಗಿಸಿ ಆಫೀಸಿಗೆ ವಾಪಸ್ ಕಾರಿನಲ್ಲಿ ಬಂದೆವು. ಆಗ ಇದ್ದಕ್ಕಿದ್ದಂತೆ, ಇಡೀ ಆಫೀಸಿನ ಸೆಕ್ಯೂರಿಟಿಯವರು ಎಚ್ಚೆತ್ತುಕೊಂಡರು. ಕಂಪೆನಿಯ ಗುರುತಿನ ಚೀಟಿ ಇಲ್ಲದ್ದಕ್ಕೆ ನಾವು ಎಷ್ಟೇ ಹೇಳಿದರೂ ಕೇಳದೆ ನಮ್ಮ ಕಾರಿನಲ್ಲಿದ್ದ ಒಬ್ಬ ಸಹೋದ್ಯೋಗಿಯನ್ನು ಕೆಳಗಿಳಿಸಿ ನಮ್ಮನ್ನು ಒಳಗೆ ಕಳುಹಿಸಿದರು. ಮತ್ತೆ ಮಾರನೆಯ ದಿನದಿಂದ, ಯಥಾ ಪ್ರಕಾರ. ಹೋದಾ ಪುಟ್ಟ, ಬಂದಾ ಪುಟ್ಟ ಅನ್ನೋ ರೀತಿ. ಯಾರೂ ಹೇಳೋರಿಲ್ಲ, ಕೇಳೋರಿಲ್ಲ.

ಇನ್ನು ನಿನ್ನೆ ಕೂಡಾ ನಮ್ಮ ಆಫೀಸಿನ ಕಟ್ಟಡದಲ್ಲಿ ಇದ್ದಕ್ಕಿದ್ದ ಹಾಗೆ ಫೈರ್ ಅಲಾರಂ ಕೂಗಲು ಶುರು ಮಾಡಿತು. ನಮ್ಮ HR ಮ್ಯಾನೇಜರ್ ಬಂದು "come on guys.. what are you waiting for? Can't you hear the alarm? evacuate the building" ಎಂದು, ಎಲ್ಲರನ್ನೂ ತುರ್ತು ದಾರಿಯಿಂದ ಕಟ್ಟಡದ ಹೊರಗೆ ಕಳುಹಿಸಿದರು. ನಮ್ಮ ಕಚೇರಿ ಇರೋದು ನಾಲ್ಕನೆ ಅಂತಸ್ತಿನಲ್ಲಿ. ಕೆಳಗೆ ಎಲ್ಲರೂ ಇಳಿದ ಮೇಲೆ, ಆಫೀಸಿನಲ್ಲಿ, ತುರ್ತು ಸಂದರ್ಭಗಳಲ್ಲಿ ಏನು ಮಾಡಬೇಕು ಎನ್ನುವುದರ ಬಗ್ಗೆ ಒಂದು PRESENTATION ಕೊಟ್ಟರು. ಮೊನ್ನೆ ಆ ಬೆಂಕಿ ಅಪಘಾತ ನಡೆಯದ ಪಕ್ಷದಲ್ಲಿ, ನಮ್ಮಲ್ಲಿ ಈ "ಅಣಕು ಪ್ರಹಸನ (Mock Drill)" ನಡೆಯುತ್ತಿತ್ತೇ?

ನಮ್ಮಲ್ಲಿ ಈಗ "ಮಾಲ್"ಗಳು ಹೆಚ್ಚುತ್ತಿವೆ. ಹಾಗೆಯೇ ಮಾಲುಗಳಲ್ಲಿ "ಮಲ್ಟಿಪ್ಲೆಕ್ಸ್" ಸಿನೆಮಾ ಮಂದಿರಗಳು ತುಂಬುತ್ತಿವೆ. ಆದರೆ, ಆ ಸಿನೆಮಾ ಮಂದಿರಗಳು ಎಷ್ಟರ ಮಟ್ಟಿಗೆ ಸುರಕ್ಷಿತ. ಈ ರೀತಿಯಾಗಿ ಏನಾದರೂ ಒಂದು ಬೆಂಕಿ ಅಪಘಾತ ಸಂಭವಿಸಿದ ಪಕ್ಷದಲ್ಲಿ ಏನು ಗತಿ ? ನಾನು ಕಂಡ ಹಾಗೆ, ಕಿಷ್ಕಿಂದೆಯ ರೀತಿ ಇರುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳೆಂದರೆ - ಜಯನಗರದ ಸ್ವಾಗತ ಗರುಡಾ ಮಾಲಿನಲ್ಲಿ ಇರುವ "ಐನಾಕ್ಸ್", ಹಲಸೂರಿನಲ್ಲಿ ಇರುವ "ಫೇಮ್ ಲಿಡೋ", ಕನ್ನಿಂಗ್ ಹ್ಯಾಮ್ ರಸ್ತೆಯ ಸಿಗ್ಮಾ ಮಾಲಿನಲ್ಲಿ ಇರೋ "ಫನ್ ಸಿನೆಮಾ". ಇವುಗಳಲ್ಲಿ ಏನಾದರೂ ಅವಗಢ ಸಂಭವಿಸಿದ ಪಕ್ಷದಲ್ಲಿ, ಸಾವು ನೋವು ಅತಿಯಾಗಿ ಇರುವುದು.

ಮೊನ್ನೆ ನಡೆದ ಘಟನೆ ನಮಗೆ ಒಂದು ಎಚ್ಚರಿಕೆಯ ಘಂಟೆಯಾಗಲಿ. ಸಂಬಂಧಪಟ್ಟ ಅಧಿಕಾರಿಗಳು ಈ ರೀತಿಯ ಬಹುಮಹಡಿ ಕಟ್ಟಡಗಳ ತಪಾಸಣೆ ನಡೆಸಲಿ. ವ್ಯತ್ಯಯ ಕಂಡುಬಂದಲ್ಲಿ, ಕಠಿಣ ಕ್ರಮ ನಡೆಸಲಿ. ಜೊತೆಗೆ, ಅಕಸ್ಮಾತ್ ಈ ರೀತಿಯ ಘಟನೆ ಮುಂದೆ ನಡೆದರೆ, ನಮ್ಮಲ್ಲಿ ಇರುವ ಸೌಲಭ್ಯಗಳನ್ನು ಸರಿಯಾಗಿ ಬಳಸಲಿ. ಸಿಂಪಲ್ಲಾಗಿ ಹೇಳಬೇಕೆಂದರೆ, ಎಲ್ಲರೂ ಅರಿವು ಮೂಡಿಸಿಕೊಳ್ಳಲಿ.
ಅರಿವೇ ಗುರು, Awareness is the key
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ