ಸಂಸ್ಕೃತಿ ಕಲಹ

ಸಂಸ್ಕೃತಿ ಕಲಹ

ಬರಹ

ಟೊಯೋಟ ತನ್ನ ಉತ್ಪನ್ನಗಳು ಕೈಕೊಟ್ಟು ಅಮೆರಿಕನ್ನರ ಕೆಂಗಣ್ಣಿಗೆ ಗುರಿಯಾಗಿರುವುದು ಕೈಗಾರಿಕಾ ವಲಯದಲ್ಲಿ ಬಿಸಿ ಬಿಸಿ ಸುದ್ದಿ. ವಿಶ್ವದ ನಂಬರ್ ಒನ್ ಮೋಟೊರ್ ಕಂಪೆನಿಗೆ ಆದದ್ದಾರೂ ಏನು? ಯಶಸ್ಸಿನೊಂದಿಗೆ ನೆರಳಿನಂತೆ ಹಿಂಬಾಲಿಸುವ ಅಹಂಕಾರವೋ? ಅಥವಾ ತನ್ನ ಕೈಗಳಿಂದ ತಪ್ಪುಗಳೇನೂ ಸಂಭವಿಸದು ಎನ್ನುವ complacency ಯೋ? ಯಾವುದೋ ಒಂದು, ಒಟ್ಟಿನಲ್ಲಿ ಟೊಯೋಟಾ ಎಂಬ ಹಡಗು ಬಿರುಗಾಳಿಯನ್ನು ಎದುರಿಸುತ್ತಿದ್ದು ಇದು ಜಪಾನೀ ಸಂಸ್ಥೆಗೆ ದೊಡ್ಡ ನಷ್ಟವನ್ನು ತುಂಬುವ ಪರಿಸ್ಥಿತಿಗೆ ದಾರಿ ಮಾಡಿಕೊಡಬಹುದು. ಜಪಾನಿನ ಈ ಕಂಪೆನಿಯ ಕಷ್ಟ ಅಮೆರಿಕನ್ನರಿಗೆ ಖುಷಿ ತಂದಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಏಕೆಂದರೆ ತಮ್ಮ GM Motors, DaimlerChrysler, Ford ಕಂಪೆನಿಗಳು ಗೋತಾ ಹೊಡೆಯಲು ತೊಡಗಿದ್ದಾಗ ಬಂದಿದ್ದು ಈ ಸುವಾರ್ತೆ, ಜಪಾನೀ ಕಾರುಗಳಲ್ಲಿ ಎಡವಟ್ಟುಗಳಿವೆ ಎಂದು. ತಗೋ ತೂರಿಕೊಂಡು ಬಂದವು offerಗಳು ಅಮೇರಿಕನ್ ಕಂಪೆನಿಗಳಿಂದ. ಹೇಗಾದರೂ ಮಾಡಿ ಜಪಾನೀ ಪಾರುಪತ್ಯವನ್ನು ಕೊನೆಗೊಳಿಸುವ ಆಸೆ. ಒಳ್ಳೆಯದೇ ಅನ್ನಿ, ಏಕೆಂದರೆ ತಮ್ಮ ದೇಸೀ ಕಂಪೆನಿಗಳ ಉದ್ಧಾರ ಬೇಕೇ ಬೇಕು ತಾನೇ? ಅಮೆರಿಕೆಯ ಮಾರುಕಟ್ಟೆಯಲ್ಲಿ ಜಪಾನೇ ಕಾರುಗಳದೆ ಕಾರುಬಾರು. ಅಮೇರಿಕನ್ ಗ್ರಾಹಕರಂತೂ ಯಾರು ಒಳ್ಳೆಯ ಉತ್ಕೃಷ್ಟ ವಸ್ತುಗಳನ್ನು ಮಾರುತ್ತಾರೋ ಅವರ ಕಡೆಗೆ. ಅವರಿಗೆ ದೇಸೀ, ಪರದೇಸೀ ಭಾವನೆ ಕಡಿಮೆ, ತಮ್ಮ hard earned ಡಾಲರ್ಗೆ ಗೌರವ ಸಂದರೆ ಸರಿ.


ಜಪಾನೀ ಕಾರುಗಳಿಗೆ ಗ್ರಹಚಾರ ವಕ್ಕರಿಸಿದ್ದು ಅಮೆರಿಕೆಯ ಚಳಿಗಾಲದಲ್ಲಿ. "ಕೋರೋಲ್ಲಾ" ಕಾರಿನಿಂದ ಹಿಡಿದು "ಸೇಕೂಯಾ" ಗಾಡಿಗಳವರೆಗೆ ಎಲ್ಲವಕ್ಕೂ ಹಿಡಿಯಿತು ಚಳಿ ಜ್ವರ. ಕೆಲವಕ್ಕೆ gas pedal (accelarator) ಜಾಮ್ ಆಗಿ ಅಪಘಾತಗಳು ಸಂಭವಿಸಿದವು. ೨೪ ಘಂಟೆಗಳ, ಅಪಶಕುನ ಬಿತ್ತರಿಸಲಿಕ್ಕಾಗೆ ಹುಟ್ಟಿಕೊಂಡಿರುವ ಮಾಧ್ಯಮಗಳಿಗೆ ಸುಗ್ಗಿ, ನಮ್ಮ ದೇಶದಲ್ಲಿ ಹಂದಿ ಜ್ವರ ಬಂದಾಗ ಆಡಿದ ಹಾಗೆ.  ಜ್ವರಕ್ಕೆ ಸತ್ತವರ ಸಂಖ್ಯೆಯನ್ನು ತೆಂಡೂಲ್ಕರ್ ಸ್ಕೋರನ್ನು ಬಿತ್ತರಿಸುವ ಹಾಗೆ ಬಿತ್ತರಿಸಿದ್ದವು ನಮ್ಮ ಮಾಧ್ಯಮಗಳು. ಅದೇ ರೀತಿ ಅಲ್ಲಿಯ fox, cnn, bloomberg ಎಲ್ಲವೂ ಮುಗಿ ಬಿದ್ದವು ಜಪಾನೀ ಕಂಪೆನಿಗಳ ಮೇಲೆ. ನಮ್ಮ ದೇಶದಲ್ಲಾಗಿದ್ದರೆ ಇಂಥ ಪರಿಸ್ಥಿತಿಗಳಲ್ಲಿ ರಾಜಕಾರಣಿ ಅಥವಾ ಮಂತ್ರಿಗಳು ಒಂದೆರಡು ಸಾರ್ವಜನಿಕ ಹೇಳಿಕೆಗಳು ಮತ್ತೊಂದೆರಡು ಮೇಜಿನಡಿಯ ಡೀಲಿಂಗ್ ನಡೆಸಿ ಸಮಸ್ಯೆಗೆ ಒಂದು "ಪರಿಹಾರ" ತೋರಿಸುತ್ತಿದ್ದರು. ಆದರೆ this is america you see? ಬುಲಾವ್ ಬಂತು ಟೊಯೋಟಾ ಕಾರುಗಳ ಮಾಲಿಕರಿಗೆ, ಅವರ ಸೆನೆಟ್ ಮುಂದೆ ಹಾಜರಾಗಿ ಎಲ್ಲ ವಿವರಣೆ ನೀಡಲು. ಹಾರಿಕೊಂಡು ಬಂದ ಟೊಯೋಟ CEO ದಿಂದ ಹಿಡಿದು ಮರಿ executive ಗಳಿಗೆ ಸಿಕ್ಕಿತು ಕಾಣಲು senator ಮಹಾಶಯರುಗಳ ಕೆಂಗಣ್ಣು. ಕೆಲವು ಸಂಸತ್ ಸದಸ್ಯರು ತಮ್ಮ ಕೈಲಿದ್ದ ಕಡತಗಳನ್ನು ಅವರ ಮುಖದ ಕಡೆ ಹಿಡಿದು ವಿವರಣೆ ಕೇಳುತ್ತಿದ್ದರೆ ಮತ್ತೊಬ್ಬರು ಏನಿದು ನಿಮ್ಮ ಕುಚೇಷ್ಟೆ ನಮ್ಮ ಜೀವಗಳೊಂದಿಗೆ ಎಂದು ಗರ್ಜಿಸಿದ. ಈ ವಾತಾವರಣವನ್ನು ನೋಡಿ ಬಂದ ಅತಿಥಿಗಳು ಕಂಗಾಲು. ವಿವಾದಗಳ ಸಮಯ, ಮೊದಲ ಭೇಟಿಯಲ್ಲೇ  ಎದುರಾಳಿಯ ಸ್ಥೈರ್ಯ ಉಡುಗಿಸುವ ಕಲೆ ಅಮೆರಿಕನ್ನರಿಗೆ ಕರಗತ. ಅದೇ ಅವರ ಯಶಸ್ಸಿನ ಗುಟ್ಟೂ ಸಹ. ಈ ಪರಿಯ ಅರಚಾಟ ನೋಡಿರದ ಬಡಪಾಯಿ ಜಪಾನೀಯರು ಭಯ ಬಿದ್ದು ತಡಬಡಿಸಿದರು. ಜಪಾನಿನಲ್ಲಿ ಶಿಷ್ಟಾಚಾರ ಸ್ವಲ್ಪ ಜಾಸ್ತಿ. ಅದರಲ್ಲೂ CEO ಮತ್ತು ಉನ್ನತ ಅಧಿಕಾರಿ ರಾಜಕಾರಣಿಗಳಿಗೆ ಮರ್ಯಾದೆ ಹೆಚ್ಚು. ಅವರಿಗೆ ಗೊತ್ತಿಲ್ಲ ಅಮೆರಿಕನ್ನರು ಸುದ್ದಿ ಮಾಧ್ಯಮಗಳು ಮತ್ತು tv ಚಾನಲ್ಲುಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವವರು ಎಂದು. ಸಾಕಷ್ಟು show ಗಾಗಿ ತಯಾರಾಗೆ ಬಂದಿದ್ದರು senator ಗಳು.                  


1990 ರ ದಶಕದಲ್ಲಿ ಒಂದು ಇದೇ ರೀತಿಯ ಅಮೇರಿಕಾ ಮತ್ತು ಜಪಾನ್ ನಡುವಿನ ಕೈಗಾರಿಕೆಗೆ ಸಂಬಂಧಿಸಿದ ಜಟಾಪಟಿ ನೆನಪಿಗೆ ಬರುತ್ತಿದೆ. ಆ ಸಮಯದ ಅಮೇರಿಕ trade representative ಆಗಿದ್ದ ಮಿಕ್ಕಿ ಕ್ಯಾಂಟರ್ ಅಮೆರಿಕೆಯ ವ್ಯಾಪಾರ ಹಿತ ಕಾಪಾಡುವ ಚರ್ಚೆಯಲ್ಲಿ ಜಪಾನಿನ ಪ್ರತಿನಿಧಿಗೆ ತನ್ನ ವಾಗ್ಧಾಳಿಯಿಂದ  ಚಳ್ಳೆ ಹಣ್ಣು ತಿನ್ನಿಸಿದ್ದು ಮಾತ್ರವಲ್ಲ, ಸಭೆ ಮುಗಿದು ಹೊರಬಂದು ಬಡಪಾಯಿ ಜಪಾನೀ ಹೇಳಿದ್ದು ಹೀಗೆ. "He (Mickey cantor) is scarier than my wife when I come home drunk" ಎಂದು. ತಾನು ಪಾನಮತ್ತನಾಗಿ ಮನೆಗೆ ಬಂದಾಗ ತನ್ನ ಮಡದಿಯ ಆಕ್ರೋಶಕ್ಕಿಂತ ಭೀಕರವಾಗಿ ಕಂಡಿತು mickey cantor ನ ರೌದ್ರಾವೇಷ.


ಸದ್ಯಕ್ಕೆ ಅಮೆರಿಕೆಯಲ್ಲಿರುವ ಜಪಾನೀ ಒಡೆಯರು ಯಾವ ರೀತಿಯಲ್ಲಿ ಬಣ್ಣಿಸುವರೋ ತಮ್ಮ ಅಮೇರಿಕನ್ ನಲ್ಲರೊಂದಿಗಿನ ರಸಮಯ ಕ್ಷಣಗಳನ್ನು.